ಸರ್ಕಾರಿ ಬಸ್ ಪ್ರಯಾಣ ದರವನ್ನು 15% ಏರಿಕೆ ಮಾಡಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಪ್ರತಿಭಟನೆ ನಡೆಸುತ್ತಿದೆ. ದರ ಏರಿಕೆಯನ್ನು ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ. ಬಿಜೆಪಿ ಸರ್ಕಾರವೇ ಸಾರಿಗೆ ಇಲಾಖೆ ಮೇಲೆ ಹೊರಿಸಿರುವ ಸಾಲದಿಂದ ಹೊರಬರಲು ಬೆಲೆ ಏರಿಕೆ ಅಗತ್ಯವಾಗಿದೆ ಎಂದು ಕಾಂಗ್ರೆಸ್ ವಾದಿಸುತ್ತಿದೆ. ಈ ನಡುವೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಏರಿಕೆಯಾಗಿದ್ದ ಬಸ್ ಪ್ರಯಾಣ ದರಗಳ ಪಟ್ಟಿಯನ್ನೂ ಬಿಡುಗಡೆ ಮಾಡಿದೆ.
ವಿಪಕ್ಷ ನಾಯಕ ಆರ್ ಅಶೋಕ್ ನೇತೃತ್ವದಲ್ಲಿ ಬಿಜೆಪಿಗರು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪ್ರಯಾಣ ದರ ಏರಿಕೆ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಆದರೆ, ಇದೇ ಆರ್ ಅಶೋಕ್ ಅವರು ಸಾರಿಗೆ ಸಚಿವರಾಗಿದ್ದಾಗ ಐದು ವರ್ಷಗಳಲ್ಲಿ 7 ಬಾರಿ ದರ ಏರಿಕೆ ಮಾಡಿ, 47.8% ಹೆಚ್ಚಿಸಿದ್ದರು ಎಂದು ಕಾಂಗ್ರೆಸ್ ಆರೋಪಿಸಿದೆ. ಅದರ ಪಟ್ಟಿ ಬಿಡುಗಡೆ ಮಾಡಿದೆ.

ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಬಿಜೆಪಿ ಸರ್ಕಾರದಲ್ಲಿ ಏರಿಕೆಯಾಗಿದ್ದ ದರಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಆ ಪಟ್ಟಿ ಹೀಗಿದೆ;
ದಿನಾಂಕ ಮತ್ತು ಶೇಕಡಾವಾರು
29/8/2008 – 12.01%
7/7/2009 – 3.56%
3/3/2010 – 4.76%
23/6/2010 – 3.50%
26/6/2011 – 6.95%
19/12/2011 – 5.01%
30/09/2012 – 12%
ಅಲ್ಲದೆ, 2020 ಫೆಬ್ರವರಿ 26ರಂದು ಬಿಜೆಪಿ ಸರ್ಕಾರ 12% ಪ್ರಯಾಣ ದರ ಏರಿಕೆ ಮಾಡಿತ್ತು.
ಈ ವರದಿ ಓದಿದ್ದೀರಾ?: ಬಸ್ ಟಿಕೆಟ್ ದರ ಏರಿಕೆ | ಸಾರ್ವಜನಿಕರ ಆಕ್ರೋಶ – ಸರ್ಕಾರದ ಸಮರ್ಥನೆ
ಸದ್ಯ, ಶಕ್ತಿ ಯೋಜನೆ ಜಾರಿಯಲ್ಲಿದ್ದು, ಮಹಿಳೆಯರಿಗೆ ದರ ಏರಿಕೆ ಪರಿಣಾಮ ಬೀರುವುದಿಲ್ಲ. ಆದರೆ, ಪುರುಷರ ಮೇಲೆ ಪರಿಣಾಮ ಬೀರಲಿದೆ. ಆ ಕಾರಣಕ್ಕಾಗಿಯೇ, ಶಕ್ತಿಯೋಜನೆ ಹಣ ಸರಿದೂಗಿಸಲು ಸರ್ಕಾರ ಇಂತಹ ಕ್ರಮ ಕೈಗೊಳ್ಳುತ್ತಿದೆ ಎಂದು ಬಿಜೆಪಿ ಮೊದಲಿನಿಂದಲೂ ಆರೋಪಿಸುತ್ತಿದೆ. ಈ ಆರೋಪವನ್ನು ಕಾಂಗ್ರೆಸ್ ಅಲ್ಲಗಳೆಯುತ್ತಲೇ ಬಂದಿದೆ. ಶಕ್ತಿ ಯೋಜನೆಯನ್ನು ನಾವು ಭರವಸೆ ಕೊಟ್ಟಂತೆ ಜಾರಿಗೆ ಮಾಡಿದ್ದೇವೆ. ಇಂತಹ ಜನಪ್ರಿಯ ಯೋಜನೆಯ ವಿರುದ್ಧ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಶಕ್ತಿ ಯೋಜನೆಯಂತಹ ಯೋಜನೆಗಳು ಜಾರಿಯಲ್ಲಿಲ್ಲದ ರಾಜ್ಯಗಳೂ ಬೆಲೆ ಏರಿಕೆ ಮಾಡುತ್ತವೆ. ಶಕ್ತಿ ಯೋಜನೆಗೂ ಬೆಲೆ ಏರಿಕೆಗೂ ಸಂಬಂಧವಿಲ್ಲ. ಹಿಂದಿನ ಬಿಜೆಪಿ ಸರ್ಕಾರವೇ ಮಾಡಿರುವ ಸಾಲದ ಹೊರೆ ಮತ್ತು ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ಬೆಲೆ ಏರಿಕೆ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ.