ನಮ್ಮ ದೇಶವು ಶೇ. 24ರಷ್ಟು ಮಂದಿ ಯುವಜನತೆ ನಿರುದ್ಯೋಗಿಗಳಾಗಿದ್ದಾರೆ. ಇದು ಪ್ರಪಂಚದಲ್ಲೇ ಅತೀ ಹೆಚ್ಚು. ಆದರೆ ಕೇಂದ್ರ ಸರ್ಕಾರ ಈ ವಾಸ್ತವವನ್ನು ಮರೆಮಾಚಿ, ಆರ್ಥಿಕತೆಯಲ್ಲಿ ನಮ್ಮ ದೇಶ ಮುಂದುವರಿಯುತ್ತಿದೆ ಎಂಬ ಭ್ರಮೆ ಹರಡುತ್ತಿದೆ ಎಂದು ಖ್ಯಾತ ರಾಜಕೀಯ ಅರ್ಥಶಾಸ್ತ್ರಜ್ಞ ಪರಕಾಲ ಪ್ರಭಾಕರ್ ತಿಳಿಸಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ಜಾಗೃತ ಕರ್ನಾಟಕ ಆಯೋಜಿಸಿದ್ದ ‘2014ರ ನಂತರದ ಭಾರತ: ಭ್ರಮೆಯೇ ವಾಸ್ತವವಾಗಿʼ ಎಂಬ ವಿಚಾರದ ಕುರಿತು ಮಾತನಾಡಿದರು.
“ದೇಶದಲ್ಲಿ ಯುವಕರು ನಿರುದ್ಯೋಗದಿಂದಾಗಿ ಬಳಲುತ್ತಿದ್ದಾರೆ. ಇರಾನ್, ಲೆಬನಾನ್, ಸಿರಿಯಾ ದೇಶಗಳಿಗಿಂತೂ ಹೆಚ್ಚು ಜನ ನಿರುದ್ಯೋಗಿಗಳು ನಮ್ಮಲ್ಲಿದ್ದಾರೆ. ನಮ್ಮ ದೇಶದ ನಿರುದ್ಯೋಗದ ಪ್ರಮಾಣ 24ರಷ್ಟಾದರೆ, ನಮ್ಮ ನೆರೆಯ ರಾಷ್ಟ್ರ ಬಾಂಗ್ಲಾದೇಶದ ನಿರುದ್ಯೋಗದ ಪ್ರಮಾಣ 12 ಶೇ. ಅಂದರೆ ನಮ್ಮ ಅರ್ಧದಷ್ಟು. ಇದು ದೇಶದ ಜನರಿಗೆ ತಿಳಿಯದಂತೆ ವ್ಯವಸ್ಥಿತವಾಗಿ ಮರೆಮಾಚಲಾಗುತ್ತಿದೆ” ಎಂದು ತಿಳಿಸಿದರು.
ನಮ್ಮ ಹಣದುಬ್ಬರದ ದರ ತಾಳಿಕೊಳ್ಳಲು ಸಾಧ್ಯವಾಗದ ಮಟ್ಟಕ್ಕೆ ಏರಿದೆ ಎಂದು ರಿಸರ್ವ್ ಬ್ಯಾಂಕ್ ಹೇಳಿದೆ. ಆಂತರಿಕ ಉಳಿತಾಯ ದರ ಶೇ.5ಕ್ಕಿಂತಲೂ ಕಡಿಮೆ ಇದೆ ಎಂದು ವಿವರಿಸಿದರು.
ಬಡತನ, ಹಸಿವಿನ ಸೂಚ್ಯಂಕ ಹೆಚ್ಚಾಗುತ್ತಿದೆ. ಆದರೆ ಈ ವಾಸ್ತವಾಂಶಗಳನ್ನು ಸರ್ಕಾರ ವ್ಯವಸ್ಥಿತವಾಗಿ ಮರೆಮಾಚುತ್ತಿದೆ. ಭಾರತ ಜಗತ್ತಿನಲ್ಲೇ ಮುಂದುವರಿಯುತ್ತಲಿರುವ ರಾಷ್ಟ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂಬ ಭ್ರಮೆಯನ್ನು ವ್ಯವಸ್ಥಿತವಾಗಿ ತೇಲಿ ಬಿಡಲಾಗುತ್ತಿದೆ. ವಾಸ್ತವಗಳನ್ನು ದೇಶದ ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ನಮ್ಮ ದೇಶ ಸಂಸದೀಯ ವ್ಯವಸ್ಥೆ ಹೊಂದಿದೆ. ಆದರೆ ಇಂದು ಕಾನೂನುಗಳನ್ನು ಯಾವುದೇ ಚರ್ಚೆಗಳಿಲ್ಲದೆಯೇ ಪಾಸ್ ಮಾಡಲಾಗುತ್ತಿದೆ. ಪ್ರಶ್ನಿಸಿದವರನ್ನು ಸಂಸತ್ತಿನಿಂದಲೇ ಅಮಾನತು ಮಾಡಲಾಗುತ್ತಿದೆ. ಮೂರು ಕರಾಳ ಕೃಷಿ ಕಾನೂನನ್ನು ದೇಶದಲ್ಲಿ ಜಾರಿಗೆ ತರಲಾಯಿತು. ರೈತರು ವಿರೋಧ ವ್ಯಕ್ತಪಡಿಸಿ, ನಿರಂತರ ಪ್ರತಿಭಟನೆ ನಡೆಸಿದ್ದರಿಂದ ಹಿಂದೆ ಪಡೆಯುವುದಾಗಿ ಪ್ರಧಾನಿಗಳು ಟಿವಿ ಮಾಧ್ಯಮದ ಪರದೆಯ ಮೂಲಕ ಘೋಷಿಸಿದರು. ಆ ಬಳಿಕ ಯಾವುದೇ ರೀತಿಯ ಚರ್ಚೆ ಇಲ್ಲದೆಯೇ ಸಂಸತ್ತಿನಲ್ಲಿ ವಾಪಸ್ ಪಡೆಯಲಾಯಿತು. ಕೃಷಿ ಕಾನೂನು ಜಾರಿಗೆ ತಂದ ಉದ್ದೇಶವಾಗಲೀ, ಹಿಂಪಡೆದ ಉದ್ದೇಶವಾಗಲೀ ಸರ್ಕಾರ ಈವರೆಗೆ ತಿಳಿಸಿಲ್ಲ. ಇದು ನಿಜಕ್ಕೂ ಅಪಾಯಕಾರಿ ಸನ್ನಿವೇಶ” ಎಂದು ಪರಕಾಲ ಪ್ರಭಾಕರ್ ಅಭಿಪ್ರಾಯಿಸಿದರು.