ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಒಳಗೊಳಗೆ ಅಸಮಾಧಾನ ಭುಗಿಲೆದ್ದಿರುವ ಹೊತ್ತಿನಲ್ಲೇ ಬಿಜೆಪಿ ಪಾಳಯದ ಅತೃಪ್ತ ನಾಯಕ, ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಹಿರಂಗವಾಗಿಯೇ ಸಿಡಿದೆದ್ದಿದ್ದಾರೆ.
ರಾಜ್ಯಾಧ್ಯಕ್ಷ ಮತ್ತು ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಪಕ್ಷದೊಳಗೆ ಅಸಮಾಧಾನ ಉಂಟಾಗಿರುವ ಹಿನ್ನೆಲೆ ಇಂದು ಸಂಜೆ ನಡೆಯಲಿರುವ ಶಾಸಕಾಂಗ ಪಕ್ಷದ ಸಭೆಗೆ ವೀಕ್ಷಕರಾಗಿ ಆಗಮಿಸಿರುವ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಶ್ಯಂತ್ ಕುಮಾರ್ ಗೌತಮ್ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ್ದಾರೆ.
ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಯತ್ನಾಳ್, ‘ಕರ್ನಾಟಕದಲ್ಲಿ ಆಗಿರುವ ಬೆಳವಣಿಗೆ, ಚುನಾವಣೆಯಲ್ಲಿ ಯಾರು ಪಕ್ಷಕ್ಕೆ ದ್ರೋಹ ಮಾಡಿದ್ದಾರೆ, ಒಂದು ವರ್ಗದ ಕೇಂದ್ರೀಕೃತವಾಗಿ ಮಾಡಿದ್ದರು ಎಂದು ವಿವರಿಸಿದ್ದೇನೆ. ಅವರಿಗೆ ಎಷ್ಟೋ ವಿಷಯ ಗೊತ್ತಿರಲಿಲ್ಲ, ನಾನು ಧೈರ್ಯದಿಂದ ಎಲ್ಲವನ್ನೂ ಮುಚ್ಚುಮರೆ ಇಲ್ಲದೆಯೇ ಹೇಳಿದ್ದೇನೆ. ವರಿಷ್ಠರು ಕೆಲವೇ ಚೇಲಾಗಳ ಮಾತು ಕೇಳಿ ನಿರ್ಧಾರ ತೆಗೆದುಕೊಳ್ಳಬಾರದು, ಕೆಲವರು ಬ್ಲ್ಯಾಕ್ ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ, ನಾನು ಅಂಜಲ್ಲ ಎಂದು ಹೇಳಿದ್ದೇನೆ. ಇಬ್ಬರೂ ಬಹಳ ಖುಷಿಯಾದರು’ ಎಂದು ಹೇಳಿದರು.
Smt @nsitharaman interacted with Shri Basavaraj S Bommai (@BSBommai) at his residence in Bengaluru. pic.twitter.com/3Hm9wPWlCK
— Nirmala Sitharaman Office (@nsitharamanoffc) November 17, 2023
‘ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ. ಪಕ್ಷದ ಅಧ್ಯಕ್ಷರು ಮತ್ತು ಪ್ರಧಾನಿಗೆ ಹೇಳುತ್ತೇವೆ ಎಂದು ಅವರು ಹೇಳಿದ್ದಾರೆ. ನಿಮ್ಮನ್ನು ಮನೆಗೆ ಕರೆಸುವಷ್ಟು ದೊಡ್ಡ ಮನೆ ನಂದಲ್ಲ ಎಂದು ಹೇಳಿದೆ. ಅದಕ್ಕೆ ನನ್ನ ಮನೆಯೂ ಸಣ್ಣದಿದೆ, ಮುಂದಿನ ಸಲ ನನ್ನ ಮನೆ ತೋರಿಸುತ್ತೇನೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು’ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಈ ಹಿಂದೆ ಎಡಪಂಥೀಯರ ‘ಎಕೋ ಚೇಂಬರ್’ ಒಳಗಿದ್ದೆ: ಮೋದಿ ಪರವಾಗಿ ಒಲವು ತೋರಿದ ಶೆಹ್ಲಾ ರಶೀದ್ ಹೇಳಿಕೆ
ನನ್ನನ್ನು ಖರೀದಿ ಮಾಡುವುದಕ್ಕೆ ಆಗುವುದಿಲ್ಲ. ನಿನ್ನೆ ಒಬ್ಬ ಬಂದಿದ್ದ. ಆದರೆ ಅದೆಲ್ಲ ಆಗದ ಕೆಲಸ ಎಂದಿದ್ದೇನೆ. ನಿನ್ನಂಥವರನ್ನ ಹತ್ತು ಜನರನ್ನು ಖರೀದಿ ಮಾಡುವ ಶಕ್ತಿ ನನಗಿದೆ ಎಂದು ಹೇಳಿ, ವಾಪಸ್ ಕಳಿಸಿದ್ದೇನೆ. ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ, ಶಾಸಕಾಂಗ ಪಕ್ಷದ ಸಭೆಗೆ ಹೋಗುತ್ತೇನೆ. ಅಲ್ಲಿ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದ ಯತ್ನಾಳ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಪಕ್ಷ ಕೇವಲ ಒಂದು ಕುಟುಂಬದ ಸೊತ್ತಾಗಬಾರದು. ಉತ್ತರ ಕರ್ನಾಟಕಕ್ಕೂ ಪ್ರಾಮುಖ್ಯತೆ ದೊರಕಬೇಕೆಂದು ಕೇಳಿದ್ದೇನೆ. ನನ್ನ ಮನೆಗೆ ಬಂದ ಉಸ್ತುವಾರಿಗಳಿಗೂ ಇದೇ ಮಾತನ್ನು ಹೇಳಿದ್ದೇನೆ ಎಂದು ಅವರು ತಿಳಿಸಿದರು.
ರಾಜ್ಯಾಧ್ಯಕ್ಷರಾದ ಶ್ರೀ @BYVijayendra. ಅವರು ಕೇಂದ್ರ ವಿತ್ತ ಸಚಿವರಾದ ಶ್ರೀಮತಿ @nsitharaman ಅವರನ್ನು ಭೇಟಿ ಮಾಡಿದರು.
ಜಾಗತಿಕ ಆರ್ಥಿಕತೆಯಲ್ಲಿ ಭಾರತವನ್ನು ಪ್ರಮುಖ ಆರ್ಥಿಕತೆಯನ್ನಾಗಿಸುವಲ್ಲಿನ ಸಚಿವರ ಪಾತ್ರವನ್ನು ಪ್ರಶಂಸಿಸಿದರು. ಅನೇಕ ವಿಷಯಗಳ ಕುರಿತು ಚರ್ಚಿಸಿ, ಮಾರ್ಗದರ್ಶನ ಪಡೆದರು. pic.twitter.com/ctfpSYAcNc
— BJP Karnataka (@BJP4Karnataka) November 17, 2023
ವಿಪಕ್ಷ ನಾಯಕನ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು, ಅದರಲ್ಲಿ ರಾಜಿಯೇ ಇಲ್ಲ ಎಂದು ಖಡಕ್ ಆಗಿ ಹೇಳಿದ ಯತ್ನಾಳ್, ದಕ್ಷಿಣ ಕರ್ನಾಟಕದವರೇ ಆಗಬೇಕಾ? ಮಂಗಳೂರು ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರು ಇದ್ದಾರೆ? ಬಹಳಷ್ಟು ಶಾಸಕರು ನಮ್ಮ ಜೊತೆ ಇದ್ದಾರೆ ಆದರೆ ಅವರಿಗೆ ಮಾತಾಡಲು ಧಮ್ ಇಲ್ಲ. ಅವರಲ್ಲಿ ಬಹಳಷ್ಟು ಜನ ತಮ್ಮ ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕು ಅಂತಾ ಇದ್ದಾರೆ. ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದೇ ಇದ್ದರೆ ಜನ ತೀರ್ಮಾನ ಮಾಡುತ್ತಾರೆ, ಆಗ ನಾವೂ ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
‘ನನ್ನ ಮನೆಗೆ ವಿಜಯೇಂದ್ರ ಬರುವ ಅಗತ್ಯವಿಲ್ಲ’ ಎಂದಿದ್ದರೇ ಯತ್ನಾಳ್?
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ ನೇಮಕಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಯತ್ನಾಳ್, ‘ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ವಿಜಯೇಂದ್ರ ಜೊತೆ ಮಾತನಾಡಲು ಇಚ್ಛಿಸುವುದಿಲ್ಲ. ಅವರು ನನ್ನ ಮನೆಗೆ ಕಾಲಿಡುವುದು ಬೇಡ’ ಎಂದು ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಅವರಿಗೆ ಕರೆ ಮಾಡಿ ತಿಳಿಸಿದ್ದರು ಎಂದು ವರದಿಯಾಗಿದೆ. ಹೀಗಾಗಿಯೇ ಹೈಕಮಾಂಡ್ ವೀಕ್ಷಕರ ಜೊತೆ ಯತ್ನಾಳ್ ಮನೆಗೆ ವಿಜಯೇಂದ್ರ ತೆರಳಲಿಲ್ಲ ಎಂದು ತಿಳಿದುಬಂದಿದೆ.