ವಿಧಾನಸೌಧದಲ್ಲಿ ಪಾಕಿಸ್ತಾನ ಪರವಾದ ಘೋಷಣೆ ಹಾಕಿದ್ದಾರೆ ಎಂದು ವಿವಾದ ಸೃಷ್ಟಿಸಿರುವ ಬಿಜೆಪಿ ಪಾಳಯವು, ಕಾಂಗ್ರೆಸ್ ಸರ್ಕಾರವಯ ಹಿಂದೂ ವಿರೋಧಿ ನೀತಿ ಹಾಗೂ ದೇಶದ್ರೋಹಿಗಳನ್ನು ಬೆಂಬಲಿಸುತ್ತಿದೆ. ಹಾಗಾಗಿ, ಸರ್ಕಾರವನ್ನು ವಜಾಗೊಳಿಸಿ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರನ್ನು ಭೇಟಿಯಾಗಿ, ಮನವಿ ಸಲ್ಲಿಸಿದೆ.
ಗುರುವಾರ ಸಂಜೆ ರಾಜಭವನಕ್ಕೆ ತೆರಳಿದ ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದ ಬಿಜೆಪಿ ನಿಯೋಗವು, “ಕಾಂಗ್ರೆಸ್ ಸರ್ಕಾರವು ಹಿಂದೂ ವಿರೋಧಿ ನೀತಿಗಳನ್ನು ಹಾಗೂ ದೇಶದ್ರೋಹಿಗಳನ್ನು ಬೆಂಬಲಿಸುವ ಮನಸ್ಥಿತಿಯನ್ನು ಹೊಂದಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಹಾಗಾಗಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು. ಆಗ ಮಾತ್ರ ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ” ಎಂದುಥಾವರ್ ಚಂದ್ ಗೆಹ್ಲೋಟ್ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದೆ.
ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿ ಹಾಗೂ ದೇಶದ್ರೋಹಿಗಳನ್ನು ಬೆಂಬಲಿಸುವ ಮನಸ್ಥಿತಿಯನ್ನು ಖಂಡಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾಗೊಳಿಸಬೇಕು, ಆಗ ಮಾತ್ರ ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ ಎಂದು ರಾಜ್ಯಪಾಲರಾದ ಗೌರವಾನ್ವಿತ ಶ್ರೀ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ… pic.twitter.com/OIUzPwoZCJ
— R. Ashoka (ಆರ್. ಅಶೋಕ) (@RAshokaBJP) February 29, 2024
ಬಿಜೆಪಿಯ ಈ ನಿಯೋಗದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ, ಪರಿಷತ್ ಸಚೇತಕ ರವಿಕುಮಾರ್, ವಿಧಾನ ಪರಿಷತ್ ಸದಸ್ಯ ತುಳಸಿ ಮುನಿರಾಜು ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಇದನ್ನು ಓದಿದ್ದೀರಾ? ಎಎನ್‌ಐ ಸುದ್ದಿಸಂಸ್ಥೆಯ ಪತ್ರಕರ್ತ ಕಂಡ ಸತ್ಯ; ‘ಅಲ್ಲಿ ಕೂಗಿದ್ದು ನಾಸೀರ್ ಸಾಬ್ ಜಿಂದಾಬಾದ್’
ವಿಧಾನಸೌಧದ ಆವರಣದಲ್ಲಿ ರಾಜ್ಯಸಭಾ ಚುನಾವಣೆಯಲ್ಲಿ ಗೆದ್ದಿದ್ದ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಗೆಲುವಿನ ಸಂಭ್ರಮಾಚರಣೆ ವೇಳೆ ಇದೇ ವ್ಯಕ್ತಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಇದನ್ನೇ ಬಳಸಿಕೊಂಡಿರುವ ಬಿಜೆಪಿ ನಾಯಕರು ವಿವಾದವನ್ನಾಗಿಸಿದ್ದಾರೆ. ಆದರೆ, ಕೆಲವೊಂದು ವಿಡಿಯೋಗಳಲ್ಲಿ ‘ನಾಸಿರ್ ಸಾಬ್ ಜಿಂದಾಬಾದ್’ ಎಂದು ಕೂಗಿರುವುದು ಸ್ಪಷ್ಟವಾಗಿ ತಿಳಿದುಬಂದಿತ್ತು. ಅಲ್ಲದೇ, ಈ ಘಟನೆಯ ಸಂದರ್ಭ ಸ್ಥಳದಲ್ಲಿದ್ದ ಕೆಲವು ಪ್ರಾಮಾಣಿಕ ಪತ್ರಕರ್ತರು, ಅಲ್ಲಿ ಪಾಕ್ ಪರ ಘೋಷಣೆ ಕೂಗಿಲ್ಲ, ‘ನಾಸಿರ್ ಸಾಬ್ ಜಿಂದಾಬಾದ್’ ಎಂದು ಕೂಗಿದ್ದು ನಮಗೆ ಕೇಳಿಸಿದ್ದವು ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.
