ಬಾಲಕ ಪ್ರತಾಪ್‌ನ ಪ್ರಲಾಪ

Date:

Advertisements

ಸಂಸದರಾಗಿ ಆಯ್ಕೆಯಾದಾಗಿನಿಂದ ಸದಾ ವಿವಾದಾತ್ಮಕ ಹೇಳಿಕೆಗಳನ್ನು ಹುಟ್ಟು ಹಾಕುವಲ್ಲಿಯೇ ನಿರತರಾಗಿದ್ದ ಪ್ರತಾಪ್ ಸಿಂಹ ಅವರು ಈಗ ಮಾಜಿ ಸಂಸದರಾಗಿದ್ದಾರೆ. ಮಾಜಿ ಆದ ಬಳಿಕ ಸೈಲೆಂಟಾಗಿದ್ದ ಪ್ರತಾಪ್, ಕುಟುಂಬ ರಾಜಕಾರಣದ ಬಗ್ಗೆ ಇತ್ತೀಚೆಗೆ ಹೇಳಿಕೆ ನೀಡುವ ಮೂಲಕ ಸುದ್ದಿಯಾಗಿದ್ದರು. ಇದೀಗ, ವಿವಾದಾತ್ಮಕ ಹೇಳಿಕೆ ನೀಡಿ ಮತ್ತೆ ಸುದ್ದಿಯಲ್ಲಿದ್ದಾರೆ. ಸಂಸದರಾಗಿದ್ದ ಸಮಯದಲ್ಲಿ ಟಿಪ್ಪು ಸುಲ್ತಾನ್ ಜನ್ಮ ದಿನಾಚರಣೆಗೆ ವಿರೋಧ ವ್ಯಕ್ತಪಡಿಸುವುದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ‘ಜಿಹಾದಿಗಳನ್ನು’ ಪ್ರೋತ್ಸಾಹಿಸುತ್ತಿದ್ದಾರೆ ಎಂಬ ವಿವಾದಾತ್ಮಕ ಹೇಳಿಕೆ ನೀಡೋದು, ಹನುಮ ಜಯಂತಿ ಮಾಡಿಕೊಂಡು, ಮಹಿಷ ದಸರಾಗೆ ವಿರೋಧ ಮಾಡಿಕೊಂಡು ಹಿಂದುತ್ವವನ್ನು ತಲೆಗೇರಿಸಿಕೊಂಡು, ಮೋದಿ ಅಮಲಿನಲ್ಲಿ ತೇಲಾಡುತ್ತಿದ್ದ ಪ್ರತಾಪ್ ಸಿಂಹ ಮಾಜಿ ಆದ ಮೇಲೆ ಈಗ ಬಿಲದಿಂದ ಎದ್ದು, ಹೊರಬಂದಿದ್ದಾರೆ.

ಪತ್ರಕರ್ತರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ ಪ್ರತಾಪ್ ಸಿಂಹ್, ತಮ್ಮ ಗುರು ವಿಶ್ವೇಶ್ವರ ಭಟ್ಟರ ಕೃಪಾಕಟಾಕ್ಷದಿಂದ ಬಿಜೆಪಿ ಸೇರಿ ಚುನಾವಣೆಯಲ್ಲಿ ಟಿಕೆಟ್ ಗಿಟ್ಟಿಸಿಕೊಂಡಿದ್ದರು. 2014 ಹಾಗೂ 2018ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಬಾರಿಯೂ ಮೋದಿ ಅಲೆಯಲ್ಲಿಯೇ ತೇಲಿ ಚುನಾವಣೆ ಗೆದ್ದು, ಮೈಸೂರು-ಕೊಡಗು ಸಂಸದರಾಗಿದ್ದರು. ಕಳೆದ 10 ವರ್ಷಗಳ ಅವರ ಆಡಳಿತದಲ್ಲಿ ಹುಡುಕಿದರೂ ಒಂದೇ ಒಂದು ಅಭಿವೃದ್ಧಿ ಕೆಲಸಗಳು ಸಿಗುವುದು ಕೂಡ ಕಷ್ಟ, ಆದರೆ, ಅವರ ಮೈಗಟ್ಟಿಕೊಂಡಿದ್ದ ವಿವಾದಾತ್ಮಕ ಹೇಳಿಕೆಯ ಪಟ್ಟಿಯನ್ನ ನಾವು ಕಾಣಬಹುದು. ತಾನು ಸಂಸದನಾಗಿದ್ದ ಪೂರ್ಣ ಅವಧಿಯಲ್ಲಿ ಮುಸ್ಲಿಂರನ್ನ ತೆಗಳೋದು, ಹಿಂದುತ್ವ, ಸೇರಿದಂತೆ ರಾಜ್ಯ ನಾಯಕರ ಮೇಲೆ ಹರಿಹಾಯುವುದು ಪ್ರತಾಪ್ ಸಿಂಹ್ ಅವರ ಪೂರ್ಣ ಅವಧಿಯ ಕೆಲಸವಾಗಿತ್ತು.

ಇದೀಗ, 2024ರ ಚುನಾವಣೆಯಲ್ಲಿ ಬಿಜೆಪಿ ಅವರಿಗೆ ಟಿಕೆಟ್ ನಿರಾಕರಿಸಿ ಮೂಲೆಗೆ ದೂಡಿತ್ತು. ನಂತರದ ದಿನಗಳಲ್ಲಿ ಮಾಯವಾಗಿದ್ದ ಪ್ರತಾಪ್ ಸಿಂಹ ಚುನಾವಣೆಯ ಸಮಯದಲ್ಲಿ ಅಲ್ಲಲ್ಲಿ ಕಾಣಸಿಕ್ಕರೂ ಚುನಾವಣಾ ಫಲಿತಾಂಶದ ಬಳಿಕ ಕಾಣೆಯಾಗಿದ್ದರು. ಈಗ ಮಾಜಿ ಸಂಸದ ಪ್ರತಾಪ್ ಸಿಂಹ ಮತ್ತೆ ಕಾಣಿಸಿಕೊಂಡಿದ್ದಾರೆ. ಸ್ವತಃ ತನ್ನ ಪಕ್ಷದ ನಾಯಕರ ಮೇಲೆ ಗುಟುರು ಹಾಕುತ್ತಿದ್ದಾರೆ.

Advertisements

ಬಿ ಎಸ್‌ ಯಡಿಯೂರಪ್ಪ

ಹೌದು, ರಾಜಕೀಯದಲ್ಲಿ ನೆಲೆ ಕಳೆದುಕೊಂಡು ನಿರುದ್ಯೋಗಿಯಾಗಿರುವ ಪ್ರತಾಪ್ ಸಿಂಹ ಅವರಿಗೆ ಈಗ ವಿರೋಧ ಪಕ್ಷದವರಿಗಿಂತ ಸ್ವತಃ ತನ್ನ ಪಕ್ಷದವರ ಮೇಲೆ ಕಿಡಿಕಾರುತ್ತಿದ್ದಾರೆ. ತನ್ನದೇ ಪಕ್ಷದ ಪ್ರಮುಖ ನಾಯಕರ ವಿರುದ್ಧ ಅಸಮಾಧಾನ, ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವಿಶ್ವಹಿಂದು ಪರಿಷತ್ ಮತ್ತು ಸುಳ್ಯ ಮೊಸರು ಕುಡಿಕೆ ಉತ್ಸವ ಸಮಿತಿ ವತಿಯಿಂದ ನಡೆದ ಮೊಸರು ಕುಡಿಕೆ ಉತ್ಸವದಲ್ಲಿ ಮಾತನಾಡಿದ ಪ್ರತಾಪ್ ಸಿಂಹ್, “ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ನಾಯಕತ್ವ ಬೇಕಾಗಿದೆ. ಅಂತಹ ನಾಯಕತ್ವವನ್ನು ಹಿಂದೂ ಸಂಘಟನೆಗಳು ಸೃಷ್ಠಿಸಬೇಕು” ಎಂದಿದ್ದಾರೆ.

ಮುಂದುವರೆದು, “ಪೊಲೀಸರನ್ನೇಕೆ ದೂರುತ್ತೀರಿ? ಪ್ರವೀಣ್ ನೆಟ್ಟಾರ್ ಕೊಲೆಯಾದಾಗ, ಶಿವಮೊಗ್ಗದಲ್ಲಿ ಹರ್ಷ ಮರ್ಡರ್ ಆದಾಗ ಕೊಲೆಗಡುಕರು ಇರುವ ಜಾಗ ಗೊತ್ತಾಗಿತ್ತು. ಆಗ ಪೋಲೀಸರ ಕೈಯಲ್ಲಿ ಬಂದೂಕ ಇತ್ತು. ನಳಿಕೆಯಲ್ಲಿ ಕ್ಯಾಟ್ರಿಡ್ಜ್ ಇದ್ದವು. ಪೊಲೀಸರ ಎದೆಯಲ್ಲಿ ಗುಂಡಿಗೆಯೂ ಇತ್ತು. ಆದರೆ, ಟ್ರಿಗರ್ ಎಳೆಯುವಂತೆ ಆದೇಶ ನೀಡಲು ಬಿಜೆಪಿ ಸರ್ಕಾರವನ್ನು ತಡೆದವರಾರು? ಆರೋಪಿಗಳ ಎದೆಗೆ ಗುಂಡಿಟ್ಟು ಎನ್ಕೌಂಟರ್ ಮಾಡಬಹುದಿತ್ತಲ್ವಾ. ಹಾಗಾಗಿಯೇ ಕರ್ನಾಟಕಕ್ಕೂ ಒಬ್ಬ ಯೋಗಿ ಬೇಕು” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

“ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಕರ್ನಾಟಕಕ್ಕೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಂತಹ ನಾಯಕತ್ವ ಬೇಕಾಗಿದೆ. ಅಂತಹ ನಾಯಕತ್ವವನ್ನು ಹಿಂದೂ ಸಂಘಟನೆಗಳು ಸೃಷ್ಠಿಸಬೇಕು. ವಿಚಾರ, ಧರ್ಮಕ್ಕೆ ನಿಷ್ಠೆ ಇರುವ ಎದೆಗಾರಿಕೆ ಇರುವ ನಾಯಕತ್ವ ಬಿಜೆಪಿಗೆ ಬೇಕು. ಅಲ್ಲದೇ, ಧರ್ಮದ ಬಗ್ಗೆ ಪ್ರೀತಿ, ಅಭಿಮಾನ ಇದೆಯೇ ಎಂಬುದನ್ನು ನಾವು ಆತ್ಮ ವಿಮರ್ಶೆ ಮಾಡಬೇಕು. ಧರ್ಮದ ಬಗ್ಗೆ ಇರುವ ಅಭಿಮಾನ ಶೂನ್ಯತೆಯಿಂದ ಹೊರ ಬರಬೇಕು. ವಸುದೈವ ಕುಟುಂಬಕಂ ಎಂದು ಹಿಂದೂ ಸಮಾಜ ಶಾಂತಿ ಮತ್ತು ಸದ್ಭಾವನೆಯನ್ನು ಸದಾ ಬೋಧಿಸಿದೆ” ಎಂದಿದ್ದಾರೆ.

ಕೇಳಿದ್ರಲ್ಲಾ, ಒಬ್ಬ ಪತ್ರಕರ್ತರಾಗಿ ಕೆಲಸ ಮಾಡಿ, ಇದೀಗ ರಾಜಕಾರಣಿಯಾಗಿರುವ ಒಬ್ಬ ವ್ಯಕ್ತಿಯ ಬಾಯಿಯಲ್ಲಿ ಬರುತ್ತಿರುವ ವಿಚಾರಗಳ ಬಗ್ಗೆ. ಪ್ರತಾಪ್ ಸಿಂಹ್ ಈಗ ಈ ರೀತಿ ಮಾತಾಡುವುದಕ್ಕೆ ಏನ್ ಕಾರಣ ಇರಬಹುದು, ಬಿಜೆಪಿಯ ಒಳಗಡೆನೇ ಯಾರಾದರೂ ಕುಮ್ಮಕ್ಕು ಕೊಡೋವವರು ಇದಾರಾ?  ಬಿಜೆಪಿಯ ಒಳಗಡೆ ಇರುವ ಸಫೋರ್ಟ್‌ನಿಂದ ಸಿಂಹ ತನ್ನ ಪ್ರತಾಪವನ್ನ ಈ ರೀತಿ ಹೊರಹಾಕತಾ ಇದಾರಾ? ಅಥವಾ ಈ ಬಾರಿ ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿಲ್ಲ ಎಂಬ ಹತಾಶೆ ಅವರಲ್ಲಿ ಮನೆ ಮಾಡಿದೆಯಾ? ಹೀಗೆ, ಹಲವಾರು ಪ್ರಶ್ನೆಗಳಿವೆ.

ಪಾದಯಾತ್ರೆ (5)

ಇನ್ನೊಂದಕಡೆ ಒಬ್ಬ ಪತ್ರಕರ್ತನಾಗಿದ್ದ ಅನ್ನೋದನ್ನು ಕೂಡಾ ಮರೆತು ಸಾರ್ವಜನಿಕವಾಗಿ ಒಬ್ಬ ಮಾಜಿ ಸಂಸದ ಕಾನೂನು ಅರಿವಿಲ್ಲದೇ, ಕಾನೂನನ್ನು ಸಂಪೂರ್ಣವಾಗಿ ಮರೆತು ಈ ರೀತಿ ಮಾತನಾಡುತ್ತಾರೆ. ಅಂದರೆ, ಇದರ ಹಿಂದೆ ಬಿಜೆಪಿಯವರೇ ಕುಮ್ಮಕ್ಕು ಕೊಡುತ್ತಿದ್ದಾರಾ? ಅನ್ನೋದು ಪ್ರಮುಖವಾದ ಪ್ರಶ್ನೆ.

ಬಿಜೆಪಿ ಒಳಗಡೆ ಕಾಲೆಳೆತ, ಕಾಟಾ ಕುಸ್ತಿ ನಡಿತಾಯಿದೆ. ಸದ್ಯ ಕರ್ನಾಟಕದ ಬಿಜೆಪಿ ಅಪ್ಪ – ಮಗ ಅಂದರೆ, ಬಿ.ಎಸ್.ಯಡಿಯೂರಪ್ಪ ಮತ್ತು ಬಿ.ವೈ.ವಿಜಯೇಂದ್ರ ಕೈಯಲ್ಲಿ ಇದೆ ಅಂತ ಬಿಜೆಪಿ ಒಳಗಡೆ ಇರುವ ಹಿರಿಯ ನಾಯಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಕರ್ನಾಟಕದಲ್ಲಿ ನೆಲೆ ಇಲ್ಲದ ಭಾರತೀಯ ಜನತಾ ಪಕ್ಷವನ್ನು ಬೇರು ಮಟ್ಟದಿಂದ ಕಟ್ಟಿ ಬೆಳೆಸಿದವರಲ್ಲಿ ಒಬ್ಬರಾದ ಬಿ.ಎಸ್.ಯಡಿಯೂರಪ್ಪ ಅವರು ತಮ್ಮ ಮಗನನ್ನು ಮುನ್ನೆಲೆಗೆ ತರಲು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿದರು. ಈ ವೇಳೆ, ಸ್ವತಃ ಲಿಂಗಾಯತರನ್ನೇ ಹಿನ್ನೆಲೆಗೆ ಸರಿಸಿದರು. ಬಿಜೆಪಿಯ ಪ್ರಮುಖ ಹನ್ನೆರಡು ನಾಯಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನಾಯಕತ್ವವನ್ನು ಒಪ್ಪಲಿಲ್ಲ. ಬಿಜೆಪಿ ಒಡೆದು ಹಲವು ಗುಂಪುಗಳಾದವು.

ಇದಕ್ಕೆ ನಿದರ್ಶನ ಎಂಬಂತೆ, ಬೆಂಗಳೂರು-ಮೈಸೂರು ಪಾದಯಾತ್ರೆ ವಿಜಯೇಂದ್ರ ನೇತೃತ್ವದಲ್ಲಿ ನಡೆದರೆ, ಕೂಡಲಸಂಗಮ-ಬಳ್ಳಾರಿ ಪಾದಯಾತ್ರೆ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ನಡೆಯಿತು.

ಇನ್ನು ರಾಜ್ಯದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡ ಮೇಲೆ ಬಿಜೆಪಿಯಲ್ಲಿ ಹಲವಾರು ಗುಂಪುಗಳು ಉದಯಿಸಿವೆ. ನಿರಾಣಿ ಮತ್ತು ಯತ್ನಾಳದೊಂದು ಬಣ, ಅರವಿಂದ್ ಬೆಲ್ಲದ್ ಮತ್ತು ಬಸವರಾಜ್ ಬೊಮ್ಮಾಯಿದೊಂದು ಬಣ, ಪ್ರೀತಂ ಗೌಡ, ಪ್ರತಾಪ ಸಿಂಹ, ಸಿ.ಟಿ.ರವಿ, ಅಶ್ವಥ್ ನಾರಾಯಣದೊಂದು ಗುಂಪು, ರಮೇಶ ಜಾರಕಿಹೊಳಿ ಮತ್ತು ಯತ್ನಾಳದು ಮತ್ತೊಂದು ಗುಂಪು, ವಿಶ್ವೆಶ್ವರ ಹೆಗಡೆ ಕಾಗೇರಿ, ಪ್ರಹ್ಲಾದ್ ಜೋಶಿ, ಸುರೇಶ ಕುಮಾರ್ ಇವರದ್ದೊಂದು ಬ್ರಾಹ್ಮಣರ ಗುಂಪು, ಇನ್ನು ಯಡಿಯೂರಪ್ಪ ಮಗನದೊಂದು ಗುಂಪು. ಅಲ್ಲದೇ, ಗೌಡ್ರ ಗುಂಪು, ಲಿಂಗಾಯತರ ಗುಂಪುಗಳೂ ಬಿಜೆಪಿಯಲ್ಲಿವೆ.

ಈ ಎಲ್ಲ ಗುಂಪುಗಳ ನಡುವೆ ಯಾರು ಯಾರ ಮಾತನ್ನು ಕೂಡ ಕೇಳತಾ ಇಲ್ಲ. ಒಬ್ಬರ ವಿರುದ್ಧ ಮತ್ತೊಬ್ಬರು ಮಾತನಾಡುತ್ತಲೇ ಇದ್ದಾರೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಳ್ ನಿರಂತರವಾಗಿ ಮಾತನಾಡುತ್ತಲೇ ಇದ್ದಾರೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿನ ಭ್ರಷ್ಟಾಚಾರಗಳ ಬಗ್ಗೆಯೂ ಯತ್ನಾಳ್ ಆರೋಪಿಸುತ್ತಿದ್ದಾರೆ. ಇದೇ ವೇಳೆ, ಆಪಾದಿತ ಮುಡಾ ಪ್ರಕರಣ ವಿಚಾರವಾಗಿ ವಿಜಯೇಂದ್ರ ನಡೆಸಿದ ಪಾದಯಾತ್ರೆ ವೇಳೆ ಪ್ರತಾಪ್ ಸಿಂಹ ಯತ್ನಾಳ್ ಅವರನ್ನು ಭೇಟಿ ಮಾಡಿದ್ದರು.

ಈ ಸುದ್ದಿ ಓದಿದ್ದೀರಾ? ಮೋದಿ ಭಾರತ | ರಸ್ತೆ ಕಸ ಗುಡಿಸುವ ಕೆಲಸಕ್ಕೆ ಅರ್ಜಿ ಸಲ್ಲಿಸಿದ 46 ಸಾವಿರ ಪದವೀಧರರು

ಈಗ ರಾಜ್ಯದಲ್ಲಿ ಯೋಗಿಯಂತಹ ಮುಖ್ಯಮಂತ್ರಿಗಳು ಬೇಕು ಅಂತ ಹೇಳುವ ಮೂಲಕ ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಬಿಜೆಪಿಯಲ್ಲಿ ಆಡಳಿತ ನಡೆಸಿದ ಯಡಿಯೂರಪ್ಪ, ಬೊಮ್ಮಾಯಿ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲದೆ, ಹಿಂದುತ್ವವನ್ನು ಮುನ್ನೆಲೆಯಲ್ಲಿಟ್ಟುಕೊಂಡು ಅನಂತ ಕುಮಾರ್ ಹೆಗಡೆಯಂತೆ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

25 ವರ್ಷಗಳ ಕಾಲ ನಿರಂತರವಾಗಿ ಸಂಸದರಾಗಿದ್ದ ಅನಂತ ಕುಮಾರ್ ಹೆಗಡೆ ಒಂದು ದಿನವೂ ತಾವು ಪ್ರತಿನಿಧಿಸುವ ಉತ್ತರ ಕನ್ನಡ ಜಿಲ್ಲೆಗಾಗಿ ಕೆಲಸ ಮಾಡಲಿಲ್ಲ. ಚುನಾವಣೆಯ ಸಮಯದಲ್ಲಿ ಬರೀ ವಿವಾದಾತ್ಮಕ ಹೇಳಿಕೆ ನೀಡಿ, ಹಿಂದುತ್ವದ ಅಲೆಯಲ್ಲಿ ಆಯ್ಕೆಯಾಗುತ್ತಿದ್ದರು. ಅವರನ್ನೇ ಮೋದಿ ನೇತೃತ್ವದ ಬಿಜೆಪಿ ಮೂಲೆಗೆ ದೂಡಿದೆ. ಈಗ ಪ್ರತಾಪ್ ಸಿಂಹ ಅದೇ ಹಿಂದುತ್ವದ ಅಮಲಿನಲ್ಲಿ ಮಾತನಾಡಲು ಯತ್ನಿಸುತ್ತಿದ್ದಾರೆ. ಇದು ಹಿಂದುತ್ವದ ಅಮಲು ಅಷ್ಟೇ ಅಲ್ಲ, ಇದು ಅತ್ಯಂತ ಅಪಾಯಕಾರಿ, ಇದು ಪ್ರಜಾಪ್ರಭುತ್ವದ ವಿರೋಧಿ. ಇದನ್ನ ಪ್ರತಾಪ ಸಿಂಹ್ ಅರ್ಥ ಮಾಡಿಕೊಳ್ಳತಾರೋ ಇಲ್ವೋ ಗೊತ್ತಿಲ್ಲ. ಆದರೆ, ಜನಕ್ಕಂತೂ ಅರ್ಥ ಆಗಿದೆ. ಅದೇ ಕಾರಣಕ್ಕೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿಯನ್ನ ಸೋಲಿಸಿದ್ದಾರೆ. ಪ್ರತಾಪ್ ಸಿಂಹ ಇದೇ ರೀತಿ ಪ್ರಜಾಪ್ರಭುತ್ವ ವಿರೋಧಿ, ಜಾತ್ಯಾತೀತೆಯ ವಿರೋಧಿ, ನಮ್ಮ ಹೆಮ್ಮೆಯ ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳಿಗೂ ಇದು ವಿರೋಧಿ. ಕಳೆದ ಚುನಾವಣೆಯಲ್ಲಿ ಜನ ಇವರಿಗೆ ಸರಿಯಾದ ಪಾಠನೇ ಕಲಿಸಿದ್ದಾರೆ. ಆದರೂ ಇವರು ಅರ್ಥ ಮಾಡಿಕೊಂಡಿಲ್ಲ. ಇವರು ದೀನೇದಿನೇ ಜನಕ್ಕೆ ಇದು ಅರ್ಥ ಆಗತಾ ಇದೆ. ಇನ್ನು ಸರಿಯಾಗಿ ಬುದ್ಧಿ ಕಲಿಸುವ ದಿನಗಳು ದೂರ ಇಲ್ಲ.

e4c01bd9b2970ccfecae47b47af65a36?s=150&d=mp&r=g
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈದಿನ ವಿಶೇಷ | ಧರ್ಮಸ್ಥಳ: ಉತ್ತರ ನೀಡಿದ ಗೃಹ ಸಚಿವರು; ಈಗಲೂ ಉಳಿದ ಹಲವು ಪ್ರಶ್ನೆಗಳು

ಸದನದಲ್ಲಿ ನಿಂತು ಷಡ್ಯಂತ್ರ ಎನ್ನುವವರಿಗೆ, ಎಸ್‌ಐಟಿ ರಚನೆಯಾಗಿದ್ದೇಕೆ? ಕಾನೂನು ಏನು ಹೇಳುತ್ತೆ?...

ಬಿಹಾರದಂತೆಯೇ, ಇಡೀ ದೇಶ ಚುನಾವಣಾ ಕಳ್ಳತನವನ್ನು ವಿರೋಧಿಸುತ್ತದೆ: ರಾಹುಲ್ ಗಾಂಧಿ

ಬಿಹಾರದಲ್ಲಿ ತಮ್ಮ 'ಮತದಾರ ಅಧಿಕಾರ ಯಾತ್ರೆ'ಗೆ ಸಕಾರಾತ್ಮಕ ಪ್ರತಿಕ್ರಿಯೆಯನ್ನು ಸ್ವಾಗತಿಸಿದ ಲೋಕಸಭೆ...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

Download Eedina App Android / iOS

X