ಮುಂಬರುವ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಭಯದಿಂದ ಬಿಜೆಪಿಯು, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಮುಂದಿಡುತ್ತಿದೆ ಎಂದು ‘ಸ್ವರಾಜ್ ಇಂಡಿಯಾ’ದ ನಾಯಕ, ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗೇಂದ್ರ ಯಾದವ್, ‘ಬಿಜೆಪಿಯವರ ಒಂದು ಎಂಬುದು ಕೇವಲ ಒಂದನ್ನು ಮಾತ್ರ ಉತ್ತೇಜಿಸುವ ಪರಿಕಲ್ಪನೆಯೇ ಹೊರತು ಬೇರೇನೂ ಅಲ್ಲ. ಮಿಝೋರಾಂ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ತೆಲಂಗಾಣ ಸೇರಿ ಒಟ್ಟು ಐದು ರಾಜ್ಯಗಳಲ್ಲಿ ಮುಂದಿನ ತಿಂಗಳು ವಿಧಾನಸಭೆ ಚುನಾವಣೆ ನಿಗದಿಯಾಗಿದೆ. ಈ ರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಬಿಜೆಪಿ ಭಯಗೊಂಡಿದೆ. ಹಾಗಾಗಿಯೇ, ‘ಒಂದು ರಾಷ್ಟ್ರ, ಒಂದು ಚುನಾವಣೆ’ ಪರಿಕಲ್ಪನೆಯನ್ನು ಮುಂದಿಡುತ್ತಿದೆ’ ಎಂದು ಅಭಿಪ್ರಾಯಿಸಿದರು.
.@BJP4India pushing ‘one nation, one election’ concept as it is scared of Assembly polls outcome: @_YogendraYadav https://t.co/tTj7ZbZHwx
— The Tribune (@thetribunechd) October 29, 2023
‘ಒಂದು ರಾಷ್ಟ್ರ, ಒಂದು ಚುನಾವಣೆ’ಯು ಚುನಾವಣಾ ಸುಧಾರಣೆಯ ವಿಚಾರವಾಗಿ ಯಾವುದೇ ಸಂಬಂಧವನ್ನು ಹೊಂದಿಲ್ಲ. ಮೂಲ ಪರಿಕಲ್ಪನೆಗಿಂತಲೂ ಇದು ವಿಭಿನ್ನವಾಗಿದೆ. 2024ರ ಲೋಕಸಭೆ ಚುನಾವಣೆ ಮುಂದಿನ 50 ವರ್ಷಗಳ ಕಾಲ ದೇಶದ ದಿಕ್ಕನ್ನು ನಿರ್ಧರಿಸಲಿದೆ. ಹೀಗಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆ ದೇಶದ ಜನತೆಗೆ ಅತ್ಯಂತ ಮಹತ್ವದ್ದಾಗಿದೆ’ ಎಂದು ಯೋಗೇಂದ್ರ ಯಾದವ್ ಹೇಳಿದರು.
‘ಸದ್ಯ ದೇಶವು ಹಲವಾರು ಸವಾಲುಗಳನ್ನು ಎದುರಿಸುತ್ತಿದೆ. ಜನರು ಅವುಗಳನ್ನು ಒಟ್ಟಾರೆಯಾಗಿ ಪರಿಗಣಿಸದ ಹೊರತು, ಅವುಗಳನ್ನು ಎಂದಿಗೂ ಪರಿಣಾಮಕಾರಿಯಾಗಿ ಪರಿಹರಿಸಲಾಗುವುದಿಲ್ಲ. ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಹಾಗಾಗಿ, ಬಿಜೆಪಿಯು ಅದರ ಬಗ್ಗೆ ಚಿಂತಿಸುತ್ತಿದೆ’ ಎಂದು ಯಾದವ್ ಹೇಳಿದರು.
‘ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯ ವಿಷಯಗಳು ವಿಭಿನ್ನವಾದವು. ವಿಧಾನಸಭಾ ಚುನಾವಣೆಯ ಸಮಯದಲ್ಲಿ ಮತದಾರರ ಬಳಿಗೆ ಬಿಜೆಪಿಯವರು ಹೋದಾಗ ಅವರು ಸ್ಥಳೀಯ ಸಮಸ್ಯೆಗಳನ್ನು ಉಲ್ಲೇಖಿಸುತ್ತಿದ್ದಾರೆ. ಇದಕ್ಕೆ ಬಿಜೆಪಿಯವರಿಗೆ ಉತ್ತರಿಸಲು ಕಷ್ಟಕರವಾಗುತ್ತಿದೆ ಎಂದು ಯಾದವ್ ತಿಳಿಸಿದರು.
ಬಿಜೆಪಿಯು ಜಾತಿ ಗಣತಿ ನಡೆಯುವುದನ್ನು ಬಯಸುವುದಿಲ್ಲ. ಏಕೆಂದರೆ, ಜಾತಿಗಣತಿಯ ಫಲಿತಾಂಶವು ವಿವಿಧ ಜಾತಿಗಳ ನಿಜವಾದ ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಬಹಿರಂಗಪಡಿಸುತ್ತದೆ. ಅದು ಬಹಿರಂಗಗೊಂಡರೆ ಬಿಜೆಪಿಯವರಿಗೆ ಇದನ್ನು ನಿಭಾಯಿಸಲು ಕಷ್ಟವಾಗುತ್ತದೆ ಎಂಬುದರ ಬಗ್ಗೆ ತಿಳಿದಿದೆ. ಹಾಗಾಗಿಯೇ ವಿರೋಧ ವ್ಯಕ್ತಪಡಿಸುತ್ತಿದೆ. ಜಾತಿ ಗಣತಿಯು ದೇಶದ ಸಾಮಾಜಿಕ ವ್ಯವಸ್ಥೆಯ ಎಕ್ಸ್-ರೇ ಆಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಯೋಗೇಂದ್ರ ಯಾದವ್ ಅಭಿಪ್ರಾಯಿಸಿದರು.
ಪ್ರಸ್ತುತ ಪರಿಸ್ಥಿತಿಯನ್ನು ಗಮನಿಸಿದರೆ, 2024ರ ಚುನಾವಣೆಯಲ್ಲಿ ಬಿಜೆಪಿ ಸೋಲನುಭವಿಬಹುದು. ಏಕೆಂದರೆ ಹಲವಾರು ರಾಜ್ಯಗಳಲ್ಲಿ ಬಿಜೆಪಿಯ ಜನಪ್ರಿಯತೆ ಕುಸಿಯುತ್ತಿದೆ. ನಿರುದ್ಯೋಗ, ಬೆಲೆ ಏರಿಕೆ, ಕೋಮು ಸೌಹಾರ್ದತೆ ಮತ್ತು ಮಹಿಳೆಯರು ಮತ್ತು ರೈತರ ಕಲ್ಯಾಣವನ್ನು ಹೇಗೆ ಎದುರಿಸಬೇಕು ಎಂಬುದರ ಕುರಿತು ಇಂಡಿಯಾ ಒಕ್ಕೂಟವು ಕ್ರಿಯಾ ಯೋಜನೆಗಳೊಂದಿಗೆ ಜನರ ಬಳಿಗೆ ಹೋಗಬೇಕು. ಆಗ ಮಾತ್ರ ಜನರು ಮತ ನೀಡಬಹುದು ಎಂದು ಯೋಗೇಂದ್ರ ಯಾದವ್ ಹೇಳಿದರು.