ಹಿಂದುತ್ವ ಪ್ರತಿಪಾದಕ ಸಾವರ್ಕರ್ ಬರೆದ ‘Six Glorious Epochs of Indian History’ ಕೃತಿಯಲ್ಲಿ ಅತ್ಯಾಚಾರವನ್ನು ಸಮರ್ಥಿಸಲಾಗಿದೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ‘ಪ್ರಾಸ್ಟಿಟ್ಯೂಟ್’ (ವೇಶ್ಯೆ) ಎಂದು ನಿಂದಿಸಿದ ಆರೋಪದ ಮೇಲೆ ಸಿ.ಟಿ.ರವಿ ವಿರುದ್ಧ ಪ್ರಕರಣ ದಾಖಲಾಗಿ, ಅವರನ್ನು ವಿಚಾರಣೆ ನಡೆಸುವ ಹಿನ್ನೆಲೆಯಲ್ಲಿ ಪೊಲೀಸರು ಸುತ್ತಾಡಿಸಿದ ಬಳಿಕ ಬಿಜೆಪಿಯವರು ಚಿಕ್ಕಮಗಳೂರು ಬಂದ್‌ಗೆ ಕರೆ ನೀಡಿದರು. ಆದರೆ ಬಲವಂತವಾಗಿ ಬಂದ್ ಮಾಡುವಂತೆ ಜನರನ್ನು ಒತ್ತಾಯಿಸಿರುವ ವಿಡಿಯೊ ತುಣುಕ್ಕೊಂದು ವೈರಲ್ ಆಗಿದೆ.
ವ್ಯಾಪಾರಿಯೊಬ್ಬನ ಮಳಿಗೆಯನ್ನು ಬಂದ್ ಮಾಡಿಸಲು ಯತ್ನಿಸಿದಾಗ, “ನನಗೆ ಹದಿನೈದು ಸಾವಿರ ಲಾಸ್ ಆಗುತ್ತದೆ. ಅದನ್ನು ಕೊಡಿ, ಮುಚ್ಚುತ್ತೇನೆ” ಎನ್ನುತ್ತಾನೆ ವರ್ತಕ. ಅದಕ್ಕೆ ಸಿ.ಟಿ.ರವಿ ಬೆಂಬಲಿಗರು, “ನೀವು ಹಿಂದೂನೇ ಅಲ್ಲ” ಎಂದು ಮೂದಲಿಸುತ್ತಾರೆ. “ನಾನು ದೇವಾಲಯ ಕಟ್ಟಿಸಿದ್ದೇನೆ” ಎಂದು ವರ್ತಕ ತಿರುಗೇಟು ನೀಡಿದಾಗ, ಅವರ ಮೇಲೆ ಹಲ್ಲೆ ನಡೆಸಲು ಬಿಜೆಪಿಯವರು ಯತ್ನಿಸಿರುವುದು, ಆ ಪುಂಡರ ಗ್ಯಾಂಗ್‌ನಲ್ಲಿ ಮಹಿಳೆಯರೂ ಇದ್ದದ್ದು ವಿಡಿಯೊದಲ್ಲಿ ಕಂಡುಬಂದಿದೆ. ಇದರ ವಿರುದ್ಧ ಕ್ರಮ ಜರುಗಿಸಿಬೇಕಿದ್ದ ಪೊಲೀಸರು ಈ ಪುಂಡಾಟಿಕೆಯನ್ನು ನೋಡುತ್ತಾ ನಿಂತಿದ್ದೂ ದೃಶ್ಯದಲ್ಲಿ ಸೆರೆಯಾಗಿದೆ.
ಈಗ ಎದ್ದಿರುವ ಪ್ರಶ್ನೆ- ಬಿಜೆಪಿಯವರ ಪ್ರಕಾರ ಹಿಂದೂ ಎಂದರೆ ಯಾರು? ಮಹಿಳೆಯನ್ನು ನಿಂದಿಸಿದ ಆರೋಪದ ಮೇಲೆ ಪ್ರಕರಣ ದಾಖಲಾಗಿದ್ದು, ಇದರ ವಿರುದ್ಧ ಬಿಜೆಪಿಯವರು ಪ್ರತಿಭಟಿಸುತ್ತಿದ್ದಾರೆ. ಅದನ್ನು ಪ್ರಶ್ನಿಸಿದವರನ್ನು ‘ಹಿಂದೂಗಳಲ್ಲ’ ಎನ್ನುತ್ತಿದ್ದಾರೆ. ಇವರ ಪ್ರಕಾರ ಹಿಂದೂ ಎಂದರೆ ಯಾರು?
ಬಿಜೆಪಿಯವರನ್ನು ಬೆಂಬಲಿಸಿದರೆ ಮಾತ್ರ ಹಿಂದೂವೇ? ಅವರು ಮಾಡುವ ಅತ್ಯಾಚಾರ, ಅನಾಚಾರಗಳನ್ನು ಬೆಂಬಿಸಿದರೆ ಮಾತ್ರ ಹಿಂದೂವೇ? ಬಿಜೆಪಿ, ಸಂಘಪರಿವಾರ ಎಂದರೆ ಇಂತಹ ಕೃತ್ಯಗಳ ಸಮರ್ಥನೆಯೇ? ಎಂಬ ಪ್ರಶ್ನೆಗಳು ಮುನ್ನೆಲೆಗೆ ಬಂದಿವೆ.
ಸಿ.ಟಿ.ರವಿ ಅವರೇನೂ ಘನಂದಾರಿ ಕೆಲಸ ಮಾಡಿ ಕೇಸ್ ಹಾಕಿಸಿಕೊಂಡಿದ್ದಲ್ಲ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ‘ವೇಶ್ಯೆ’ ಎಂದಿರುವುದು ಕೆಲವು ಮಾಧ್ಯಮಗಳಲ್ಲಿ ಆಗಿರುವ ವಿಡಿಯೊದಿಂದ ಸ್ಪಷ್ಟವಾಗುತ್ತದೆ. ಇಷ್ಟೆಲ್ಲ ಆದರೂ ಸಿ.ಟಿ.ರವಿ ಪರ ಬಿಜೆಪಿಯವರು ನಿಲ್ಲುತ್ತಿರುವುದು ಏತಕ್ಕೆ? ಆತನಿಗೆ ಹಾರ, ತುರಾಯಿ ಹಾಕಿ ಸಂಭ್ರಮಿಸುತ್ತಿರುವುದು ಏತಕ್ಕೆ? ಸಂಘಪರಿವಾರದ ಚರಿತ್ರೆಯನ್ನು ನೋಡಿದರೆ ಇದೇ ಮೊದಲೇನೂ ಸ್ತ್ರಿನಿಂದಕರ ಪರ, ಅತ್ಯಾಚಾರಿಗಳ ಪರ ನಿಂತುಕೊಂಡಿಲ್ಲ ಎಂಬುದು ಗೊತ್ತಾಗುತ್ತದೆ.
‘ಮುಸ್ಲಿಂ ಮಹಿಳೆಯರಿಗೆ ದಿನಕ್ಕೊಬ್ಬ ಗಂಡಂದಿರು. ಅವರಿಗೆ ಪರ್ಮನೆಂಟ್ ಗಂಡ ಇರಲಿಲ್ಲ. ಅವರಿಗೆ ಪರ್ಮನೆಂಟ್ ಗಂಡನನ್ನು ಕೊಟ್ಟಿದ್ದೇ ಮೋದಿ ಸರ್ಕಾರ’ ಎಂದು ಅತ್ಯಂತ ತುಚ್ಛವಾಗಿ ಹೇಳಿಕೆ ನೀಡಿದ್ದರು ಆರ್.ಎಸ್.ಎಸ್. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ಟ. ಮುಸ್ಲಿಂ ಮಹಿಳೆಯರು ನೀಡಿದ ದೂರಿನ ಅನ್ವಯ ಪ್ರಕರಣ ದಾಖಲಿಸಿದಾಗ, ಇದೇ ಸಂಘಪರಿವಾರದ ಮುಖಂಡರು ಕಲ್ಲಡ್ಕರ ರಕ್ಷಣೆಗೆ ಧಾವಿಸಿದ್ದರು. ಕಾಂಗ್ರೆಸ್ ಸರ್ಕಾರ ಇಂತಹ ಸಂಘಿಗಳಿಗೆ ಹೆದರಿ ಕೈಕಟ್ಟಿ ಕುಳಿತ್ತಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ವಿಚಾರದಲ್ಲಿ ತೋರಿರುವ ದಿಟ್ಟತನವನ್ನು ಕಲ್ಕಡ್ಕ ಭಟ್ಟರ ವಿಚಾರದಲ್ಲಿ ತೋರಿರಲಿಲ್ಲ.
ಬಿಜೆಪಿಯ ಶಾಸಕ ಮುನಿರತ್ನ ದಲಿತರಿಗೆ ನಿಂದನೆ ಮಾಡಿದ ಆರೋಪದ ಮೇಲೆ ಮತ್ತು ಎಚ್.ಐ.ವಿ ಸೋಂಕಿತ ಮಹಿಳೆಯರನ್ನು ಸೋಂಕು ಹರಡಿಸಲು ತನ್ನ ರಾಜಕೀಯ ಎದುರಾಳಿಗಳ ವಿರುದ್ಧ ಬಳಸಿರುವ ಸಂಬಂಧ, ಮುಖ್ಯವಾಗಿ ಬಿಜೆಪಿ ಕಾರ್ಯಕರ್ತೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿರುವ ಆರೋಪದ ಮೇಲೆ ಪ್ರಕರಣ ದಾಖಲಾಗಿದೆ. ಆದರೆ ಮುನಿರತ್ನ ಇನ್ನೂ ಪಕ್ಷದಲ್ಲೇ ಆರಾಮವಾಗಿ ಇದ್ದಾರೆ. ಹಾಗಾದರೆ ಬಿಜೆಪಿಯ ಸಂಸ್ಕೃತಿ ಯಾವುದು? ಇವರು ಹೇಳುತ್ತಿರುವ ಹಿಂದೂ ಸಂಸ್ಕೃತಿಯಲ್ಲಿ ಇದೆಲ್ಲವನ್ನೂ ಸಮರ್ಥನೆ ಮಾಡಲಾಗುತ್ತದೆಯೇ?
ಗುಜರಾತ್ ಗಲಭೆಯ ಸಂದರ್ಭದಲ್ಲಿ ಮುಸ್ಲಿಂ ಮಹಿಳೆ ಬಿಲ್ಕಿಸ್ ಬಾನೋ ಅವರ ಮೇಲೆ ಅತ್ಯಾಚಾರ ಎಸಗಿ ಅವರ ಕುಟುಂಬದ ಏಳು ಜನರನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ಜೈಲಿನಿಂದ ಹೊರಬಿಟ್ಟಾಗ, ಆ ದುಷ್ಟರಿಗೆ ಹಾರ, ತುರಾಯಿ ಹಾಕಿ, ಸ್ವೀಟ್ ನೀಡಿ ಸಂಭ್ರಮಿಸಿದವರು ಇದೇ ಸಂಘಪರಿವಾರದ ಬೆಂಬಲಿಗರು. ಇದನ್ನು ಧರ್ಮ ಸಮ್ಮತ ಎನ್ನಬಹುದೇ? ಇದಕ್ಕೂ ಹಿಂದೂ ಧರ್ಮಕ್ಕೂ ಏನಾದರೂ ಸಂಬಂಧ ಇದೆ ಎಂದು ವಾದಿಸಿದರೆ ಅದು ಧರ್ಮಕ್ಕೆ ಮಾಡುವ ಅಪಚಾರವಾದೀತು.
ಜಮ್ಮು ಮತ್ತು ಕಾಶ್ಮೀರದ ಕಥುವಾದಲ್ಲಿ ಬಕರ್ವಾಲ್ ಎಂಬ ಅಲೆಮಾರಿ ಮುಸ್ಲಿಂ ಸಮುದಾಯಕ್ಕೆ ಸೇರಿದ ಎಂಟು ವರ್ಷದ ಬಾಲಕಿಯನ್ನು ಅಪಹರಿಸಿ ಹಲವಾರು ದಿನಗಳ ಕಾಲ ಗ್ಯಾಂಗ್ ರೇಪ್ ನಡೆಸಿ ಕೊಲ್ಲಲಾಗಿತ್ತು. ಹಿಂದುತ್ವದ ಕೆಲಗುಂಪುಗಳು ಅತ್ಯಾಚಾರಿಗಳನ್ನು ಬೆಂಬಲಿಸಿ, ಭಾರತದ ಬಾವುಟ ಹಿಡಿದು ಪ್ರತಿಭಟಿಸಿದ್ದವು. ಇದನ್ನು ಹಿಂದೂ ಧರ್ಮ ರಕ್ಷಣೆಯ ಕಾರ್ಯ ಎನ್ನಲಾಗುತ್ತದೆಯೇ?
ಇದನ್ನೂ ಓದಿರಿ: ಮಾಧ್ಯಮಗಳ ಪಕ್ಷಪಾತಿ ಧೋರಣೆ ಮತ್ತೆ ಅನಾವರಣ; ಸಿ.ಟಿ.ರವಿಗೆ ಇಷ್ಟೊಂದು ಪ್ರಚಾರ ನೀಡಬೇಕಿತ್ತೆ?
ಹಿಂದುತ್ವ ಪ್ರತಿಪಾದಕ ಸಾವರ್ಕರ್ ಬರೆದ ‘Six Glorious Epochs of Indian History’ ಕೃತಿಯಲ್ಲಿ ಅತ್ಯಾಚಾರವನ್ನು ಸಮರ್ಥಿಸಲಾಗಿದೆ. ಅತ್ಯಾಚಾರವನ್ನು ತನ್ನ ರಾಜಕೀಯ ಎದುರಾಳಿಯ ವಿರುದ್ಧ ಅಸ್ತ್ರವಾಗಿ ಬಳಸಬೇಕೆಂಬ ವಾದ ಮಂಡಿಸುವ ದುಷ್ಟತನವನ್ನು ಸಾವರ್ಕರ್ ಮೆರೆದಿದ್ದಾರೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೆಣ್ಣಮಕ್ಕಳ ಪರ ‘ಹಿಂದೂ ಕೋಡ್ ಬಿಲ್’ ಮಂಡಿಸಿದಾಗ ಆರ್‌ಎಸ್‌ಎಸ್‌ನ ಮುಖವಾಣಿ ಆರ್ಗನೈಸರ್ ಪತ್ರಿಕೆಯು, “ಮಹಿಳೆಯರಿಗೆ ವ್ಯಕ್ತಿಸ್ವಾತಂತ್ರ್ಯದ ಹಕ್ಕುಗಳನ್ನು ಕೊಡುವ, ಅಂಬೇಡ್ಕರ್ ಪ್ರಸ್ತಾಪಿಸಿರುವ ಹಿಂದೂ ಕೋಡ್ ಬಿಲ್ ಅನ್ನು ನಾವು ವಿರೋಧಿಸುತ್ತೇವೆ. ಏಕೆಂದರೆ ಅದು ಭಾರತೀಯ ಸಂಸ್ಕೃತಿಯಲ್ಲ. ವಿದೇಶಿ ಸಂಸ್ಕೃತಿ” ಎಂದು ಬರೆಯುತ್ತದೆ. ಆದರೆ ಇಂದು ಆರ್‌ಎಸ್‌ಎಸ್‌ನವರು ತಮ್ಮನ್ನು ಅಂಬೇಡ್ಕರ್ ಅನುಯಾಯಿಗಳಂತೆ ಫೋಸು ಕೊಟ್ಟಿಕೊಳ್ಳುತ್ತಾರೆ, ಸಂವಿಧಾನ ರಕ್ಷಕರಂತೆ ಮಾತನಾಡುತ್ತಾರೆ. ಈಗಲೂ ಅವರ ಧೋರಣೆ ಬದಲಾಗಿಲ್ಲ ಎಂಬುದಕ್ಕೆ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಡಿಸೆಂಬರ್ 20ರಂದು ನೀಡಿರುವ ಹೇಳಿಕೆ ಉದಾಹರಣೆಯಾಗಿ ನಿಂತಿದೆ. “ಮಹಿಳೆಯರಿಗೆ ವ್ಯಕ್ತಿವಾದ, ಸ್ವಾತಂತ್ರ್ಯವಾದ ಒಳ್ಳೆಯದಲ್ಲ. ಇದರಿಂದ ಹಿಂದೂಗಳ ಸಂಖ್ಯೆ ಇಳಿಯುತ್ತಿದೆ” ಎನ್ನುವ ಭಾಗವತ್, ಹೆಂಗಸರನ್ನು ಹೆರುವ ಯಂತ್ರವನ್ನಾಗಿ ಮಾತ್ರ ನೋಡುತ್ತಿರುವಂತೆ ಭಾಸವಾಗುತ್ತದೆ.
ಇವರ ಪ್ರಕಾರ ಹಿಂದೂಧರ್ಮ ರಕ್ಷಣೆ ಎಂದರೆ ಏನು? ದೇವಾಲಯ ಕಟ್ಟಿಸಿದ್ದೇನೆ ಎನ್ನುವ ವರ್ತಕನನ್ನೂ ನೀವು ಹಿಂದೂ ಅಲ್ಲ ಎನ್ನುವ ದಾಷ್ಟ್ಯ ಇವರಿಗೆ ಬಂದಿದ್ದು ಎಲ್ಲಿಂದ?
ಕೊನೆಯ ಮಾತು: ವೇಶ್ಯಾವೃತ್ತಿಯನ್ನು ಮಾಡುವ ಹೆಣ್ಣುಮಕ್ಕಳಾಗಿದ್ದರೂ ಅವರನ್ನು ಸಾರ್ವಜನಿಕವಾಗಿ ‘ವೇಶ್ಯೆ’ ಎಂದು ನಿಂದಿಸುವಂತಿಲ್ಲ. ಅಂತಹ ಸೂಕ್ಷ್ಮತೆ ಕಾನೂನಿನಲ್ಲಿ ಇದೆ. ಬಿಜೆಪಿಯವರಿಗೆ ನಿಜಕ್ಕೂ ಸಂವಿಧಾನದ ಬಗ್ಗೆ, ಕಾನೂನಿನ ಬಗ್ಗೆ ಗೌರವವಿದೆಯೇ ಎಂಬುದನ್ನು ನಾವೀಗ ಪ್ರಶ್ನಿಸಬೇಕಾಗುತ್ತದೆ. ಇವರ ‘ಹಿಂದೂ’ ವ್ಯಾಪ್ತಿಯಲ್ಲಿ ಈ ನಾಡಿನ ಜನ ಇಲ್ಲ, ಕಾನೂನು ಬಾಹಿರವಾಗಿ ಇವರು ನಡೆಸುವ ದಬ್ಬಾಳಿಕೆ, ದೌರ್ಜನ್ಯಗಳಿಗೆ ‘ಹಿಂದೂ’ ಎಂಬ ಕವಚ ತೊಡಬೇಡಿ ಎಂದು ನಾವೀಗ ಮತ್ತೆ ಗಟ್ಟಿಯಾಗಿ ಹೇಳಬೇಕಿದೆ. ಚಿಕ್ಕಮಗಳೂರಿನ ಜನ, ನಿಜವಾದ ಹಿಂದೂ ವರ್ತಕನ ಪರ ನಿಂತು, ಬೂಟಾಟಿಕೆಯ ಹಿಂದೂ ರಕ್ಷಕರಿಗೆ ಪಾಠ ಕಲಿಸಬೇಕಾಗಿದೆ.

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.