ಡಾ.ಬಿ.ಆರ್.ಅಂಬೇಡ್ಕರ್ ಅವರು ಬದುಕ್ಕಿದ್ದಾಗ ಅವರನ್ನು ಅಪಮಾನಿಸಿ, ಚುನಾವಣೆಯಲ್ಲಿ ಸೋಲಿಸಿದ ಕಾಂಗ್ರೆಸ್ ಪಕ್ಷ ಇಂದು ಅಂಬೇಡ್ಕರವಾದಿಗಳಂತೆ ಮಾತನಾಡುತ್ತಿದೆ. ಆದರೆ ಬಿಜೆಪಿ ಪಕ್ಷ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ದಲಿತರ ಉದ್ದಾರವಾಗಲು ಸಾಧ್ಯ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಬೀದರ್‌ನಲ್ಲಿ ಶುಕ್ರವಾರ ಬಿಜೆಪಿ ವತಿಯಿಂದ ಕಾಂಗ್ರೆಸ್ ಸರ್ಕಾರದ ವಿರುದ್ಧ ಹಮ್ಮಿಕೊಂಡಿದ್ದ ಜನಾಕ್ರೋಶ ಮಾತನಾಡಿದ ಅವರು, ʼಈ ಕಾಂಗ್ರೆಸ್ ಎಷ್ಟು ಪಕ್ಷ ಡೆಂಜರ್ ಇದೆಯೋ, ಕಾಂಗ್ರೆಸಿನಲ್ಲಿರುವ ದಲಿತ ಮಂತ್ರಿ, ಶಾಸಕರು ಇನ್ನೂ ಡೆಂಜರ್ ಇದ್ದಾರೆ, ಅವರಿಂದ ದಲಿತರು ಯಾವತ್ತೂ ಉದ್ದಾರ ಆಗಲ್ಲ ಎಂಬುದು ಅರ್ಥೈಸಿಕೊಳ್ಳಬೇಕುʼ ಎಂದರು.
ʼಬೀದರ್ ಜಿಲ್ಲೆ ಬುದ್ಧ, ಬಸವ, ಅಂಬೇಡ್ಕರ್ ಅವರನ್ನು ಗೌರವಿಸುವ ನಾಡು, ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ದಲಿತರು ಇದ್ದಾರೆ. ಈ ದೇಶದಲ್ಲಿ ದಲಿತರು ಉದ್ದಾರ ಆಗಲಿಲ್ಲ, ಬಹಳ ಬಡವರಾಗಿದ್ದಾರೆ, ಅಸ್ಪ್ರಶ್ಯತೆ ಹೋಗಲಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕಸಭೆಯಲ್ಲಿ ಭಾಷಣ ಮಾಡುತ್ತಾರೆ. ಆದರೆ ಈ ಹಿಂದೆ 60-70 ವರ್ಷಗಳ ಕಾಲ ದೇಶ ಆಳ್ವಿಕೆ ನಡೆಸಿದ ಕಾಂಗ್ರೆಸ್ ಹಾಗೂ 55 ವರ್ಷಗಳಿಂದ ಅಧಿಕಾರದಲ್ಲಿರುವ ಮಲ್ಲಿಕಾರ್ಜುನ ಖರ್ಗೆ ಅವರು ದಲಿತ ಸಮುದಾಯಕ್ಕೆ ಏನಾದರೂ ಕೊಡುಗೆ ನೀಡಿದ್ದಾರೆಯೇ, ಅವರಿಂದ ಅಸ್ಪ್ರಶ್ಯತೆ, ದಲಿತರ ಬಡತನ ಹೋಗಲಾಡಿಸಲು ಆಗಲಿಲ್ಲʼ ಎಂದರು.
ʼಮಲ್ಲಿಕಾರ್ಜುನ ಖರ್ಗೆ ಅವರೇ ದಲಿತರು ಉದ್ದಾರ ಆಗಬೇಕಾದರೆ ನೀವು ಮತ್ತು ನಿಮ್ಮ ಕುಟುಂಬ ಅನುಭವಿಸುತ್ತಿರುವ ಅಧಿಕಾರಕ್ಕೆ ಮೊದಲು ರಾಜೀನಾಮೆ ಕೊಡಿ, ದಲಿತರು ಉದ್ಧಾರ ಆಗಲಿಲ್ಲ ಅಂತ ಮೊಸಳೆ ಕಣ್ಣೀರು ಹಾಕ್ತೀರಾ. ದಲಿತರ ಉದ್ದಾರ ಆಗದಿರುವುದಕ್ಕೆ ದಲಿತರೇ ಕಾರಣʼ ಎಂದರು.
ʼಮೀಸಲಾತಿ ಪಡೆದು ಅಧಿಕಾರಕ್ಕೆ ಬಂದ ಬಳಿಕ ತಮ್ಮ ಸುತ್ತಲಿನ ಬಡ ಜನರಿಗೆ ಸೌಲಭ್ಯಗಳನ್ನು ಹಂಚುವಂತೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳಿದ್ದರು. ಆದರೆ ಮಲ್ಲಿಕಾರ್ಜುನ ಖರ್ಗೆ ಅವರು ಎಲ್ಲ ಅಧಿಕಾರ ನನ್ನ ಕುಟುಂಬಕ್ಕೆ ಕೊಡಿ ಎಂದು ಕೇಳುತ್ತಾರೆ, ಹೀಗಾದರೆ ದಲಿತರು ಉದ್ದಾರ ಆಗೋದು ಯಾವಾಗʼ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸಾಲದ ಕಂತು ಕಟ್ಟಿಲ್ಲವೆಂದು ರೈತನ ಮೇಲೆ ಹಲ್ಲೆ; ಬ್ಯಾಂಕ್ ಸಿಬ್ಬಂದಿ ವಿರುದ್ಧ ದೂರು ದಾಖಲು
ʼಈ ದೇಶದಲ್ಲಿ ಪ್ರಧಾನಿ ಮೋದಿಯವರು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಗೌರವಿಸಿದ್ದಾರೆ. ಡಾ.ಅಂಬೇಡ್ಕರ್ ಅವರ ಪಂಚಕ್ಷೇತ್ರಗಳನ್ನು ಅಂತರಾಷ್ಟ್ರೀಯ ಸ್ಮಾರಕಗಳನ್ನಾಗಿ ಮಾಡಲಾಗಿದೆ. ರಾಜ್ಯ 10 ಸ್ಥಳಗಳಲ್ಲಿ ಅಂಬೇಡ್ಕರ್ ಅವರ ಸ್ಮಾರಕಗಳು ಆಗುತ್ತಿವೆ. 14 ಸಾವಿರ ಪೌರಕಾರ್ಮಿಕರನ್ನು ಕಾಯಂಗೊಳಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಮೀಸಲಾತಿ ಹೆಚ್ಚಳ ಮಾಡಿದ್ದು ಬಿಜೆಪಿ ಕೊಡುಗೆ. ದಲಿತರನ್ನು ಗುರುತಿಸುವ ಕೆಲಸ ಬಿಜೆಪಿ ಮಾಡುತ್ತಿದೆʼ ಎಂದು ಹೇಳಿದರು.