ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ | ಬಿಜೆಪಿ ಭದ್ರಕೋಟೆ ವಶಕ್ಕೆ ಕಾಂಗ್ರೆಸ್ ಅವಿರತ ಪ್ರಯತ್ನ

Date:

Advertisements

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಒಂದು ಕಾಲದಲ್ಲಿ ಜನತಾ ಪರಿವಾರದ ಪರವಿದ್ದದ್ದು, ಸದ್ಯ ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿ ಮಾರ್ಪಟ್ಟಿದೆ. 1951ರ ಮೊದಲ ಲೋಕಸಭಾ ಚುನಾವಣೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ಕೆ ಮಾದಯ್ಯ ಗೌಡ ಹಾಗೂ 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಮಾತ್ರ ಕಾಂಗ್ರೆಸ್‌ನಿಂದ ಚುನಾಯಿತರಾಗಿದ್ದು ಬಿಟ್ಟರೆ ಉಳಿದ ಅವಧಿಯಲ್ಲಿ ಜನತಾ ಪರಿವಾರ ಹಾಗೂ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುತ್ತ ಬಂದಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಇನ್ನೊಂದು ಪ್ರಮುಖವಾದ ಮಾಹಿತಿ ಏನೆಂದರೆ ಈ ಕ್ಷೇತ್ರವನ್ನು 1957 ರಿಂದ 1977ರವರೆಗೂ ಬೆಂಗಳೂರು ನಗರ ಹಾಗೂ ಬೆಂಗಳೂರು ಉತ್ತರ ಕ್ಷೇತ್ರಗಳೊಂದಿಗೆ ವಿಲೀನಗೊಳಿಸಲಾಗಿತ್ತು. ಈ ಅವಧಿಯಲ್ಲಿ ಮಾಜಿ ಕೇಂದ್ರ ಸಚಿವ ಹೆಚ್‌ ಸಿ ದಾಸಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಕೆಂಗಲ್‌ ಹನುಮಂತಯ್ಯ ಆಯ್ಕೆಯಾಗಿದ್ದರು.

1977ರಿಂದ 1989ರವೆಗೆ ಲೋಕಸಭೆಯ ಮಾಜಿ ಸ್ಪೀಕರ್ ಸಂತೋಷ್ ಹೆಗ್ಡೆ, ಸೈಕಲ್‌ ಶಾಮಣ್ಣ ಎಂದು ಹೆಸರಾಗಿದ್ದ ಸ್ವತಂತ್ರ ಹೋರಾಟಗಾರ ಟಿ ಆರ್ ಶಾಮಣ್ಣ ಹಾಗೂ ವಿ ಆರ್ ಕೃಷ್ಣ ಅಯ್ಯರ್ ಜನತಾ ಪಕ್ಷದಿಂದ ಆಯ್ಕೆಯಾಗಿದ್ದರು. ನಂತರದ ಒಂದು ಅವಧಿ ಕಾಂಗ್ರೆಸ್‌ನಿಂದ 1989ರಲ್ಲಿ ಮಾಜಿ ಮುಖ್ಯಮಂತ್ರಿ ಆರ್‌ ಗುಂಡೂರಾವ್‌ ಜಯಗಳಿಸಿದ್ದರು. ಮುಂದೆ 1991ರಿಂದ ಶುರುವಾದ ಬಿಜೆಪಿ ಗೆಲುವಿನ ಓಟ ಮುಂದುವರಿಯುತ್ತಲೇ ಬಂದಿದೆ.

ಭಾರತೀಯ ಜನತಾ ಪಕ್ಷ ಮೊದಲು ಗೆಲುವಿನ ಖಾತೆ ತೆರೆದಿದ್ದು 1991ರಲ್ಲಿ. ಬಿಜೆಪಿಯಿಂದ ಸ್ಪರ್ಧಿಸಿದ್ದ ಅರ್ಥಶಾಸ್ತ್ರಜ್ಞರಾದ ಪ್ರೊ. ವೆಂಕಟಗಿರಿಗೌಡ ಮಾಜಿ ಸಿಎಂ ಆರ್‌ ಗುಂಡೂರಾವ್‌ ಅವರನ್ನು ಸೋಲಿಸಿ ಸಂಸದರಾದರು. ಕಮಲ ನಾಯಕರ ಕಾರ್ಯವೈಖರಿಯ ವಿರುದ್ಧ ಬೇಸತ್ತು ಬಹಿರಂಗವಾಗಿ ಟೀಕೆ ಮಾಡಿದ ಕಾರಣ 1996ರ ಚುನಾವಣೆಯಲ್ಲಿ ವೆಂಕಟಗಿರಿಗೌಡ ಅವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿ ಪ್ರಖರ ಹಿಂದುತ್ವವಾದಿ ಅನಂತ್‌ ಕುಮಾರ್‌ ಅವರನ್ನು ಕಣಕ್ಕಿಳಿಸಿತು.

ಅಂದಿನಿಂದ ಶುರುವಾದ ಅನಂತ್‌ ಕುಮಾರ್ ಜಯದ ಓಟ 2014ರ ಚುನಾವಣೆಯವರೆಗೂ ಮುಂದುವರೆಯಿತು. 6 ಬಾರಿ ಸಂಸದರಾಗಿದ್ದ ಅವರು ಬಿಜೆಪಿಯ ಪ್ರಬಲ ನಾಯಕರಾಗಿ ಬೆಳೆದರು. 1999ರ ವಾಜಪೇಯಿ ಸರ್ಕಾರದಲ್ಲಿ ನಗರಾಭಿವೃದ್ಧಿ, ಪ್ರವಾಸೋದ್ಯಮ 2014ರ ನರೇಂದ್ರ ಮೋದಿ ಸರ್ಕಾರದಲ್ಲಿ ಸಂಸದೀಯ ವ್ಯವಹಾರ ಸೇರಿದಂತೆ ಪ್ರಮುಖ ಖಾತೆಗಳನ್ನು ನಿರ್ವಹಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ | ಎರಡು ದಶಕಗಳ ಬಿಜೆಪಿ ಕೋಟೆ ಕೆಡವಲು ಕೈ ರಣತಂತ್ರ

ಅನಾರೋಗ್ಯದಿಂದ 2018ರಲ್ಲಿ ಮೃತಪಟ್ಟ ಕಾರಣ 2019ರ ಚುನಾವಣೆಯಲ್ಲಿ ಯುವಕ ತೇಜಸ್ವಿ ಸೂರ್ಯ ಬಿಜೆಪಿಯಿಂದ ಟಿಕೆಟ್ ಪಡೆದು ಗೆಲುವು ಸಾಧಿಸಿದರು.

ಬಿಜೆಪಿ ಗೆಲುವು ಸಾಧಿಸಿದ 8 ಚುನಾವಣೆಗಳಲ್ಲಿ ಕೈ ಪಕ್ಷ 1991ರಲ್ಲಿ ಆರ್‌ ಗುಂಡೂರಾವ್‌ ಹಾಗೂ 2009ರಲ್ಲಿ ಕೃಷ್ಣ ಬೈರೇಗೌಡ ಗೆಲುವಿನ ಸಮೀಪ ಬಂದು ಕಡಿಮೆ ಅಂತರದಿಂದ ಸೋಲು ಅನುಭವಿಸಿದ್ದಾರೆ. ಉಳಿದ ಅವಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ದೊಡ್ಡ ಅಂತರದಲ್ಲಿ ಸೋಲದಿದ್ದರೂ ಪೈಪೋಟಿಯಂತೂ ನೀಡಿದ್ದಾರೆ. ಕಾಂಗ್ರೆಸ್ ಈ ಕ್ಷೇತ್ರದಲ್ಲಿ ಗೆಲ್ಲದೇ ಇರುವುದಕ್ಕೆ ಮತ್ತೊಂದು ಕಾರಣ- ಒಬ್ಬ ಅಭ್ಯರ್ಥಿಗೆ ಕ್ಷೇತ್ರದ ಉಸ್ತುವಾರಿ ವಹಿಸದಿರುವುದು. ಕೊನೇ ಕ್ಷಣದಲ್ಲಿ ಅಭ್ಯರ್ಥಿ ತಂದು ಹಾಕುವುದು ಹಾಗೂ ಯಾರಿಗೂ ಕ್ಷೇತ್ರದ ಮೇಲೆ ಹಿಡಿತ ಸಾಧಿಸದಂತೆ ಮಾಡುವುದೇ ಆಗಿದೆ.

ಚುನಾವಣಾ ಕಣದ ಲೆಕ್ಕಾಚಾರ

ಕಳೆದ ಮೂರು ದಶಕಗಳಿಂದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿರುವ ಭಾರತೀಯ ಜನತಾ ಪಕ್ಷ 2024ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಂದು ಜಯದ ನಿರೀಕ್ಷೆಯಲ್ಲಿದೆ. ಮಹಿಳಾ ಮತದಾರರೇ ಹೆಚ್ಚಿರುವ ಈ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ನಾಯಕರು ಅಭ್ಯರ್ಥಿಯ ಬದಲಾವಣೆ ಮಾಡುತ್ತಾರಾ ಎಂಬ ಕುತೂಹಲ ಕೂಡ ಜನರಲ್ಲಿ ಇದೆ.

ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಹಾಲಿ ಸಂಸದ ತೇಜಸ್ವಿ ಸೂರ್ಯ ಕಳೆದ ಐದು ವರ್ಷಗಳಿಂದ ಯಾವುದೇ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳದಿರುವುದು ಮತದಾರರಲ್ಲಿ ಬೇಸರ ತರಿಸಿದೆ. ಕೋವಿಡ್‌ ಕಾಲದಲ್ಲೂ ಸರಿಯಾಗಿ ತಮ್ಮ ಕಷ್ಟಸುಖಗಳನ್ನು ವಿಚಾರಿಸಿಲ್ಲ ಎಂದು ಕ್ಷೇತ್ರದ ಜನರು ಅಳಲು ತೋಡಿಕೊಂಡಿದ್ದಾರೆ. ಐದು ವರ್ಷಗಳ ಕಾಲವೂ ಮೋದಿ ಭಜನೆಯಲ್ಲಿ ನಿರತರಾಗಿ, ಸೋಷಿಯಲ್ ಮೀಡಿಯಾಗಳಲ್ಲಿ ಕಾಲ ಕಳೆಯುತ್ತ, ಕ್ಷೇತ್ರವನ್ನು ಮರೆತಿರುವುದು ಕಷ್ಟ ಕೊಡಲಿದೆ. ಇವೆಲ್ಲವುಗಳ ಜೊತೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಜನಪ್ರಿಯ ಯೋಜನೆಗಳು ಲೋಕಸಭಾ ಚುನಾವಣೆಯಲ್ಲಿ ಪ್ರಭಾವ ಬೀರಿದರೆ, ಕಾಂಗ್ರೆಸ್ ನಿಂದ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಸೂರ್ಯರನ್ನು ಕತ್ತಲೆಗೆ ಸರಿಸಬಹುದಾಗಿದೆ.

Tejaswi and surya
Tejaswi and sowmya

ಅಭ್ಯರ್ಥಿಗಳ ವಿಷಯಕ್ಕೆ ಬಂದರೆ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಇಲ್ಲಿಯವರೆಗೂ ಘೋಷಿಸಿಲ್ಲ. ಬಿಜೆಪಿಯಿಂದ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರೇ ಬಹುತೇಕ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಅಚ್ಚರಿ ಹೆಸರಾಗಿ ತೇಜಸ್ವಿನಿ ಅನಂತಕುಮಾರ್ ಹೆಸರು ಕೇಳಿಬಂದರೂ ಯಾವುದೇ ಅಚ್ಚರಿಯಿಲ್ಲ ಎನ್ನುತ್ತಾರೆ ಕ್ಷೇತ್ರದ ಮತದಾರರು.

ಈ ನಡುವೆ ಕಳೆದ ಬಾರಿ ಬಿಜೆಪಿಯಿಂದ ಆಯ್ಕೆಯಾಗಿರುವ ತೇಜಸ್ವಿ ಸೂರ್ಯರನ್ನು ಶತಾಯಗತಾಯ ಮಣಿಸಬೇಕೆಂದು ಆಡಳಿತಾರೂಢ ಕಾಂಗ್ರೆಸ್ ಸಜ್ಜಾಗಿ ನಿಂತಿದೆ. ಕಾಂಗ್ರೆಸ್‌ನಿಂದ ಕಳೆದ ಬಾರಿ ಹಿರಿಯ ನಾಯಕ ಬಿ ಕೆ ಹರಿಪ್ರಸಾದ್ ಸ್ಪರ್ಧಿಸಿದ್ದರು. ಈ ಬಾರಿ ಸದ್ಯಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ, ಮಾಜಿ ಶಾಸಕಿ ಸೌಮ್ಯಾರೆಡ್ಡಿ ಅವರ ಹೆಸರು ಮುನ್ನೆಲೆಗೆ ಬಂದಿದೆ. ಆದರೆ ರಾಮಲಿಂಗಾರೆಡ್ಡಿಯಾಗಲಿ, ಸೌಮ್ಯಾರೆಡ್ಡಿ ಅವರಾಗಲಿ ಈ ಕುರಿತು ಯಾವುದೇ ಹೇಳಿಕೆಯನ್ನು ನೀಡಿಲ್ಲ. ಈ ಕ್ಷೇತ್ರದಿಂದ ಕಾಂಗ್ರೆಸ್ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಿದರೆ, ಬಿಜೆಪಿ ಅಭ್ಯರ್ಥಿಗೆ ಪೈಪೋಟಿ ನೀಡಬಹುದು. ಅಂತಹ ಅಭ್ಯರ್ಥಿಗಳ ಹುಡುಕಾಟವು ಕೂಡ ನಡೆಯುತ್ತಿದೆ. ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗುವವರೆಗೂ ಕುತೂಹಲವಂತೂ ಇದ್ದೇ ಇದೆ.

ಹಿಂದಿನ ಲೋಕಸಭಾ ಚುನಾವಣೆಗಳಲ್ಲಿ ಜೆಡಿಎಸ್ ತನ್ನ ಸಾಂಪ್ರದಾಯಿಕ ಮತಗಳನ್ನು ನೆಚ್ಚಿಕೊಂಡು ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತಿತ್ತು. ಈ ಬಾರಿ ಜೆಡಿಎಸ್ ಎನ್‌ಡಿಎ ಒಕ್ಕೂಟ ಸೇರಿರುವುದರಿಂದ ಕ್ಷೇತ್ರವು ಬಿಜೆಪಿ ಪಾಲಾಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ – ಕಾಂಗ್ರೆಸ್ ಪಕ್ಷಗಳ ಮಧ್ಯೆಯೇ ನೇರ ಪೈಪೋಟಿ ಏರ್ಪಡಲಿದೆ.

ವಿಧಾನಸಭಾ ಕ್ಷೇತ್ರಗಳು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರವು ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡಿದೆ. ಎಲ್ಲವೂ ಸಾಮಾನ್ಯ ಕ್ಷೇತ್ರಗಳಾಗಿವೆ. ಗೋವಿಂದರಾಜ್ ನಗರ, ವಿಜಯ ನಗರ ಹಾಗೂ ಬಿಟಿಎಂ ಲೇಔಟ್‌ ಕ್ಷೇತ್ರಗಳು ಕಾಂಗ್ರೆಸ್ ತೆಕ್ಕೆಯಲ್ಲಿದ್ದರೆ, ಚಿಕ್ಕಪೇಟೆ, ಬಸವನಗುಡಿ, ಪದ್ಮನಾಭ ನಗರ, ಜಯನಗರ, ಬೊಮ್ಮನಹಳ್ಳಿ ಕ್ಷೇತ್ರಗಳು ಬಿಜೆಪಿ ವಶದಲ್ಲಿವೆ.

ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚು

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಪುರುಷರು 9,43 ಲಕ್ಷ, ಮಹಿಳೆಯರು 10,85 ಲಕ್ಷ ಒಳಗೊಂಡು ಒಟ್ಟು 21,81 ಲಕ್ಷ ಮತದಾರರಿದ್ದಾರೆ. ಕೆಲವೊಂದು ಅಂಕಿಅಂಶಗಳ ಪ್ರಕಾರ ಜಾತಿವಾರು ಮತದಾರರ ಪೈಕಿ ಬ್ರಾಹ್ಮಣ 3,50 ಲಕ್ಷ, ಒಕ್ಕಲಿಗ 5 ಲಕ್ಷ, ಎಸ್‌ಸಿಎಸ್‌ಟಿ 6 ಲಕ್ಷ, ಮುಸ್ಲಿಂ 3 ಲಕ್ಷ, ಕ್ರೈಸ್ತರು 2 ಲಕ್ಷ ಹಾಗೂ ಇತರೆ 2 ಲಕ್ಷ ಮಂದಿ ಇದ್ದಾರೆ.

blank profile picture 973460 640
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕಲ್ಯಾಣದಲ್ಲಿ ನೆರೆ | ಪರಿಹಾರದ ವಿವರ ನೀಡುವಂತೆ ಸರಕಾರಕ್ಕೆ ಹೆಚ್.ಡಿ.ದೇವೇಗೌಡ ಗಡುವು

ಕಲ್ಯಾಣ ಕರ್ನಾಟಕದ ನೆರೆಪೀಡಿತ ಜಿಲ್ಲೆಗಳಿಗೆ ಈವರೆಗೆ ಏನೆಲ್ಲಾ ಪರಿಹಾರ ಒದಗಿಸಲಾಗಿದೆ ಎಂಬ...

ರಾಜಕೀಯ ವಿಕೃತಿ | ಖರ್ಗೆ ಅವರ ಅನಾರೋಗ್ಯ – ನಂಜು ಕಾರುತ್ತಿರುವ ಬಿಜೆಪಿಗರು

ಖರ್ಗೆ ಅವರು ದಲಿತ ಸಮುದಾಯದಿಂದ ಬಂದವರು. ಆ ಕಾರಣಕ್ಕಾಗಿಯೇ ಬಿಜೆಪಿ ಮತ್ತು...

ಜನರಿಂದ ಪಡೆದ ಹೆಚ್ಚಿನ ಜಿಎಸ್ ಟಿಯನ್ನು ಕೇಂದ್ರ ಸರ್ಕಾರ ಮರಳಿ ನೀಡುವುದೇ: ಸಿಎಂ ಪ್ರಶ್ನೆ

ಬಿಹಾರ ಚುನಾವಣೆಯ ಹಿನ್ನಲೆಯಲ್ಲಿ ಜಿಎಸ್ ಟಿಯನ್ನು ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ...

ಚಿತ್ರದುರ್ಗ | ನಿಗಮ ಮಂಡಳಿಗೆ ಪರಿಗಣಿಸದೇ ಅನ್ಯಾಯ: ಕಾಂಗ್ರೆಸ್ಸಿನ ಆರ್ ಕೆ ಸರ್ದಾರ್ ಬೆಂಬಲಿಗರ ಆಕ್ರೋಶ

ʼʼಕರ್ನಾಟಕ ಪ್ರದೇಶ ಕಾಂಗ್ರೆಸ್ಸಿನ ಹಾಗೂ ಚಿತ್ರದುರ್ಗದ ಹಿರಿಯ ಮುಖಂಡರು ಮುಸ್ಲಿಂ ನಾಯಕರಾದ...

Download Eedina App Android / iOS

X