ಮಂದಿರ ಕಟ್ಟಿದ್ದು ಸಾಕು, ಜನರಿಗೆ ಮನೆ ಕಟ್ಟಿರಿ: ಎಚ್‌.ಆಂಜನೇಯ

Date:

Advertisements

“ಸಂವಿಧಾನ ಬದಲಿಸುವ ಸಾಹಸಕ್ಕೆ ಕೈ ಹಾಕಿದರೆ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಕ್ತದ ಕೋಡಿ ಹರಿಯುತ್ತದೆ”

ದೇಶವನ್ನು ಆಳುವ ಜನರು ಮಂದಿರ ಕಟ್ಟಲು ಹೊರಟಿದ್ದಾರೆ. ಮಂದಿರ ಕಟ್ಟಿದ್ದು ಸಾಕು, ಮನೆ ಕಟ್ಟಿರಿ, ಮನಸ್ಸು ಕಟ್ಟಿರಿ ಎಂದು ನಾವು ಹೇಳುತ್ತೇವೆ. ನಮಗೆ ಮನೆಗಳೇ ಇಲ್ಲವಾಗಿವೆ ಎಂದು ಮಾಜಿ ಸಚಿವ, ಪ್ರಭಾವಿ ದಲಿತ ನಾಯಕ ಎಚ್.ಆಂಜನೇಯ ಹೇಳಿದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌‌ ವಾದ) ವತಿಯಿಂದ ಬೆಂಗಳೂರಿನ ವಸಂತನಗರ ಅಂಬೇಡ್ಕರ್‌ ಭವನದಲ್ಲಿ ಕುವೆಂಪು ಜನ್ಮದಿನಾಚರಣೆ ಹಾಗೂ ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ‘ಸಂವಿಧಾನ ರಕ್ಷಣೆಗಾಗಿ ಪ್ರಜಾಪ್ರಭುತ್ವ ಉಳಿವಿಗಾಗಿ ಜಿಲ್ಲಾ ಮಟ್ಟದ ಜಾಗೃತಿ ಸಮಾವೇಶ’ದಲ್ಲಿ ಅವರು ಮಾತನಾಡಿದರು.

Advertisements

ಚರಂಡಿ, ಮೋರಿ ಅಡಿಯಲ್ಲಿ, ಮರದಡಿಯಲ್ಲಿ, ಸಾವಿರಾರು ಜನ ಮೂತ್ರ ವಿಸರ್ಜನೆ ಮಾಡುವ ಜಾಗದಲ್ಲಿ ಜನರು ರಾತ್ರಿ ಮಲಗುತ್ತಾರೆ. ಅಂತಹ ಜನರಿಗೆ ಆಶ್ರಯ ನೀಡಿ ಮನೆಗಳನ್ನು ಕಟ್ಟಿಕೊಡಿ ಎಂದು ಆಗ್ರಹಿಸಿದರು.

ದೇವಸ್ಥಾನವನ್ನು ಕಟ್ಟೋದು ನಿಮ್ಮ ಧರ್ಮಕ್ಕೆ ಬಿಟ್ಟದ್ದು. ಆದರೆ ಸರ್ಕಾರದ ವೆಚ್ಚದಲ್ಲಿ ನಾವು ಕೊಟ್ಟಿರುವ ತೆರಿಗೆಯಲ್ಲಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ಕಟ್ಟುವ ಅಗತ್ಯ ಏನಿದೆ ಅಂತ ಭಾರತದ ಪ್ರಜೆಗಳಾಗಿ ನಾವು ಪ್ರಶ್ನೆ ಮಾಡಬೇಕಿದೆ ಎಂದರು.

ಧರ್ಮ ಅಂತಾರೆ. ಹಿಂದೂಗಳೆಲ್ಲ ನಾವು ಒಂದಾಗಬೇಕು ಅಂತಾರೆ. ಆದರೆ ಹಿಂದೂಗಳಲ್ಲಿ ಇರುವ ಜಾತಿಗಳನ್ನೆಲ್ಲ ಅವರು ಹಿಂದೂ ಎನ್ನಲು ತಯಾರಿಲ್ಲ. ದಲಿತರು, ಅಸ್ಪೃಶ್ಯರು ಯಾವ ಧರ್ಮಕ್ಕೂ ಮತಾಂತರ ಆಗಬಾರದು ಅಂತ ಹೇಳುತ್ತಾ ನಮ್ಮನ್ನು ಪ್ರಚೋದನೆ ಮಾಡಿ ಧರ್ಮದ ಉಳಿವಿಗಾಗಿ ಹೋರಾಟ ಮಾಡುತ್ತಿದ್ದಾರೆ. ನೀವು ಯಾವ ಧರ್ಮದ ಉಳಿವಿಗಾಗಿ ಮಾಡ್ತೀರಿ? ಆ ಧರ್ಮದಲ್ಲಿ ಇರುವ ನ್ಯೂನತೆಗಳು ಏನೇನಿವೆ, ಮನುಷ್ಯರನ್ನು ಮನುಷ್ಯರನ್ನಾಗಿ ಕಾಣುವ ಧರ್ಮವೇ ಅದು ಎಂದು ಪ್ರಶ್ನಿಸಿದರು.

ನಾಯಿ ನರಿಗಳಿಗೆ ಕೊಡುವ ಗೌರವವನ್ನು ಮನುಷ್ಯರಾದ ನಮಗೆ ಕೊಟ್ಟಿಲ್ಲ. ಎಂದಾದರೂ ಈ ದೇಶದಲ್ಲಿ ಹಿಂದೂ ಎನಿಸಿಕೊಂಡಿರುವವನು ಮಲ ಮೂತ್ರ, ಬೀದಿಯ ಕಸ ಹೊಡೆಯುವಂತಹ ಕಾರ್ಮಿಕನನ್ನು ಕರೆದು ಒಂದೇ ಒಂದು ದಿನ ನೀವು ಕುಡಿಯುವ ಲೋಟದಲ್ಲಿ ಕಾಫಿ, ಟೀ ಕೊಟ್ಟಿದ್ದೀರಾ? ಕೊಟ್ಟಿದ್ದರೆ ಹೇಳಿ. ಶುಚಿ ಮಾಡುವ ಕೈಗಳನ್ನು ಮುಟ್ಟಿ ನಮಸ್ಕಾರ ಮಾಡಿ ಕೃತಜ್ಞತೆ ಅರ್ಪಿಸಿದ ಉದಾಹರಣೆ ಈ ದೇಶದಲ್ಲಿ ಇದೆಯಾ? ಎಂದು ಕೇಳಿದರು.

ಈಗ ಚುನಾವಣೆ ಸಮೀಪಿಸುತ್ತಿದೆ. ಹತ್ತು ವರ್ಷ ಧರ್ಮದ ತಳಹದಿಯ ಮೇಲೆ ನಡೆದರು. ಬೇರೆ ಧರ್ಮಗಳೇ ಬೇಡ ಎನ್ನುತ್ತಾರೆ. ದಲಿತರು ಕೂಡ ನಮಗೆ ಬೇಡ ಎನ್ನುತ್ತಿದ್ದರೇನೋ ಗೊತ್ತಿಲ್ಲ. ಆದರೆ ದೇಶದಲ್ಲಿ ಕಾಲು ಭಾಗದ ಜನಸಂಖ್ಯೆ ಇರುವುದರಿಂದ ಮತ್ತು ಹೋರಾಟದ ಗುಣಗಳು, ಆತ್ಮಾರ್ಪಣೆ ಮಾಡುವ ಕೆಚ್ಚದೆ ಇರುವುರದಿರಂದ ದಲಿತರನ್ನು ಎದುರಿಸಲಾಗದೆ, ಅನಿವಾರ್ಯವಾಗಿ ಪ್ರೀತಿಯ ಮಾತು ಹೇಳುತ್ತಾರೆ. ನೀವು ಕೂಡ ಹಿಂದೂಗಳು ಎಂದು ಓಲೈಸುತ್ತಿದ್ದಾರೆ ಎಂದು ಟೀಕಿಸಿದರು.

Ambedkar 3

ಒಂದು ವೇಳೆ ಪೂರ್ಣ ಅಧಿಕಾರ ಅವರಿಗೆ ಸಿಕ್ಕಿತು ಅಂದರೆ ಅವರು ನಮ್ಮನ್ನು ಕೂಡ ಏನು ಮಾಡುತ್ತಾರೆ ಅಂತ ಗೊತ್ತಿಲ್ಲ. ಇಷ್ಟು ದಿನ ಮೀಸಲಾತಿ ಕೊಟ್ಟಿದ್ದೇವೆ, ಎಲ್ಲರಂತೆ ನೀವು ಇರಿ, ಹಿಂದೂಗಳೆಲ್ಲ ಒಂದೇ, ಹಿಂದೂಗಳಂತೆ ಓದ್ರಿ, ಉದ್ಯೋಗವನ್ನು ಪಡೆಯಿರಿ ಎನ್ನುತ್ತಾ ಮೀಸಲಾತಿಯನ್ನು ರದ್ದು ಮಾಡಿದ್ರೂ ಆಶ್ಚರ್ಯ ಪಡಬೇಕಿಲ್ಲ ಎಂದು ಎಚ್ಚರಿಸಿದರು.

ಬಾಬಾ ಸಾಹೇಬರು ಬರೆದಿರುವ ಸಂವಿಧಾನವನ್ನು ಬದಲಿಸಿ, ಮತ್ತೊಂದು ಸಂವಿಧಾನವನ್ನು  ತಂದರೂ ಕೂಡ ಆಶ್ಚರ್ಯಪಡಬೇಕಿಲ್ಲ. ಅಂತಹದ್ದಕ್ಕೆ ಅವರು ಹಿಂದೆ ಮುಂದೆ ನೋಡಲ್ಲ. ಆದರೆ ನಮ್ಮ ಒಗ್ಗಟ್ಟು, ನಮ್ಮ ಕೆಚ್ಚದೆಯ ಹೋರಾಟಕ್ಕೆ ಹೆದರಿ ಸುಮ್ಮನಿದ್ದಾರೆ. ಅಂತಹ ಸಾಹಸಕ್ಕೆ ಏನಾದರೂ ಕೈ ಹಾಕಿದರೆ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ರಕ್ತದ ಕೋಡಿ ಹರಿಯುತ್ತದೆ ಎಂಬ ಎಚ್ಚರಿಕೆ ಮಾತನ್ನು ಹೇಳುತ್ತೇನೆ ಎಂದು ತಿಳಿಸಿದರು.

ಸಂವಿಧಾನವನ್ನು ಮುಟ್ಟಿದರೆ, ಸಂವಿಧಾನಕ್ಕೆ ಅಪಚಾರ ಮಾಡಿದರೆ ಬಾಬಾ ಸಾಹೇಬರ ಬದ್ಧತೆಯನ್ನು ಪ್ರಶ್ನಿಸಿದರೆ ಅಂತಹ ಕ್ರಾಂತಿಯಾಗುತ್ತದೆ. ಅದು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಆದರೂ ಆಶ್ಚರ್ಯಪಡಬೇಕಿಲ್ಲ. ಜಗತ್ತಿನ ಶ್ರೇಷ್ಠ ಚಿಂತಕರಲ್ಲಿ ಅಂಬೇಡ್ಕರ್‌ ಒಬ್ಬರು. ಅಂತಹ ಬಾಬಾ ಸಾಹೇಬರು ನಮಗೆ ಕೊಟ್ಟಿರುವ ಸಂವಿಧಾನವನ್ನು ಉಳಿಸಿಕೊಳ್ಳುವ ಅನಿವಾರ್ಯ ಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದು ಹೇಳಿದರು.

ಅಂಬೇಡ್ಕರ್‌ ಅವರಂತಹ ಜ್ಞಾನವಂತನಿಗೆ ಈ ಸಮಾಜದಲ್ಲಿ ಗೌರವ ಕೊಡಲಿಲ್ಲ. ಕೊನೆಗೆ ಬೇಸತ್ತು, ’ನಾನು ಹಿಂದೂವಾಗಿ ಹುಟ್ಟಿದ್ದು ದುರಾದೃಷ್ಟ, ಆದರೆ ಹಿಂದೂವಾಗಿ ಸಾಯಲ್ಲ’ ಅಂತ ಮಾನವೀಯತೆ, ಪ್ರೀತಿ, ಗೌರವ, ಸಮಾನತೆ, ಸೋದರತ್ವ ಸಾರಿದ ಬೌದ್ಧಧಮ್ಮಕ್ಕೆ ಸೇರಿದರು ಎಂದು ಸ್ಮರಿಸಿದರು.

ಓದನ್ನೇ ಆಹಾರ ಮಾಡಿಕೊಂಡಿದ್ದವರು ಅಂಬೇಡ್ಕರ್‌. ಓದೇ ಅವರ ಹೊಟ್ಟೆ ತುಂಬಿಸುತ್ತಿತ್ತು. ನಮಗಾಗಿ ನಮ್ಮ ದೇಶಕ್ಕಾಗಿ ಈ ಸಂವಿಧಾನ ಬರಲಿಕ್ಕಾಗಿ ಹೊಟ್ಟೆ ಹಸಿದಾಗ ಒಂದು ಪೀಸ್ ಬ್ರೆಡ್ ತಿಂದು ಮಲಗಿದರು. ಆದರೆ ನಾವು ಏನು ಮಾಡುತ್ತಿದ್ದೇವೆ. ದಿನ ಬಿರಿಯಾನಿ ಹೊಡೆಯುತ್ತೇವೆ. ಮೂರು ಹೊತ್ತು ತಿನ್ನುತ್ತಿದ್ದೇವೆ. ಬಾಬಾ ಸಾಹೇಬರು ಕಲ್ಪಿಸಿದ ಸಂವಿಧಾನದಿಂದ ಮೂರು ಹೊತ್ತು ತಿನ್ನುತ್ತಿದ್ದೇವೆ. ಬಾಬಾ ಸಾಹೇಬರ ಋಣ ತೀರಿಸುವ ಕೆಲಸವನ್ನು ಮಾಡಿದಾಗ ಮಾತ್ರ ಅಂಬೇಡ್ಕರ್‌ ಬಗ್ಗೆ ಮಾತನಾಡಲು ಯೋಗ್ಯರು ಎನಿಸಿಕೊಳ್ಳುತ್ತೇವೆ ಎಂದು ಅಭಿಪ್ರಾಯಪಟ್ಟರು.

ನಾವೆಲ್ಲ ಎಲ್ಲ ಕಡೆಯೂ ಹೋರಾಟ ಮಾಡುತ್ತಿದ್ದೇವೆ. ಹೋರಾಟ ಹರಿದು ಹಂಚಿಹೋಗಿದ್ದರಿಂದ ಬೇರೆ ಪಕ್ಷದವರಿಗೆ, ಬೇರೆ ವರ್ಗದವರಿಗೆ ಸಂತೋಷವಾಗಿದೆ. ಕೆಲವು ಕಡೆ ಸಮಸ್ಯೆಗಳು ಬಂದಾಗ, ಹಲ್ಲೆಗಳು ನಡೆದಾಗ, ಸಾಮಾಜಿಕ ಬಹಿಷ್ಕಾರಗಳು ಘಟಿಸಿದಾಗ ನಾವೆಲ್ಲರೂ ಒಂದಾಗುತ್ತೇವೆ. ಯಾವ ಪಂಗಡವಿಲ್ಲದೆ, ಯಾವುದೇ ಸಂಘಟನೆ ಎನ್ನದೆ ಒಗ್ಗಟ್ಟನ್ನು ಪ್ರದರ್ಶನ ಮಾಡಿದ ಉದಾಹರಣೆ ಇದೆ ಎಂದು ಶ್ಲಾಘಿಸಿದರು.

ಐದಾರು ಪಕ್ಷಗಳಿವೆ. ಬೆಳೆಯಲಿ. ನಾಲ್ಕೈದು ಸಂಘಟನೆಗಳಾದರೂ ಸಂತೋಷ. ಆದರೆ ಅಂಬೇಡ್ಕರ್‌ ಹೆಸರಲ್ಲಿ ಸಂಘಟನೆ ಮಾಡುವಾಗ ಪ್ರಾಮಾಣಿಕತೆ ಇರಬೇಕು. ಹೋರಾಟ ಇರಬೇಕು, ತತ್ವ ಇರಬೇಕು, ನೀತಿ ಇರಬೇಕು. ನಾವು ಏನಾದರೂ ಹೋರಾಟ ಮಾಡುತ್ತೇವೆ ಎಂದರೆ ಬೇರೆಯವರು ಕೂಡ ನೋಡಿ ಮೆಚ್ಚಿ ಶಹಬ್ಬಾಷ್ ಗಿರಿ ಹೇಳಬೇಕು ಎಂದರು.

ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್‌ ಅಹ್ಮದ್, ಲೇಖಕ ರವಿಕುಮಾರ್‌ ಬಾಗಿ,  ದಸಂಸ ರಾಜ್ಯ ಸಮಿತಿ ಸದಸ್ಯರಾದ ಇಂದಿರಾ ಕೃಷ್ಣಪ್ಪ, ರಮೇಶ್‌ ಡಾಕುಳಗಿ, ಶಿಕ್ಷಣ ತಜ್ಞ ಶ್ರೀಪಾದ ಭಟ್, ಪ್ರಕಾಶಕ ರಾಜಶೇಖರ ಮೂರ್ತಿ, ಮುಖಂಡರಾದ ರಾಜಣ್ಣ ಬಡಿಗೇರ, ನಿರ್ಮಲಾ, ಕಾರಳ್ಳಿ ಶ್ರಿನಿವಾಸ್ ಮೊದಲಾದವರು ಹಾಜರಿದ್ದರು. ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್‌ ಅಧ್ಯಕ್ಷತೆ ವಹಿಸಿದ್ದರು.

ಇದನ್ನೂ ಓದಿರಿ: ಶೇ. 72ರಷ್ಟು ನಾವಿದ್ದೇವೆ, ಆದ್ರೆ ಒಗ್ಗಟ್ಟಿಲ್ಲ: ದಸಂಸ ಸಮಾವೇಶದಲ್ಲಿ ನಜೀರ್‌ ಅಹಮ್ಮದ್ ಬೇಸರ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೂಕರ್ ಪ್ರಶಸ್ತಿ ಪುರಸ್ಕೃತೆ ಬಾನು‌ ಮುಷ್ತಾಕ್‌ರಿಂದ ಮೈಸೂರು ದಸರಾ ಉದ್ಘಾಟನೆ: ಸಿಎಂ ಸಿದ್ದರಾಮಯ್ಯ

ಈ ಬಾರಿಯ 'ಮೈಸೂರು ದಸರಾ' ಉದ್ಘಾಟನೆಯನ್ನು ಬೂಕರ್ ಪ್ರಶಸ್ತಿ ವಿಜೇತೆ ಲೇಖಕಿ...

ದಸರಾ ಉದ್ಘಾಟನೆಗೆ ಸೋನಿಯಾ ಗಾಂಧಿಗೆ ಆಹ್ವಾನ ಸಂಪೂರ್ಣ ಸುಳ್ಳು: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ

ಈ ಬಾರಿಯ ದಸರಾ ಉದ್ಘಾಟನೆಗೆ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನು ಆಹ್ವಾನಿಸಲಾಗಿದೆ...

BREAKING NEWS | ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್

ಬೆಂಗಳೂರು ನಗರ ಸಿವಿಲ್ ನ್ಯಾಯಾಲಯಕ್ಕೆ ಬಾಂಬ್​ ಬೆದರಿಕೆ ಇಮೇಲ್ ಬಂದಿದೆ ಎಂದು...

Download Eedina App Android / iOS

X