“ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿಯು ರಾಜ್ಯದಲ್ಲಿ ಗಲಭೆಗೆ ಪ್ರಚೋದನೆ ನೀಡಲಿದೆ” ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಭಾನುವಾರ ಪಶ್ಚಿಮ ಬಂಗಾಳದ ಜನರಿಗೆ ಎಚ್ಚರಿಕೆ ನೀಡಿದ್ದಾರೆ.
ಪುರುಲಿಯಾದಲ್ಲಿ ನಡೆದ ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಮಮತಾ ಬ್ಯಾನರ್ಜಿ, “ರ್‍ಯಾಲಿಗಳು ಮತ್ತು ಸಭೆಗಳನ್ನು ನಡೆಸಿ, ಆದರೆ ನೀವು ಗಲಭೆ ಮಾಡಬೇಡಿ. ಅವರೇ (ಬಿಜೆಪಿ) ಗಲಭೆ ಮಾಡುತ್ತಾರೆ. ಏಪ್ರಿಲ್ 19 ರಂದು ಮತದಾನ ನಡೆಯಲಿದ್ದು, ಏಪ್ರಿಲ್ 17 ರಂದು ಗಲಭೆ ನಡೆಯಲಿದೆ” ಎಂದು ಹೇಳಿದರು.
#WATCH | Purulia: West Bengal Chief Minister Mamata Banerjee says, “Hold rallies and meetings but do not riot. It is they (BJP) who will riot. Voting is on 19 April and they will riot on 17 April. Lord Ram does not tell you to riot but these people will riot and by rioting, they… pic.twitter.com/AKIOOu8jjh
— ANI (@ANI) April 7, 2024
“ಭಗವಂತ ರಾಮ ನಿಮಗೆ ಗಲಭೆ ಮಾಡಲು ಹೇಳುವುದಿಲ್ಲ. ಆದರೆ ಈ ಜನರು (ಬಿಜೆಪಿ) ಗಲಭೆ ಮಾಡುತ್ತಾರೆ. ಹಾಗೆಯೇ ಗಲಭೆ ಸೃಷ್ಟಿಸಿ ಅವರು ರಾಜ್ಯಕ್ಕೆ ಎನ್‌ಐಎ ಕರೆಸಿಕೊಳ್ಳುತ್ತಾರೆ” ಎಂದು ಆರೋಪಿಸಿದರು.
ಪಶ್ಚಿಮ ಬಂಗಾಳದ ಪೂರ್ವ ಮಿಡ್ನಾಪುರ ಜಿಲ್ಲೆಯ ಭೂಪತಿನಗರದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೇಲೆ ದಾಳಿ ನಡೆಸಲಾಗಿದ್ದು ಇದಾದ ಕೆಲವು ದಿನಗಳ ನಂತರ ಸಿಎಂ ಮಮತಾ ಬ್ಯಾನರ್ಜಿ ಈ ಹೇಳಿಕೆಯನ್ನು ನೀಡಿದ್ದಾರೆ. 2022 ರಲ್ಲಿ ತೃಣಮೂಲ ಕಾಂಗ್ರೆಸ್ ನಾಯಕನ ನಿವಾಸದಲ್ಲಿ ಸ್ಫೋಟ ನಡೆದಿರುವ ಬಗ್ಗೆ ತನಿಖೆ ನಡೆಸುತ್ತಿರುವಾಗ ಎನ್ಐಎ ಮೇಲೆ ದಾಳಿ ನಡೆದಿದೆ.
ಇದನ್ನು ಓದಿದ್ದೀರಾ? ಬಿಜೆಪಿಗೆ ಸೇರದಿದ್ದರೆ ಕ್ರಮ ಎನ್ನುತ್ತಿರುವ ತನಿಖಾ ಸಂಸ್ಥೆಗಳು: ಮಮತಾ ಬ್ಯಾನರ್ಜಿ ಆರೋಪ
ಘಟನೆಯ ಬಗ್ಗೆ ಪ್ರಶ್ನಿಸಿದಾಗ “ಎನ್‌ಐಎ ಬಿಜೆಪಿಗೆ ಸಹಕಾರ ಮಾಡುತ್ತಿದೆ” ಎಂದು ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ. “ಅವರು (ಎನ್‌ಐಎ) ಮಧ್ಯರಾತ್ರಿಯಲ್ಲಿ ಏಕೆ ದಾಳಿ ಮಾಡಿದರು? ಅವರಿಗೆ ಪೊಲೀಸ್ ಅನುಮತಿ ಇದೆಯೇ? ಮಧ್ಯರಾತ್ರಿಯಲ್ಲಿ ಬೇರೆ ಯಾರಾದರೂ ಅಪರಿಚಿತರು ಸ್ಥಳಕ್ಕೆ ಭೇಟಿ ನೀಡಿದರೆ ಸ್ಥಳೀಯರು ಪ್ರತಿಕ್ರಿಯಿಸುವ ರೀತಿ ಹೇಗಿರುತ್ತದೆಯೋ ಅದೇ ರೀತಿ ಸ್ಥಳೀಯರು ಪ್ರತಿಕ್ರಿಯಿಸಿದ್ದಾರೆ” ಎಂದು ಹೇಳಿದ್ದಾರೆ.
“ಚುನಾವಣೆಗೂ ಮುನ್ನವೇ ಯಾಕೆ ಜನರನ್ನು ಬಂಧಿಸುತ್ತಿದ್ದಾರೆ? ಪ್ರತಿ ಬೂತ್ ಏಜೆಂಟರನ್ನು ಬಂಧಿಸುವ ಆಲೋಚನೆಯನ್ನು ಬಿಜೆಪಿ ಹೊಂದಿದೆಯೇ? ಎನ್ಐಎಗೆ ಯಾವ ಹಕ್ಕಿದೆ? ಬಿಜೆಪಿಯನ್ನು ಬೆಂಬಲಿಸಲು ಇದೆಲ್ಲವನ್ನೂ ಮಾಡುತ್ತಿದ್ದಾರೆ. ಬಿಜೆಪಿಯ ಈ ಕೊಳಕು ರಾಜಕಾರಣದ ವಿರುದ್ಧ ಇಡೀ ವಿಶ್ವವೇ ಹೋರಾಡುವಂತೆ ನಾವು ಕರೆ ನೀಡುತ್ತೇವೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎನ್ಐಎ ತಂಡದ ಕಾರಿನ ಮೇಲೆ ಇಟ್ಟಿಗೆ ಎಸೆಯಲಾಗಿದೆ ಎಂದು ವರದಿಯಾಗಿದೆ. ಬೆಳಗಿನ ಜಾವ 5:30ರ ಸುಮಾರಿಗೆ ಅಕ್ಕಪಕ್ಕದ ನಿವಾಸಿಗಳು ಕಾರಿಗೆ ಕಲ್ಲೆಸೆದು ಘೇರಾವ್ ಹಾಕಿದ್ದಾರೆ ಎನ್ನಲಾಗಿದೆ. ಒಬ್ಬರಿಗೆ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ, ಎನ್‌ಐಎ ಅಧಿಕಾರಿಗಳ ಗುಂಪು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಬಂಧಿಸಿ ಕೋಲ್ಕತ್ತಾಗೆ ಹಿಂತಿರುಗುತ್ತಿದ್ದಾಗ ಕಾರಿನ ಮೇಲೆ ದಾಳಿ ನಡೆಸಲಾಗಿದೆ. ಈ ಬಗ್ಗೆ ಎನ್‌ಐಎ ಪೊಲೀಸ್ ದೂರು ದಾಖಲಿಸಿದೆ.