ಪಶ್ಚಿಮ ಬಂಗಾಳದ ಹಾಲಿ ಬಿಜೆಪಿ ಸಂಸದ ಡಾ. ಜಯಂತ ಕುಮಾರ್ ರಾಯ್ ಅವರು ಮರು ಆಯ್ಕೆಗಾಗಿ ಜಲ್ಪೈಗುರಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದಾರೆ. ದುರದೃಷ್ಟವಶಾತ್ ಅವರ ಮರು ಆಯ್ಕೆಗೆ ಅವರೇ ಮತ ಚಲಾಯಿಸಲು ಸಾಧ್ಯವಾಗಿಲ್ಲ. 2019ರಲ್ಲಿಯೂ ಅವರು ತಮ್ಮ ಆಯ್ಕೆಗಾಗಿ ಮತ ಚಲಾಯಿಸಿರಲಿಲ್ಲ ಎಂಬುದು ವಿಶೇಷ.
ಶುಕ್ರವಾರ, ಜಲ್ಪೈಗುರಿ ಕ್ಷೇತ್ರದಲ್ಲಿ ಮತದಾನ ನಡೆದಿದೆ. ಆದರೆ, ಜಯಂತ್ ಅವರು ಕ್ಷೇತ್ರದಲ್ಲಿ ಮತದಾನ ಮಾಡಲು ಸಾಧ್ಯವಾಗಿಲ್ಲ. ಏಕೆಂದರೆ, ಜಯಂತ್ – ಜಲ್ಪೈಗುರಿ ಕ್ಷೇತ್ರದ ಅಭ್ಯರ್ಥಿಯಾಗಿದ್ದರೂ, ಅವರು ಪಕ್ಕದ ಕ್ಷೇತ್ರ ಡಾರ್ಜಿಲಿಂಗ್ನ ಮತದಾರರಾಗಿದ್ದಾರೆ. ಜಯಂತ್ ವಿರುದ್ಧ ಟಿಎಂಸಿಯ ನಿರ್ಮಲ್ ಚಂದ್ರ ರಾಯ್ ಮತ್ತು ಸಿಪಿಐ(ಎಂ)ನ ದೇಬ್ರಾಜ್ ಬರ್ಮನ್ ಸ್ಪರ್ಧಿಸಿದ್ದಾರೆ.
“ನನಗೆ ನಾನೇ ಮತ ಚಲಾಯಿಸಲು ಸಾಧ್ಯವಾಗುತ್ತಿಲ್ಲ ಎಂಬುದು ಬಳಹ ನೋವಿನ ವಿಷಯವಾಗಿದೆ” ಎಂದು ಜಯಂತ್ ಮಾಧ್ಯಮಗಳಿಗೆ ಹೇಳಿದ್ದಾರೆ.
“ನನಗೆ ಮತ ಹಾಕಲಾಗಲಿಲ್ಲ ಎಂಬ ನೋವಿದೆ. ಆದರೂ, ನಾನು ಮತ್ತೆ ಗೆಲ್ಲುತ್ತೇನೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಜಲ್ಪೈಗುರಿಯ ಜನರು ಬಿಜೆಪಿ ಮೇಲೆ ನಂಬಿಕೆ ಇಟ್ಟಿದ್ದಾರೆ” ಎಂದು ಅವರು ಹೇಳಿದ್ದಾರೆ.