ಜಗನ್ ಮೋಹನ್ ರೆಡ್ಡಿ ಸರ್ಕಾರವು ಸ್ಥಗಿತಗೊಳಿಸಿದ್ದ ಅಮರಾವತಿ ರಾಜಧಾನಿ ಯೋಜನೆಯನ್ನು ಪುನರುಜ್ಜೀವನಗೊಳಿಸುವುದು, ರಾಜ್ಯ ಸರ್ಕಾರದ ಆರ್ಥಿಕತೆಯನ್ನು ಪುನಃಸ್ಥಾಪಿಸುವುದು ಹಾಗೂ ತೆಲುಗು ದೇಶಂ ಪಕ್ಷ (ಟಿಡಿಪಿ) ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವುದು ಚಂದ್ರಬಾಬು ನಾಯ್ಡು ಅವರ ಮುಂದಿರುವ ಪ್ರಮುಖ ಸವಾಲುಗಳು…
ಕೇಂದ್ರ ಬಜೆಟ್‌ಗೂ ಮುನ್ನ ಆಂಧ್ರಪ್ರದೇಶ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ಸಾಲದ ಸುಳಿಯಲ್ಲಿರುವ ರಾಜ್ಯಕ್ಕೆ ಆರ್ಥಿಕ ನೆರವನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ. ಆದಾಗ್ಯೂ, ಅವರು ತಮ್ಮ ದೀರ್ಘಕಾಲದ ಬೇಡಿಕೆಯಾಗಿರುವ ಆಂಧ್ರಕ್ಕೆ ವಿಶೇಷ ಸ್ಥಾನಮಾನದ ಬಗ್ಗೆ ಮಾತನಾಡಲಿಲ್ಲ. ಒತ್ತಾಯಿಸಲಿಲ್ಲ.
ಸದ್ಯ, ಆಂಧ್ರಪ್ರದೇಶ ವಿಭಜನೆಯಾದ ಬಳಿಕ ಎರಡನೇ ಬಾರಿಗೆ ಚಂದ್ರಬಾಬುನಾಯ್ಡು ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾರೆ. ವಿಭಜನೆಗೊಂಡ ಆಂಧ್ರಕ್ಕೆ ಮೊದಲ ಮುಖ್ಯಮಂತ್ರಿಯಾಗಿದ್ದ ನಾಯ್ಡು ಅಮರಾವತಿಯನ್ನು ರಾಜ್ಯದ ರಾಜಧಾನಿಯನ್ನಾಗಿ ಮಾಡಲು ಮುಂದಾಗಿದ್ದರು. ಅದಕ್ಕಾಗಿ, ಹಲವಾರು ಕಾಮಗಾರಿಗಳನ್ನು ಆರಂಭಿಸಿದ್ದರು. ಆದರೆ, ನಂತರ ಬಂದ ಜಗನ್ ಮೋಹನ್ ರೆಡ್ಡಿ ಸರ್ಕಾರವು ಮೂರು ರಾಜಧಾನಿಗಳ ಯೋಜನೆಯೊಂದಿಗೆ ಅಮರಾವತಿ ರಾಜಧಾನಿ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಇದೀಗ, ಅಮರಾವತಿಯನ್ನು ರಾಜಧಾನಿ ಮಾಡುವ ಯೋಜನೆಯನ್ನು ಪುನರುಜ್ಜೀವನಗೊಳಿಸುವುದು ನಾಯ್ಡು ಅವರ ಮುಂದಿರುವ ಪ್ರಮುಖ ಸವಾಲು. ಅದರ ಜೊತೆಗೆ, ರಾಜ್ಯ ಸರ್ಕಾರದ ಆರ್ಥಿಕತೆಯನ್ನು ಪುನಃಸ್ಥಾಪಿಸುವುದು ಮತ್ತು ಚುನಾವಣಾ ಸಮಯದಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ನೀಡಿದ ಚುನಾವಣಾ ಭರವಸೆಗಳನ್ನು ಈಡೇರಿಸುವ ಸವಾಲು ಕೂಡ ಅವರ ಮುಂದಿದೆ.
ಅಮರಾವತಿ ರಾಜಧಾನಿ ನಗರ ಯೋಜನೆಯ ಆರಂಭಿಕ ಅಂದಾಜು ವೆಚ್ಚ (ತಂತ್ರಜ್ಞಾನ ಮತ್ತು ಸಿಂಗಾಪುರ ಸರ್ಕಾರದಿಂದ ಹಣದ ನೆರವು) 50,000 ಕೋಟಿ ರೂ. ಆಗಿತ್ತು. ಆದರೆ, ಈಗ ಅದು ದುಪ್ಪಟ್ಟಾಗಬಹುದು. 2019ರಲ್ಲಿ ನಾಯ್ಡು ಸರ್ಕಾರ ಯೋಜಿಸಿದ್ದ ಸಿಆರ್‌ಡಿಎ (ಆಂಧ್ರ ಪ್ರದೇಶ ರಾಜಧಾನಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ) ಮೊದಲ ಹಂತದ ಕಾಮಗಾರಿಯ ಒಟ್ಟು ವೆಚ್ಚ 51,687 ಕೋಟಿ ರೂಪಾಯಿಗಳೆಂದು ಅಂದಾಜಿಸಿತ್ತು. ಅದರಲ್ಲಿ 39,875 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂದು ಬಹಿರಂಗಪಡಿಸಿದೆ. ಈಗ, ಮೊದಲ ಹಂತದಲ್ಲಿ ಉಳಿದ ಕಾಮಗಾರಿಯನ್ನು ಪೂರ್ಣಗೊಳಿಸಲು 15,000 ರಿಂದ 18,000 ಕೋಟಿ ರೂ. ಬೇಕಾಗಬಹುದು. ಅಲ್ಲದೆ, ಎರಡನೇ ಹಂತವು ಪ್ರಾರಂಭವಾಗಲು ಇನ್ನೂ ಹೆಚ್ಚು ಸಮಯವನ್ನು ತೆಗೆದುಕೊಳ್ಳಬಹುದು.
ಮಾಧ್ಯಮ ವರದಿಗಳ ಪ್ರಕಾರ, ನಾಯ್ಡು ಅವರು ರಾಜಧಾನಿ ಯೋಜನೆ ಅಭಿವೃದ್ಧಿಗೆ ಮೊದಲ ಹಂತಕ್ಕಾಗಿ ಕೇಂದ್ರದಿಂದ 15,000 ಕೋಟಿ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ.
ಬಹುಪಯೋಗಿ ಪೋಲವರಂ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸುವುದು ನಾಯ್ಡು ಅವರ ಮುಂದಿರುವ ಮತ್ತೊಂದು ಪ್ರಮುಖ ಸವಾಲಾಗಿದೆ. ಆಂಧ್ರದ ಕರಾವಳಿ ಭಾಗದ 7,00,000 ಎಕರೆ ಕೃಷಿಭೂಮಿಗೆ ನೀರಾವರಿ ಸೌಲಭ್ಯಗಳನ್ನು ಒದಗಿಸಲು ಗೋದಾವರಿ ನದಿಗೆ ಅಡ್ಡಲಾಗಿ ಪೋಲವರಂ ಅಣೆಕಟ್ಟನ್ನು ನಿರ್ಮಿಸಲಾಗುತ್ತಿದೆ. ಜೊತೆಗೆ, 960 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯೂ ಯೋಜನೆಯ ಭಾಗವಾಗಿದೆ. ಯೋಜನೆ ರೂಪಿಸಿದ್ದ ಸಮಯದಲ್ಲಿ ಕೇಂದ್ರ ಸರ್ಕಾರವು ಯೋಜನೆಗೆ ‘ರಾಷ್ಟ್ರೀಯ ಯೋಜನೆ ಸ್ಥಾನಮಾನ’ ನೀಡಿತ್ತು. 2017-2018ರ ಬೆಲೆಗಳನ್ನು ಆಧರಿಸಿ ಹಿಂದಿನ ಯೋಜನಾ ವೆಚ್ಚವನ್ನು 55,548 ಕೋಟಿ ರೂ. ಎಂದು ಅಂದಾಜಿಸಲಾಗಿತ್ತು. ಈ ಯೋಜನೆಗಾಗಿ ಕೇಂದ್ರದ ಬಾಕಿ ಹಣವನ್ನು ಶೀಘ್ರ ಬಿಡುಗಡೆ ಮಾಡುವಂತೆ ನಾಯ್ಡು ಕೇಳಿದ್ದಾರೆ. ಪೋಲವರಂ ಯೋಜನೆಯ ಮೊದಲ ಹಂತವನ್ನು ಪೂರ್ಣಗೊಳಿಸಲು 12,100 ಕೋಟಿ ರೂ. ಬೇಕು ಎಂದು ಹೇಳಲಾಗಿದೆ.
ಇನ್ನು, ಹಿಂದಿನ ವೈಎಸ್‌ಆರ್ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದ ಸಾಲ ಗಣನೀಯವಾಗಿ ಹೆಚ್ಚಾಗಿದೆ ಎಂದು ನಾಯ್ಡು ಅವರು ಒತ್ತಿ ಹೇಳುತ್ತಿದ್ದಾರೆ. ರಾಜ್ಯದ ಸಾರ್ವಜನಿಕ ಸಾಲವು 2019-2020ರಲ್ಲಿ ಒಟ್ಟು ರಾಜ್ಯ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) 31.02% ಇದ್ದದ್ದು, 2023-2024ರ ವೇಳೆಗೆ 33.32%ಗೆ ಏರಿಕೆಯಾಗಿದೆ ಎಂದು ಅವರು ಹೇಳಿದ್ದಾರೆ. ಆಂಧ್ರಪ್ರದೇಶದ ಬಜೆಟ್ 2023-2024ರ ಪ್ರಕಾರ, ರಾಜ್ಯದ ಒಟ್ಟು ಸಾಲವು 4.3 ಲಕ್ಷ ಕೋಟಿ ರೂ.ಗೆ ಹೆಚ್ಚಾಗಿದೆ. ಆಂಧ್ರಪ್ರದೇಶದ ಮೇಲಿರುವ ಹೆಚ್ಚಿನ ಸಾಲದ ಹೊರೆಯನ್ನು ಕಡಿತಗೊಳಿಸಲು ಕೇಂದ್ರದಿಂದ ನಾಯ್ಡು ಅವರು ಕೋರಿರುವ ನೆರವಿನ ಸ್ವರೂಪ ಏನು ಎಂಬುದನ್ನು ಅವರು ಹೇಳಿಕೊಂಡಿಲ್ಲ.
ಚುನಾವಣೆಯ ಸಮಯದಲ್ಲಿ ಫೆಬ್ರವರಿ 11 ರಂದು ಟಿಡಿಪಿ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು ‘ಸೂಪರ್ ಸಿಕ್ಸ್ ಗ್ಯಾರಂಟಿ’ಗಳನ್ನು ಘೋಷಿಸಿದ್ದರು. 1) ಯುವಕರಿಗೆ ವಾರ್ಷಿಕ 20 ಲಕ್ಷ ಉದ್ಯೋಗ ಸೃಷ್ಟಿ. 2) ಮಾಸಿಕ 3,000 ರೂಪಾಯಿಗಳ ನಿರುದ್ಯೋಗ ಭತ್ಯೆ. 3) ಶಾಲೆಗೆ ಹೋಗುವ ಮಕ್ಕಳ ಪೋಷಕರಿಗೆ 15,000 ರೂ. ನೀಡುವ ತಳ್ಳಿಕಿ ವಂದನಂ ಯೋಜನೆ. 4) ರೈತರಿಗೆ ವಾರ್ಷಿಕ 20,000 ರೂ. ನೀಡುವ ಅನ್ನದಾತ ಯೋಜನೆ. 5) ಪ್ರತಿ ಮನೆಗೆ ವಾರ್ಷಿಕ ಮೂರು ಉಚಿತ ಸಿಲಿಂಡರ್‌ಗಳನ್ನು ಒದಗಿಸುವುದು. 6) 18 ವರ್ಷಕ್ಕಿಂತ ಮೇಲ್ಪಟ್ಟ ಪ್ರತಿ ಮಹಿಳೆಗೆ ತಿಂಗಳಿಗೆ 1,500 ರೂ. ನೀಡುವುದು – ಇವು ‘ಸೂಪರ್ ಸಿಕ್ಸ್ ಗ್ಯಾರಂಟಿ’ಗಳು. ಈ ಗ್ಯಾರಂಟಿಗಳ ಜೊತೆಗೆ, ವೃದ್ಧರು, ವಿಧವೆಯರು, ನೇಕಾರರು, ಟೋಡಿ ಹೊಡೆಯುವವರು, ಮೀನುಗಾರರು, ಒಂಟಿ ಮಹಿಳೆಯರು, ಸಾಂಪ್ರದಾಯಿಕ ಚಮ್ಮಾರರು, ತೃತೀಯಲಿಂಗಿಗಳು, ಕಲಾವಿದರು, ಡಪ್ಪು ಕಲಾವಿದರು ಮತ್ತು ಕಲಾವಿದರಿಗೆ ಪಿಂಚಣಿಯನ್ನು ಮಾಸಿಕ 3,000 ರೂ.ನಿಂದ 4,000 ರೂ.ಗೆ ಹೆಚ್ಚಿಸಲಾಗುವುದು ಎಂದು ಟಿಡಿಪಿ ಭರವಸೆ ನೀಡಿತ್ತು.
ಇದೀಗ, ಟಿಡಿಪಿ ಚುನಾವಣೆಯಲ್ಲಿ ಗೆದ್ದು ನಾಯ್ಡು ಅಧಿಕಾರಕ್ಕೆ ಬಂದು ಸುಮಾರು ಒಂದು ತಿಂಗಳಾಗಿದೆ. ಜುಲೈನಲ್ಲಿ ಈ ಖಾತರಿಗಳನ್ನು ಜಾರಿಗೆ ತರಲು ಅಂದಾಜು 10,000 ಕೋಟಿ ರೂ. ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಜೊತೆಗೆ, ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸಲು ವಾರ್ಷಿಕ ಸುಮಾರು 2,000 ಕೋಟಿ ರೂ. ಹೆಚ್ಚುವರಿ ಹಣ ಪಾವತಿಸಬೇಕಿದೆ.
ನಾಯ್ಡು ಎದುರು ಈಗ ಅಮರಾವತಿ ರಾಜಧಾನಿ ಯೋಜನೆಯನ್ನು ಪೂರ್ಣಗೊಳಿಸುವುದು, ರಾಜ್ಯದ ಆರ್ಥಿಕತೆಯನ್ನು ಸುಧಾರಿಸುವುದು, ಸಾಲದ ಹೊರೆಯನ್ನು ತಗ್ಗಿಸುವುದು ಹಾಗೂ ರಾಜ್ಯದ ಜನರಿಗೆ ತಮ್ಮ ಪಕ್ಷವು ನೀಡಿರುವ ‘ಸೂಪರ್ ಸಿಕ್ಸ್ ಗ್ಯಾರಂಟಿ’ಗಳನ್ನು ಪೂರೈಸುವ ಆದ್ಯತೆಯ ಕೆಲಸಗಳಿವೆ. ಅದಕ್ಕಾಗಿ, ನಾಯ್ಡು ನಾನಾ ರೀತಿಯ ಕಸರತ್ತಿಗೆ ಕೈ ಹಾಕಿದ್ದಾರೆ, ಹಣ ಹೊಂದಿಸಲು ಹೆಣಗಾಡುತ್ತಿದ್ದಾರೆ.
ಈ ವರದಿ ಓದಿದ್ದೀರಾ?: ಈ ದಿನ ವಿಶೇಷ | ಭಾರತೀಯ ಸಮಾಜವು ಮೂಢನಂಬಿಕೆಯತ್ತ, ಬಾಬಾಗಳತ್ತ ವಾಲುತ್ತಿರುವುದೇಕೆ?
ಸದ್ಯಕ್ಕೆ, 16 ಲೋಕಸಭಾ ಸಂಸದರನ್ನು ಹೊಂದಿರುವ ನಾಯ್ಡು ಅವರ ಟಿಡಿಪಿ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರದ ಪ್ರಮುಖ ಮಿತ್ರ ಪಕ್ಷವಾಗಿದೆ. 1990ರ ದಶಕದ ಮಧ್ಯಭಾಗದಲ್ಲಿ ಎ.ಬಿ ವಾಜಪೇಯಿ ನೇತೃತ್ವದ ಯುನೈಟೆಡ್ ಫ್ರಂಟ್ ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಚೌಕಾಶಿ ನಡೆಸುವ ಮೂಲಕ ನಾಯ್ಡು ಅವರು ‘ಕಿಂಗ್ ಮೇಕರ್’ ಆಗಿದ್ದರು. ಈಗ, 30 ವರ್ಷಗಳ ಬಳಿಕ ಮತ್ತೆ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಈಗಲೂ ಎನ್‌ಡಿಎಯಲ್ಲಿ ಬಿಹಾರದ ನಿತೀಶ್ ಜೊತೆಗೆ ನಾಯ್ಡು ‘ಕಿಂಗ್ ಮೇಕರ್’ ಆಗಿದ್ದಾರೆ. ರಾಷ್ಟ್ರಮಟ್ಟದ ಹುದ್ದೆಗಳಿಗಿಂತ ಆಂಧ್ರಪ್ರದೇಶದ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದಾಗಿ ಹೇಳಿಕೊಂಡಿದ್ದಾರೆ. ಎನ್‌ಡಿಎಯಲ್ಲಿ ತಮಗಿರುವ ಅವಕಾಶವನ್ನು ಬಳಸಿಕೊಳ್ಳಲು ನಾಯ್ಡು ತಂತ್ರ ಹೆಣೆಯುತ್ತಿದ್ದಾರೆ. ರಾಜ್ಯಕ್ಕಾಗಿ ಮೋದಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡುತ್ತಲೇ ಇದ್ದಾರೆ. ಏಕಪಕ್ಷೀಯವಾಗಿ ತನಗಿಷ್ಟ ಬಂದಂತೆ 10 ವರ್ಷಗಳ ಆಡಳಿತ ನಡೆಸಿರುವ ಮೋದಿಯನ್ನು ನಾಯ್ಡು ಆಂಧ್ರದತ್ತ ಎಳೆಯುತ್ತಿದ್ದಾರೆ. ಆಂಧ್ರಕ್ಕಾಗಿ ನಾಯ್ಡು ಬೇಡಿಕೆಗಳು ಮೋದಿಗೆ ತಲೆನೋವಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ.