ಕರ್ನಾಟಕದ ವಿಧಾನಸಭಾ ಸೋಲಿನಿಂದಾಗಿ ಬಿಜೆಪಿಯು ಅವಧಿಗೂ ಮುನ್ನವೇ 2024ರ ಲೋಕಸಭಾ ಚುನಾವಣೆಯನ್ನು ಘೋಷಿಸಲು ಪ್ರಯತ್ನಿಸುತ್ತಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಆರೋಪಿಸಿದ್ದಾರೆ.
ಭಾನುವಾರ ಸೇಲಂ ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಭಾರತಾದ್ಯಂತ ಬಿಜೆಪಿ ಪ್ರಭಾವ, ವರ್ಚಸ್ಸು ಕ್ರಮೇಣ ಕಡಿಮೆಯಾಗುತ್ತಿದೆ. ಇದರಿಂದಾಗಿ ಬಿಜೆಪಿ ನಾಯಕರು ಯಾವ ನಿರ್ಧಾರವನ್ನು ಬೇಕಾದರೂ ಕೈಗೊಳ್ಳಬಹುದು. ಕರ್ನಾಟಕ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಸಂಸತ್ತಿನ ಚುನಾವಣೆಯನ್ನು ಮೊದಲೇ ಘೋಷಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ಎಂ ಕೆ ಸ್ಟಾಲಿನ್ ತಿಳಿಸಿದರು.
“ಮುಂದಿನ ವರ್ಷ 2024ರ ಏಪ್ರಿಲ್ ಇಲ್ಲವೇ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಗೂ ಮೊದಲು ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಸಜ್ಜುಗೊಳಿಸಲು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶುಕ್ರವಾರ ಉನ್ನತ ಮಟ್ಟದ ಸಭೆ ಕರೆದಿದ್ದಾರೆ. ಆ ಸಭೆಯಲ್ಲಿ ನಾನು ಸಹ ಭಾಗವಹಿಸುತ್ತೇನೆ” ಎಂದು ಸ್ಟಾಲಿನ್ ತಿಳಿಸಿದರು.
“ಕೇಂದ್ರ ಸರ್ಕಾರ ಕಳೆದ 9 ವರ್ಷಗಳಲ್ಲಿ ತಮಿಳುನಾಡಿಗೆ ಏನು ಮಾಡಿದೆ ಎಂಬ ಪಟ್ಟಿಯನ್ನು ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳುತ್ತಿದ್ದೇನೆ. ತಮಿಳುನಾಡಿಗೆ ಕೇಂದ್ರ ಬಿಜೆಪಿ ಸರ್ಕಾರ ಮೀಸಲಿಟ್ಟಿರುವ ವಿಶೇಷ ಯೋಜನೆಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಈ ಮೂಲಕ ರಾಜ್ಯದಲ್ಲಿ ಬಿಜೆಪಿ ಮಾಡಿರುವ ಅಭಿವೃದ್ಧಿ ಕಾರ್ಯದ ಬಗ್ಗೆ ಅಮಿತ್ ಶಾ ತಿಳಿಸಬೇಕು” ಎಂದು ಅವರು ಸವಾಲೆಸೆದರು.
ಈ ಸುದ್ದಿ ಓದಿದ್ದೀರಾ? 2024ರಲ್ಲಿ ಮೋದಿ ಗೆದ್ದರೆ ನರೇಂದ್ರ ಪುಟಿನ್ ಆಗುತ್ತಾರೆ; ಪಂಜಾಬ್ ಸಿಎಂ ಭಗವಂತ್ ಮಾನ್
“ತಮಿಳುನಾಡಿನ ವೆಲ್ಲೂರಿನಲ್ಲಿ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಚೆನ್ನೈಗೆ ಆಗಮಿಸಲಿದ್ದಾರೆ ಎಂಬ ಸುದ್ದಿಗಳನ್ನು ಮಾಧ್ಯಮಗಳು ವರದಿ ಮಾಡಿವೆ. ಇವೆಲ್ಲವೂ ಅಮಿತ್ ಶಾ ಅವರು 2024ರ ಸಂಸತ್ ಚುನಾವಣೆಗೆ ಸಜ್ಜಾಗುತ್ತಿರುವುದನ್ನು ತಿಳಿಸುತ್ತವೆ” ಎಂದು ಎಂ ಕೆ ಸ್ಟಾಲಿನ್ ತಿಳಿಸಿದರು.
ಲೋಕಸಭೆ ಚುನಾವಣೆಗೆ ಸಿದ್ಧರಾಗಿರಿ ಎಂದು ಡಿಎಂಕೆ ಕಾರ್ಯಕರ್ತರಿಗೆ ಕರೆ ನೀಡಿದ ಸ್ಟಾಲಿನ್, ಯಾವುದೇ ರಾಜಕೀಯ ಪಕ್ಷವು ಡಿಎಂಕೆಯನ್ನು ಸೋಲಿಸಲು ಸಾಧ್ಯವಿಲ್ಲ. 2024ರ ಲೋಕಸಭೆ ಚುನಾವಣೆಯಲ್ಲಿ ತಮಿಳುನಾಡಿನ ಎಲ್ಲಾ ಸ್ಥಾನಗಳನ್ನು ಗೆಲ್ಲಲು ಶ್ರಮಿಸಬೇಕು ಎಂದು ಅವರು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದರು.