ಮುಂದಿನ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷವು ಮೈತ್ರಿ ವಿಚಾರ ಅಧಿಕೃತವಾಗಿ ಘೋಷಣೆಯಾದ ಬೆನ್ನಲ್ಲೇ, ಜೆಡಿಎಸ್ ರಾಜ್ಯ ವಕ್ತಾರೆ ಹುದ್ದೆಗೆ ಮಂಗಳೂರಿನ ಯು ಟಿ ಫರ್ಝಾನ ರಾಜೀನಾಮೆ ನೀಡಿದ್ದಾರೆ.
ಈ ಬಗ್ಗೆ ತನ್ನ ಫೇಸ್ಬುಕ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಜೆಡಿಎಸ್ನ ಮಾಧ್ಯಮ ಮುಖ್ಯಸ್ಥರಾದ ಶ್ರೀಕಂಠೇಗೌಡ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದಾರೆ.
ರಾಜೀನಾಮೆ ಪತ್ರದಲ್ಲಿ ಕನ್ನಡ ನಾಡಿನ ಸಮೃದ್ಧಿ ಮತ್ತು ಜಾತ್ಯಾತೀತ ನಿಲುವುಗಳು ನನ್ನ ಜೀವನದ ಪ್ರಧಾನ ಆಶಯಗಳಾಗಿದ್ದು, ಆ ನಿಟ್ಟಿನಲ್ಲಿ ಶ್ರಮಿಸುವ ಸಲುವಾಗಿ ನಾನು ತಮ್ಮ ಪಕ್ಷವನ್ನು ಸೇರಿದ್ದೆ. ಆದರೆ ಬದಲಾದ ಕಾಲಘಟ್ಟದಲ್ಲಿ ನನ್ನ ನಿಲುವುಗಳು ಮತ್ತು ಪಕ್ಷದ ನಿಲುವುಗಳಲ್ಲಿ ಹೊಂದಾಣಿಕೆಯಾಗದ ಕಾರಣ ಸೈದ್ಧಾಂತಿಕ ಭಿನ್ನಾಭಿಪ್ರಾಯಗಳಿಂದಾಗ ಜೆಡಿಎಸ್ ಪಕ್ಷ ನೀಡಿದ್ದ ರಾಜ್ಯ ವಕ್ತಾರೆ ಹುದ್ದೆಗೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಗೌರವದಿಂದ ನಡೆಸಿಕೊಂಡ ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಯು ಟಿ ಆಯಿಶಾ ಫರ್ಝಾನ, ಮೂಲತಃ ಕರಾವಳಿ ನಗರವಾದ ಮಂಗಳೂರಿನವರಾಗಿದ್ದು, ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು. ಆ ಬಳಿಕ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಅವರಿಗೆ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ, ರಾಜ್ಯ ವಕ್ತಾರೆ ಹುದ್ದೆಗೆ ಆಯ್ಕೆ ಮಾಡಿದ್ದರು.
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ(ಸೆಪ್ಟೆಂಬರ್ 22) ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಔಪಚಾರಿಕವಾಗಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಸೇರ್ಪಡೆಗೊಂಡ ಬೆನ್ನಲ್ಲೇ, ಈ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ.