ಬಿಹಾರದ ಆರೋಗ್ಯ ಇಲಾಖೆಯಲ್ಲಿ ಗಂಭೀರ ಅಕ್ರಮಗಳು ನಡೆದಿದೆ. ಬಿಹಾರದ ಬಿಜೆಪಿ ನಾಯಕರು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್‌ಗಿಂತ ಅಧಿಕ ಭಷ್ಟರು ಎಂದು ಜನ ಸುರಾಜ್ ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ ಶುಕ್ರವಾರ ಆರೋಪಿಸಿದ್ದಾರೆ.
ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಕಿಶೋರ್ ಬಿಹಾರದ ಮಾಜಿ ಬಿಜೆಪಿ ಅಧ್ಯಕ್ಷರೂ ಆಗಿರುವ ರಾಜ್ಯ ಆರೋಗ್ಯ ಸಚಿವ ಮಂಗಲ್ ಪಾಂಡೆ ಅವರ ಮೇಲೆ ನೇರ ವಾಗ್ದಾಳಿ ನಡೆಸಿದರು. ಹಾಗೆಯೇ ಬಿಜೆಪಿ ನಾಯಕ ದಿಲೀಪ್ ಜೈಸ್ವಾಲ್ ಮೇಲೆಯೂ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಇದನ್ನು ಓದಿದ್ದೀರಾ? ಜೆಡಿಯು ನೂತನ ಅಧ್ಯಕ್ಷರಾಗಿ ನಿತೀಶ್ ಕುಮಾರ್ ನೇಮಕ ಸಾಧ್ಯತೆ
“ರಾಜ್ಯ ಆರೋಗ್ಯ ಇಲಾಖೆಯು ಸುಮಾರು 28 ಲಕ್ಷ ರೂ. ಬೆಲೆಯ ‘1,200 ಆಂಬ್ಯುಲೆನ್ಸ್‌ಗಳಿಗೆ ಆರ್ಡರ್ ಮಾಡಿದೆ. ಆದರೆ ಇದರ ಬೆಲೆಯು ಒಡಿಶಾ ಮತ್ತು ಉತ್ತರ ಪ್ರದೇಶದಂತಹ ರಾಜ್ಯಗಳು ಪಾವತಿಸುವ ಮೊತ್ತಕ್ಕಿಂತ ಎರಡು ಪಟ್ಟು ಅಧಿಕವಾಗಿದೆ. ಕೋವಿಡ್ ಸಾಂಕ್ರಾಮಿಕ ರೋಗದ ಮಧ್ಯೆ, ಪಾಂಡೆ ದೆಹಲಿಯಲ್ಲಿ ತನ್ನ ಪತ್ನಿಯ ಹೆಸರಿನಲ್ಲಿ ಫ್ಲಾಟ್ ಖರೀದಿಸಿದ್ದರು. ಜೈಸ್ವಾಲ್ ಈ ವ್ಯವಹಾರದಲ್ಲಿ ಅವರಿಗೆ ಸಹಾಯ ಮಾಡಿದ್ದರು” ಎಂದು ಪ್ರಶಾಂತ್ ಕಿಶೋರ್ ದೂರಿದ್ದಾರೆ.
“ಜೈಸ್ವಾಲ್ ದೊಡ್ಡ ಪಾಲನ್ನು ಹೊಂದಿರುವ ಕಿಶನ್‌ಗಂಜ್‌ನಲ್ಲಿರುವ ವೈದ್ಯಕೀಯ ಕಾಲೇಜಿಗೆ ಡೀಮ್ಡ್ ವಿಶ್ವವಿದ್ಯಾಲಯದ ಸ್ಥಾನಮಾನವನ್ನು ನೀಡುವ ಮೂಲಕ ಪಾಂಡೆ ತಮ್ಮ ಕೃತಜ್ಞತೆಯನ್ನು ತೋರಿಸಿದ್ದಾರೆ. ಜೈಸ್ವಾಲ್ 2019ರ ಆಗಸ್ಟ್ 6ರಂದು ಪಾಂಡೆ ಅವರ ತಂದೆಯ ಖಾತೆಗೆ 25 ಲಕ್ಷ ರೂ.ಗಳನ್ನು ವರ್ಗಾಯಿಸಿದ್ದಾರೆ. ಆ ಹಣವನ್ನು ಆಗಿನ ಆರೋಗ್ಯ ಸಚಿವರ ಪತ್ನಿಯ ಹೆಸರಿನಲ್ಲಿ ಫ್ಲಾಟ್ ಖರೀದಿಸಲು ಬಳಸಲಾಗಿದೆ. ದೆಹಲಿಯ ದ್ವಾರಕಾದಲ್ಲಿ ಖರೀದಿಸಿದ ಫ್ಲಾಟ್‌ನ ದಾಖಲೆಯಲ್ಲಿ ಜೈಸ್ವಾಲ್ ಸಾಕ್ಷಿಯಾಗಿ ಸಹಿ ಮಾಡಿದ್ದಾರೆ” ಎಂದು ಕಿಶೋರ್ ಆರೋಪಿಸಿದ್ದಾರೆ.
ಪಾಂಡೆ ಜೈಸ್ವಾಲ್ ಅವರಿಂದ ಈ ಮೊತ್ತವನ್ನು ಸಾಲವಾಗಿ ಪಡೆದಿದ್ದರೂ ಸಹ, 2020ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಚುನಾವಣಾ ಅಫಿಡವಿಟ್‌ನಲ್ಲಿ ಇದರ ಉಲ್ಲೇಖ ಏಕೆ ಮಾಡಿಲ್ಲ ಎಂದು ಕಿಶೋರ್ ಪ್ರಶ್ನಿಸಿದರು.
“ಬಿಜೆಪಿಗರು ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಅವರಿಗೆ ಮೇವು ಹಗರಣ, ಹೋಟೆಲ್‌ಗಳಿಗೆ ಭೂಮಿ ಮತ್ತು ಉದ್ಯೋಗಗಳಿಗೆ ಭೂಮಿ ಮುಂತಾದ ರೈಲ್ವೆ ಹಗರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ದಾಳಿ ನಡೆಸಲು ಹೆಚ್ಚು ಇಷ್ಟಪಡುವ ಬಿಹಾರದ ಬಿಜೆಪಿ ನಾಯಕರು ತಾವು ಕಳಂಕರಹಿತರು ಎಂದು ಹೇಳಿಕೊಳ್ಳುತ್ತಾರೆ. ಆದರೆ ವಾಸ್ತವದಲ್ಲಿ ಅವರು ಲಾಲು ಪ್ರಸಾದ್‌ಗಿಂತ ಹೆಚ್ಚು ಭ್ರಷ್ಟರು” ಎಂದು ದೂರಿದ್ದಾರೆ.
