ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘ್ವಲ್ ಅವರು ‘ಭ್ರಷ್ಟಾಚಾರಿ ನಂಬರ್ ಒನ್’ ಎಂದು ಬಿಜೆಪಿ ಶಾಸಕ ಹಾಗೂ ರಾಜಸ್ಥಾನ ವಿಧಾನಸಭೆಯ ಮಾಜಿ ಸ್ಪೀಕರ್ ಕೈಲಾಶ್ ಚಂದ್ರ ಆರೋಪಿಸಿದ್ದಾರೆ.
ಭಿಲ್ವಾರಾದ ಶಾಹಪುರ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ 89 ವರ್ಷದ ಕೈಲಾಶ್ ಚಂದ್ರ, ಭ್ರಷ್ಟಾಚಾರಿಯಾಗಿರುವ ಅರ್ಜುನ್ ರಾಮ್ ಮೇಘ್ವಲ್ ಅವರನ್ನು ಸಂಪುಟದಿಂದ ಕಿತ್ತೊಗೆಯುವಂತೆ ಕೋರಿ ತಾವು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆಯುವುದಾಗಿ ಹೇಳಿದ್ದಾರೆ.
“ಅರ್ಜುನ್ ಮೇಘ್ವಲ್ ಭ್ರಷ್ಟಾಚಾರಿ ನಂಬರ್ 1. ಅವರ ವಿರುದ್ಧ ಹಲವು ಭ್ರಷ್ಟಾಚಾರ ಪ್ರಕರಣಗಳಿವೆ. ನೀವು ಕಾನೂನು ಸಚಿವರಾಗಿ ನೇಮಿಸಿದವರು ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದಾರೆ ಎಂದು ಪ್ರಧಾನಿಗೆ ಬರೆಯುವ ಪತ್ರದಲ್ಲಿ ವಿವರಿಸುತ್ತೇನೆ. ಅವರು ಅಧಿಕಾರಿಯಾಗಿದ್ದಾಗ ಬಡವರನ್ನು ಮತ್ತು ಪರಿಶಿಷ್ಟ ಜಾತಿಯವರನ್ನೂ ಬಿಟ್ಟಿಲ್ಲ. ಎಲ್ಲರಿಂದಲೂ ಹಣ ಪಡೆದಿದ್ದರು,” ಎಂದು ಕೈಲಾಶ್ ಚಂದ್ರ ಆರೋಪಿಸಿದ್ದಾರೆ.
“ಅರ್ಜುನ್ ಮೇಘ್ವಲ್ ಹಿಂದೆ ಕಲೆಕ್ಟರ್ ಆಗಿದ್ದಾಗ ವ್ಯಾಪಕ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರು. ಭ್ರಷ್ಟಾಚಾರ ಪ್ರಕರಣಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಅವರು ರಾಜಕೀಯ ಸೇರಿದರು ಎಂದು ಕೈಲಾಶ್ ಚಂದ್ರ ಆರೋಪಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಲು ಧೈರ್ಯವಿದೆಯೆ? ಕೇಂದ್ರಕ್ಕೆ ಸಂಜಯ್ ರಾವುತ್ ಸವಾಲ್
“ಇಲ್ಲಿನ ರಾಜಕೀಯದಲ್ಲಿ ಸಚಿವರು ಹಸ್ತಕ್ಷೇಪ ನಡೆಸುತ್ತಿದ್ದಾರೆ. ಅವರ ವಿರುದ್ಧದ ಎಲ್ಲ ಭ್ರಷ್ಟಾಚಾರ ಪ್ರಕರಣಗಳು ಇತ್ಯರ್ಥವಾಗುವ ತನಕ ಸಚಿವ ಸ್ಥಾನದಿಂದ ತೆಗೆದುಹಾಕಬೇಕು” ಎಂದು ಕೈಲಾಶ್ ಚಂದ್ರ ಹೇಳಿದ್ದಾರೆ.
ಅರ್ಜುನ್ ಮೇಘ್ವಲ್ ಅವರು ಕೇಂದ್ರ ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳು ಹಾಗೂ ಸಂಸ್ಕೃತಿ ಸಚಿವರಾಗಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಗಾಗಿ ಬಿಜೆಪಿಯ 25 ಸದಸ್ಯರ ಸಂಕಲ್ಪ ಪತ್ರ ಅಥವಾ ಪ್ರಣಾಳಿಕೆ ಸಮಿತಿಯ ಸಂಚಾಲಕರನ್ನಾಗಿ ಇತ್ತೀಚೆಗಷ್ಟೇ ಅರ್ಜುನ್ ಮೇಘ್ವಲ್ ಅವರನ್ನು ನೇಮಿಸಲಾಗಿತ್ತು. ರಾಜಸ್ಥಾನ ಆಡಳಿತಾತ್ಮಕ ಸೇವೆಗಳ ಅಧಿಕಾರಿಯಾಗಿದ್ದ ಅವರು ನಂತರ ಐಎಎಸ್ ಅಧಿಕಾರಿಯಾಗಿ ಭಡ್ತಿಗೊಂಡು ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು.
2009 ಲೋಕಸಭಾ ಚುನಾವಣೆಗೆ ಮುನ್ನ ವಿಆರ್‌ಎಸ್ ಪಡೆದು ಅವರು ಬಿಕಾನೇರ್ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆದು ಗೆಲುವು ಸಾಧಿಸಿದ್ದರು.
ಅರ್ಜುನ್ ಮೇಘ್ವಲ್ ಅವರನ್ನು ‘ಭ್ರಷ್ಟ’ನಾಯಕ ಎಂದು ಸಾರ್ವಜನಿಕವಾಗಿ ಕರೆದಿದ್ದಕ್ಕಾಗಿ ಕೈಲಾಶ್ ಮೇಘವಾಲ್ ಅವರಿಗೆ ರಾಜಸ್ಥಾನ ರಾಜ್ಯ ಬಿಜೆಪಿ ಶಿಸ್ತು ಸಮಿತಿ ನೋಟಿಸ್ ಜಾರಿಗೊಳಿಸಿದೆ.
ರಾಜ್ಯಾಧ್ಯಕ್ಷ ಸಿ ಪಿ ಜೋಶಿ ಅವರ ಸೂಚನೆ ಮೇರೆಗೆ ರಾಜ್ಯ ಶಿಸ್ತು ಸಮಿತಿಯು ಕೈಲಾಶ್ ಮೇಘವಾಲ್ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿ ಹತ್ತು ದಿನಗಳಲ್ಲಿ ಉತ್ತರ ನೀಡುವಂತೆ ಸೂಚಿಸಿದೆ.