ತಮ್ಮ ಸಾರ್ವಜನಿಕ ಭಾಷಣಗಳ ವೇಳೆ ಬಳಸುವ ಪದಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿಯವರಿಗೆ ಚುನಾವಣಾ ಆಯೋಗ ಸೂಚನೆ ನೀಡಿರುವುದಾಗಿ ವರದಿಯಾಗಿದೆ.
ತಮ್ಮ ಸಾರ್ವಜನಿಕ ಭಾಷಣಗಳಲ್ಲಿ ಪನೌತಿ(ಕೆಟ್ಟ ಶಕುನ), ಕಿಸೆಗಳ್ಳ ಎಂಬಿತ್ಯಾದಿಯ ಪದಗಳನ್ನು ಬಳಸಬೇಡಿ, ಎಚ್ಚರಿಕೆಯಿಂದ ಇರಿ ಎಂದು ಎನ್ನುವ ಮೂಲಕ ಪ್ರಧಾನಿಯನ್ನು ಗೇಲಿ ಮಾಡುವಂತಿಲ್ಲ ಎಂದು ಪರೋಕ್ಷವಾಗಿ ತಿಳಿಸಿದೆ.
“ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಬಗ್ಗೆ “ಪನೌಟಿ” (ಕೆಟ್ಟ ಶಕುನ) ಮತ್ತು “ಪಿಕ್‌ಪಾಕೆಟ್” ಗೇಲಿಗಳ ಹಿನ್ನೆಲೆಯಲ್ಲಿ ತಮ್ಮ ಸಾರ್ವಜನಿಕ ಹೇಳಿಕೆಗಳಲ್ಲಿ ಹೆಚ್ಚು ಜಾಗರೂಕರಾಗಿರಿ” ಎಂದು ಭಾರತೀಯ ಚುನಾವಣಾ ಆಯೋಗವು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸೂಚಿಸಿದೆ” ಎಂದು ಪಿಟಿಐ ವರದಿ ಮಾಡಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಸ್ಟಾರ್ ಪ್ರಚಾರಕರು ಮತ್ತು ರಾಜಕೀಯ ಮುಖಂಡರಿಗೆ ದೆಹಲಿ ಹೈಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಈ ಸೂಚನೆ ನೀಡಿದ್ದು, ಈ ಸಲಹೆಯನ್ನು ಶ್ರದ್ಧೆಯಿಂದ ಅನುಸರಿಸುವಂತೆ ರಾಹುಲ್ ಗಾಂಧಿ ಅವರಲ್ಲಿ ಆಯೋಗವು ಮನವಿ ಮಾಡಿದೆ.
2023ರ ನವೆಂಬರ್ 19ರಂದು ಗುಜರಾತ್‌ನ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದಿದ್ದ ವಿಶ್ವಕಪ್ ಕ್ರಿಕೆಟ್‌ನ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿದ್ದರಿಂದ ಟೀಮ್ ಇಂಡಿಯಾದ ಚಾಂಪಿಯನ್ ಪಟ್ಟ ಕೈತಪ್ಪಿತ್ತು.
ಆ ಬಳಿಕ ರಾಜಸ್ಥಾನದ ವಿಧಾನಸಭಾ ಚುನಾವಣೆಯ ಪ್ರಚಾರ ಸಂದರ್ಭದಲ್ಲಿ ಜಲೋರ್‌ನಲ್ಲಿ ನಡೆಸಿದ್ದ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಸೋಲಿನ ಬಗ್ಗೆಯೂ ಪ್ರಸ್ತಾಪಿಸುತ್ತಾ, “ನಮ್ಮ ಹುಡುಗರು ವಿಶ್ವಕಪ್ ಗೆದ್ದಿದ್ದರೆ ಚೆನ್ನಾಗಿತ್ತು. ಆದರೆ ಪನೌತಿ (ಅಪಶಕುನ) ಹೋಗಿ ನಮ್ಮನ್ನು ಸೋಲುವಂತೆ ಮಾಡಿದರು ಎಂದು ಜನರು ಆಡಿಕೊಳ್ಳುತ್ತಿದ್ದಾರೆ. ಆದರೆ ಇದನ್ನು ಯಾವ ಮಾಧ್ಯಮಗಳು ತೋರಿಸುವುದಿಲ್ಲ” ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಹೆಸರನ್ನು ಉಲ್ಲೇಖಿಸಿದೆ ವ್ಯಂಗ್ಯವಾಡಿದ್ದರು. ಇದು ಬಿಜೆಪಿ ಹಾಗೂ ಸಂಘಪರಿವಾರನ್ನು ಕೆರಳಿಸಿತ್ತು.
ಇದನ್ನು ಓದಿದ್ದೀರಾ? ಯೂತ್ ಕಾಂಗ್ರೆಸ್‌ನಿಂದ ‘ಮೋದಿ ಕಾ ಅಸ್ಲಿ ಪರಿವಾರ್’ ಪೋಸ್ಟರ್: ದಿಲ್ಲಿ ಪೊಲೀಸರಿಂದ ಎಫ್‌ಐಆರ್
ಪ್ರಧಾನಿಯವರನ್ನು ಪರೋಕ್ಷವಾಗಿ ಉಲ್ಲೇಖಿಸಿ ‘ಪನೌತಿ’ ಮತ್ತು ‘ಪಿಕ್ ಪಾಕೆಟ್’ನಂತಹ ಪದಗಳನ್ನು ಬಳಸಿದ್ದರಿಂದ ಚುನಾವಣಾ ಆಯೋಗವು, ರಾಹುಲ್ ಗಾಂಧಿ ಅವರಿಗೆ ನೋಟಿಸ್ ನೀಡಿತ್ತು. ರಾಹುಲ್ ಗಾಂಧಿ ಮಾಡಿದ ಭಾಷಣವು “ಒಳ್ಳೆಯ ಅಭಿರುಚಿಯಲ್ಲಿರಲಿಲ್ಲ” ಎಂದು ಹೇಳುವ ಮೂಲಕ ನೋಟಿಸ್ ಕುರಿತು ನಿರ್ಧರಿಸಲು ದೆಹಲಿ ಹೈಕೋರ್ಟ್ 2023ರ ಡಿಸೆಂಬರ್ 21ರಂದು ಆಯೋಗವನ್ನು ಕೇಳಿತ್ತು. ಈಗ ಈ ನೋಟಿಸ್ ಅನ್ನು ವಿಲೇವಾರಿ ಮಾಡುವ ವೇಳೆ, “ಭವಿಷ್ಯದಲ್ಲಿ ಸಾರ್ವಜನಿಕ ಭಾಷಣಗಳ ವೇಳೆ ಬಳಸುವ ಪದಗಳ ಬಗ್ಗೆ ಹೆಚ್ಚು ಜಾಗರೂಕರಾಗಿರಿ” ಎಂದು ತಿಳಿಸಿದೆ.
