ಗುಜರಾತ್ ಹತ್ಯಾಕಾಂಡದ ವೇಳೆ ಬಿಲ್ಕಿಸ್ ಬಾನು ಅವರನ್ನು ಸಾಮೂಹಿಕ ಅತ್ಯಾಚಾರ ಮಾಡಿದ ಹಾಗೂ ಬಾನು ಅವರ ಮಗು ಸೇರಿದಂತೆ ಕುಟುಂಬಸ್ಥರನ್ನು ಭೀಕರವಾಗಿ ಹತ್ಯೆಗೈದ ಆರೋಪಿಗಳ ಜೈಲು ಶಿಕ್ಷೆ ಪೂರ್ಣಗೊಳ್ಳುವ ಮೊದಲೇ ಬಿಡುಗಡೆ ಮಾಡಿರುವ ಕುರಿತಂತೆ ಸುಪ್ರೀಂ ಕೋರ್ಟ್ ಗುಜರಾತ್ ಮತ್ತು ಕೇಂದ್ರ ಸರ್ಕಾರಗಳನ್ನು ಪ್ರಶ್ನಿಸಿದೆ.
ಬಿಲ್ಕಿಸ್ ಬಾನು ಸಾಮೂಹಿಕ ಅತ್ಯಾಚಾರಿಗಳು ಮತ್ತು ಆಕೆಯ ಕುಟುಂಬಸ್ಥರ ಹಂತಕರಿಗೆ ಕ್ಷಮಾದಾನ ನೀಡುವ ಗುಜರಾತ್ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.
ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಮೌಖಿಕವಾಗಿ ಹೇಳಿದ್ದು, ಸಮಾಜದಲ್ಲಿ ಸುಧಾರಣೆ ಮತ್ತು ಪುನರ್ಮಿಲನಕ್ಕೆ ಅವಕಾಶವನ್ನು ಪ್ರತಿಯೊಬ್ಬ ಅರ್ಹ ಅಪರಾಧಗೆ ನೀಡಬೇಕು. “ಕ್ಷಮಾದಾನವನ್ನು ಕೆಲವು ಆಯ್ದ ವ್ಯಕ್ತಿಗಳಿಗೆ ಮಾತ್ರ ಏಕೆ ಅನ್ವಯಿಸಲಾಗುತ್ತಿದೆ? ಸುಧಾರಣೆಗೆ ಅವಕಾಶವನ್ನು ಪ್ರತಿಯೊಬ್ಬ ಅಪರಾಧಿಗಳಿಗೆ ನೀಡಬೇಕು, ಕೆಲವರಿಗೆ ಮಾತ್ರ ಅಲ್ಲ. 14 ವರ್ಷಗಳ ನಂತರ ಜೀವಾವಧಿ ಶಿಕ್ಷೆಗೊಳಗಾದ ಎಲ್ಲರಿಗೂ ಕ್ಷಮಾದಾನವನ್ನು ನೀಡಲಾಗುತ್ತದೆಯೇ?” ಎಂದು ನ್ಯಾಯಮೂರ್ತಿ ನಾಗರತ್ನ ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ನೇಮಕಾತಿ ವೇಳೆ ಮಹಿಳೆಯರ ಎದೆ ಅಳತೆ ಮಾಡುವುದು ಖಾಸಗಿತನದ ಉಲ್ಲಂಘನೆ: ರಾಜಸ್ಥಾನ ಹೈಕೋರ್ಟ್
ಮೇ 2022 ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಆಧಾರದ ಮೇಲೆ ಗುಜರಾತ್ ಸರ್ಕಾರವು 11 ಅಪರಾಧಿಗಳಿಗೆ ವಿನಾಯಿತಿಯನ್ನು ನೀಡಿತ್ತು.
ಮಿತೇಶ್ ಭಟ್, ಶೈಲೇಶ್ ಭಟ್, ಜಸ್ವಂತ್ ನಾಯ್, ಗೋವಿಂದ್ ನಾಯ್, ರಾಧ್ಯೇಶಮ್ ಶಾ, ಬಿಪಿನ್ ಚಂದ್ರ ಜೋಶಿ, ಕೇಸರಭಾಯಿ ವೊಹಾನಿಯಾ, ಪ್ರದೀಪ್ ಮೋರ್ಧಿಯಾ, ಬಕಾಭಾಯಿ ವೋಹಾನಿಯಾ, ರಾಜುಭಾಯ್ ಸೋನಿ, ಮತ್ತು ರಮೇಶ್ ಚಂದನಾ ಅವರು ‘ಸನ್ನಡತೆ ಆಧಾರದ’ ಮೇಲೆ ಬಿಡುಗಡೆಗೊಂಡ ಅಪರಾಧಿಗಳು. ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಈ ಅಪರಾಧಿಗಳನ್ನು ಗುಜರಾತ್ ಸರ್ಕಾರ ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಮುನ್ನ ಬಿಡುಗಡೆ ಮಾಡಿತ್ತು.