”ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ” ಎಂದು ಪ್ರತಿಪಕ್ಷಗಳ ವಿರುದ್ಧ ಆಡಳಿತಾರೂಢ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಕಾಂಗ್ರೆಸ್ ಟ್ವೀಟ್ ಮಾಡಿದ್ದು, “ಕನ್ನಡಿಗರು ಭರವಸೆಯಿಟ್ಟು ಗೆಲ್ಲಿಸಿದ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸಿದರೆ ಜನರೇ ದಂಗೆ ಏಳಲಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.
“ಕನ್ನಡಿಗರು ಅತೀವ ಭರವಸೆಯನ್ನಿಟ್ಟು ಗೆಲ್ಲಿಸಿದ ನಮ್ಮ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸಿದರೆ ಜನರೇ ದಂಗೆ ಏಳುತ್ತಾರೆ. ಈಗ ಸಿಂಗಾಪುರಕ್ಕೆ ಹೋದವರು ನಂತರ ಮಂಗಾಪುರಕ್ಕೆ ಓಡುವ ಸ್ಥಿತಿ ಉಂಟಾಗಲಿದೆ. ಪದೇಪದೆ ಪ್ರಜಾಪ್ರಭುತ್ವದ ಆಶಯಗಳ ವಿರುದ್ಧ ಕೆಲಸ ಮಾಡುವ ಬಿಜೆಪಿ ಈಗಲಾದರೂ ಜನರ ತೀರ್ಪನ್ನು ಗೌರವಿಸುವುದನ್ನು ಕಲಿಯಲಿ” ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.
“ಜೆಡಿಎಸ್ ನಾಯಕರು ಬಿಜೆಪಿಯ ಲೆಟರ್ ಹೆಡ್ ಮೇಲೆ ಸಹಿ ಮಾಡಿ ತಮ್ಮದು ಅಡ್ರೆಸ್ ಇಲ್ಲದ ಪಕ್ಷ ಎಂದು ಸಾಬೀತು ಮಾಡಿದ್ದರು. ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿಯವರು ಜೆಡಿಎಸ್ ಕಚೇರಿಗೆ ತೆರಳಿ, ಪತ್ರಿಕಾಗೋಷ್ಠಿಗೆ ಜೆಡಿಎಸ್ ನೆರವು ಪಡೆದು ತಮಗೆ ದಮ್ಮು, ತಾಕತ್ತು ಇಲ್ಲ ಎಂದು ಸಾಬೀತು ಮಾಡಿದ್ದರು. ಒಬ್ಬರಿಗೆ ಹಲ್ಲಿಲ್ಲ, ಮತ್ತೊಬ್ಬರಿಗೆ ಕಡಲೆ ಇಲ್ಲ ಎಂಬಂತಹ ಸ್ಥಿತಿಯಲ್ಲಿರುವ ವಿಪಕ್ಷಗಳು ಕಾಂಗ್ರೆಸ್ ಸರ್ಕಾರವನ್ನು ಬೀಳಿಸುತ್ತೇವೆ ಎನ್ನುವುದು ನರಿಯೊಂದು ದ್ರಾಕ್ಷಿಗೆ ಆಸೆ ಪಟ್ಟಂತೆ” ಎಂದು ಕಾಂಗ್ರೆಸ್ ವ್ಯಂಗ್ಯವಾಡಿದೆ.
“ಜೆಡಿಎಸ್ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಸಿಂಗಾಪುರಕ್ಕೆ ತೆರಳಿದ್ದು, ಸರ್ಕಾರ ಅಸ್ಥಿರಗೊಳಿಸಲು ಸಂಚು ಹೂಡುತ್ತಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಇತ್ತೀಚೆಗೆ ದೂರಿದ್ದರು. ಈ ಮಧ್ಯೆ, ಕಾಂಗ್ರೆಸ್ ಎಂಎಲ್ಸಿ ಬಿ ಕೆ ಹರಿಪ್ರಸಾದ್ ಅವರು ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನದ ಧಾಟಿಯಲ್ಲಿ ಮಾತನಾಡಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿತ್ತು.
ಈ ಸುದ್ದಿ ಓದಿದ್ದೀರಾ? ಸಿ ಟಿ ರವಿ ರಾಜ್ಯಾಧ್ಯಕ್ಷ, ಯತ್ನಾಳ್ ವಿಪಕ್ಷ ನಾಯಕ ಎಂದು ಸುಳಿವು ನೀಡಿದ ಎಚ್ ಡಿ ದೇವೇಗೌಡ
ಕಾಂಗ್ರೆಸ್ ಟೀಕೆಗೆ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದು, ಬಿ ಕೆ ಹರಿಪ್ರಸಾದ್ ಅವರ ಹೇಳಿಕೆಯಿಂದ ಜನರ ಗಮನ ಬೇರೆಡೆ ಸೆಳೆಯುವ ಸಲುವಾಗಿ ಡಿ ಕೆ ಶಿವಕುಮಾರ್ ಅವರು ಸಿಂಗಾಪುರದ ಕಥೆಕಟ್ಟಿದ್ದಾರೆ ಎಂದು ಹೇಳಿದ್ದರು. ಜೆಡಿಎಸ್ ಶಾಸಕ ಜಿ ಟಿ ದೇವೇಗೌಡ ಅವರು, ಕಾಂಗ್ರೆಸ್‌ನಲ್ಲಿ ಮೂಲ ಮತ್ತು ವಲಸಿಗರ ನಡುವೆ ಅಸಮಾಧಾನ ಸ್ಫೋಟಗೊಂಡಿದೆ. ರಾಜ್ಯ ಸರ್ಕಾರವನ್ನು ನಾವ್ಯಾರು ಕಡವುವ ಅಗತ್ಯವಿಲ್ಲ. ತಾನಾಗಿಯೇ ಬೀಳಲಿದೆ ಎಂಬ ದಾಟಿಯಲ್ಲಿ ಹೇಳಿಕೆ ನೀಡಿದ್ದರು.