- ಜುಲೈ 27ರಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ : ಪರಿಷತ್ ಸದಸ್ಯ ರವಿಕುಮಾರ್
- ವಿಡಿಯೋವನ್ನು ಮುಸಲ್ಮಾನ ಯುವಕರಿಗೆ ಕಳುಹಿಸಲಾಗಿದೆ : ತೇಜಸ್ವಿನಿ ಗೌಡ ಆರೋಪ
ಉಡುಪಿ ಕಾಲೇಜಿನ ಶೌಚಾಲಯದಲ್ಲಿ ಮೊಬೈಲ್ ಚಿತ್ರೀಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಎಂಟ್ರಿ ಕೊಟ್ಟಿದ್ದು, ‘ವಿಕೃತ ಅಲ್ಲ, ವಿಧ್ವಂಸಕ ಕೃತ್ಯ’ ಎಂದು ಹೇಳಿಕೆ ನೀಡಿದೆ.
ಈ ಬಗ್ಗೆ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ತೇಜಸ್ವಿನಿ ಗೌಡ, ವಿಕೃತ ಅಲ್ಲ, ವಿಧ್ವಂಸಕ ಕೃತ್ಯ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅನೇಕ ಘಟನೆಗಳಿಂದ ರಾಜ್ಯದಲ್ಲಿ ಭಯಭೀತಿಯ ವಾತಾವರಣ ನಿರ್ಮಾಣವಾಗಿದೆ. ಮೂರು ಜನ ಮುಸ್ಲಿಂ ಹೆಣ್ಣು ಮಕ್ಕಳು ಉಡುಪಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ ಮಾಡಿದ್ದಾರೆ ಎಂಬುದನ್ನು ರಶ್ಮಿ ಸಾಮಂತ್ ಎಂಬವರು ಟ್ವೀಟ್ ಮಾಡಿದ ಬಳಿಕ ಬೆಳಕಿಗೆ ಬಂದಿದೆ. ಆ ಬಳಿಕ ಪೊಲೀಸರು ಟ್ವೀಟ್ ಮಾಡಿದವರ ಮನೆಗೆ ತೆರಳಿ ಬೆದರಿಸಿದ್ದಾರೆ ಎಂದು ತೇಜಸ್ವಿನಿ ಗೌಡ ಆರೋಪಿಸಿದರು.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಾಲೇಜು ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ; ಪುರಾವೆ ಇಲ್ಲದ ಪ್ರಕರಣವೆಂದು ಎಸ್‌ಪಿ ಸ್ಪಷ್ಟನೆ
ಹಿಂದೂ ಹೆಣ್ಣುಮಕ್ಕಳ ವಿಡಿಯೋವನ್ನು ಮಾಡಿ ಮುಸಲ್ಮಾನ ಯುವಕರಿಗೆ ಕಳುಹಿಸಲಾಗಿದೆ ಎಂದು ಆರೋಪಿಸಿರುವ ತೇಜಸ್ವಿನಿ ಗೌಡ, ವಿಡಿಯೋ ಮಾಡಿದವರು, ಶೇರ್ ಮಾಡಿದವರ ಹಿಂದೆ ದೊಡ್ಡ ಜಾಲವಿದೆ. ಗಂಭೀರ ಆರೋಪ ಹೊತ್ತಿರುವ ವಿದ್ಯಾರ್ಥಿನಿಯರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಂ ಎನ್ ರವಿಕುಮಾರ್ ಮಾತನಾಡಿ, ಉಡುಪಿ ಪ್ರಕರಣದ ಬಗ್ಗೆ ಸಮಗ್ರವಾದ ತನಿಖೆ ನಡೆಯಬೇಕು. ಮೂರು ಜನ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಅಮಾನತು ಮಾಡಿರುವುದು ಬಿಟ್ಟರೆ ಬೇರೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರ ಬದಲು ಇಂಥದ್ದೊಂದು ಘಟನೆ ನಡೆದಿದೆ ಎಂದು ತಿಳಿಸಿದವರ ಮನೆಗೆ ಹೋಗಿ ಬೆದರಿಸಲಾಗಿದೆ. ಇದಕ್ಕೆ ಸರ್ಕಾರವೇ ನೇರ ಕಾರಣ. ವಿಡಿಯೋ ಘಟನೆಯಲ್ಲಿರುವ ಮೂವರು ಮುಸ್ಲಿಂ ವಿದ್ಯಾರ್ಥಿನಿಯರನ್ನು ಬಂಧಿಸಿ, ಸಮಗ್ರ ನಡೆಸಬೇಕು. ಇಲ್ಲವಾದಲ್ಲಿ ಜುಲೈ 27ರಂದು ಮಹಿಳಾ ಮೋರ್ಚಾದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕರೆ ಕೊಡುತ್ತೇವೆ ಎಂದು ತಿಳಿಸಿದರು.
ಉಡುಪಿ ಎಸ್‌ಪಿ ಸ್ಪಷ್ಟನೆ
‘ಸುಳ್ಳು ಮಾಹಿತಿಗಳನ್ನು ಈ ಪ್ರಕರಣಕ್ಕೆ ಲಿಂಕ್ ಮಾಡಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ, ಗೊಂದಲ ಸೃಷ್ಟಿಸಬೇಡಿ. ಸಮಾಜದಲ್ಲಿನ ಶಾಂತಿ ಸುವ್ಯವಸ್ಥೆಗೆ ಧಕ್ಕೆ ತರುವ ಪೋಸ್ಟ್ ಹಾಕಬೇಡಿ. ನಿಮ್ಮಲ್ಲಿ ಖಚಿತ ಮಾಹಿತಿ ಇದ್ದರೆ ನಮಗೆ ತಿಳಿಸಿ. ಕಾನೂನು ಚೌಕ್ಕಟ್ಟಿನಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಷೇರ್ ಮಾಡುವ ಮೊದಲು ಸತ್ಯಾಂಶ ತಿಳಿದುಕೊಳ್ಳಿ. ಅನಗತ್ಯವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ವಂದತಿಗಳನ್ನು ಹರಡಬೇಡಿ’ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೇ ಮಚ್ಚೀಂದ್ರ ತಿಳಿಸಿದ್ದಾರೆ.