ಬರ ಪರಿಹಾರ | ಸುಪ್ರೀಂ ಕೋರ್ಟ್ ಉಗಿದಿದ್ದನ್ನೇ ಮೋದಿ ಪ್ರಸಾದ ಎನ್ನುತ್ತಿರುವ ಬಿಜೆಪಿ!

Date:

ರಾಜ್ಯಕ್ಕೆ 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಟ್ಟದ್ದೇ ವಿನಾ ಮೋದಿ ಕರುಣಿಸಿದ್ದು ಖಂಡಿತವಾಗಿಯೂ ಅಲ್ಲ. ನೂರು ಸಲ ಸುಳ್ಳು ಹೇಳಿದರೆ ಅದು ಸತ್ಯವಾಗಿಬಿಡುವುದಿಲ್ಲ.

 

ಎಂಟು ತಿಂಗಳಿನಿಂದ ಕರ್ನಾಟಕಕ್ಕೆ ಚಿಕ್ಕಾಸಿನ ಬರ ಪರಿಹಾರವನ್ನೂ ನೀಡದೆ ಸತಾಯಿಸುತ್ತಿದ್ದ ಮೋದಿ ಸರ್ಕಾರ ಸುಪ್ರೀಂ ಕೋರ್ಟ್ ಚಾಟಿ ಬೀಸುತ್ತಿದ್ದಂತೆ ಎಚ್ಚೆತ್ತುಕೊಂಡು ಶನಿವಾರ (ಏ.27) ₹3,454 ಕೋಟಿ ಪರಿಹಾರ ಬಿಡುಗಡೆ ಮಾಡಿದೆ.

ಎನ್.ಡಿ.ಆರ್.ಎಫ್ ನಿಯಮದಂತೆ ರಾಜ್ಯ ಸರ್ಕಾರ ಕೇಳಿದ್ದು ₹18,171 ಕೋಟಿ. ಆದರೆ, ಬಿಡುಗಡೆ ಆಗಿರುವ ಹಣ ನಾಲ್ಕನೇ ಒಂದು ಭಾಗಕ್ಕೂ ಕಡಿಮೆ ಇದೆ. ಆದರೆ ಇದೇ ಸಂಗತಿಯನ್ನು ಮಹಾನ್‌ ಸಾಧನೆ ಎಂಬಂತೆ ಕರ್ನಾಟಕ ಬಿಜೆಪಿ ಬಿಂಬಿಸುತ್ತಿದೆ. ಇದಕ್ಕೆ ಬಿಜೆಪಿ ನಾಯಕರು ಮೋದಿಗೆ ಬಹು ಪರಾಕ್‌ ಹೇಳಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಸುಪ್ರೀಂ ಕೋರ್ಟ್‌ ಹೇಳಿದ್ದರಿಂದ ರಾಜ್ಯಕ್ಕೆ ಕೇಂದ್ರ ಸರ್ಕಾರ ಬರ ಪರಿಹಾರ ಬಿಡುಗಡೆಗೊಳಿಸಿದೆ ಎಂಬ ಸತ್ಯ ಜಗಕ್ಕೆ ಗೊತ್ತಿದ್ದರೂ, ಚುನಾವಣೆಗಾಗಿ ಬಿಜೆಪಿ ನಾಯಕರು ಆತ್ಮವಂಚನೆ ಮಾಡಿಕೊಂಡು, ‘ರಾಜ್ಯದಲ್ಲಿ ತೀವ್ರ ಬರ ಇದ್ದರೂ ರಾಜ್ಯ ಸರ್ಕಾರ ನಿರ್ಲಕ್ಷ್ಯ ಮಾಡಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದರೂ ಕೇಂದ್ರ ಸರ್ಕಾರ ಚುನಾವಣಾ ಆಯೋಗದ ಅನುಮತಿ ಪಡೆದು ಸಂಕಷ್ಟ ಕಾಲದಲ್ಲೂ ಕರ್ನಾಟಕದ ಜನರ ಪರವಾಗಿ ಮೋದಿ ತೀರ್ಮಾನ ತೆಗೆದುಕೊಂಡಿದ್ದಾರೆ’ ಎನ್ನುತ್ತಿದ್ದಾರೆ.

ಸತ್ಯದ ತಲೆಯ ಮೇಲೆ ಹೊಡೆದಂತೆ ಸುಳ್ಳು ಹೇಳುವುದನ್ನು ಬಿಜೆಪಿಯಿಂದಲೇ ಕಲಿಯಬೇಕು. ವಾಸ್ತವದಲ್ಲಿ ಕರ್ನಾಟಕ ಸರ್ಕಾರ ರಾಜ್ಯಕ್ಕೆ ಬರ ಪರಿಹಾರ ಕೋರಿ ತಡವಾಗಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂಬುದೇ ಬಿಜೆಪಿಯ ಬಹುದೊಡ್ಡ ಸುಳ್ಳು. ಮುಂಗಾರು ಬೆಳೆ ರೈತರ ಕೈ ತಪ್ಪುತ್ತಿದ್ದಂತೆ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಕಳೆದ ಸೆಪ್ಟೆಂಬರ್ ತಿಂಗಳಿನಿಂದ ಏನು ಮಾಡಿತು, ಕೇಂದ್ರ ಸರ್ಕಾರ ಹೇಗೆ ಸ್ಪಂದಿಸಿತು ಎಂಬುದರ ಟೈಮ್‌ ಲೈನ್‌ ಕೂಡ ಇಲ್ಲಿದೆ ನೋಡಿ.

ಸೆಪ್ಟೆಂಬರ್ 13, 2023:
ರಾಜ್ಯದ 195 ತಾಲೂಕುಗಳಲ್ಲಿ ಬರ; ₹30,432 ಕೋಟಿ ನಷ್ಟ, ರಾಜ್ಯ ಸರ್ಕಾರದ ಘೋಷಣೆ.

ಸೆಪ್ಟೆಂಬರ್ 22, 2023:
ಬರ ಪರಿಸ್ಥಿತಿಯ ಸಮಗ್ರ ವರದಿ ಸಹಿತ ನೆರವು ಕೋರಿಕೆಯ ಮನವಿ ಪತ್ರ ಹಾಗೂ ಜತೆಗೆ ಹಸಿರು ಬರದ ಚಿತ್ರಣವನ್ನೂ ಸಲ್ಲಿಸಲು ರಾಜ್ಯ ಸರಕಾರ ಸಿದ್ಧತೆ.

ಸೆಪ್ಟೆಂಬರ್ 23, 2023:
ಬರ ಪರಿಸ್ಥಿತಿ ಇರುವುದರಿಂದ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಅಡಿ ಕುಡಿಯುವ ನೀರು ಪೂರೈಕೆಗೆ ₹4,860 ಕೋಟಿ ನೆರವಿಗೆ ಮೊದಲ ಮನವಿ.

ಅಕ್ಟೋಬರ್ 5, 2023:
ಕೇಂದ್ರ ತಂಡದಿಂದ ನಾಲ್ಕು ದಿನಗಳ ಬರ ಅಧ್ಯಯನ. ಬಾಗಲಕೋಟೆ, ಚಿತ್ರದುರ್ಗ, ದಾವಣಗೆರೆ, ವಿಜಯನಗರ ಜಿಲ್ಲೆಗಳಲ್ಲಿ ಪ್ರವಾಸ.

ಅಕ್ಟೋಬರ್ 25, 2023:
ರೈತರಿಗೆ ಪರಿಹಾರ ನೀಡಲು ₹17,901.73 ಕೋಟಿ ನೀಡುವಂತೆ ಕೇಂದ್ರಕ್ಕೆ ಪ್ರಸ್ತಾವನೆ.

ನವೆಂಬರ್ 15, 2023:
ಬರಪರಿಹಾರ ಬಿಡುಗಡೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಸಿಎಂ ಸಿದ್ದರಾಮಯ್ಯ ಅವರಿಂದ ಮನವಿ ಪತ್ರ.

ನವೆಂಬರ್ 20, 2023:
ರಾಜ್ಯ ಕೃಷಿ ಸಚಿವರಿಂದ, ಗೃಹ ಸಚಿವರ ನೇತೃತ್ವದ ಉನ್ನತ ಸಮಿತಿಯ ಮುಂದಿಡಲು ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಉಪ ಸಮಿತಿಯ ಶಿಫಾರಸುಗಳನ್ನು ಒಳಗೊಂಡ ಪ್ರಸ್ತಾವನೆ ರವಾನೆ.

ಡಿಸೆಂಬರ್ 19, 2023:
ಸಿಎಂ ಸಿದ್ದರಾಮಯ್ಯ ಹಾಗೂ ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದರು.

ಡಿಸೆಂಬರ್ 20, 2023:
ಸಿಎಂ ಸಿದ್ದರಾಮಯ್ಯ ಮತ್ತು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ, ಬರ ಪರಿಹಾರ ಬಿಡುಗಡೆಗೆ ಮನವಿ ಮಾಡಿದರು.

ಮಾರ್ಚ್ 24, 2024:
ವಿಳಂಬ ವಿರೋಧಿಸಿ ಬರಪರಿಹಾರ ಬಿಡುಗಡೆಗೆ ಕೇಂದ್ರ ಸರ್ಕಾರಕ್ಕೆ ಸೂಚಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ರಾಜ್ಯ ಸರ್ಕಾರ.

ಏಪ್ರಿಲ್ 2, 2024:
ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಗೃಹ ಸಚಿವ ಅಮಿತ್ ಶಾ, ಬರ ಪರಿಹಾರ ಕೇಳುವಲ್ಲಿ ಕರ್ನಾಟಕದಿಂದ ವಿಳಂಬ ಎಂಬ ಸುಳ್ಳುಹೇಳಿಕೆ.

ಏಪ್ರಿಲ್‌ 6, 2024:
ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ವಿಳಂಬವಾಗಲು ಕಾರಣ ಕೇಂದ್ರ ಸರ್ಕಾರವಲ್ಲ. ಉನ್ನತಾಧಿಕಾರಿ ಸಭೆ ನಡೆಸಲು ಚುನಾವಣಾ ಆಯೋಗ ಅನುಮತಿ ನೀಡದಿರುವುದು ಎಂದು ಹೇಳಿ ಜಾರಿಕೊಂಡ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌.

ಏಪ್ರಿಲ್ 8, 2024:
ಎರಡು ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ. ನೋಟೀಸ್‌ ನೀಡದಿರುವಂತೆ ಮನವಿ ಮಾಡಿದ್ದ ಸರ್ಕಾರ ಪರ ವಕೀಲ ತುಷಾರ್ ಮೆಹ್ತಾ.

ಏಪ್ರಿಲ್ 22, 2024:
ಕರ್ನಾಟಕಕ್ಕೆ ಬರ ಪರಿಹಾರ ಬಿಡುಗಡೆ ಮಾಡಲು ಚುನಾವಣಾ ಆಯೋಗದ ಒಪ್ಪಿಗೆ. ಅಗತ್ಯ ಕ್ರಮಗಳನ್ನು ಶೀಘ್ರವೇ ತೆಗೆದುಕೊಳ್ಳುವುದಾಗಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದ ಕೇಂದ್ರ ಸರ್ಕಾರ.

ಏಪ್ರಿಲ್ 27, 2024:
ಕೇಂದ್ರ ಸರ್ಕಾರದಿಂದ ರೂ. 3,498.98 ಕೋಟಿ ಬರಪರಿಹಾರಕ್ಕೆ ಅನುಮೋದನೆ, ಅದರಲ್ಲಿ 3,454 ಕೋಟಿ ಬಿಡುಗಡೆ.

ಮೇಲಿನ ಟೈಮ್‌ ಲೈನ್‌ ಗಮನಿಸಿದರೆ ಸುಮಾರು ಎಂಟು ತಿಂಗಳ ಕಾಲ ಬರ ಪರಿಹಾರಕ್ಕಾಗಿ ಕಾದು ಕಾದು ರಾಜ್ಯ ಸರ್ಕಾರ ಅನಿವಾರ್ಯವಾಗಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸನ್ನಿವೇಶವನ್ನು ಸೃಷ್ಟಿಸಿದ್ದು ಮೋದಿ ಸರ್ಕಾರವೇ. ರಾಜ್ಯದ ಮತದಾರರು ಡಬಲ್ ಎಂಜಿನ್ ಸರ್ಕಾರವನ್ನು ಆರಿಸಲಿಲ್ಲ ಎಂಬ ಸಿಟ್ಟು- ಸೇಡನ್ನು ಮೋದಿ ಸರ್ಕಾರ ಹೀಗೆ ತೀರಿಸಿಕೊಳ್ಳಲು ಮುಂದಾಗಿತ್ತು.

ಕರ್ನಾಟಕದ ರೈತರ ಸಂಕಷ್ಟವನ್ನು, ಕೇಂದ್ರದ ರಾಜಕೀಯ ದುರುದ್ದೇಶವನ್ನು ಕೋರ್ಟ್‌ಗೆ ಮನವರಿಕೆ ಮಾಡಿಕೊಟ್ಟ ನಂತರ ಮೋದಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಚಾಟಿ ಬೀಸಿತು. ಇದರಿಂದ ಬೇರೆ ದಾರಿಯಿಲ್ಲದೆ ಒಂದು ವಾರದ ಗಡುವು ಪಡೆದು ಈಗ ರೂ.3,454 ಕೋಟಿ ರೂಪಾಯಿ ಪರಿಹಾರ ಬಿಡುಗಡೆ ಮಾಡಿದೆ.

ನಾಡಿನ ರೈತರ ಆಕ್ರೋಶ, ನಮ್ಮ ಹೋರಾಟ, ಮೋದಿ ಸರ್ಕಾರ ಕರ್ನಾಟಕಕ್ಕೆ ಬಗೆದ ಹಸಿ ಹಸಿ ಅನ್ಯಾಯದ ಮನವರಿಕೆಯಾದ ಸುಪ್ರೀಂ ಕೋರ್ಟ್‌ ರಾಜ್ಯದ ಅಹವಾಲನ್ನು ಎತ್ತಿ ಹಿಡಿಯಿತು. ಮೋದಿ ಸರ್ಕಾರದ ಅನ್ಯಾಯವನ್ನು ಬೆಳಕು ಹಿಡಿದು ತೋರಿತು. ಸುಪ್ರೀಮ್ ಕೋರ್ಟ್ ತೀರ್ಪಿನ ಫಲವಾಗಿ ಬಿಡುಗಡೆಯಾದ ಈ ಪರಿಹಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರ ಸಾಧನೆ ಎಂದು ಬಿಂಬಿಸುತ್ತಿರುವ ಬಿಜೆಪಿಗೆ ಯಾವ ನಾಚಿಕೆಯೂ ಇಲ್ಲವಾಗಿದೆ. ಇಂತಹ ಭಂಡತನವನ್ನು ಕನ್ನಡಿಗರು ಮೆಚ್ಚುವುದಿಲ್ಲ, ಬಿಜೆಪಿಗೆ ಪಾಠ ಕಲಿಸದೆ ಬಿಡುವುದೂ ಇಲ್ಲ.

ಮೋದಿ ಮತ್ತು ಅವರ ಬಿಜೆಪಿಗೆ ಕರ್ನಾಟಕದ ಬಗೆಗೆ ನಿಜವಾಗಿಯೂ ಕಾಳಜಿಯಿದ್ದರೆ ತೆರಿಗೆ ಹಂಚಿಕೆಯಲ್ಲಿ ಆಗುತ್ತಿರುವ ಅನ್ಯಾಯ ಸರಿಪಡಿಸಲಿ ನೋಡೋಣ. ಈ ಅನ್ಯಾಯದ ವಿರುದ್ಧವೂ ಕರ್ನಾಟಕ ನ್ಯಾಯಾಲಯದ ಕಟ್ಟೆ ಹತ್ತಬೇಕೇನೋ? ಸುಪ್ರೀಮ್ ಕೋರ್ಟು ಮತ್ತೊಮ್ಮೆ ಕರ್ನಾಟಕದ ಪರವಾಗಿ ತೀರ್ಪು ನೀಡಬೇಕೇನೋ? ಸುಪ್ರೀಮ್ ತೀರ್ಪನ್ನು ಪಾಲಿಸುವುದು ಮೋದಿ ಸರ್ಕಾರದ ಸಾಂವಿಧಾನಿಕ ಕರ್ತವ್ಯ. ಈ ಕರ್ತವ್ಯ ಪಾಲನೆಯನ್ನೇ ಕರ್ನಾಟಕಕ್ಕೆ ಮಾಡುವ ಮಹದುಪಕಾರ ಎಂದು ನಗಾರಿ ಬಾರಿಸಲಾಗುವ ಬಿಜೆಪಿಯ ಭಂಡತನಕ್ಕೆ ಇತಿಮಿತಿಯಿಲ್ಲ.

15ನೇ ಹಣಕಾಸು ಆಯೋಗ ಶಿಫಾರಸ್ಸು ಮಾಡಿರುವ ವಿಶೇಷ ಅನುದಾನ, ಕೆರೆಗಳ ಸಂರಕ್ಷಣೆ ಮತ್ತು ಪೆರಿಫರಲ್ ರಿಂಗ್ ರೋಡ್ ಗೆ ಶಿಫಾರಸ್ಸಾದ ಅನುದಾನ, ಭದ್ರಾ ಮೇಲ್ದಂಡೆ ಯೋಜನೆಗೆ ಬಜೆಟ್‌ನಲ್ಲಿಯೇ ಅನುದಾನ ಘೋಷಿಸಲಾಗಿದೆ. ತನ್ನ ಮಾತನ್ನು ತಾನೇ ನಡೆಸಿಕೊಡುತ್ತಿಲ್ಲ ಮೋದಿ ಸರ್ಕಾರ. ಇದಕ್ಕಾಗಿ ಕೋರ್ಟಿನ ಬಾಗಿಲು ಬಡಿಯುವ ಮುನ್ನವೇ ಅನುದಾನ ಬಿಡುಗಡೆ ಮಾಡಲಿ ಮೋದಿ ಸರ್ಕಾರ. ಆಗ ರಾಜ್ಯ ಬಿಜೆಪಿ ನಾಯಕರಿಗೆ ಎದೆಯೆತ್ತಿ ಓಡಾಡುವ, ಬೆನ್ನು ಚಪ್ಪರಿಸಿಕೊಳ್ಳುವ ನಿಜವಾದ ಅವಕಾಶ ಸಿಕ್ಕೀತು.

ಇದೀಗ ರೂ. 3,454 ಕೋಟಿ ರುಪಾಯಿ ಬರ ಪರಿಹಾರ ಸುಪ್ರೀಮ್ ಕೋರ್ಟ್ ಕೊಟ್ಟದ್ದೇ ವಿನಾ ಮೋದಿ ಕರುಣಿಸಿದ್ದು ಖಂಡಿತವಾಗಿಯೂ ಅಲ್ಲ. ನೂರು ಸಲ ಸುಳ್ಳು ಹೇಳಿದರೆ ಅದು ಸತ್ಯವಾಗಿಬಿಡುವುದಿಲ್ಲ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ನಮ್ಮನ್ನು ಬೆಂಬಲಿಸಿ

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಿಎಂ ಸಿದ್ದರಾಮಯ್ಯ ಮನೆಗೆ ಹೋಗುವ ಕಾಲ ಬಂದಿದೆ: ಛಲವಾದಿ ನಾರಾಯಣಸ್ವಾಮಿ

ಸಿಎಂ ಸಿದ್ದರಾಮಯ್ಯ ಅವರನ್ನು ರಕ್ಷಿಸಲು ಯಾರಿಂದಲೂ ಸಾಧ್ಯವಿಲ್ಲ. ಕಾಂಗ್ರೆಸ್ ನಾಯಕರೂ ಏನೂ...

ಕೇಂದ್ರ ಬಜೆಟ್ | ಬಿಹಾರ ರಸ್ತೆಗಳಿಗೆ ₹26,000 ಕೋಟಿ; ಶಿಕ್ಷಣ, ಉದ್ಯೋಗ, ಕೌಶಲ್ಯಕ್ಕೆ ₹1.48 ಲಕ್ಷ ಕೋಟಿ

ಮೂರನೇ ಅವಧಿಗೆ ಸರ್ಕಾರ ರಚಿಸಿರುವ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ...

ಗೌರಿ ಲಂಕೇಶ್‌ ಹತ್ಯೆ ಪ್ರಕರಣ: ವಿಶೇಷ ಕೋರ್ಟ್‌ ಸ್ಥಾಪನೆಯಲ್ಲಿ ವಿಳಂಬ; ಹೈಕೋರ್ಟ್‌ ಅಸಮಾಧಾನ

ಸಂಶೋಧಕ ಎಂ.ಎಂ ಕಲ್ಬುರ್ಗಿ ಮತ್ತು ದಿಟ್ಟ ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ...

ವಾಲ್ಮೀಕಿ ನಿಗಮ ಅಕ್ರಮ | ಇ.ಡಿ ವಿರುದ್ಧ ನೇರ ಸಂಘರ್ಷಕ್ಕೆ ಇಳಿದ ರಾಜ್ಯ ಸರ್ಕಾರ, ಗಾಂಧಿ ಪ್ರತಿಮೆ ಬಳಿ ಧರಣಿ

ವಾಲ್ಮೀಕಿ ನಿಗಮ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಹಾಗೂ ಮಾಜಿ...