ಮಾವೋವಾದಿ ಸಂಪರ್ಕದ ಆರೋಪದ ಮೇಲೆ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಜಿ.ಎನ್ ಸಾಯಿಬಾಬಾ ಅವರನ್ನು ಬಾಂಬೆ ಹೈಕೋರ್ಟ್‌ನ ನಾಗ್ಪುರ ಪೀಠವು ಖುಲಾಸೆಗೊಳಿಸಿದೆ. ಹೈಕೋರ್ಟ್ ತೀರ್ಪು ನೀಡಿದ ಎರಡು ದಿನಗಳ ಬಳಿಕ ಮತ್ತು ಬರೊಬ್ಬರಿ 10 ವರ್ಷಗಳ ಜೈಲುವಾಸದ ನಂತರ ಗುರುವಾರ ಬೆಳಿಗ್ಗೆ ನಾಗ್ಪುರ ಸೆಂಟ್ರಲ್ ಜೈಲಿನಿಂದ ನಾಯಿಬಾಬಾ ಬಿಡುಗಡೆಯಾಗಿದ್ದಾರೆ.
ಬಿಡುಗಡೆ ಬಳಿಕ ಮಾತನಾಡಿರುವ ಸಾಯಿಬಾಬಾ, “ನಾನು ಜೀವಂತವಾಗಿ ಜೈಲಿನಿಂದ ಹೊರಬಂದಿರುವುದು ಆಶ್ಚುರ್ಯ ಮತ್ತು ಆಕಸ್ಮಿಕ. ನನ್ನ ಆರೋಗ್ಯ ತುಂಬಾ ಕೆಟ್ಟಿದೆ. ನಾನು ಮಾತನಾಡಲಾರೆ. ನಾನು ಮೊದಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು” ಎಂದು ಹೇಳಿದ್ದಾರೆ.
“ಜೈಲು ಜೀವನವು ‘ಕ್ರೂರ’ವಾಗಿರುತ್ತದೆ. ಯಾವುದೇ ಕಾನೂನಾತ್ಮಕ ಆಧಾರವಿಲ್ಲದೆ, ನನ್ನ ಮತ್ತು ನನ್ನೊಂದಿಗೆ ಜೈಲು ಸೇರಿದ್ದವರ 10 ವರ್ಷಗಳ ಜೀವನವನ್ನು ಆಡಳಿತ ಕಿತ್ತುಕೊಂಡಿದೆ. ಪ್ರಾಧ್ಯಪಕನಾಗಿ ನಾನು ನನ್ನ ವೃತ್ತಿಯನ್ನು ಉತ್ತಮವಾಗಿ ನಿಭಾಯಿಸುತ್ತಿದ್ದೆ. ಆದರೆ, 10 ವರ್ಷಗಳ ಕ್ರೂರ ಮತ್ತು ಅಮಾನವೀಯ ಜೈಲುವಾಸದೊಂದಿಗೆ ನನ್ನ ವಿದ್ಯಾರ್ಥಿಗಳಿಂದ ದೂರವಿದ್ದೆ. ನಾನು ಸ್ವಂತವಾಗಿ ಓಡಾಡಲು ಆಗಲಿಲ್ಲ. ಆಸರೆಯಿಲ್ಲದೆ ಶೌಚಕ್ಕೂ ಹೋಗಲಾಗದೆ, ಸ್ನಾನಕ್ಕೂ ಹೋಗುತ್ತಿರಲಿಲ್ಲ. ನಾನು ಹೊರ ಬರುವ ಯಾವುದೇ ಅವಕಾಶವೂ ಕಾಣುತ್ತಿರಲಿಲ್ಲ. ಆಕಸ್ಮಿಕವೆಂಬಂತೆ ಹೊರ ಬಂದಿದ್ದೇನೆ” ಎಂದಿದ್ದಾರೆ.
ತಮ್ಮ ವಿರುದ್ಧದ ಪ್ರಕರಣದಲ್ಲಿ ತಮ್ಮ ಪರವಾಗಿ ವಾದಿಸುತ್ತಿದ್ದ ವಕೀಲ ಸುರೇಂದ್ರ ಗಡ್ಲಿಂಗ್ ಅವರು ಎಲ್ಗಾರ್ ಪರಿಷತ್ ಪ್ರಕರಣದಲ್ಲಿ ಜೈಲು ಸೇರಿರುವ ಬಗ್ಗೆ ಸಾಯಿಬಾಬಾ ದುಃಖ ವ್ಯಕ್ತಪಡಿಸಿದ್ದಾರೆ.
“ಅವರ ಬಂಧನಕ್ಕೆ ಬೇರೆ ಯಾವುದೇ ಕಾರಣವಿಲ್ಲ. ಆದರೆ, ಅವರು ನನ್ನ ಪರವಾಗಿ ವಾದಿದ್ದರು ಎಂಬ ಕಾರಣಕ್ಕಾಗಿಯೇ ಅವರು ಬಂಧಿಸಲಾಗಿದೆ. ನನ್ನ ವಿಚಾರಣೆಯ ಸಮಯದಲ್ಲಿ ಅವರಿಗೆ ಬೆದರಿಕೆ ಹಾಕಲಾಗಿತ್ತು. ಅಗಲೇ, ಅವರು ಬಂಧನವಾಗು ಸೂಚನೆಗಳು ಇದ್ದವು. ನನ್ನ ಪ್ರಕರಣದಲ್ಲಿ ಸಂಪೂರ್ಣ ನ್ಯಾಯ ಸಿಗಬೇಕಾದರೆ ಸುರೇಂದ್ರ ಅವರನ್ನು ಬಿಡುಗಡೆ ಮಾಡಬೇಕು” ಎಂದು ಹೇಳಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಚುನಾವಣಾ ಬಾಂಡ್ | ಎಸ್‌ಬಿಐ ಬಳಿ ಕೃಷಿ ಸಾಲದ ವಿವರಗಳಿವೆ ಆದರೆ ಅದಿಲ್ಲ: ಉದ್ಧವ್ ಠಾಕ್ರೆ
ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂಬ ಆರೋಪದ ಮೇಲೆ ಸಾಯಿಬಾಬಾ ಅವರನ್ನು 2014ರ ಮೇನಲ್ಲಿ ಬಂಧಿಸಲಾಗಿತ್ತು. ಅದೇ ಪ್ರಕರಣದಲ್ಲಿ, ರೆವಲ್ಯೂಷನರಿ ಡೆಮಾಕ್ರಟಿಕ್ ಫ್ರಂಟ್‌ನ ಸದಸ್ಯರೆಂದು ಇತರ ಐವರನ್ನೂ 2013 ಮತ್ತು 2014ರಲ್ಲಿ ಗಡ್ಚಿರೋಲಿ ಪೊಲೀಸರು ಬಂಧಿಸಿದ್ದರು.
ಬಂಧತರಾಗಿದ್ದವರಲ್ಲಿ ವಿಜಯ್ ಟರ್ಕಿ ಅವರಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ ಉಳಿದೆಲ್ಲರಿಗೂ ಜೀವಾವಧಿ ಶಿಕ್ಷೆ ವಿಧಿಸಿ ವಿಶೇಷ ನ್ಯಾಯಾಲಯವು 2017ರಲ್ಲಿ ತೀರ್ಪು ನೀಡಿತ್ತು. ಜೀವಾವಧಿ ಶಿಕ್ಷೆಗೆ ಗುರಿಯಾದವರಲ್ಲಿ ಮಹೇಶ್ ಟಿರ್ಕಿ, ಹೇಮ್ ಮಿಶ್ರಾ, ಪಾಂಡು ನರೋಟೆ ಅವರು 2022ರಲ್ಲಿ ಹಂದಿ ಜ್ವರದಿಂದ ಜೈಲಿನಲ್ಲಿಯೇ ಸಾವನ್ನಪ್ಪಿದ್ದರು. 10 ವರ್ಷ ಶಿಕ್ಷೆಗೆ ಗುರಿಯಾಗಿದ್ದ ವಿಜಯ್ ಟರ್ಕಿ ಅವರು ಜಾಮೀನು ಪಡೆದು, ಹೊರಬಂದಿದ್ದರು. ಸಾಯಿಬಾಬಾ ಅವರು ನಾಗ್ಪುರ ಸೆಂಟ್ರಲ್ ಜೈಲಿನಲ್ಲಿದ್ದರು.
ತಮಗೆ ವಿಧಿಸಲಾಗಿದ್ದ ಜೀವಾವಧಿ ಶಿಕ್ಷೆಯಲ್ಲಿ ಪ್ರಶ್ನಿಸಿ ಸಾಯಿಬಾಬಾ ಅವರು ಬಾಂಬೆ ಹೈಕೋರ್ಟ್‌ನಲ್ಲಿ ಮೆಟ್ಟಿಲೇರಿದ್ದರು. 2022ರ ಅಕ್ಟೋಬರ್ 14ರಂದು ಅವರ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿತ್ತು. ಆದರೆ, ಹೈಕೋರ್ಟ್ ತೀರ್ಪಿಗೆ ತಡೆ ನೀಡುವಂತೆ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಅಮಾನತುಗೊಳಿಸಿತ್ತು.
ಇದೀಗ, ಮತ್ತೆ ಪ್ರಕರಣದ ವಿಚಾರಣೆ ನಡೆಸಿದ್ದ ಹೈಕೋರ್ಟ್‌ನ ನಾಗ್ಪುರ ಪೀಠ, ಸಾಯಿಬಾಬಾ ಅವರನ್ನು ಪ್ರಕರಣದಿಂದ ಖುಲಾಸೆಗೊಳಿಸಿದೆ. ಪ್ರಕರಣವನ್ನು ರದ್ದುಗೊಳಿಸಿದೆ.