ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಉಪ ಪ್ರಧಾನಿಯನ್ನಾಗಿ ನೇಮಿಸಬೇಕು ಎಂದು ಹಿರಿಯ ಬಿಜೆಪಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿದ್ದಾರೆ. ಹಾಗೆಯೇ ಇದು ತನ್ನ ‘ವೈಯಕ್ತಿಕ’ ಅಭಿಪ್ರಾಯವೆಂದು ಚೌಬೆ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಚೌಬೆ, “ದಿವಂಗತ ಜಗಜೀವನ್ ರಾಮ್ ನಂತರ ಬಿಹಾರದ ಜೆಡಿಯು ಮುಖ್ಯಸ್ಥರನ್ನು ಎರಡನೇ ಉಪ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ. ಎನ್‌ಡಿಎಗೆ ನಿತೀಶ್ ಕುಮಾರ್ ಅವರ ಕೊಡುಗೆ ಅದ್ಭುತವಾಗಿದೆ. ಅವರು ಒಕ್ಕೂಟದ ಆಧಾರಸ್ತಂಭದ ಪಾತ್ರ ವಹಿಸಿದ್ದಾರೆ. ಈ ಮೂಲಕ ನರೇಂದ್ರ ಮೋದಿಯವರ ಕೈಗಳನ್ನು ಬಲಪಡಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ‘ಆಯಾ ಕುಮಾರ್, ಗಯಾ ಕುಮಾರ್’- ಅವರೇ ನಿತೀಶ್ ಕುಮಾರ್
“ಎನ್‌ಡಿಎಗೆ ಇಷ್ಟೊಂದು ಸಹಾಯ ಮಾಡಿದ ನಿತೀಶ್ ಕುಮಾರ್ ಅವರನ್ನು ಉಪ ಪ್ರಧಾನಿಯಾಗಿ ನೇಮಿಸಬೇಕು ಎಂಬುದು ನನ್ನ ವೈಯಕ್ತಿಕ ಆಸೆ. ನನ್ನ ಬಯಕೆ ಈಡೇರಿದರೆ, ಬಾಬು ಜಗಜೀವನ್ ರಾಮ್ ನಂತರ ಬಿಹಾರದ ಎರಡನೇ ಪುತ್ರ ಅಧಿಕಾರಕ್ಕೆ ಏರುವುದನ್ನು ನೋಡಬಹುದು” ಎಂದರು.
ಈ ವರ್ಷದ ಕೊನೆಯಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸತತ ಐದನೇ ಬಾರಿಗೆ ಸ್ಪರ್ಧಿಸಲು ಬಯಸುತ್ತಿರುವ 74 ವರ್ಷದ ನಿತೀಶ್ ಕುಮಾರ್ ಅವರನ್ನು ಗೌರವಾನ್ವಿತವಾಗಿಯೇ ಬಿಜೆಪಿ ಬದಿಗೆ ತಳ್ಳಬಹುದು. ನಿತೀಶ್ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಇರಲಾರದು ಎಂಬ ಊಹಾಪೋಹಗಳಿವೆ. ಈ ನಡುವೆ ಬಿಜೆಪಿ ಹಿರಿಯ ನಾಯಕರ ಹೇಳಿಕೆ ಬಂದಿದೆ.
