ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಸಂಬಂಧ ಮುಖ್ಯಮಂತ್ರಿಗಳ ರಾಜೀನಾಮೆಗೆ ಆಗ್ರಹಿಸಿ ಮತ್ತು ಮೈಸೂರಿನ ಮೂಡಾ ಅವ್ಯವಹಾರವನ್ನು ಖಂಡಿಸಿ ಬುಧವಾರ ಬಿಜೆಪಿ ನಾಯಕರು ಪ್ರತಿಭಟಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ನೇತೃತ್ವದಲ್ಲಿ ಬೆಳಿಗ್ಗೆ ಕುಮಾರಕೃಪಾ ವಸತಿಗೃಹದಿಂದ ಕಾಲ್ನಡಿಗೆ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮನೆಗೆ ಮುತ್ತಿಗೆ ಹಾಕಲು ಹೊರಟರು.
ಕುಮಾರಕೃಪಾ ವಸತಿಗೃಹದಿಂದ ಹೊರಟ ಬಿಜೆಪಿ ನಾಯಕರನ್ನು ಪೊಲೀಸರು ಮಾರ್ಗದಲ್ಲೇ ತಡೆದು, ಬಂಧಿಸಿ ಕರೆದೊಯ್ದರು. ಇದೇ ವೇಳೆ ಬಿಜೆಪಿ ಮುಖಂಡರು ಮತ್ತು ಪೊಲೀಸ್ ಅಧಿಕಾರಿಗಳ ನಡುವೆ ಮಾತಿನ ಚಕಮಕಿಯೂ ನಡೆಯಿತು.
ಶಾಸಕರು ‘ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ’, ‘ಮೋಸ ಅನ್ಯಾಯ ಅನ್ಯಾಯ’ ಎಂದು ಕೂಗಿದರು. ‘ಈ ಸರಕಾರದ ದೌರ್ಜನ್ಯವನ್ನು ಖಂಡಿಸುತ್ತೇನೆ; ವಿಪಕ್ಷ ನಾಯಕನಾಗಿ ಪ್ರತಿಭಟನೆಗೆ ಅವಕಾಶ ಕೊಡುತ್ತಿಲ್ಲ’ ಎಂದು ಆರ್ ಅಶೋಕ್ ಆಕ್ಷೇಪ ವ್ಯಕ್ತಪಡಿಸಿದರು.
