- ಅವರ ಪಕ್ಷದಲ್ಲಿ ಏನು ಆಗುತ್ತಿದೆ ಎಂದು ಅವರಿಗೇ ತಿಳಿಯುತ್ತಿಲ್ಲ
- ‘ನಾವು ಜನರಿಗೆ ನೀಡಿದ್ದ ಭರವಸೆಯನ್ನು ಈಡೇರಿಸುತ್ತಿದ್ದೇವೆ’
ಬಿಜೆಪಿಯವರು ಅಧಿಕಾರ ಕಳೆದುಕೊಂಡು ನೂರು ದಿನ ಆಗಿದೆ. ಬಹುಶಃ ಅವರಿಗೆ ಏನು ಮಾಡಬೇಕು ಎನ್ನುವುದೇ ಅರ್ಥ ಆಗುತ್ತಿಲ್ಲ. ವಿರೋಧ ಪಕ್ಷದ ನಾಯಕ ಯಾರು ಎಂದು ಅದು ಬಿಜೆಪಿಗರಿಗೆ ಗೊತ್ತಾಗುತ್ತಿಲ್ಲ. ಅವರ ಪಕ್ಷದಲ್ಲಿ ಏನು ಆಗುತ್ತಿದೆ ಎಂದು ಅವರಿಗೇ ತಿಳಿಯುತ್ತಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದರು.
ಕಲಬುರಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, “ನಾವು ಜನರಿಗೆ ನೀಡಿದ ಭರವಸೆಯನ್ನು ಈಡೇರಿಸುತ್ತಿದ್ದೇವೆ. ಒಳ್ಳೆಯ ಆಡಳಿತ ಕೊಡಬೇಕು ಎನ್ನುವ ಉದ್ದೇಶದಿಂದ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದೇವೆ. ನಮ್ಮ ಸರ್ಕಾರವನ್ನು ಟೀಕಿಸುವ ನೈತಿಕತೆ ಬಿಜೆಪಿ ನಾಯಕರಿಗೆ ಇಲ್ಲ” ಎಂದರು
“ಬಿಜೆಪಿಯವರು ಹತಾಶರಾಗಿದ್ದಾರೆ. ಅಧಿಕಾರ ಇಲ್ಲದೇ ಇರುವುದಕ್ಕೆ ನೀರಿನಿಂದ ಹೊರಬಿದ್ದ ಮೀನಿನಂತೆ ಬಿಜೆಪಿಯವರು ಚಡಪಡಿಸುತ್ತಿದ್ದಾರೆ. ಮೊನ್ನೆ ಮೋದಿ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕರು ಬ್ಯಾರಿಕೇಡ್ ಹಿಂದೆ ಬಂಧಿ ಆಗಿ ಕನ್ನಡಿಗರ ಮಾರ್ಯಾದೆ ಬೀದಿಗೆ ತಂದಿದ್ದರು” ಎಂದು ವಾಗ್ದಾಳಿ ನಡೆಸಿದರು.
“ಬಸವರಾಜ ಬೊಮ್ಮಾಯಿ ಅವರು ಸಿಎಂ ಇದ್ದಾಗ ಏನೇ ಹೇಳಿದರೂ ದಾಖಲೆ ಕೊಡಿ ಎನ್ನುತ್ತಿದ್ದರು. ಈಗ ಬೊಮ್ಮಾಯಿ ಅವರು ಮಾಡುತ್ತಿರುವ ಆರೋಪಕ್ಕೆ ಯಾವ ದಾಖಲೆಗಳಿವೆ? ಅವರು ಹತಾಶರಾಗಿ ಆರೋಪ ಮಾಡುತ್ತಿದ್ದಾರೆ. ಹಾಗೆ ಆರೋಪ ಮಾಡುವುದರಿಂದ ಅವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಮಾಡಬಹುದು” ಎಂದು ಭಾವಿಸಿದಂತಿದೆ ಎಂದು ಕುಟುಕಿದರು.
“ಗುತ್ತಿಗೆದಾರರ ಸಂಘದ ಅಧ್ಯಕ್ಷರು ನಮ್ಮ ಸರ್ಕಾರದ ಮೇಲೆ ಭ್ರಷ್ಟಾಚಾರದ ಆರೋಪ ಮಾಡಿಲ್ಲ. ಬಿಲ್ ಪಾವತಿಗೆ ವಿಳಂಬವಾಗುತ್ತಿದೆ ಎಂದಿದ್ದಾರೆ. ಥರ್ಡ್ ಪಾರ್ಟಿ ಪರಿಶೀಲನೆ ವರದಿ ನಂತರ ಬಾಕಿ ಇರುವ ಬಿಲ್ ಗಳನ್ನು ಪಾವತಿ ಮಾಡುತ್ತೇವೆ” ಎಂದರು.
ಈ ಸುದ್ದಿ ಓದಿದ್ದೀರಾ? ಕಾಂಗ್ರೆಸ್ ನಾಯಕರು ಸತ್ಯ ಹರಿಶ್ಚಂದ್ರರೇ ಆಗಿದ್ದರೆ 2013ರಿಂದ ತನಿಖೆ ಮಾಡಿಸಲಿ: ಕೆ.ಸುಧಾಕರ್ ಸವಾಲು
“ಶಾಸಕ ಎನ್. ರವಿಕುಮಾರ್ ಅವರು ಜೇವರ್ಗಿಯಲ್ಲಿ ತಮ್ಮ ಪಕ್ಷದ ಟಿಕೆಟ್ ಮಾರಿಕೊಂಡಿದ್ದಾರೆ ಎಂದು ಸ್ವತಃ ಅವರ ಪಕ್ಷದವರೇ ಹೇಳುತ್ತಿದ್ದರು. ಅದಾದ ಮೇಲೆ ಅವರು ಕಲಬುರಗಿಗೆ ಬಂದೇ ಇರಲಿಲ್ಲ. ಆದರೆ ನಿನ್ನೆ ಚಿತ್ತಾಪುರಕ್ಕೆ ಬಂದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರ ಶಿಷ್ಯನಿಗೆ ಗಡಿಪಾರು ಶಿಕ್ಷೆ ವಿಧಿಸಿದಾಗ ರವಿಕುಮಾರ ಯಾಕೆ ಬಂದು ಪ್ರತಿಭಟನೆ ಮಾಡಲಿಲ್ಲ? ಇದು ಬಿಜೆಪಿ ಸರ್ಕಾರದ ಕಲಬುರಗಿ ಅಲ್ಲ, ಕಾಂಗ್ರೆಸ್ ಸರಕಾರದ ಕಲಬುರಗಿ” ಎಂದರು.
ಆಂದೋಲಾ ಸಿದ್ದಲಿಂಗ ಸ್ವಾಮೀಜಿ ವಿರುದ್ದ ಹರಿಹಾಯ್ದ ಸಚಿವರು, “ನಿಮ್ಮದು ಎಂತಹ ತತ್ವ? ಅಕ್ಕಿ ಕಳ್ಳರಿಗೆ, ಅಂಗನವಾಡಿ ಮಕ್ಕಳ ಹಾಲಿನ ಪೌಡರ್ ಕಳ್ಳತನ ಮಾಡುವವರ ರಕ್ಷಣೆ ಮಾಡಿ ಅಂತ ನಿಮ್ಮ ತತ್ವ ಹೇಳುತ್ತಾ? ಬಿಜೆಪಿ ಸರ್ಕಾರ ಇದ್ದಾಗ ಅಕ್ಕಿ ಹಾಗೂ ಹಾಲಿನ ಪುಡಿ ಕಳ್ಳತನ ಮಾಡಿರುವ ಆರೋಪ ಹೊತ್ತಿರುವವರಿಗೆ ಟಿಕೆಟ್ ನೀಡಲಾಗಿತ್ತು. ಆದರೆ, ನಮ್ಮ ಸರ್ಕಾರ ಬಂದ ಮೇಲೆ ಅಂತಹವರನ್ನ ಜೈಲಿಗೆ ಕಳಿಸಲಾಗಿದೆ ಅಥವಾ ಅಂತಹವರು ಬೇಲ್ ಮೇಲೆ ಹೊರಗಡೆ ಇದ್ದಾರೆ” ಎಂದು ಖರ್ಗೆ ಟೀಕಿಸಿದರು.