ಚುನಾವಣಾ ಪ್ರಮಾಣ ಪತ್ರದಲ್ಲಿ ಸುಳ್ಳು ಮಾಹಿತಿ ಸಲ್ಲಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹಾಸನದ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಅನರ್ಹಗೊಳಿಸಿ ಹೈಕೋರ್ಟ್ ಆದೇಶ ಹೊರಡಿಸಿದೆ.
2019ರ ಲೋಕಸಭಾ ಚುನಾವಣೆಯಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಜ್ವಲ್ ರೇವಣ್ಣ ಸ್ಪರ್ಧಿಸಿ ಗೆದ್ದಿದ್ದರು. ದೇವೇಗೌಡರ ಕುಟುಂಬದ ಪ್ರಭಾವಿ ಯುವ ನಾಯಕನಾಗಿಯೂ ಬೆಳೆಯುತ್ತಿರುವ ಪ್ರಜ್ವಲ್ ರೇವಣ್ಣ ಈಗ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ. ಆರು ವರ್ಷ ಚುನಾವಣೆಗೆ ನಿಲ್ಲುವಂತಿಲ್ಲ ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ.
ಬಿಜೆಪಿಯಿಂದ ಸ್ಪರ್ಧಿಸಿ ಪರಾಜಿತರಾಗಿದ್ದ, ಹಾಲಿ ಜೆಡಿಎಸ್ ಶಾಸಕರಾಗಿರುವ ಎ ಮಂಜು ಹಾಗೂ ಜಿ ದೇವರಾಜೇಗೌಡ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಪುರಸ್ಕರಿಸಿದೆ.
ಪ್ರಜ್ವಲ್ ಅವರು ಚುನಾವಣಾ ಅಕ್ರಮದಲ್ಲಿ ಭಾಗಿಯಾಗಿರುವುದರಿಂದ ತನ್ನನ್ನು ವಿಜೇತ ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಎ ಮಂಜು ಅವರ ಕೋರಿಕೆಯನ್ನೂ ನ್ಯಾಯಾಲಯವು ತಿರಸ್ಕರಿಸಿದೆ.
ಪ್ರಜ್ವಲ್ ರೇವಣ್ಣ ಪ್ರಮಾಣ ಪತ್ರದಲ್ಲಿ ಹಲವಾರು ಸುಳ್ಳು ಮಾಹಿತಿಗಳನ್ನು ನೀಡಿದ್ದು, ಅವರ ನಾಮಪತ್ರ ರದ್ದುಗೊಳಿಸಿ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿತ್ತು.
ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಜಯಭೇರಿ ಬಾರಿಸಿದ ಪ್ರಜ್ವಲ್ ರೇವಣ್ಣ ಅವರು ಚೊಚ್ಚಲ ಪ್ರಯತ್ನದಲ್ಲೇ ಜಯ ಗಳಿಸಿದ್ದರು. ಆದರೆ ಅಫಿಡವಿಟ್ನಲ್ಲಿ ಸುಳ್ಳು ಮಾಹಿತಿ ನೀಡಿ ಜನರನ್ನು ದಾರಿ ತಪ್ಪಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಪ್ರಜ್ವಲ್ ಅವರ ಸಂಸದ ಸ್ಥಾನವನ್ನು ರದ್ದುಗೊಳಿಸಬೇಕು ಎಂದು ಒತ್ತಾಯಿಸಿ ಹಾಸನದಲ್ಲಿ ಸೋಲು ಕಂಡ ಬಿಜೆಪಿ ಅಭ್ಯರ್ಥಿ ಎ.ಮಂಜು ಅವರು 2019ರ ಜೂನ್ 26ರಂದು ಹೈಕೋರ್ಟಿನಲ್ಲಿ ಅರ್ಜಿ ಹಾಕಿದ್ದರು.
ವಿಪರ್ಯಾಸದ ಸಂಗತಿ!
ವಿಪರ್ಯಾಸದ ಸಂಗತಿ ಏನೆಂದರೆ, ಪ್ರಜ್ವಲ್ ರೇವಣ್ಣ ವಿರುದ್ಧ ಅರ್ಜಿ ಹಾಕಿರುವ ಎ. ಮಂಜು ಅವರು ಸದ್ಯ ಅರಕಲಗೂಡು ವಿಧಾನಸಭಾ ಕ್ಷೇತ್ರ ಜೆಡಿಎಸ್ ಶಾಸಕ. ಮೊದಲು ಕಾಂಗ್ರೆಸ್‌ನಲ್ಲಿದ್ದ ಎ. ಮಂಜು ಆ ಬಳಿಕ ಲೋಕಸಭಾ ಚುನಾವಣೆಯ ವೇಳೆ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಆ ಅರ್ಜಿ ಹೈಕೋರ್ಟಿನಲ್ಲಿ ತಿರಸ್ಕಾರಗೊಂಡಿತ್ತು. ಇದೀಗ ವಕೀಲ ದೇವರಾಜೇಗೌಡ ಸಲ್ಲಿಸಿದ್ದ ಅರ್ಜಿ ಆಧಾರದ ಮೇಲೆ ಹೈಕೋರ್ಟ್ ಈ ಮಹತ್ವದ ಆದೇಶ ಹೊರಡಿಸಿದೆ.
ಮಂಜು ಅವರ ಪುತ್ರ ಮಂಥರ್ ಗೌಡ ಮಡಿಕೇರಿ ವಿಧಾನ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾಗಿದ್ದಾರೆ.
ಲೋಕಸಭಾ ಚುನಾವಣೆಗೆ 6 ತಿಂಗಳು ಇರುವಾಗ ಪ್ರಜ್ವಲ್ ರೇವಣ್ಣ ಅನರ್ಹಗೊಂಡಿದ್ದಾರೆ.
ಹೊಳೆನರಸೀಪುರದಲ್ಲಿರುವ ಚೆನ್ನಾಂಬಿಕ ಕನ್ವೆನ್ಶನ್ ಸೆಂಟರ್ ಕಟ್ಟಡ ಕನಿಷ್ಠ 5 ಕೋಟಿ ರೂ. ಬೆಲೆ ಬಾಳುತ್ತದೆ. ಆದರೆ ಅದರ ಮೌಲ್ಯವನ್ನು 14 ರೂ. ಲಕ್ಷ ಎಂದು ತೋರಿಸಲಾಗಿದೆ. ಬೆಂಗಳೂರಿನ ಮಿನರ್ವ ಸರ್ಕಲ್ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಯಲ್ಲಿ 48 ಲಕ್ಷ ರೂ. ಹೊಂದಿದ್ದರೂ ಕೇವಲ 5 ಲಕ್ಷ ಇದೆ ಎಂದು ತೋರಿಸಿದ್ದಾರೆ ಎಂದು ದೇವರಾಜೇಗೌಡ ಆರೋಪಿದ್ದರು.