ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಏಪ್ರಿಲ್ 26 ಮತ್ತು ಮೇ 7ರಂದು ರಾಜ್ಯದಲ್ಲಿ ಮತದಾನ ನಡೆಯಲಿದೆ. ಆದರೆ, 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷಚೇತನರಿಗೆ ಇಂದಿನಿಂದ(ಏ.13) ಅಂಚೆ ಮತದಾನ ಆರಂಭಗೊಂಡಿದೆ.
ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯಲ್ಲಿ ಬರುವ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ ಹಾಗೂ ಬೆಂಗಳೂರು ದಕ್ಷಿಣ ಸೇರಿದಂತೆ ಮೂರು ಲೋಕಸಭಾ ಕ್ಷೇತ್ರಗಳಲ್ಲಿ ಮತದಾರರ ಪಟ್ಟಿಯಲ್ಲಿರುವ 85 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ವಿಶೇಷ ಚೇತನರು (ಶೇ.40ಕ್ಕಿಂತ ಹೆಚ್ಚು ಅಂಗವಿಲತೆ ಉಳ್ಳವರು) ಹಾಗೂ ಮತದಾರರ ಪಟ್ಟಿಯಲ್ಲಿ ಗುರುತಿಸಿರುವವರಿಗೆ ಅಂಚೆ ಮತದಾನ ಪ್ರಕ್ರಿಯೆ ನಡೆಯುತ್ತಿದೆ.
ಏಪ್ರಿಲ್ 13ರಿಂದ 18ರವರೆಗೆ ಮನೆಯಿಂದಲೇ ಗೌಪ್ಯ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ಮೂರು ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 95,128 ಮತದಾರರಿದ್ದಾರೆ. ಇವರಲ್ಲಿ ಕೇವಲ 6,206 ಮಂದಿ ಅಂಚೆ ಮತದಾನಕ್ಕೆ ನೋಂದಣಿ ಮಾಡಿಕೊಂಡಿದ್ದಾರೆ.
ಈ ನಡುವೆ ಅಂಚೆ ಮತದಾನದ ಪ್ರಕ್ರಿಯೆಯ ವೇಳೆ ಚುನಾವಣಾಧಿಕಾರಿಗಳ ಜೊತೆಗೆ ಬಿಜೆಪಿ ಏಜೆಂಟ್ ಉಪಸ್ಥಿತರಿದ್ದರು ಎಂಬ ಆರೋಪ ಕೇಳಿಬಂದಿದೆ.
ಅಂಚೆ ಮತದಾನ ಪ್ರಕ್ರಿಯೆ ವೇಳೆ ಚುನಾವಣಾಧಿಕಾರಿಗಳ ಜೊತೆಗೆ ಬಿಜೆಪಿ ಏಜೆಂಟ್: ಆಯೋಗಕ್ಕೆ ಕಾಂಗ್ರೆಸ್ ಅಭ್ಯರ್ಥಿ ದೂರು
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಕೈಗೆ ಸಿಕ್ಕಿಬಿದ್ದ ಬಿಜೆಪಿ ಏಜೆಂಟ್!
ಚುನಾವಣಾಧಿಕಾರಿಗಳ ಜೊತೆಗಿದ್ದ ಬಿಜೆಪಿ ಏಜೆಂಟ್‌ನನ್ನು ಕಿರಣ್ ಎಂದು ಗುರುತಿಸಲಾಗಿದೆ. pic.twitter.com/ELchqpsq6P
— eedina.com (@eedinanews) April 13, 2024
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾಧಿಕಾರಿಗಳ ತಂಡವು ಮನೆಮನೆಗೆ ತೆರಳಿ ಮತದಾನ ಪ್ರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿ ಅವರ ಜೊತೆಗೆ ಬಿಜೆಪಿ ಏಜೆಂಟ್ ಇರುವುದು ಕಂಡುಬಂದಿದೆ. ಆ ಮೂಲಕ ಚುನಾವಣಾ ನೀತಿಸಂಹಿತೆ ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.
Congress #Bangalore central loksabha candidate Mansoor Ali Khan has complained to ECI that a #BJP agent had gone with ECI officials while doing voting of elderly citizens. The party has sought explanation and action from ECI against the officials. #Karnataka pic.twitter.com/2akrUL5VV9
— Imran Khan (@KeypadGuerilla) April 13, 2024
ಈ ಬಗ್ಗೆ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರ ಬೆಂಬಲಿಗರು, ಬಿಜೆಪಿ ಏಜೆಂಟ್ ಓರ್ವ ಚುನಾವಣಾಧಿಕಾರಿಗಳ ತಂಡದೊಂದಿಗೆ ಇರುವುದನ್ನು ಪತ್ತೆ ಹಚ್ಚಿದ್ದಾರೆ. ಅಲ್ಲದೇ, ವಿಡಿಯೋ ಕೂಡ ಮಾಡಿಕೊಂಡಿದ್ದು, ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದಾರೆ. ಸುಮಾರು ಒಂದೂವರೆ ನಿಮಿಷದ ವಿಡಿಯೋ ಈಗ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿದೆ. ಚುನಾವಣಾಧಿಕಾರಿಗಳ ಜೊತೆಗಿದ್ದ ಬಿಜೆಪಿ ಏಜೆಂಟ್‌ನನ್ನು ಕಿರಣ್ ಎಂದು ಗುರುತಿಸಲಾಗಿದೆ.

ಕಾಂಗ್ರೆಸ್ ಅಭ್ಯರ್ಥಿ ಮನ್ಸೂರ್ ಅಲಿ ಖಾನ್ ಅವರ ಚುನಾವಣಾ ಏಜೆಂಟ್ ಪ್ರವೀಣ್ ಪೀಟರ್ ಈ ಬಗ್ಗೆ ಮುಖ್ಯ ಚುನಾವಣಾಧಿಕಾರಿಗೆ ದೂರು ಸಲ್ಲಿಸಿದ್ದು, ನೀತಿ ಸಂಹಿತೆ ಉಲ್ಲಂಘಿಸಿರುವ ಸಂಬಂಧಪಟ್ಟ ಅಧಿಕಾರಿಯನ್ನು ಈ ಕೂಡಲೇ ಅಮಾನತು ಮಾಡಿ, ಬಿಜೆಪಿ ಏಜೆಂಟ್ ಉಪಸ್ಥಿತರಿದ್ದ ವೇಳೆ ನಡೆದ ಮತದಾನ ಪ್ರಕ್ರಿಯೆಯನ್ನು ಅಸಿಂಧುಗೊಳಿಸಲು ಆಗ್ರಹಿಸಿದ್ದಾರೆ.
ತಮ್ಮ ದೂರಿನಲ್ಲಿ, “ಹಿರಿಯ ನಾಗರಿಕರು, ವಿಕಲ ಚೇತನರು ಮನೆಯಿಂದಲೇ ಮತದಾನ ಮಾಡುವ ಕಾರ್ಯ ಇಂದಿನಿಂದ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ರಾಜಾಜಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು ಬಿಜೆಪಿ ಪಕ್ಷದ ಏಜೆಂಟ್ ಚುನಾವಣಾಧಿಕಾರಿಗಳ ಜತೆಗೂಡಿ ಮತದಾನ ಮಾಡುವ ನಾಲೈದು ಮನೆಗಳಿಗೆ ತೆರಳಿದ್ದು, ನಿಮ್ಮ ಚುನಾವಣಾಧಿಕಾರಿಗಳು ಮತ್ತು ಮೈಕ್ರೋ ಅಬ್ ಸರ್ವರ್ ಮೂಕಪ್ರೇಕ್ಷಕರಾಗಿ ವರ್ತಿಸಿರುವುದು ಕಂಡು ಬಂದಿದೆ. ಆದ್ದರಿಂದ ಈ ಕೂಡಲೇ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಹಾಗೂ ಆ ಮತವನ್ನು ಅಸಿಂಧುಗೊಳಿಸಬೇಕು. ಈ ಸಂಬಂಧ ತಕ್ಷಣವೇ ಕ್ರಮ ಕೈಗೊಂಡು, ನೀತಿ ಸಂಹಿತೆ ಉಲ್ಲಂಘಿಸಿರುವ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದೇ ರೀತಿಯ ಬೆಳವಣಿಗೆಗಳು ಬೇರೆ ಯಾವುದಾದರೂ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಯೂ ನಡೆಯಬಹುದು. ಹಾಗಾಗಿ, ಚುನಾವಣಾ ಅಧಿಕಾರಿಗಳ ತಂಡದಲ್ಲಿ ಇರುವವರಲ್ಲಿ ಅಧಿಕಾರಿಗಳಲ್ಲದವರು ಉಪಸ್ಥಿತರಿದ್ದರೆ ದೂರು ಸಲ್ಲಿಸಬೇಕು ಹಾಗೂ ಚುನಾವಣಾ ಪ್ರಕ್ರಿಯೆಯು ಪಾರದರ್ಶಕ, ಗೌಪ್ಯ ಮತದಾನ ನಡೆಯುವಂತೆ ನೋಡಿಕೊಳ್ಳಲು ಕಾಂಗ್ರೆಸ್ ಪಕ್ಷವು, ಕಾರ್ಯಕರ್ತರಿಗೆ ಸಂದೇಶ ಕಳುಹಿಸಿರುವುದಾಗಿ ತಿಳಿದುಬಂದಿದೆ.
