ಮುಂಬೈನ 26/11ರ ಭಯೋತ್ಪಾದನಾ ದಾಳಿಯಲ್ಲಿ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿದ್ದ ವಕೀಲ ಉಜ್ವಲ್ ನಿಕಮ್ ಅವರನ್ನು ಮುಂಬೈ ಉತ್ತರ ಮಧ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ಕಣಕ್ಕಿಳಿಸಿದೆ. ಈ ಹಿಂದೆ ಪ್ರಸ್ತುತ ಸಂಸದರಾದ ಪೂನಂ ಮಹಾಜನ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿಸಿತ್ತು. ಆದರೆ ಈಗ ಉಜ್ವಲ್ ನಿಕಮ್ ಅವರಿಗೆ ಟಿಕೆಟ್ ನೀಡಿದೆ.
ಪೂನಂ ಮಹಾಜನ್ ಅವರ ತಂದೆ ಪ್ರಮೋದ್ ಮಹಾಜನ್ ಅವರ ಕೊಲೆ ಪ್ರಕರಣದಲ್ಲಿ ನಿಕಮ್ ಅವರೇ ಪ್ರಾಸಿಕ್ಯೂಟರ್ ಆಗಿದ್ದರು. ಪ್ರಮೋದ್ ಮಹಾಜನ್ ಅವರನ್ನು ಏಪ್ರಿಲ್ 2006 ರಲ್ಲಿ ಅವರ ಸಹೋದರ ಪ್ರವೀಣ್ ಅವರು ಗುಂಡಿಕ್ಕಿ ಹತ್ಯೆ ಮಾಡಿದ್ದರು.
ಇದನ್ನು ಓದಿದ್ದೀರಾ? ಬರ ಪರಿಹಾರ | ಸುಪ್ರೀಂ ಕೋರ್ಟ್ ಉಗಿದಿದ್ದನ್ನೇ ಮೋದಿ ಪ್ರಸಾದ ಎನ್ನುತ್ತಿರುವ ಬಿಜೆಪಿ!
ಪೂನಂ ಮಹಾಜನ್ ಅವರು 2014 ಮತ್ತು 2019 ರಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ನಿಂದ ಸ್ಪರ್ಧಿಸಿ ಗೆಲುವು ಕಂಡಿದ್ದಾರೆ. ಅವರು ಬಿಜೆಪಿಯ ಯುವ ಘಟಕದ ಮಾಜಿ ಅಧ್ಯಕ್ಷರೂ ಆಗಿದ್ದಾರೆ. ಆದರೆ ಸಾಂಸ್ಥಿಕ ಪ್ರತಿಕ್ರಿಯೆಯ ಆಧಾರದ ಮೇಲೆ ಅವರನ್ನು ಕೈಬಿಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪಕ್ಷದ ಮುಖಂಡರು ಹೇಳಿದ್ದಾರೆ.
ಪೂನಂ ಮಹಾಜನ್ ಅವರನ್ನು ಕೈಬಿಡುವ ನಿರ್ಧಾರವನ್ನು ಶೀಘ್ರವೇ ತಿಳಿಸಲಾಗಿದ್ದರೂ ಅವರ ಬದಲಿ ಅಭ್ಯರ್ಥಿ ಹುಡುಕಾಟಕ್ಕೆ ಬಿಜೆಪಿ ಸಮಯ ತೆಗೆದುಕೊಂಡಿದೆ ಎಂದು ವರದಿಯಾಗಿದೆ. ಇನ್ನು ಕಾಂಗ್ರೆಸ್ ತನ್ನ ನಗರ ಘಟಕದ ಮುಖ್ಯಸ್ಥೆ ಮತ್ತು ಮುಂಬೈ ನಾರ್ತ್ ಸೆಂಟ್ರಲ್‌ನಿಂದ ಧಾರವಿ ಶಾಸಕಿ ವರ್ಷಾ ಗಾಯಕ್‌ವಾಡ್ ಅವರನ್ನು ಕಣಕ್ಕಿಳಿಸಿದೆ.
ಲೋಕಸಭೆ ಚುನಾವಣೆಯ ಐದನೇ ಹಂತದಲ್ಲಿ ಮುಂಬೈನಲ್ಲಿ ಮೇ 20 ರಂದು ಮತದಾನ ನಡೆಯಲಿದೆ. ಇನ್ನು ಲೋಕಸಭೆ ಚುನಾವಣೆಯ ಜೊತೆಗೆ ಒಡಿಶಾ ವಿಧಾನಸಭಾ ಚುನಾವಣೆಗೆ ಇನ್ನೂ ಎಂಟು ಅಭ್ಯರ್ಥಿಗಳನ್ನು ಬಿಜೆಪಿ ಹೆಸರಿಸಿದೆ.