ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಆದರೂ ಸಹ ಬೆಳಗಾವಿ ಲೋಕಸಭೆಯ ಬಿಜೆಪಿ ಟಿಕೆಟ್ ಯಾರಿಗೆ ಎಂಬ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಬಿಜೆಪಿ ವರಿಷ್ಠರು ಜಗದೀಶ ಶೆಟ್ಟರ್‌ಗೆ ಟಿಕೆಟ್ ಎಂದು ಹೇಳಿದ್ದರೂ ಸಹ ಅದು ಇನ್ನೂ ಸ್ಪಷ್ಟವಾಗಿಲ್ಲ. ಹೀಗಿರುವಾಗ ಜಗದೀಶ ಶೆಟ್ಟರ ಬೆಳಗಾವಿ ಲೋಕಸಭೆಗೆ ಬೇಡವೇ ಬೇಡ ಎಂಬ ಕೂಗು ಕೇಳಿ ಬರುತ್ತಿದೆ.
ಜಗದೀಶ್ ಶೆಟ್ಟರ ಮುಖ್ಯಮಂತ್ರಿಯಾಗಿದ್ದಾಗ ಬೆಳಗಾವಿ ಜಿಲ್ಲೆಯನ್ನು ಕಡೆಗಣಿಸಿದ್ದಾರೆ. ಬೆಳಗಾವಿಗೆ ಬರಬೇಕಿದ್ದ ಹೈಕೋರ್ಟ್ ಧಾರವಾಡಕ್ಕೆ ಮಾಡಿದ್ದಾರೆ. ರೈಲ್ವೆ ಮತ್ತು ವಿಮಾನ ಸೌಲಭ್ಯಗಳನ್ನು ಬೆಳಗಾವಿ ಬಿಟ್ಟು ಹುಬ್ಬಳ್ಳಿಗೆ ಮಾಡಿದ್ದಾರೆ. ಈ ಮೂಲಕ ಜಗದೀಶ ಶೆಟ್ಟರ್ ಬೆಳಗಾವಿ ಜಿಲ್ಲೆಗೆ ಅನ್ಯಾಯ ಮಾಡಿದ್ದಾರೆ. ಈ ಕಾರಣಕ್ಕೆ ಜಗದೀಶ ಶೆಟ್ಟರ್ ಅವರಿಗೆ ಬೆಳಗಾವಿ ಲೋಕಸಭೆಗೆ ಬೇಡವೆ ಬೇಡ ಎಂಬುದು ಬೆಳಗಾವಿ ಜನತೆಯ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿ ನಮ್ಮನ್ನು ಸೋಲಿಸಿದ್ದಾರೆ. ಅವರಿಗೆ ಬಿಜೆಪಿ ಟಿಕೆಟ್ ಕೊಡುವುದು ಯಾವ ನ್ಯಾಯ. ಮಹಾಂತೇಶ ಕವಟಗಿಮಠ, ವಿಶ್ವನಾಥ ಪಾಟೀಲ, ರಮೇಶ ಕತ್ತಿ, ಸಂಜಯ ಪಾಟೀಲ ಟಿಕೆಟ್‌ಗಾಗಿ ಫೈಟ್ ಮಾಡುತ್ತಿದ್ದು, ಇವರಲ್ಲಿ ಯಾರಿಗಾದರೂ ಸ್ಥಳೀಯರಿಗೆ ಟಿಕೆಟ್ ನೀಡಬೇಕು ಎಂದು ಬೆಳಗಾವಿ ಜಿಲ್ಲೆಯ ಬಿಜೆಪಿ ಮುಖಂಡರು ಒತ್ತಾಯ ಮಾಡುತ್ತಿದ್ದಾರೆ.
ಪಂಚಮಸಾಲಿ ಸಮುದಾಯದವರಾದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೆ ಕಾಂಗ್ರೆಸ್‌ನಿಂದ ಟಿಕೆಟ್ ನೀಡುತ್ತಿದ್ದು, ಬಿಜೆಪಿಯು ಸಹ ಪಂಚಮಸಾಲಿ ಸಮುದಾಯದವರಿಗೆ ಟಿಕೆಟ್ ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ. ಮುರುಗೇಶಶ್ ನಿರಾಣಿಯವರು ಬೆಳಗಾವಿ ಲೋಕಸಭಾ ಟಿಕೆಟ್‌ಗೆ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗುತ್ತಿದೆ.
ಜಗದೀಶ್ ಶೆಟ್ಟರ್ ಅವರು ನಾನು ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆ. ಕ್ಷೇತ್ರದ ಜನತೆಯು ನನ್ನ ಜೊತೆಗೆ ಇದ್ದಾರೆ ಎಂದು ಹೇಳಿಕೆ ನೀಡಿದ್ದು, ಒಂದು ವೇಳೆ ಜಗದೀಶ ಶೆಟ್ಟರ ಅವರಿಗೆ ಬೆಳಗಾವಿ ಲೋಕಸಭಾ ಟಿಕೆಟ್ ನೀಡಿದರೆ ಸ್ಥಳೀಯ ಬಿಜೆಪಿ ಮುಖಂಡರು ಜಗದೀಶ ಶೆಟ್ಟರ ಪರವಾಗಿ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
