ಮಧ್ಯಪ್ರದೇಶದಲ್ಲಿ ನಾಲ್ಕು ಹಂತದ ಲೋಕಸಭಾ ಚುನಾವಣೆಯ ಮತದಾನ ಮುಗಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಕಳಪೆ ಪ್ರದರ್ಶನ ಮಾಡಿದೆ ಎಂದು ಅಲ್ಲಿನ ರಾಜ್ಯಾಧ್ಯಕ್ಷ ಜಿತು ಪಟ್ವಾರಿ ಒಪ್ಪಿಕೊಂಡಿದ್ದಾರೆ. ಪಕ್ಷದ ಸೋಲಿಗೆ ಬಿಜೆಪಿಯನ್ನು ದೂಷಿಸಲಾಗದು. ನಮ್ಮದೇ ದೌರ್ಬಲ್ಯಗಳ ಕಾರಣದಿಂದ ಇಂತಹ ಪ್ರದರ್ಶನವಾಗಿದೆ. ಅವುಗಳನ್ನು ಸರಿಪಡಿಸುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಹೇಳಿದ್ದಾರೆ.
“2023ರ ವಿಧಾನಸಭೆ ಚುನಾವಣೆ ಸೇರಿದಂತೆ ರಾಜ್ಯದಲ್ಲಿ ಸತತ ಮೂರು-ನಾಲ್ಕು ಚುನಾವಣೆಗಳಲ್ಲಿ ಸೋತಿದ್ದೇವೆ. ನಮ್ಮ ಚುನಾವಣಾ ಸೋಲಿಗೆ ನಾವು ಯಾವಾಗಲೂ ಬಿಜೆಪಿಯನ್ನು ದೂಷಿಸಬಾರದು. ನಮ್ಮ ದೌರ್ಬಲ್ಯಗಳು ಸಹ ಕಾರಣವಾಗಿರುತ್ತವೆ. ಈಗ ಅವುಗಳನ್ನು ಸರಿಪಡಿಸುವುದು ಅತ್ಯಂತ ಆದ್ಯತೆಯಾಗಿದೆ. ನಾವು ಈಗಾಗಲೇ ಪಕ್ಷದ ರಾಜ್ಯ ಘಟಕದ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುತ್ತಿದ್ದೇವೆ.ಶೀಘ್ರದಲ್ಲೇ ನೆಲದಲ್ಲಿ ಫಲಿತಾಂಶಗಳು ಕಂಡುಬರುತ್ತವೆ” ಎಂದು ಪಟ್ವಾರಿ ಹೇಳಿದ್ದಾರೆ.
ಪಟ್ಟಾರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ವಕ್ತಾರ ಶಿವಂ ಶುಕ್ಲಾ, “ಲೋಕಸಭಾ ಚುನಾವಣಾ ಫಲಿತಾಂಶ ಹೊರಬೀಳುವ ಮೊದಲೇ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರು ಸೋಲನ್ನು ಒಪ್ಪಿಕೊಂಡಿದ್ದಾರೆ. ತಮ್ಮ ಪಕ್ಷದ ಆಂತರಿಕ ಸಮಸ್ಯೆಗಳ ಬಗ್ಗೆ ಸತ್ಯವನ್ನು ಮಾತನಾಡಲು ಪ್ರಾರಂಭಿಸಿದ್ದಾರೆ” ಎಂದಿದ್ದಾರೆ.
ಮುಖ್ಯವಾಗಿ, 2014ರ ಲೋಕಸಭಾ ಚುನಾವಣೆಯಲ್ಲಿ, ಮಧ್ಯಪ್ರದೇಶದ 29 ಸ್ಥಾನಗಳಲ್ಲಿ ಕೇವಲ 2 ಸೀಟಿಗಳನ್ನು ಮಾತ್ರ ಗೆದ್ದಿತ್ತು. 2019ರಲ್ಲಿ ಒಂದು ಸ್ಥಾನಕ್ಕೆ ಕುಸಿದಿತ್ತು.