ಲೋಕಸಭೆ ಚುನಾವಣೆ | ಮಕ್ಕಳ ಪ್ರಣಾಳಿಕೆ ಸಿದ್ದಪಡಿಸಿದ ಮಹಸ; ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಲು ಪಕ್ಷಗಳಿಗೆ ಕರೆ

Date:

ಇನ್ನೇನು ಕೆಲವೇ ದಿನಗಳಲ್ಲಿ 18ನೇ ಲೋಕಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಸಜ್ಜಾಗಿರುವ ಪಕ್ಷಗಳು ತಮ್ಮ ತಮ್ಮ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದ್ದಾರೆ. ಇದೀಗ, ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿರುವ ಮಕ್ಕಳ ಬೇಡಿಕೆಗಳನ್ನು ಒಳಗೊಂಡ ಮಕ್ಕಳ ಪ್ರಣಾಳಿಕೆಯನ್ನು ಮಕ್ಕಳ ಹಕ್ಕುಗಳ ಸಮನ್ವಯ (ಮಹಸ) ಸಿದ್ಧಪಡಿಸಿದೆ. ತಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುವಂತೆ ರಾಜಕೀಯ ಪಕ್ಷಗಳಿಗೆ ಮಹಸ ಮನವಿ ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಪಾಫ್ರೆ ಸಂಚಾಲಕರು ಹಾಗೂ ಶಿಕ್ಷಣ ತಜ್ಞರಾದ ನಿರಂಜನಾರಾಧ್ಯ ವಿ.ಪಿ, “ಕರ್ನಾಟಕ ರಾಜ್ಯ ಮತ್ತು ದೇಶದ ನಾನಾ ಭಾಗಗಳಲ್ಲಿ ಮಕ್ಕಳ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಮಕ್ಕಳ ಹಕ್ಕುಗಳ ಸಮನ್ವಯ (ಮಹಸ) ಸ್ವಯಂಸೇವಾ ಸಂಸ್ಥೆಗಳು ಒಟ್ಟಾಗಿ ರಾಜ್ಯ ಮತ್ತು ರಾಷ್ಟ ಮಟ್ಟದಲ್ಲಿರುವ ಮಕ್ಕಳ ಬೇಡಿಕೆಗಳನ್ನು ಒಳಗೊಂಡ ಮಕ್ಕಳ ಪ್ರಣಾಳಿಕೆಯನ್ನು ಸಿದ್ಧಪಡಿಸಿದೆ” ಎಂದು ಹೇಳಿದ್ದಾರೆ.

“ಈ ಪ್ರಣಾಳಿಕೆಯನ್ನು ನಾನಾ ಪಕ್ಷಗಳು ತಾವು ತಯಾರಿಸಿರುವ ಚುನಾವಣಾ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳಿ ಎಂದು ನಾನಾ ಸ್ವಯಂಸೇವಾ ಸಂಸ್ಥೆಗಳು ಜತೆಗೂಡಿ ವಿವಿಧ ರಾಷ್ಟ್ರೀಯ ರಾಜಕೀಯ ಪಕ್ಷಗಳಾದ ಕಾಂಗ್ರೆಸ್, ಬಿಜೆಪಿ, ಜೆಡಿಎಸ್, ಆಮ್ ಆದ್ಮಿ ಪಾರ್ಟಿ, ಬಿಎಸ್‌ಪಿ ಕಚೇರಿಗಳಿಗೆ ತೆರಳಿ ನೀಡಲಾಯಿತು” ಎಂದಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

“ಮಕ್ಕಳ ಹಕ್ಕುಗಳ ಸಮನ್ವಯ (ಮಹಸ) ಮೂಲಕ ಕೊಟ್ಟಿರುವ ಮಕ್ಕಳ ಬೇಡಿಕೆಗಳ ಪ್ರಣಾಳಿಕೆಯನ್ನು ಖಂಡಿತವಾಗಿ ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಸೇರಿಸಿಕೊಳ್ಳುತ್ತೇವೆ. ಜೊತೆಗೆ ಅಧಿಕಾರಕ್ಕೆ ಬಂದ ನಂತರ ಆ ಬೇಡಿಕೆಗಳನ್ನು ಜಾರಿ ಮಾಡಿ ಮಕ್ಕಳ ಬದುಕು, ರಕ್ಷಣೆ, ಆರೋಗ್ಯ, ಅಪೌಷ್ಟಿಕತೆ, ಶಿಕ್ಷಣ ಮೊದಲಾದವುಗಳನ್ನು ಮಕ್ಕಳಿಗೆ ತಲುಪಿಸುತ್ತೇವೆಂದು ಎಲ್ಲ ಪಕ್ಷಗಳ ಪದಾಧಿಕಾರಿಗಳು ಆಶ್ವಾಸನೆ ನೀಡಿದರು” ಎಂದು ತಿಳಿಸಿದ್ದಾರೆ.

“ಭಾರತ ತನ್ನ 18ನೇ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಸಜ್ಜಾಗಿದೆ. ದೇಶದ ಜನರ ಸಮಸ್ಯೆಗಳನ್ನು ಬಗೆಹರಿಸುವ ಭರವಸೆಗಳು ಚುನಾವಣೆಗಳ ಸಂದರ್ಭಗಳಲ್ಲಿ ಚರ್ಚೆಗೆ ಬರಬೇಕಿರುವುದು ಮತ್ತು ಅವು ರಾಜಕೀಯ ಪಕ್ಷಗಳ ಚುನಾವಣಾ ಪ್ರಣಾಳಿಕೆಗಳಲ್ಲಿ ಬರಬೇಕೆಂದು ಎಲ್ಲರೂ ಬಯಸುತ್ತೇವೆ. ಆದರೆ ಈ ದಿನಗಳಲ್ಲಿ ಸಾಮಾನ್ಯವಾಗಿ ಚುನಾವಣೆಯಲ್ಲಿ ಜನರ ಜ್ವಲಂತ ಸಮಸ್ಯೆಗಳಿಗಿಂತ ವೈಯುಕ್ತಿಕ ವಿಷಯಗಳು ಮತ್ತು ಜಾತಿ-ಧರ್ಮ ಆಧಾರಿತ ವಿಷಯಗಳೇ ಹೆಚ್ಚು ಮುನ್ನೆಲೆಗೆ ಬರುತ್ತಿವೆ” ಎಂದು ಮಹಸ ಹೇಳಿದೆ.

ಈ ಬಾರಿಯ ಚುನಾವಣೆಯಲ್ಲಿ, ದೇಶದ ಒಟ್ಟು ಜನ ಸಂಖ್ಯೆಯಲ್ಲಿ 1/3ರಷ್ಟಿರುವ ಮಕ್ಕಳ ಜ್ವಲಂತ ಸಮಸ್ಯೆಗಳನ್ನು ಹಾಗೂ ಮಕ್ಕಳಿಗೆ ಅಂತಾರಾಷ್ಟ್ರೀಯ ಒಡಂಬಡಿಕೆ-ಒಪ್ಪಂದಗಳು ಮತ್ತು ಭಾರತದ ಸಂವಿಧಾನ ಕೊಡಮಾಡಿರುವ ಹಕ್ಕು ಮತ್ತು ಬಾಧ್ಯತೆಗಳ ವಿಷಯವನ್ನು ಚುನಾವಣೆಯ ಒಂದು ಮುಖ್ಯ ವಿಷಯವನ್ನಾಗಿಸುವ ಉದ್ದೇಶವನ್ನು ಮಕ್ಕಳ ಹಕ್ಕುಗಳ ಸಮನ್ವಯ ಹೊಂದಿದೆ.

ಭಾರತ ಸಂವಿಧಾನ ಎಲ್ಲ ವಯಸ್ಕರಿಗೆ ಮತ ಚಲಾಯಿಸುವ ಮೂಲಕವೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಹಕ್ಕನ್ನು ನೀಡಿದೆ. ಇದೊಂದು ರಾಜಕೀಯ ಹಕ್ಕಾಗಿದೆ. ಹೀಗಾಗಿ, ವಯಸ್ಕರು ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ. ವಯಸ್ಕರು ತಮ್ಮ ಭವಿಷ್ಯದ ಜತೆಗೆ ತಮ್ಮ ಮಕ್ಕಳ ಬದುಕು ಭವಿಷ್ಯದ ಬಗ್ಗೆಯೂ ಕಾಳಜಿ ಹೊಂದಿರುತ್ತಾರೆ. ತಮ್ಮ ಭವಿಷ್ಯಕ್ಕಿಂತ ತಮ್ಮ ಮಕ್ಕಳ ಭವಿಷ್ಯದ ಬಗ್ಗೆಯೇ ಹೆಚ್ಚಿನ ಕಾಳಜಿಯನ್ನು ವಯಸ್ಕರು ಹೊಂದಿರುತ್ತಾರೆ. ಮಕ್ಕಳ ಈ ಎಲ್ಲ ಮೂಲಭೂತ ಅವಶ್ಯಕತೆಗಳು ಇಂದು ಮೂಲಭೂತ ಹಕ್ಕುಗಳಾಗಿವೆ.

“ಚುನಾವಣೆಯ ಮೂಲಕ ಅಧಿಕಾರಕ್ಕೆ ಬರುವ ಪ್ರತಿಯೊಂದು ರಾಜಕೀಯ ಪಕ್ಷದ ಸಂವಿಧಾನಬದ್ಧ ಕರ್ತವ್ಯವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ, ಹೆಣ್ಣುಮಕ್ಕಳು, ಅವಕಾಶ ವಂಚಿತ ಸಮುದಾಯಗಳ ಮಕ್ಕಳು, ಅಂಗವಿಕಲತೆಯೊಂದಿಗಿರುವ ಮಕ್ಕಳು, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಮಕ್ಕಳು, ಪರಿಶಿಷ್ಟ ಜಾತಿ, ವರ್ಗ ಮತ್ತು ಬುಟಕಟ್ಟು ಸಮುದಾಯದ ಮಕ್ಕಳಿಗೆ, ವಲಸೆ ಹೋಗುವ/ಬರುವ ಕುಟುಂಬಗಳ ಮಕ್ಕಳಿಗೆ, ವಿವಿಧ ರೀತಿಯ ತಾರತಮ್ಯಗಳಿಗೆ ಈಡಾದ ಕುಟುಂಬಗಳ ಮಕ್ಕಳಿಗೆ ಈ ಹಕ್ಕುಗಳನ್ನು ಖಾತರಿಯಾಗಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗುತ್ತದೆ” ಎಂದಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಚಂದಾಪುರದ ಫ್ಲ್ಯಾಟ್‌ನಲ್ಲಿ ವಿವಸ್ತ್ರವಾಗಿ ಮಹಿಳೆಯ ಶವ ಪತ್ತೆ

ಹಕ್ಕೊತ್ತಾಯಗಳು

  1. ವಿಶ್ವಸಂಸ್ಥೆಯ ಮಕ್ಕಳ ಹಕ್ಕುಗಳ ಒಡಂಬಡಿಕೆ, ಭಾರತದ ಸಂವಿಧಾನದ ಆಶಯಗಳು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳು ಕೊಡಮಾಡುವ ಹಕ್ಕುಗಳಿಗೆ ಅನುಗುಣವಾಗಿ 18 ವರ್ಷದೊಳಗಿನ ಎಲ್ಲ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಮಕ್ಕಳ ಕ್ರಿಯಾ ಯೋಜನೆಯನ್ನು ರೂಪಿಸಿ ಎಲ್ಲ ಇಲಾಖೆಗಳೊಡನೆ ಸಮನ್ವಯಗೊಳಿಸುವುದು.
  2. ಗ್ರಾಮೀಣ ಮಕ್ಕಳ, ಹಿಂದುಳಿದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗ ಹಾಗೂ ಹಿಂದುಳಿದ ಸಮುದಾಯಗಳು ಮತ್ತು ಸಂಕಷ್ಟದಲ್ಲಿರುವ ಒಂಟಿ ಪೋಷಕರ ಮತ್ತು ಅನಾಥ ಬಾಲಕ/ಬಾಲಕಿಯರ ಸಮಗ್ರ ಅಭಿವೃದ್ಧಿಗಾಗಿ (ಆರೋಗ್ಯ, ರಕ್ಷಣೆ ಮತ್ತು ಶಿಕ್ಷಣ) ವಿಶೇಷ ಯೋಜನೆಯನ್ನು ರೂಪಿಸಿ ಅದಕ್ಕೆ ಅಗತ್ಯ ಹಣಕಾಸು ಮೀಸಲಿಡಬೇಕು.
  3. ಮಕ್ಕಳ ಆರೋಗ್ಯ ರಕ್ಷಣೆಗಾಗಿ ರಾಷ್ಟ್ರೀಯ ಆಯವ್ಯಯದಲ್ಲಿ ಶೇ. 5ನ್ನು ಮೀಸಲಿಡಬೇಕು.
  4. ಪ್ರತಿಯೊಂದು ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಈಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳ ಸ್ನೇಹಿ ವಿಭಾಗಗಳನ್ನು ಸ್ಥಾಪಿಸಿ ಕನಿಷ್ಠ ಒಬ್ಬ ಮಕ್ಕಳ ತಜ್ಞರನ್ನು ನೇಮಿಸಬೇಕು.
  5. ದೇಶದ ಮತ್ತು ರಾಜ್ಯದ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ತೊಡೆದುಹಾಕಲು ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆಯ ಅನ್ವಯ ಗುಣಮಟ್ಟದ ಪೌಷ್ಟಿಕ ಆಹಾರ ಒದಗಿಸಬೇಕು.
  6. ನೈಸರ್ಗಿಕ ವಾತಾವರಣದಲ್ಲಿ ಮತ್ತು ಪರಿಸರದಲ್ಲಿ ಆಗುತ್ತಿರುವ ಬದಲಾವಣೆಗಳು ಮಕ್ಕಳ ಬದುಕಿನ ಮೇಲೆ ಋಣಾತ್ಮಕ ಪ್ರಭಾವವನ್ನು ಬೀರುತ್ತಿವೆ. ಗ್ರಾಮೀಣ ಮತ್ತು ನಗರಗಳಲ್ಲಿ ಆಗುತ್ತಿರುವ ಈ ಬದಲಾವಣೆಗಳನ್ನು ವೈಜ್ಞಾನಿಕವಾಗಿ ತಡೆಯಲು ಆಯವ್ಯಯದಲ್ಲಿ ಹಣ ಮೀಸಲಿಡುವ ಮೂಲಕ ಕ್ರಮವಹಿಸಬೇಕು.
  7. 18 ವರ್ಷದೊಳಗಿನ ಮಕ್ಕಳ ಮೇಲೆ ಸಂಭವಿಸಬಹುದಾದ ಎಲ್ಲ ರೀತಿಯ ತೊಂದರೆ, ದೌರ್ಜನ್ಯ, ಹಿಂಸೆಗಳನ್ನು ಪರಿಣಾಮಕಾರಿಯಾಗಿ ತೊಡೆದು ಹಾಕಲು ಈಗಿರುವ ಕಾನೂನು ಹಾಗೂ ನೀತಿಗಳ ಸಮರ್ಪಕ ಜಾರಿ ಮಾಡಬೇಕು.
  8. ಮಕ್ಕಳ ರಕ್ಷಣಾ ವ್ಯವಸ್ಥೆಗಳು ಹಾಗೂ ನೀತಿಯ ಸಮರ್ಪಕ ಅನುಷ್ಠಾನಕ್ಕಾಗಿ ಮುಂದಿನ 5 ವರ್ಷಗಳಲ್ಲಿ ಆಯವ್ಯಯದ ಶೇ.3ರಷ್ಟು ಹಣಕಾಸನ್ನು ಮೀಸಲಿಡಬೇಕು.
  9. ಮಕ್ಕಳ ಹಕ್ಕುಗಳ ರಕ್ಷಣೆ ಪರಿಣಾಮಕಾರಿ ಜಾರಿಗಾಗಿ ನಾನಾ ಕಾನೂನುಗಳ ಅಡಿ ಸ್ಥಾಪಿಸಲಾಗಿರುವ ಮಕ್ಕಳ ಕಲ್ಯಾಣ ಸಮಿತಿಗಳು, ಬಾಲ ನ್ಯಾಯ ಮಂಡಳಿಗಳು, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಇತ್ಯಾದಿ ಕಾನೂನುಬದ್ಧ ಸಮಿತಿ ಮತ್ತು ಅರೆ ನ್ಯಾಯಿಕ ಸಮಿತಿಗಳನ್ನು ಕಾಲಕಾಲಕ್ಕೆ ನಿಯಮ ಬದ್ಧವಾಗಿ ಸ್ಥಾಪಿಸಿ ಪರಿಣಾಮಕಾರಿಯಾದ ಮೇಲುಸ್ತುವಾರಿ ವ್ಯವಸ್ಥೆಗಳನ್ನು ಬಲಪಡಿಸಬೇಕು. ಜತೆಗೆ ಈ ಸಂಸ್ಥೆಗಳ ಸ್ವಾಯತ್ತತೆಯನ್ನು ಗೌರವಿಸಿ ರಾಜಕೀಯ ಪ್ರಭಾವದಿಂದ ಹೊರತಾಗಿ ಸ್ವತಂತ್ರವಾಗಿ ಕಾರ್ಯನಿರ್ವಹಿಸುವಂತೆ ಅನುವು ಮಾಡಬೇಕು.
  10. ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿಗೆಂದೇ ರೂಪಿಸಲಾಗಿರುವ ಪ್ರಮುಖವಾದ ಕಾನೂನುಗಳಾದ “ಮಕ್ಕಳ ನ್ಯಾಯ (ರಕ್ಷಣೆ ಮತ್ತು ಪೋಷಣೆ) ಕಾಯಿದೆ, 2015; ಮಕ್ಕಳು ಮತ್ತು ಕಿಶೋರ ಕಾರ್ಮಿಕ (ಪದ್ಧತಿ ನಿಷೇಧ ಮತ್ತು ನಿಯಂತ್ರಣ) ಕಾಯಿದೆ, 1986; ಭ್ರೂಣಲಿಂಗ ಪತ್ತೆ ನಿಷೇಧ ಕಾಯಿದೆ, 1994; ಬಾಲ್ಯವಿವಾಹ ನಿಷೇಧ ಕಾಯಿದೆ, 2006; ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ, 2009; ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯಿದೆ, 2012; ದೇವದಾಸಿ ಸಮರ್ಪಣೆ ನಿಷೇಧ ಕಾಯಿದೆ, 1982” ಕುರಿತು ವ್ಯಾಪಕವಾಗಿ ಪ್ರಚಾರ ಮಾಡುತ್ತೇವೆ. ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ. ಮಕ್ಕಳ ರಕ್ಷಣೆಗಾಗಿ ಇರುವ ಸಹಾಯವಾಣಿಗಳನ್ನು (1098 / 112) ಬಲ ಪಡಿಸಬೇಕು.
  11. 18 ವರ್ಷದೊಳಗಿನ ಎಲ್ಲ ಮಕ್ಕಳ ಪ್ರಾಥಮಿಕ ಪೂರ್ವ, ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಶಿಕ್ಷಣವನ್ನು ಗಮನದಲ್ಲಿಟ್ಟುಕೊಂಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪರಾಮರ್ಶಿಸಿ ಅನುಷ್ಠಾನಕ್ಕಾಗಿ ಆಯವ್ಯಯದಲ್ಲಿ ಶೇ. 15ರಷ್ಟು ಮತ್ತು ದೇಶದ ಜಿಡಿಪಿಯಲ್ಲಿ ಶೇಕಡ 6ರಷ್ಟು ಹಣಕಾಸನ್ನು ಒದಗಿಸಬೇಕು.
  12. ಸಂವಿಧಾನದ ವಿಧಿ 21ಎ ಮತ್ತು ಆರ್.ಟಿ.ಇ ಕಾಯ್ದೆ 2009ಕ್ಕೆ ಸೂಕ್ತ ತಿದ್ದುಪಡಿಯನ್ನು ತರುವ ಮೂಲಕ ಹುಟ್ಟಿನಿಂದ 18 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪ್ರಾಥಮಿಕ ಪೂರ್ವದಿಂದ ಪದವಿ-ಪೂರ್ವ ಹಂತದವರೆಗೆ ಸಮಾನ ಗುಣಮಟ್ಟದ ಶಿಕ್ಷಣಕ್ಕೆ ಬುನಾದಿಯಾಗುವಂತೆ ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಬೇಕು.
  13. ಸಂವಿಧಾನದಲ್ಲಿ ಕೊಡಮಾಡಿರುವ ಶಿಕ್ಷಣ ಮೂಲಭೂತ ಹಕ್ಕು ಹಾಗೂ ಸಂಬಂಧಿತ ಕಾಯ್ದೆಯನ್ನು ಕಾಲಮಿತಿಯೊಳಗೆ ಸಮರ್ಪಕವಾಗಿ ಜಾರಿಗೊಳಿಸಲು ಅವಶ್ಯಕವಾದ ಹಣಕಾಸು, ಶಿಕ್ಷಕರ ನೇಮಕಾತಿ ಮತ್ತು ಇತರ ಬೆಂಬಲಿತ ವ್ಯವಸ್ಥೆ ಮಾಡಬೇಕು.
  14. ಸಮನ್ವಯ ಶಿಕ್ಷಣಕ್ಕೆ ವಿಶೇಷ ಒತ್ತು ನೀಡಿ ಅಂಗವಿಕಲತೆಯಿರುವ ಎಲ್ಲ ಮಕ್ಕಳಿಗೆ ಶಿಕ್ಷಣದ ಅವಕಾಶಗಳು ದೊರೆಯುವಂತಹ ವ್ಯವಸ್ಥೆ ಮಾಡಬೇಕು. ಅಂಗವಿಕಲತೆಯಿರುವ ಮಕ್ಕಳಿಗೆ ಹಾಗೂ ನಾನಾ ರೀತಿಯ ಸಾಮಾಜಿಕ ಹಿನ್ನಡೆ ಅನುಭವಿಸಿರುವ ಮಕ್ಕಳಿಗಾಗಿ ಯಾವುದೇ ಅಡೆತಡೆಯಿಲ್ಲದೆ ಶಿಕ್ಷಣದಲ್ಲಿ ಭಾಗವಹಿಸಲು ಬೇಕಾದ ವಿದ್ಯಾರ್ಥಿ ವೇತನ ಅಥವಾ ಶಿಶ್ಯವೇತನ ಮತ್ತು ವಸತಿ ನಿಲಯಗಳ ವ್ಯವಸ್ಥೆ ಮಾಡಬೇಕು.
  15. ಆ‌ರ್.ಟಿ.ಇ 2009 ಕಾಯ್ದೆಯ ಭಾಗ 3ರ ಕಲಂ 21ಕ್ಕೆ ತಿದ್ದುಪಡಿ ಮಾಡಿ ಶಾಲಾ ನಿರ್ವಹಣಾ ಸಮಿತಿಯಲ್ಲಿ ಮಕ್ಕಳಿಗೆ ಪ್ರಾತಿನಿಧ್ಯ ನೀಡಿ ಮಕ್ಕಳ ಹಕ್ಕುಗಳ ವಿಚಾರಗಳನ್ನು ಎಸ್.ಎಂ.ಸಿ/ಎಸ್.ಡಿ.ಎಂ.ಸಿಯಲ್ಲಿ ಚರ್ಚಿಸಿ ಅನುಷ್ಠಾನಗೊಳಿಸಲು ಕ್ರಮವಹಿಸಬೇಕು.
  16. ಮಕ್ಕಳ ಪ್ರಾತಿನಿಧ್ಯವನ್ನು ಕಡ್ಡಾಯಗೊಳಿಸಿರುವ ಎಸ್.ಎಮ್.ಸಿ / ಎಸ್.ಡಿ.ಎಂ.ಸಿ. ಸಮಿತಿಯ ಪ್ರತಿನಿಧಿ ಗಳೊಂದಿಗೆ ನಡೆಯುವ ಸಭೆಗಳಲ್ಲಿ ಮಕ್ಕಳು ಬೆರೆಯಲು ಮತ್ತು ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸಲು ಸಮಿತಿಗಳ ಎಲ್ಲ ಸದಸ್ಯರಿಗೆ ತರಬೇತಿ ಮತ್ತು ನಿರ್ದೇಶನಗಳನ್ನು ನೀಡಬೇಕು.
  17. ಮಕ್ಕಳಲ್ಲಿ ನಾಯಕತ್ವ ಬೆಳೆಸಲು, ಅವರ ಅಭಿಪ್ರಾಯಗಳಿಗೆ ಅವಕಾಶಗಳನ್ನು ನೀಡಲು ರೂಪಿಸಲಾಗುವ ಎಲ್ಲ ಇಲಾಖೆಗಳ ಕಾರ್ಯಕ್ರಮಗಳಲ್ಲಿ ಮಕ್ಕಳು ಮುಕ್ತವಾಗಿ ಮತ್ತು ಯಾವುದೇ ತಾರತಮ್ಯಗಳಿಲ್ಲದೆ ಭಾಗವಹಿಸಲು ಅವಕಾಶಗಳನ್ನು ಕಲ್ಪಿಸಿಕೊಡಬೇಕು.
  18. ಮಕ್ಕಳ ಭಾಗವಹಿಸುವಿಕೆ ಮತ್ತು ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ರೂಪಿಸಲಾಗಿರುವ ಮಕ್ಕಳ ಹಕ್ಕುಗಳ ವಾರ್ಡ್‌ ಸಭೆಗಳು, ಗ್ರಾಮಸಭೆಗಳು ಮತ್ತು ಇತರ ವಲಯಗಳಾದ ಪುರಸಭೆ, ನಗರಸಭೆಗಳಲ್ಲಿ ಅರ್ಥಪೂರ್ಣವಾಗಿ ಭಾಗವಹಿಸಲು ವ್ಯವಸ್ಥೆಗಳನ್ನು ರೂಪಿಸಬೇಕು.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು | ಹಿಂದು ಕಾರ್ಯಕರ್ತನ ಮೇಲೆ ಬಿಜೆಪಿಗರ ಹಲ್ಲೆ

ಹಿಂದುತ್ವವಾದಿ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಹಲ್ಲೆ ಮಾಡಿ, ಥಳಿಸಿರುವ ಘಟನೆ...

ಮಂಡ್ಯ | 8,000 ಕಿ.ಮೀ ದೂರದಿಂದ ಬಂದು ಮತದಾನ ಮಾಡಿದ ಯುವತಿ!

ಯುವತಿಯೊಬ್ಬರು ಬರೋಬರಿ 8,000 ಕಿ.ಮೀ ದೂರದ ಲಂಡನ್‌ನಿಂದ ಮಂಡ್ಯಕ್ಕೆ ಬಂದು ಮತದಾನ...

ಕಲ್ಲು ತೂರಾಟ, ಗಲಾಟೆ ನಡುವೆ ಬಹುತೇಕ ಕಡೆ ರಾಜ್ಯದಲ್ಲಿ ಶಾಂತಿಯುತ ಮತದಾನ

ದೇಶದಲ್ಲಿ ಶುಕ್ರವಾರ (ಏ.26) ಎರಡನೇ ಹಂತದ ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯದ...

ದಕ್ಷಿಣ ಕನ್ನಡ | 100% ಮತದಾನ ದಾಖಲಿಸಿದ ಕುಗ್ರಾಮ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ ನಡೆದಿದೆ. ದಕ್ಷಿಣ...