- ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯ್ಬೇಕಿತ್ತು, ಒಂದೂವರೆ ಕೋಟಿ ಕಾರೇ ಆಗ್ಬೇಕಿತ್ತಾ?
- ಅಪಘಾತಕ್ಕೆ ಒಳಗಾದಾಗವರ ಬಗ್ಗೆ ಕನಿಷ್ಠ ಸೌಜನ್ಯವೂ ತೋರದ ಶಾಸಕ ಹೆಚ್ ಡಿ ರೇವಣ್ಣ ಪತ್ನಿ
‘ನನ್ನ ಒಂದೂವರೆ ಕೋಟಿ ಕಾರನ್ನು ಡ್ಯಾಮೇಜ್ ಮಾಡೋಕೆ ನೀನ್ಯಾರು?’ ಬೇ..ರ್ಸಿ ಸೂ..ಮ..ಬೈಕ್ ಸುಟ್ಟಾಕ್ರಿ….ಸಾಯೋ ಹಾಗಿದ್ರೆ ಬಸ್ಸಿಗೆ ಸಿಕ್ಕಾಕೊಂಡು ಸಾಯ್ಬೇಕಿತ್ತು, ಒಂದೂವರೆ ಕೋಟಿ ಕಾರೇ ಆಗ್ಬೇಕಿತ್ತಾ?…’
ಹೀಗಂತ ಹೇಳಿರುವುದು ಹೊಳೆನರಸೀಪುರ ಶಾಸಕ ಹೆಚ್ ಡಿ ರೇವಣ್ಣ ಅವರ ಪತ್ನಿ ಹಾಗೂ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಸೊಸೆ ಭವಾಣಿ ರೇವಣ್ಣ.
ಮೈಸೂರು ಜಿಲ್ಲೆ ಸಾಲಿಗ್ರಾಮ ಸಮೀಪ ಇಂದು(ಡಿ.3) ಮಧ್ಯಾಹ್ನ ಭವಾನಿ ರೇವಣ್ಣ ಅವರು ಸಂಚರಿಸುತ್ತಿದ್ದ ಕಾರಿಗೆ ‘ರಾಂಗ್‌ಸೈಡ್’ನಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಕೋಟಿ ಮೌಲ್ಯದ ಕಾರಿನ ಮುಂಭಾಗ ಜಖಂಗೊಂಡಿದ್ದು, ಭವಾನಿ ಅವರು ಕಾರಿನಿಂದ ಕೆಳಗಿಳಿದು ಬಂದು ಬೈಕ್ ಸವಾರನನ್ನು ಹಿಗ್ಗಾಮುಗ್ಗಾ ಬೈದದಲ್ಲದೇ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ಭವಾನಿ ರೇವಣ್ಣ ಅವರ ಹೇಳಿಕೆಯ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ವೈರಲಾಗಿದ್ದು, ನಡೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಘಟನಾ ಸ್ಥಳದಲ್ಲಿದ್ದವರೊಬ್ಬರು ಮೊಬೈಲ್‌ನಲ್ಲಿ ಎಲ್ಲ ಬೆಳವಣಿಗೆಯನ್ನು ರೆಕಾರ್ಡ್ ಮಾಡಿಕೊಂಡಿದ್ದು, ಅದು ಈಗ ವೈರಲಾಗಿದೆ.
ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಇದರಿಂದ ಕಾರಿನಿಂದ ಇಳಿದು ಕೆಂಡಾಮಂಡಲವಾದ ಭವಾನಿ ರೇವಣ್ಣ, ‘ಸುಟ್ರು ಹಾಕ್ರೋ ಈ ಗಾಡಿನ’ ಎಂದು ಅವಾಚ್ಯ ಶಬ್ದಗಳಿಂದ ರೇಗಾಡಿದ್ದಾರೆ.
‘ಅಂತಹ ಅರ್ಜೆಂಟ್ ಏನಿತ್ತು? ಗಾಡಿಗೆ ಎಷ್ಟು ಡ್ಯಾಮೇಜ್ ಆಗಿದೆ. ರೆಡಿ ಮಾಡಿಸುವುದು ಹೇಗೆ?’ ಎಂದು ಕೇಳಿದ್ದಾರೆ. ಅಲ್ಲದೇ, ‘ಬಿಟ್‌ಬಿಡಿ ಅಕ್ಕ’ ಎಂದು ಮಧ್ಯಪ್ರವೇಶಿಸಿದ ಸ್ಥಳೀಯರನ್ನು, ‘ಕೊಡ್ತಿಯಾ ₹ 50 ಲಕ್ಷ ರಿಪೇರಿ ಮಾಡಿಸೋಕೆ? ಸ್ಥಳದಲ್ಲಿರುವವರು ಹಣ ಕೊಡಂಗಿದ್ರೆ ನ್ಯಾಯ ಮಾತಾಡಕ್ಕೆ ಬನ್ನಿ’ ಎಂದು ಸೇರಿದ್ದವರನ್ನು ಕೂಡ ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ, ಸವಾರನ ಮೊಬೈಲ್ ಫೋನ್ ಕಸಿದುಕೊಂಡು, ಗಾಡಿ ಸೀಝ್ ಮಾಡು. ಸಾಲಿಗ್ರಾಮ ಎಸ್‌ಐ ಬರೋಕೆ ಹೇಳಿ’ ಎಂದು ಸಹಾಯಕರಿಗೆ ತಿಳಿಸಿರುವುದು ವಿಡಿಯೋದಲ್ಲಿದೆ.
‘ಒಂದೂವರೆ ಕೋಟಿ ಗಾಡಿ ಇದು. ಡ್ಯಾಮೇಜ್ ಮಾಡಿದ್ದೀಯಲ್ಲ, ದೇಶ ಮುಳುಗಿ ಹೋಗಿತ್ತಾ, ರೈಟಲ್ಲಿ ಬಂದು ಗುದ್ದಿದ್ದೀಯಲ್ಲಾ, ಸಾಯಂಗಿದ್ರೆ ಬಸ್‌ಗೆ ಸಿಕ್ಕಾಕೊಂಡು ಸಾಯಬೇಕಿತ್ತು. ನನ್ನ ಕಾರ್ ಡ್ಯಾಮೇಜ್ ಮಾಡೋಕೆ ನೀನ್ಯಾವನು?’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
‘ಅವ್ನು ಸತ್ತೋಯ್ತಾನೆ ಅಂತ, ಅವ್ ಬಗ್ಗೆ ಯೋಚೆ ಮಾಡ್ತಾ ಇದ್ದೀಯಲ್ಲಾ, ಒಂದೂವರೆ ಕೋಟಿ ರೂಪಾಯಿ ಗಾಡಿ ಡ್ಯಾಮೇಜ್ ಯಾರ್ ಕಳ್ಕೊಡ್ತಾರೆ?’ ಎಂದೂ ಸ್ಥಳೀಯರನ್ನು ಕೋಪದಿಂದ ಕೇಳಿದ್ದಾರೆ.
ಅಲ್ಲದೇ, ಬೈಕ್ ಸವಾರ ಹಾಗೂ ಆತನ ಜೊತೆಗಿದ್ದವರನ್ನು ಕಾರ್ ಹಾಗೂ ದ್ವಿಚಕ್ರವಾಹನದ ಬಳಿ ನಿಲ್ಲಿಸಿ ತಮ್ಮ ಮೊಬೈಲ್ ಫೋನ್‌ನಲ್ಲಿ ಫೋಟೊ ತೆಗೆದುಕೊಂಡಿರುವುದು ಕೂಡ ವಿಡಿಯೋದಲ್ಲಿ ದಾಖಲಾಗಿದೆ.
ಸಮಾಧಾನ ಮಾಡ್ಕೋಳ್ಳಿ ಅಕ್ಕೋ, ಶ್ರೀಮತಿ ಭವಾನಿ ರೇವಣ್ಣ, 😃 ಮಾನವೀಯತೆಗಿಂತ ದುಡ್ಡು ಮುಖ್ಯ ಅಲ್ವಾ ಅಕ್ಕ #Karnataka pic.twitter.com/ExKTKg50Bw
— Roopa (ಕನ್ನಡತಿ ) (@Roopa_siddu07) December 3, 2023
ಘಟನೆಯ ಮಾಹಿತಿಯನ್ನರಿತ ಸಾಲಿಗ್ರಾಮ ಪೊಲೀಸ್ ಠಾಣೆಯ ಸಿಪಿಐ ಜಿ.ಕೃಷ್ಣರಾಜು ಸ್ಥಳಕ್ಕೆ ಭೇಟಿ ನೀಡಿದ್ದರು. ತಂದ್ರೆಕೊಪ್ಪಲು ಗ್ರಾಮದ ಶಿವಣ್ಣ ಅವರ ವಿರುದ್ಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.
ನೆಟ್ಟಿಗರಿಂದ ವ್ಯಾಪಕ ಆಕ್ರೋಶ
ಘಟನೆಯ ಬಳಿಕ ಭವಾನಿ ರೇವಣ್ಣ ಆಡಿರುವ ಮಾತಿಗೆ ನೆಟ್ಟಿಗರು ವ್ಯಾಪಕ ಆಕ್ರೋಶ ಹೊರಹಾಕಿದ್ದಾರೆ.
‘ಬೈಕ್ ಸವಾರ ಬಿದ್ದಿದ್ದರೂ ಮಾನವೀಯತೆ ಮರೆತ ದೊಡ್ಡ ಗೌಡರ ಸೊಸೆಯನ್ನು ನೋಡುವಾಗ ನಿಜಕ್ಕೂ ಬೇಸರವಾಗುತ್ತೆ. ಬಡವ ಸತ್ರೂ ಇವರಿಗೆ ಚಿಂತೆ ಇಲ್ಲ. ಆದರೆ ಇವರ ಒಂದೂವರೆ ಕೋಟಿ ಕಾರಿಗೆ ಏನು ಆಗಬಾರದು. ಇದೇ ನೋಡಿ ದೊಡ್ಡವರ ದೊಡ್ಡತನ’ ಎಂದು ಶ್ರೀನಿವಾಸ್ ಗೌಡ ಮಾಗಡಿ ಎಂಬವರು ಆಕ್ರೋಶ ಹೊರಹಾಕಿದ್ದಾರೆ.
‘ಭವಾನಿ ರೇವಣ್ಣ ಅವರ ಕಾರು ಅಪಘಾತಕ್ಕೆ ಒಳಗಾದಾಗ ಕನಿಷ್ಠ ಸೌಜನ್ಯವೂ ಇಲ್ಲದೆ ಅವರ ಬಾಯಿಂದ ಬರುವ ನುಡಿಮುತ್ತುಗಳು ಅಧಿಕಾರ, ಆಸ್ತಿಯಿಂದ, ಅಹಂಯಿಂದ ಅಧಿಕಾರ ಚಲಾಯಿಸಿ ಮಾತಾಡುತ್ತಾರೆ. ಸಾರ್ವಜನಿಕ ಜೀವನದಲ್ಲಿ ಇದ್ದು ಸಾರ್ವಜನಿಕ ಹಿತ ಕಾಯಬೇಕಾದ ಇವರು ಅಪಘಾತದಲ್ಲಿ ಮನುಷ್ಯನ ಜೀವಕ್ಕೆ ಪೆಟ್ಟಾಯಿತಾ ಎಂದು ಕೇಳುವ ಸೌಜನ್ಯವೂ ಇಲ್ಲ. ಅವರಿಗೆ ಅವರ ಒಂದೂವರೆ ಕೋಟಿ ಕಾರಿನದ್ದೇ ಚಿಂತೆ’ ಎಂದು ಕೆಆರ್‌ಎಸ್ ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ರವಿಕುಮಾರ್ ವಿಡಿಯೋ ಹಂಚಿಕೊಂಡು ಕಿಡಿಕಾರಿದ್ದಾರೆ.