ಲೋಕಸಭೆ ಚುನಾವಣೆಯ ಫಲಿತಾಂಶದ ಒಂದು ದಿನದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಬುಧವಾರ ಸಭೆ ಸೇರಲಿದೆ. ಜೊತೆಗೆ ಇಂಡಿಯಾ ಮೈತ್ರಿಕೂಟವು ಕೂಡಾ ಇಂದು ಸಭೆ ಸೇರಲಿದೆ.
ಎನ್‌ಡಿಎ ಮುಂದಿನ ಸರ್ಕಾರ ರಚಿಸಲಿದೆ ಎಂದು ಮಂಗಳವಾರ ಸಂಜೆ ಪ್ರಧಾನಿ ಮೋದಿ ಹೇಳಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಇಂಡಿಯಾ ಒಕ್ಕೂಟ ಎರಡೂ ರಾಜಕೀಯ ಕಾರ್ಯತಂತ್ರ ರೂಪಿಸಲು ಬುಧವಾರ ಸಭೆಗಳನ್ನು ನಡೆಸಲು ಸಿದ್ಧವಾಗಿದೆ.
ಬುಧವಾರ ಮುಂಜಾನೆ ಮಹಾರಾಷ್ಟ್ರದ ಬೀಡ್ ಕ್ಷೇತ್ರದಲ್ಲಿ ನಡೆದ ಮತಗಳ ಫಲಿತಾಂಶವನ್ನು ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಪೋಸ್ಟ್ ಮಾಡಿದ್ದು ಚುನಾವಣಾ ಆಯೋಗವು ಎಲ್ಲಾ 543 ಲೋಕಸಭಾ ಕ್ಷೇತ್ರಗಳ ಫಲಿತಾಂಶಗಳನ್ನು ಪ್ರಕಟಿಸಿದ್ದು, ಬಿಜೆಪಿ 240 ಮತ್ತು ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದಿದೆ.
ಇದನ್ನು ಓದಿದ್ದೀರಾ? ‘ಇಂಡಿಯಾ’ ಮೈತ್ರಿಕೂಟ ಸಭೆಯಲ್ಲಿ ಪ್ರಧಾನಿ ಅಭ್ಯರ್ಥಿ ನಿರ್ಧರಿಸುತ್ತದೆ: ಉದ್ಧವ್ ಠಾಕ್ರೆ
ಇಂದು ಬೆಳಗ್ಗೆ 11.30ಕ್ಕೆ ದೆಹಲಿಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆಯುವ ಸಾಧ್ಯತೆ ಇದೆ. ಎನ್‌ಡಿಎ ನಾಯಕರು ಇಂದು ಪ್ರಧಾನಿ ಮೋದಿ ಅವರ ನಿವಾಸ 7 ಲೋಕ ಕಲ್ಯಾಣ ಮಾರ್ಗದಲ್ಲಿ ಸಭೆ ನಡೆಸಲಿದ್ದಾರೆ. ಮಧ್ಯಾಹ್ನ 3.30ರ ಸುಮಾರಿಗೆ ಸಭೆ ನಡೆಯಲಿದೆ.
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಆಂಧ್ರಪ್ರದೇಶದ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರಂತಹ ಪ್ರಮುಖ ನಾಯಕರು ಎನ್‌ಡಿಎ ಸಭೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮತ್ತೊಂದೆಡೆ ಇಂಡಿಯಾ ಒಕ್ಕೂಟವು ರಾಷ್ಟ್ರ ರಾಜಧಾನಿಯಲ್ಲಿ ಸಂಜೆ 6 ಗಂಟೆಗೆ ನಡೆಯಲಿದೆ.
2024ರ ಲೋಕಸಭೆ ಚುನಾವಣೆಯ ಮತ ಎಣಿಕೆ ಮಂಗಳವಾರ ನಡೆದಿದ್ದು ಭಾರತೀಯ ಚುನಾವಣಾ ಆಯೋಗದ ಪ್ರಕಾರ, ಬಿಜೆಪಿ 240 ಸ್ಥಾನಗಳನ್ನು ಗೆದ್ದಿದೆ, ಇದು 2019ರ 303 ಸ್ಥಾನಗಳಿಗಿಂತ ಕಡಿಮೆಯಾಗಿದೆ. ಮತ್ತೊಂದೆಡೆ ಕಾಂಗ್ರೆಸ್ 99 ಸ್ಥಾನಗಳನ್ನು ಗೆದ್ದು ಪ್ರಬಲ ಬೆಳವಣಿಗೆ ದಾಖಲಿಸಿದೆ. ಇಂಡಿಯಾ ಒಕ್ಕೂಟದ ಬಲ 230 ಅಂಕಗಳನ್ನು ದಾಟಿದೆ. ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳು ಬಿಜೆಪಿಗೆ ಭಾರೀ ಸ್ಪರ್ಧೆ ನೀಡಿದ್ದಾರೆ.
ಇದನ್ನು ಓದಿದ್ದೀರಾ? ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಹಾರಾಷ್ಟ್ರದಲ್ಲಿ ‘ಇಂಡಿಯಾ’ ಒಕ್ಕೂಟಕ್ಕೆ ಭರ್ಜರಿ ಗೆಲುವು
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೂರನೇ ಅವಧಿಯನ್ನು ಪಡೆದುಕೊಂಡಿದ್ದಾರೆ. ಆದರೆ ಬಿಜೆಪಿಯು ತನ್ನ ಒಕ್ಕೂಟದ ಇತರ ಪಕ್ಷಗಳ ಬೆಂಬಲವನ್ನು ಅವಲಂಬಿಸಬೇಕಾಗಿದೆ. ಜೆಡಿ (ಯು) ಮುಖ್ಯಸ್ಥ ನಿತೀಶ್ ಕುಮಾರ್ ಮತ್ತು ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ನಿರ್ಧಾರದ ಮೇಲೆ ಎನ್‌ಡಿಎ ಭವಿಷ್ಯ ನಿಂತಿದೆ.
2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, 2024ರಲ್ಲಿ ಮೊದಲ ಬಾರಿಗೆ ತನ್ನ ಸ್ವಂತ ಬಹುಮತವನ್ನು ಗಳಿಸುವಲ್ಲಿ ವಿಫಲವಾಗಿದೆ. ಇದೇ ವೇಳೆ ಪ್ರಧಾನಿ ಮೋದಿ ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ. ಜನತೆಗೆ ಧನ್ಯವಾದ ಅರ್ಪಿಸಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನೇತೃತ್ವದ ಎನ್‌ಡಿಎ ತನ್ನ ಸತತ ಮೂರನೇ ಸರ್ಕಾರವನ್ನು ರಚಿಸಲಿದೆ ಎಂದಿದ್ದಾರೆ.
ಆದರೆ ಕಾಂಗ್ರೆಸ್ ಪಕ್ಷ ಮತ್ತು ಇತರ ವಿರೋಧ ಪಕ್ಷದ ನಾಯಕರು ಭವಿಷ್ಯದ ಕಾರ್ಯತಂತ್ರಗಳನ್ನು ನಿರ್ಧರಿಸಲು ಬುಧವಾರ ಇಂಡಿಯಾ ಒಕ್ಕೂಟ ಸಭೆ ನಡೆಯಲಿದೆ ಎಂದು ಹೇಳಿದರು.