ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇನ್ನು ಕೆಲವೇ ವಾರಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಡುವೆ ಪಂಜಾಬ್ ಎಎಪಿ ಮತ್ತು ದೆಹಲಿ ಬಿಜೆಪಿ ನಡುವೆ ವಾಕ್ಸಮರ ಶುರುವಾಗಿದೆ. ನವದೆಹಲಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ್ವೇಶ್ ವರ್ಮಾ ತಮ್ಮ ಪ್ರತಿಸ್ಪರ್ಧಿ ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರು ಎಎಪಿ ಆಡಳಿತವಿರುವ ಪಂಜಾಬ್ನ ಆಡಳಿತದ ದುರುಪಯೋಗ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಷ್ಟು ಮಾತ್ರವಲ್ಲದೆ ದೆಹಲಿಯಲ್ಲಿ ಪಂಜಾಬ್ನ ಉದ್ಯೋಗಿಗಳು ಚೀನೀ ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಸಿದ್ದಾರೆ ಎಂದು ಕೂಡಾ ಆರೋಪಿಸಿದ್ದಾರೆ.
ಈ ಆರೋಪಕ್ಕೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡಾ ತಿರುಗೇಟು ನೀಡಿದ್ದಾರೆ. ಸದ್ಯ ಪಂಜಾಬ್ ಎಎಪಿ ಮತ್ತು ದೆಹಲಿ ಬಿಜೆಪಿ ನಡುವೆ ವಾಕ್ಸಮರ ನಡೆಯುತ್ತಿದೆ. ಈ ಆರೋಪಕ್ಕೆ ಪ್ರತಿಕ್ರಿಯಿಸಿದ ಪಂಜಾಬ್ ಸಿಎಂ ಮಾನ್, “ವರ್ಮಾ ಪಂಜಾಬಿಗಳನ್ನು ಅವಮಾನಿಸಿದ್ದಾರೆ” ಎಂದು ಹೇಳಿದ್ದಾರೆ. ಹಾಗೆಯೇ ಈ ವಿಚಾರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಕಾಂಗ್ರೆಸ್ ಬದಲು ಎಎಪಿ ಬೆಂಬಲಕ್ಕೆ ನಿಂತ ‘ಇಂಡಿಯಾ’ ಮಿತ್ರಪಕ್ಷಗಳು
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ವರ್ಮಾ, “ಚುನಾವಣಾ ಸೋಲಿನ ಭಯದಿಂದ ಅರವಿಂದ್ ಕೇಜ್ರಿವಾಲ್ ಪಂಜಾಬ್ ಸರ್ಕಾರದ ಸಹಾಯದಿಂದ ಕೇವಲ ನೆಪ ಮಾತ್ರಕ್ಕೆ ಕ್ಷೇತ್ರದ ಕೊಳಗೇರಿಗಳಲ್ಲಿ ಚೀನೀ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಿದ್ದಾರೆ” ಎಂದು ಹೇಳಿಕೊಂಡಿದ್ದಾರೆ.
“ಆತುರದಿಂದ ಅಳವಡಿಸಲಾದ ಈ ಚೀನೀ ಸಿಸಿಟಿವಿ ಕ್ಯಾಮೆರಾಗಳಿಂದ ಭದ್ರತಾ ಬೆದರಿಕೆಗಳಿದೆ. ಇಷ್ಟು ಮಾತ್ರವಲ್ಲದೆ ಪಂಜಾಬ್ನ ಶಿಕ್ಷಕರು ಮತ್ತು ಉದ್ಯೋಗಿಗಳನ್ನು ದೆಹಲಿಯಲ್ಲಿ ಚುನಾವಣಾ ಪ್ರಚಾರಕ್ಕೆ ಎಎಪಿ ಕರೆತಂದಿದೆ. ಅವರು ಎಎಪಿ ಕಾರ್ಯಕರ್ತರಂತೆ ಶಾಲು ಮೊದಲಾದವುಗಳನ್ನು ಧರಿಸುಕೊಂಡು ಪ್ರಚಾರದಲ್ಲಿ ಭಾಗಿಯಾಗುತ್ತಿದ್ದಾರೆ. ಅಮೃತಸರ ಮೂಲದ ಇಬ್ಬರು ಶಿಕ್ಷಕರನ್ನು ಇಲ್ಲಿ ಪೊಲೀಸರು ಬಂಧಿಸಿದ್ದಾರೆ” ಎಂದು ವರ್ಮಾ ಆರೋಪಿಸಿದ್ದಾರೆ.
“ಪಂಜಾಬ್ ನೋಂದಣಿಯ ಸಾವಿರಾರು ವಾಹನಗಳು ನವದೆಹಲಿಯಲ್ಲಿ ಓಡಾಡುತ್ತಿವೆ. ಪಂಜಾಬ್ ಸರ್ಕಾರಕ್ಕೆ ಸೇರಿದ ಟ್ರಕ್ಗಳಲ್ಲಿ ನೀರು ಸರಬರಾಜು ಯಂತ್ರಗಳು, ಕುರ್ಚಿಗಳು ಮತ್ತು ಇತರ ಸಾಮಗ್ರಿಗಳನ್ನು ದೆಹಲಿಗೆ ಸಾಗಿಸಲಾಗುತ್ತಿದೆ” ಎಂದೂ ದೂರಿದ್ದಾರೆ. ಹಾಗೆಯೇ ಈ ಬಗ್ಗೆ ಕ್ರಮಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ (ಇಸಿ) ಒತ್ತಾಯಿಸಿದ್ದಾರೆ.
ಇದನ್ನು ಓದಿದ್ದೀರಾ? ದೆಹಲಿ ವಿಧಾನಸಭೆ ಚುನಾವಣೆ | ಎಎಪಿಯ ಅಂತಿಮ ಅಭ್ಯರ್ಥಿ ಪಟ್ಟಿ ಬಿಡುಗಡೆ
ದೆಹಲಿ ಬಿಜೆಪಿ ಮುಖಂಡನ ಈ ಆರೋಪಕ್ಕೆ ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರುವ ದೆಹಲಿ ಸಿಎಂ ಮಾನ್, “ದೆಹಲಿ ದೇಶದ ರಾಜಧಾನಿಯಾಗಿದೆ. ವಿವಿಧ ರಾಜ್ಯಗಳಲ್ಲಿ ನೋಂದಾಯಿಸಲಾದ ವಾಹನಗಳು ರಾಜಧಾನಿಯಲ್ಲಿ ಸಂಚರಿಸುತ್ತದೆ. ಯಾವುದೇ ರಾಜ್ಯದಲ್ಲಿ ನೋಂದಾಯಿಸಲಾದ ವಾಹನ ದೇಶದ ಎಲ್ಲಿ ಬೇಕಾದರೂ ಸಂಚರಿಸಬಹುದು. ಅದಕ್ಕೆ ಯಾವುದೇ ನಿರ್ಬಂಧವಿಲ್ಲ” ಎಂದು ಹೇಳಿದರು.
“ವರ್ಮಾ ಹೇಳಿಕೆಯು ತುಂಬಾ ಅಪಾಯಕಾರಿ, ಆತಂಕಕಾರಿ ಮತ್ತು ಪಂಜಾಬಿಗಳಿಗೆ ಅವಮಾನಕರವಾಗಿದೆ. ಅವರು ಪಂಜಾಬ್ ನೋಂದಣಿ ಸಂಖ್ಯೆಗಳನ್ನು ಹೊಂದಿರುವ ವಾಹನಗಳನ್ನು ಗುರುತಿಸುತ್ತಿದ್ದಾರೆ ಮತ್ತು ಪಂಜಾಬ್ನ ವಾಹನಗಳು ದೆಹಲಿಯಲ್ಲಿ ಏಕೆ ಸಂಚರಿಸುತ್ತಿವೆ ಎಂದು ಪ್ರಶ್ನಿಸುತ್ತಿದ್ದಾರೆ. ವರ್ಮಾ ಅವರ ಹೇಳಿಕೆಯು ಪಂಜಾಬಿಗಳು ದೇಶದ ಭದ್ರತೆಗೆ ಬೆದರಿಕೆ ಎಂಬಂತ ಅರ್ಥವನ್ನು ನೀಡುತ್ತದೆ. ಅದಕ್ಕಾಗಿ ಅಮಿತ್ ಶಾ ಅವರು ಕ್ಷಮೆಯಾಚಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಅಮಿತ್ ಶಾ ಅವರೇ ನಿಮಗೆ ಗಡಿಯನ್ನು ಸುರಕ್ಷಿತವಾಗಿಡಲೂ ಸಾಧ್ಯವಾಗುತ್ತಿಲ್ಲ ಅಥವಾ ದೆಹಲಿಯನ್ನು ಕೂಡಾ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾವಿರಾರು ಬಾಂಗ್ಲಾದೇಶಿಗಳು ಮತ್ತು ರೋಹಿಂಗ್ಯಾಗಳು ದೇಶಕ್ಕೆ ಬರುತ್ತಿದ್ದಾರೆ. ನಿಮಗೆ ಅವರಿಂದ ಸಮಸ್ಯೆಯಿಲ್ಲವೇ? ಆದರೆ ನೀವು ಪಂಜಾಬ್ನಿಂದ ದೆಹಲಿಗೆ ಬರುವ ಪಂಜಾಬಿಗಳು ದೇಶಕ್ಕೆ ಬೆದರಿಕೆ ಎಂದು ಕರೆಯುತ್ತಿದ್ದೀರಿ. ನೀವು ಪಂಜಾಬಿಗಳಿಗೆ ಕ್ಷಮೆಯಾಚಿಸಬೇಕು” ಎಂದು ಒತ್ತಾಯಿಸಿದ್ದಾರೆ.
दिल्ली देश की राजधानी है। यहाँ हर राज्य से लोग आते हैं। यहाँ हर प्रदेश के नंबर की गाड़ियां चलती हैं। किसी भी राज्य के नंबर की गाड़ियां देश के किसी भी हिस्से में जा सकती हैं, इस पर कोई रोक टोक नहीं है।
— Bhagwant Mann (@BhagwantMann) January 21, 2025
बीजेपी का ये बयान सुनिए। ये बेहद खतरनाक, चिंताजनक और पंजाबियों के लिए… pic.twitter.com/LOdETjaPOs
“ಇದರಿಂದಾಗಿ ಪ್ರತಿಯೊಬ್ಬ ಪಂಜಾಬಿ ತೀವ್ರ ನೋವು ಮತ್ತು ಅವಮಾನವನ್ನು ಅನುಭವಿಸುತ್ತಿದ್ದಾರೆ. ನಿಮ್ಮ ಕೊಳಕು ರಾಜಕೀಯಕ್ಕಾಗಿ ಪಂಜಾಬಿಗಳ ದೇಶಭಕ್ತಿಯನ್ನು ಈ ರೀತಿ ಪ್ರಶ್ನಿಸುವುದು ಸರಿಯಲ್ಲ” ಎಂದು ಹೇಳಿದ್ದಾರೆ. ಜೊತೆಗೆ ವರ್ಮಾ ಅವರ ಪತ್ರಿಕಾಗೋಷ್ಠಿಯ 17 ಸೆಕೆಂಡುಗಳ ವಿಡಿಯೋವನ್ನೂ ಪೋಸ್ಟ್ ಮಾಡಿದ್ದಾರೆ.
70 ಸದಸ್ಯರ ದೆಹಲಿ ವಿಧಾನಸಭೆಯ ಚುನಾವಣೆಯು ಫೆಬ್ರವರಿ 5ರಂದು ನಡೆಯಲಿದ್ದು, ಫೆಬ್ರವರಿ 8ರಂದು ಫಲಿತಾಂಶ ಹೊರಬೀಳಲಿದೆ. ಚುನಾವಣೆಗಾಗಿ ಈಗಾಗಲೇ ಕಾಂಗ್ರೆಸ್, ಬಿಜೆಪಿ, ಎಎಪಿ ಸಿದ್ಧತೆಯನ್ನು ನಡೆಸುತ್ತಿದೆ. ಕಳೆದ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಒಕ್ಕೂಟದ ಭಾಗವಾಗಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಎಎಪಿ, ಕಾಂಗ್ರೆಸ್ ವಿಧಾನಸಭೆ ಚುನಾವಣೆಯಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ.
