ತನ್ನ ಪುತ್ರ ಕೆ ಇ ಕಾಂತೇಶ್ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಬಳಿಕ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡುವುದಾಗಿ ಹೇಳಿರುವ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಮನವೊಲಿಸಲು ಬಿಜೆಪಿ ನಾಯಕರು ನಿರಂತರ ಪ್ರಯತ್ನಿಸುತ್ತಿದ್ದು, ವಿಫಲರಾಗಿದ್ದಾರೆ.
“ನನ್ನ ಮಗನಿಗೆ ಟಿಕೆಟ್ ನೀಡುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಆರೋಪಿಸಿರುವ ಈಶ್ವರಪ್ಪ, ಈಗ ಯಡಿಯೂರಪ್ಪರ ಪುತ್ರ ಬಿ ವೈ ರಾಘವೇಂದ್ರ ವಿರುದ್ಧ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆಗೆ ಸಜ್ಜಾಗಿದ್ದಾರೆ. ರಾಘವೇಂದ್ರ ಅವರ ಸೋಲಿನ ಭೀತಿ ಈಗ ಬಿಜೆಪಿಗೆ ಎದುರಾಗಿದೆ.
ಇದನ್ನು ಓದಿದ್ದೀರಾ? ಲೋಕಸಭೆ ಚುನಾವಣೆ | ಬಿಎಸ್‌ವೈ ಕುಟುಂಬದ ವಿರುದ್ಧ ಅಖಾಡಕ್ಕಿಳಿದ ಈಶ್ವರಪ್ಪ
ಭಾನುವಾರ ಬೆಳಗ್ಗೆಯೇ ಬಿಜೆಪಿ ನಾಯಕರುಗಳು ಈಶ್ವರಪ್ಪ ಮನೆಗೆ ಧಾವಿಸಿದ್ದಾರೆ. ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ, ವಿಧಾನ ಪರಿಷತ್ ಸದಸ್ಯ ಎನ್ ರವಿಕುಮಾರ್, ಡಿಎಸ್ ಅರುಣ್ ಹೈಕಮಾಂಡ್ ಸೂಚನೆಯ ಮೇರೆಗೆ ಈಶ್ವರಪ್ಪ ಮನೆಗೆ ಆಗಮಿಸಿದ್ದು, ಮನವೊಲಿಸಲು ಸಾಧ್ಯವಾಗದೆ ವಾಪಸ್ ಹೊರಟಿದ್ದಾರೆ.
ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ನಿವಾಸದಲ್ಲಿ ಬಿಜೆಪಿ ನಾಯಕರುಗಳು ಈಶ್ವರಪ್ಪರ ಜೊತೆ ಸುಮಾರು ಒಂದು ಗಂಟೆಗಳ ಕಾಲ ಮಾತುಕತೆ ನಡೆಸಿ ಮನವೊಲಿಸುವ ಯತ್ನವನ್ನು ಮಾಡಿದ್ದಾರೆ. ಜೊತೆಗೆ ಪ್ರಧಾನಿ ಮೋದಿ ಆಗಮಿಸಲಿರುವ ಸಮಾವೇಶಕ್ಕೆ ಆಹ್ವಾನವನ್ನೂ ನೀಡಿದ್ದಾರೆ. ಆದರೆ ಈಶ್ವರಪ್ಪ ಮಾತ್ರ ಸಂಧಾನಕ್ಕೆ ಮಣಿಯದ ಕಾರಣ ಬಿಜೆಪಿ ನಾಯಕರು ವಾಪಸ್ ಮರಳಿರುವುದಾಗಿ ತಿಳಿದುಬಂದಿದೆ.
ಈಶ್ವರಪ್ಪ ಶನಿವಾರ ಸಾಗರ ಬಳಿಯ ವರದಾಪುರದ ಶ್ರೀಧರ ಆಶ್ರಮಕ್ಕೆ ಭೇಟಿ ನೀಡಿದ್ದು ಬಳಿಕ ಲೋಕಸಭೆ ಚುನಾವಣೆಗೆ ಪ್ರಚಾರ ಶುರು ಮಾಡಿದ್ದಾರೆ. ಇನ್ನು ಪ್ರಧಾನಿ ನರೇಂದ್ರ ಮೋದಿ ಸೋಮವಾರ ಚುನಾವಣಾ ಪ್ರಚಾರಕ್ಕಾಗಿ ಶಿವಮೊಗ್ಗಕ್ಕೆ ಆಗಮಿಸಲಿದ್ದಾರೆ. ಈ ನಡುವೆ ಭಾನುವಾರ ಬಿಜೆಪಿ ನಾಯಕರುಗಳು ಈಶ್ವರಪ್ಪರ ಮನವೊಲಿಸುವ ಯತ್ನ ಮಾಡಿದರು.
ಇದನ್ನು ಓದಿದ್ದೀರಾ? ಗುಜರಾತ್ | ಹಾಸ್ಟೆಲ್‌ನಲ್ಲಿ ನಮಾಝ್ ಮಾಡುತ್ತಿದ್ದ ವಿದೇಶಿ ವಿದ್ಯಾರ್ಥಿಗಳ ಮೇಲೆ ಗುಂಪಿನಿಂದ ಹಲ್ಲೆ; ನೋಡುತ್ತಾ ನಿಂತ ಪೊಲೀಸರು!
ಇನ್ನೊಂದೆಡೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಬಸವರಾಜ್ ಬೊಮ್ಮಾಯಿ ಮತ್ತು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸಭೆ ನಡೆಸಿದ್ದಾರೆ ಎಂದು ವರದಿಯಾಗಿದೆ. ಇನ್ನು “ಈಶ್ವರಪ್ಪ ತನ್ನ ಪುತ್ರನಿಗೆ ಟಿಕೆಟ್ ನೀಡಿಲ್ಲ ಎಂಬ ಸಿಟ್ಟಲ್ಲಿದ್ದಾರೆ. ಚುನಾವಣೆಗೆ ಇನ್ನೂ ತುಂಬಾ ದಿನ ಇದೆ. ಅಷ್ಟರೊಳಗೆ ಬಂಡಾಯ ಶಮನವಾಗಲಿದೆ. ಎಲ್ಲವೂ ಸರಿಯಾಗಲಿದೆ” ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.