ಪ್ರಧಾನಿ ನರೇಂದ್ರ ಮೋದಿ ಅವರ ಇತ್ತೀಚಿನ ಸಂದರ್ಶನವನ್ನು ‘ಫ್ಲಾಪ್ ಶೋ’ ಎಂದು ಕರೆದಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು, “ಬಿಜೆಪಿಯು ಲೋಕಸಭೆ ಚುನಾವಣೆಯಲ್ಲಿ 150 ಸ್ಥಾನ ಕೂಡಾ ದಾಟಲ್ಲ” ಎಂದು ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ಇಂಡಿಯಾ ಒಕ್ಕೂಟದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದ್ದು, ಮೋದಿ ಅವರ ಇತ್ತೀಚಿನ ಸಂದರ್ಶನವನ್ನು ‘ಸ್ಕ್ರಿಪ್ಟೆಡ್ ಮತ್ತು ಫ್ಲಾಪ್ ಶೋ’ ಎಂದು ಕರೆದಿದ್ದಾರೆ.
LIVE: Joint Press Conference | Lok Sabha 2024 Campaign | Ghaziabad, Uttar Pradesh https://t.co/cWOaVgQn88
— Rahul Gandhi (@RahulGandhi) April 17, 2024
“ಕೆಲವು ದಿನಗಳ ಹಿಂದೆ, ಪ್ರಧಾನ ಮಂತ್ರಿ ಎಎನ್‌ಐಗೆ ಬಹಳ ದೀರ್ಘವಾದ ಸಂದರ್ಶನವನ್ನು ನೀಡಿದ್ದರು. ಅದು ಸ್ಕ್ರಿಪ್ಟ್ ಆಗಿತ್ತು, ಆದರೆ ಅದು ಫ್ಲಾಪ್ ಶೋ ಆಗಿತ್ತು. ಅದರಲ್ಲಿ ಚುನಾವಣಾ ಬಾಂಡ್‌ಗಳನ್ನು ವಿವರಿಸಲು ಪ್ರಧಾನಿ ಪ್ರಯತ್ನಿಸಿದರು. ಚುನಾವಣಾ ಬಾಂಡ್‌ಗಳ ವ್ಯವಸ್ಥೆಯು ಪಾರದರ್ಶಕತೆಗಾಗಿ, ಸ್ವಚ್ಛ ರಾಜಕಾರಣಕ್ಕೆ ಕಾರಣವಾಗಿದೆ ಎಂದು ಪ್ರಧಾನಿ ಆ ಸಂದರ್ಶನದಲ್ಲಿ ಹೇಳುತ್ತಾರೆ” ಎಂದು ರಾಹುಲ್ ಗಾಂಧಿ ಹೇಳಿದರು.
ಇದನ್ನು ಓದಿದ್ದೀರಾ? 400 ಸಂಖ್ಯೆ ಹೇಳುತ್ತಿರುವ ಬಿಜೆಪಿಗೆ ಪೆಟ್ರೋಲ್ ಬೆಲೆ ಬಗ್ಗೆ ಯಾರೂ ಪ್ರಶ್ನಿಸುತ್ತಿಲ್ಲ: ಕನ್ಹಯ್ಯ ಕುಮಾರ್
ಚುನಾವಣಾ ಬಾಂಡ್‌ಗಳ ಕುರಿತು ಪ್ರಧಾನಿ ಮೋದಿ ಹೇಳಿಕೆಗೆ ತಿರುಗೇಟು ನೀಡಿದ ರಾಹುಲ್ ಗಾಂಧಿ ಹಾಗಿದ್ದರೆ ಈ ಯೋಜನೆಯನ್ನು ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕಾರಣವೇನು ಎಂದು ಪ್ರಶ್ನಿಸಿದರು. “ನೀವು ಪಾರದರ್ಶಕತೆ ತರಲು ಬಯಸಿದರೆ ನೀವು ಬಿಜೆಪಿಗೆ ಹಣ ನೀಡಿದವರ ಹೆಸರನ್ನು ಏಕೆ ಮರೆಮಾಡಿದ್ದೀರಿ ಮತ್ತು ಅವರು ನಿಮಗೆ ಹಣ ನೀಡಿದ ದಿನಾಂಕಗಳನ್ನು ಏಕೆ ಮರೆಮಾಡಿದ್ದೀರಿ” ಎಂದು ರಾಹುಲ್ ಗಾಂಧಿ ಪ್ರಶ್ನಿಸಿದರು.
“ಇದು ಅತಿದೊಡ್ಡ ಸುಲಿಗೆ ಯೋಜನೆಯಾಗಿದೆ. ಭಾರತದ ಎಲ್ಲಾ ಉದ್ಯಮಿಗಳಿಗೂ ಇದರ ಅರಿವಾಗಿದೆ. ಪ್ರಧಾನಿ ಎಷ್ಟೇ ಸ್ಪಷ್ಟೀಕರಣವನ್ನು ನೀಡಲು ಪ್ರಯತ್ನ ಮಾಡಿದರೂ ಕೂಡಾ ಏನೂ ಬದಲಾವಣೆಯಾಗದು. ಏಕೆಂದರೆ ಈ ಯೋಜನೆಯಲ್ಲಿ ಪ್ರಧಾನಿಯೇ ಭ್ರಷ್ಟಾಚಾರದ ಚಾಂಪಿಯನ್ ಎಂದು ಇಡೀ ದೇಶಕ್ಕೆ ತಿಳಿದಿದೆ” ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು.
“ಬಿಜೆಪಿ 150 ಸ್ಥಾನದಲ್ಲೂ ಗೆಲ್ಲಲ್ಲ”
ಮುಂಬರುವ ಚುನಾವಣೆಯಲ್ಲಿ ಬಿಜೆಪಿ 150 ಸ್ಥಾನಗಳ ಗಡಿ ದಾಟಲು ಕೂಡಾ ಸಾಧ್ಯವಿಲ್ಲ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ನಾನು ಎಷ್ಟು ಕ್ಷೇತ್ರದಲ್ಲಿ ಗೆಲುವಾಗಲಿದೆ ಎಂಬ ಭವಿಷ್ಯವನ್ನು ಹೇಳುವುದಿಲ್ಲ. 15-20 ದಿನಗಳ ಹಿಂದೆ ಬಿಜೆಪಿ ಸುಮಾರು 180 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ನಾನು ಭಾವಿಸಿದ್ದೆ. ಆದರೆ ಈಗ ಅವರು 150 ಸ್ಥಾನಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದಿದ್ದಾರೆ.
ಇದನ್ನು ಓದಿದ್ದೀರಾ? ಇವಿಎಂ ಸರಿಪಡಿಸದಿದ್ದರೆ ಬಿಜೆಪಿ 400 ಸೀಟು ಗೆಲ್ಲಬಹುದು: ಸ್ಯಾಮ್ ಪಿತ್ರೋಡಾ ಎಚ್ಚರಿಕೆ
“ಒಂದೆಡೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿವೆ. ಇನ್ನೊಂದೆಡೆ ಇಂಡಿಯಾ ಮೈತ್ರಿಕೂಟ ಮತ್ತು ಕಾಂಗ್ರೆಸ್ ಪಕ್ಷವು ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ದೇಶದಲ್ಲಿ ನಿರುದ್ಯೋಗ, ಹಣದುಬ್ಬರದಂತಹ ಪ್ರಮುಖ ಸಮಸ್ಯೆಗಳಿದೆ. ಆದರೆ ಪ್ರಧಾನಿ ಅಥವಾ ಬಿಜೆಪಿ ಸಮಸ್ಯೆಗಳ ಬಗ್ಗೆ ಮಾತನಾಡುವುದಿಲ್ಲ” ಎಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಟೀಕಿಸಿದರು.
ಉತ್ತರ ಪ್ರದೇಶದಲ್ಲಿ ಲೋಕಸಭೆ ಚುನಾವಣೆಯಲ್ಲಿ ಎಸ್‌ಪಿ ಮತ್ತು ಕಾಂಗ್ರೆಸ್ ಮೈತ್ರಿಯಾಗಿ ಸ್ಪರ್ಧಿಸುತ್ತಿವೆ. ಒಟ್ಟು 80 ಲೋಕಸಭೆ ಕ್ಷೇತ್ರಗಳ ಪೈಕಿ ಕಾಂಗ್ರೆಸ್ 17 ಸ್ಥಾನಗಳಲ್ಲಿ, ಎಸ್‌ಪಿ ಮತ್ತು ಇತರ ಕೆಲವು ಮಿತ್ರಪಕ್ಷಗಳು ಉಳಿದ 63 ಸ್ಥಾನಗಳಲ್ಲಿ ಸ್ಪರ್ಧಿಸುತ್ತಿವೆ.
ಲೋಕಸಭೆ ಚುನಾವಣೆಯು ಏಪ್ರಿಲ್ 19 ರಂದು ಪ್ರಾರಂಭವಾಗುತ್ತದೆ ಮತ್ತು ಮತಗಳ ಎಣಿಕೆಯು ಜೂನ್ 4, 2024 ರಂದು ನಡೆಯಲಿದೆ. 17 ನೇ ಲೋಕಸಭೆಯ ಅಸೆಂಬ್ಲಿಯ ಅವಧಿಯು ಜೂನ್ 16, 2024 ರಂದು ಮುಕ್ತಾಯಗೊಳ್ಳಲಿದೆ. ಏಳು ಹಂತಗಳಲ್ಲಿ ಚುನಾವಣೆಗಳು ನಡೆಯಲಿವೆ. ಮೊದಲ ಹಂತ ಏಪ್ರಿಲ್ 19, ಎರಡನೇ ಹಂತ ಏಪ್ರಿಲ್ 26, ಮೂರನೇ ಹಂತ ಮೇ 7, ನಾಲ್ಕನೇ ಹಂತ ಮೇ 13, ಐದನೇ ಹಂತ ಮೇ 20, ಆರನೇ ಹಂತ ಮೇ 25 ಮತ್ತು ಏಳನೇ ಹಂತ ಜೂನ್ 1, 2024 ರಂದು ನಡೆಯಲಿದೆ.