- ಕಾವೇರಿ ವಿಷಯದಲ್ಲಿ ರಾಜಕೀಯ ದುರುದ್ದೇಶದಿಂದ ಡಿಕೆಶಿ ಡ್ರಾಮಾ
- ಶಿವಕುಮಾರ್ ಅವರಿಗೆ ನಮ್ಮ ಜನರ ಬಗ್ಗೆ ಕಾಳಜಿಯೇ ಇಲ್ಲ: ಕಿಡಿ
ಜಲ ಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಅವರಿಂದ ಕಾವೇರಿ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವಿಲ್ಲ. ಅವರನ್ನು 30 ವರ್ಷಗಳಿಂದ ನೋಡುತ್ತಿರುವೆ. ಏಕೆಂದರೆ ತಮಿಳುನಾಡು ಮುಖ್ಯಮಂತ್ರಿಗಳ ನಡುವೆ ಒಳ್ಳೆಯ ಸ್ನೇಹ ಇದೆ. ಮುಂದುವರಿದು, ಅವರಿಬ್ಬರ ನಡುವೆ ವ್ಯಾಪಾರ-ವಹಿವಾಟಿನ ಸಂಬಂಧವಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ ಪಿ ಯೋಗೇಶ್ವರ್ ಆರೋಪಿಸಿದರು.
ರಾಮನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, “ಕಾವೇರಿ ವಿಷಯದಲ್ಲಿ ರಾಜಕೀಯ ದುರುದ್ದೇಶದಿಂದ ಡಿಕೆ ಶಿವಕುಮಾರ್ ಡ್ರಾಮಾ ಮಾಡುತ್ತಿದ್ದಾರೆ. ಇಬ್ಬರಿಬ್ಬರು ಬೆಂಗಳೂರಿನಲ್ಲಿ ವ್ಯಾಪಾರ- ವಹಿವಾಟು ಹೊಂದಿದ್ದಾರೆ” ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರಿಂದ ಜನ ಏನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ. ಶಿವಕುಮಾರ್ ಅವರಿಗೆ ನಮ್ಮ ಜನರ ಬಗ್ಗೆ ಕಾಳಜಿಯೇ ಇಲ್ಲ. ಅದು ಇದ್ದಿದ್ದರೆ ತಮಿಳುನಾಡಿಗೆ ಯಾಕೆ ನೀರು ಬಿಡುತ್ತಿದ್ದರು” ಎಂದು ಪ್ರಶ್ನಿಸಿದರು.
ಈ ಸುದ್ದಿ ಓದಿದ್ದೀರಾ? ‘ಭಾರತ’ವೆಂಬುದು ಶ್ರೇಷ್ಠವೇ? ‘ಇಂಡಿಯಾ’ ಕನಿಷ್ಠವೇ?
ಸಿಎಂ ಸಿದ್ದರಾಮಯ್ಯ ಹೆದರಬಾರದು
“ಸಿಎಂ ಸಿದ್ದರಾಮಯ್ಯ ಅವರು ಡಿಕೆ ಸಹೋದರರ ಧಮ್ಕಿಗೆ ಮಣಿಯಬಾರದು. ರಾಮನಗರದಲ್ಲಿ ಉದ್ದೇಶಿತ ವೈದ್ಯಕೀಯ ಕಾಲೇಜು ರಾಜೀವ್ ಗಾಂಧಿ ಅರೋಗ್ಯ ವಿಶ್ವವಿದ್ಯಾಲಯದ ಅವಿಭಾಜ್ಯ ಅಂಗ. ಅದರ ಸ್ಥಳಾಂತರ ಅವೈಜ್ಞಾನಿಕವಾಗಿದ್ದು, ಇದರ ಪರಿಣಾಮವನ್ನು ಡಿ.ಕೆ. ಸಹೋದರರು ಮುಂದಿನ ದಿನಗಳಲ್ಲಿ ಎದುರಿಸಬೇಕಾಗುತ್ತದೆ” ಎಂದು ಎಚ್ಚರಿಸಿದರು.
“ಕಾಲೇಜಿಗಾಗಿ ರಾಮನಗರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಾಗೂ ಬಂದ್ ಕರೆ ಗಮನಿಸಿಯಾದರೂ ಸರ್ಕಾರ ತನ್ನ ನಿರ್ಧಾರ ಬದಲಿಸಬೇಕು. ಜಿಲ್ಲಾ ಕೇಂದ್ರದಲ್ಲಿ ಕಾಲೇಜು ಆಗುವುದರಿಂದ ಐದೂ ತಾಲ್ಲೂಕುಗಳಿಗೂ ಅನುಕೂಲವಾಗಲಿದೆ. ಕಾಲೇಜಿಗಾಗಿ ಕೈಗೊಂಡಿರುವ ಬಂದ್‌ಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಲಿದೆ” ಎಂದರು.
25ಕ್ಕೂ ಹೆಚ್ಚು ಸ್ಥಾನ
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡರೆ, 25ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಕಾರಿಯಾಗಲಿದೆ. ಈ ಹಿನ್ನಲೆಯಲ್ಲಿ ಪಕ್ಷದ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಪಕ್ಷ ಯಾರಿಗೇ ಟಿಕೆಟ್ ನೀಡಿದರೂ ಅವರ ಗೆಲುವಿಗೆ ದುಡಿಯುತ್ತೇವೆ” ಎಂದು ತಿಳಿಸಿದರು.