‘ಭಾರತ’ವೆಂಬುದು ಶ್ರೇಷ್ಠವೇ? ‘ಇಂಡಿಯಾ’ ಕನಿಷ್ಠವೇ?

Date:

‘ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ. ಯಾವ ಹೆಸರು ಮೊದಲೆಂಬುದು ಮುಖ್ಯವೇ?’ ಎಂದಿದ್ದರು ಅಂಬೇಡ್ಕರ್. ಭಾರತವೆಂದೇ ಕರೆಯಬೇಕೆಂಬ ಮನವಿಯನ್ನು ಮೋದಿ ಸರ್ಕಾರ 2015ರಲ್ಲಿ ಸುಪ್ರೀಮ್ ಕೋರ್ಟ್ ಮುಂದೆ ನಿಚ್ಚಳವಾಗಿ ವಿರೋಧಿಸಿತ್ತು

ದೇಶವನ್ನು ಮೋದಿ ಹಿಡಿತದಿಂದ ಮುಕ್ತಗೊಳಿಸಲು ಪ್ರತಿಪಕ್ಷಗಳು ತಮ್ಮ ಒಕ್ಕೂಟಕ್ಕೆ ಇತ್ತೀಚೆಗೆ ಇರಿಸಿಕೊಂಡ ಹೆಸರು I.N.D.I.A. ಬಿಜೆಪಿಯು ತನ್ನ ನೇತೃತ್ವದ NDA ಒಕ್ಕೂಟಕ್ಕೆ ಮರುಜನ್ಮ ನೀಡಿದೆ.  2024ರ ಲೋಕಸಭಾ ಚುನಾವಣೆಗಳು ಕದ ಬಡಿದಿವೆ. ದಿನ ಕಳೆದಂತೆ ಚುನಾವಣೆಯ ಜ್ವರದ ಬಿಸಿ ಕ್ರಮೇಣ ಏರತೊಡಗಿದೆ.

‘ಎನ್.ಡಿ.ಎ.ಯನ್ನು ಇಂಡಿಯಾ ಸೋಲಿಸಲಿದೆ’ ಎಂಬ ನಿರೂಪಣೆ ಮೋದಿ ಅಂಡ್ ಕಂಪನಿಯ ನೆಮ್ಮದಿ ಕಲಕಿದೆ. ಆಳುವ ಪಕ್ಷದ ಪ್ರತಿಕ್ರಿಯೆಗಳು ಇಂತಹ ಸೂಚನೆಗಳನ್ನು ಹೊರಚೆಲ್ಲಿದ್ದು ಹೌದು.

ಈ ನಡುವೆ ದೇಶದ ಹೆಸರನ್ನು ಮೋದಿ ಸರ್ಕಾರ ಬದಲಿಸಿದೆ ಎಂಬ ಕುರಿತು ಆಪಾದನೆಗಳು, ಊಹಾಪೋಹಗಳು ಹರಿದಾಡಿವೆ. ಆಹ್ವಾನಪತ್ರಿಕೆಯಲ್ಲಿ President of India ಎಂದು ಬಳಸುವುದು ಈವರೆಗಿನ ವಾಡಿಕೆ. ಆದರೆ ಸದ್ಯದಲ್ಲೇ ನಡೆಯಲಿರುವ ಜಿ-20 ಸಮ್ಮೇಳನದ ಆಹ್ವಾನಪತ್ರಿಕೆಗಳಲ್ಲಿ ಈ ವಾಡಿಕೆಯನ್ನು ತಪ್ಪಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ‘ಪ್ರೆಸಿಡೆಂಟ್ ಆಫ್ ಭಾರತ್’ ಎಂದು ಅಚ್ಚು ಮಾಡಲಾಗಿದೆ.

ಭಾರತದ ಸಂವಿಧಾನದ ಪ್ರಥಮ ಅನುಚ್ಛೇದವು India, that is Bharat ಎಂಬುದಾಗಿ ಎರಡೂ ಪದಗಳನ್ನು ಒಂದಕ್ಕೆ ಮತ್ತೊಂದು ಬದಲು ಎಂಬಂತೆ ಬಳಸಿದೆ. ಆದರೂ ದೇಶದ ಹೆಸರನ್ನು ಅಧಿಕೃತವಾಗಿ ಬದಲಾಯಿಸಲಾಗಿದೆ ಎನ್ನಲಾಗುತ್ತಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ರೇಲ್ವೇಸ್ ಎಂಬ ಹೆಸರುಗಳ ಹಿಂದೀ ಆವೃತ್ತಿಗಳಲ್ಲಿ ಭಾರತೀಯ ಎಂಬ ಪದ ಇದ್ದೇ ಇದೆ.

ಇಂಡಿಯಾ ಎಂಬ ಪದವನ್ನು ಸಂವಿಧಾನದಿಂದ ಅಳಿಸಿ ಹಾಕುವಂತೆ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಮ್ ಕೋರ್ಟು 2020ರಲ್ಲಿ ವಜಾ ಮಾಡಿತ್ತು. ‘ಸಂವಿಧಾನದಲ್ಲಿಯೇ ಇಂಡಿಯಾವನ್ನು ಭಾರತ ಎಂದು ಕರೆಯಲಾಗಿದೆಯಲ್ಲ’ ಎಂದಿತ್ತು.

ಭಾರತ ಎಂಬುದು ರಾಜಕೀಯ ಅಥವಾ ಭೂಗೋಳಶಾಸ್ತ್ರೀಯ ಅಸ್ತಿತ್ವಕ್ಕಿಂತ ಹೆಚ್ಚಾಗಿ ಸಾಮಾಜಿಕ-ಸಾಂಸ್ಕೃತಿಕ ಮತ್ತು ಧಾರ್ಮಿಕ ಅಸ್ತಿತ್ವ ಆಗಿತ್ತು ಎಂದು ಸಮಾಜ ವಿಜ್ಞಾನಿಗಳು ಹೇಳುತ್ತಾರೆ. ಭಾರತ ಎಂಬುದು ಪ್ರದೇಶಕ್ಕಿಂತ ಮೊದಲೇ ಇದ್ದ (Supraregional) ಬ್ರಾಹ್ಮಣೀಯ ಸಾಮಾಜಿಕ ವ್ಯವಸ್ಥೆಯ ಉಪಖಂಡ ಅಥವಾ ಭೂಪ್ರದೇಶ ಎನ್ನುತ್ತಾರೆ ಸಮಾಜಶಾಸ್ತ್ರಜ್ಞೆ ಕ್ಯಾಥರೀನ್ ಕ್ಲೆಮೆಂಟೀನ್ ಓಝಾ. ಋಗ್ವೇದ ಕಾಲದ ಭರತರು ಎಂಬ ಬುಡಕಟ್ಟು ಜನರ ಪೂರ್ವಜರ ಪುರಾತನ ದೊರೆ ಭರತ. ನೆಹರೂ ಹೇಳುವಂತೆ ಇಂಡಿಯಾ ಎಂಬುದು ಹಿಂದೂಗಳ ಪವಿತ್ರಭೂಮಿ ಭಾರತ.

‘ಭಾರತ ಎಂಬ ಇಂಡಿಯಾ (India, that is Bharat, shall be a Union of States) ಎಂಬುದು ರಾಜ್ಯಗಳ ಒಕ್ಕೂಟ’ ಎಂಬುದು ನಮ್ಮ ಸಂವಿಧಾನದ ಪ್ರಥಮ ಅನುಚ್ಛೇದ (Article 1).  ಈ ಕುರಿತು ಸಂವಿಧಾನ ರಚನಾ ಸಭೆಯಲ್ಲಿ ಭಾವತೀವ್ರ ಚರ್ಚೆ ಜರುಗಿತ್ತು. ಈ ಸಭೆಯ ಚರ್ಚೆಗಳನ್ನು ತೆರೆದು ನೋಡಿದರೆ ವೇದ್ಯವಾಗುವ ಸಂಗತಿಯಿದು.

‘ಭಾರತ’ ಮತ್ತು ‘ಇಂಡಿಯಾ’ ಎಂಬ ಎರಡೂ ಹೆಸರುಗಳನ್ನು ಒಳಗೊಂಡ ಅಂತಿಮ ರೂಪವನ್ನು ಡಾ.ಬಾಬಾ ಸಾಹೇಬ ಅಂಬೇಡ್ಕರ್ ಅವರು 1949ರ ಸೆಪ್ಟಂಬರ್ 17ರಂದು ಸಭೆಯ ಮುಂದೆ ಮಂಡಿಸಿದರು. ವಾಸ್ತವವಾಗಿ ಈ ಒಂದನೆಯ ಅನುಚ್ಛೇದ ಕುರಿತ ಚರ್ಚೆ 1948ರ ನವೆಂಬರ್  17ರಂದೇ ಆರಂಭ ಆಗಬೇಕಿತ್ತು. ಆದರೆ ಗೋವಿಂದ ವಲ್ಲಭ ಪಂತರ ಸಲಹೆಯ ಮೇರೆಗೆ ಮುಂದೂಡಲಾಗಿತ್ತು.

ಇಂಡಿಯಾ ಎಂಬ ಹೆಸರಿನ ಬಳಕೆಯನ್ನು ಸಂವಿಧಾನರಚನಾ ಸಭೆಯ ಹಲವಾರು ಸದಸ್ಯರು ವಿರೋಧಿಸಿದರು. ಬ್ರಿಟಿಷ್ ವಸಾಹತುಶಾಹಿಯನ್ನು ನೆನಪಿಸುವ ಪದವಿದು ಎಂಬುದು ಅವರ ಆಕ್ಷೇಪವಾಗಿತ್ತು. ಉತ್ತರಭಾರತದ ಜನರು ಭಾರತವರ್ಷ ಎಂಬ ಹೆಸರಿನ ವಿನಾ ಇನ್ನೇನನ್ನೂ ಒಪ್ಪುವುದಿಲ್ಲ ಎಂದರು ಹರಗೋವಿಂದ ಪಂತ್. ನಮ್ಮ ದೇಶದ ಸಂಪತ್ತಿನ ಮೇಲೆ ಕಣ್ಣಿಟ್ಟು ಅದನ್ನು ಲೂಟಿ ಹೊಡೆದವರು ನೀಡಿರುವ ಹೆಸರು ಇಂಡಿಯಾ. ಪರಕೀಯರು ಹೇರಿದ ಈ ಹೆಸರು ನಮ್ಮ ಪಾಲಿಗೆ ನಾಚಿಕೆಗೇಡಿನದು. ವಿಷ್ಣುಪುರಾಣ ಮತ್ತು ಬ್ರಹ್ಮಪುರಾಣಗಳಲ್ಲಿ ಭಾರತ ಎಂಬ ಹೆಸರಿದೆ. ಚೀನೀ ಯಾತ್ರಿಕ ಹ್ಯೂಯೆನ್ ತ್ಸಾಂಗ್ ಕೂಡ ಭಾರತ ಎಂದೇ ಪ್ರಸ್ತಾಪಿಸಿದ್ದಾನೆ. ಭಾರತ ಭೂಮಿ ಎಂಬ ಹೆಸರಿನ ಸಲಹೆಯೂ ಕೇಳಿಬಂದಿತು.

ಭಾರತ ಎಂಬ ಹೆಸರನ್ನು ಸದಸ್ಯರ್ಯಾರೂ ವಿರೋಧಿಸಿಲ್ಲ. ಹೀಗಾಗಿ ನಾಗರಿಕತೆಯ ಸಂಬಂಧದ ಚರ್ಚೆ ಅನಗತ್ಯ. ಭಾರತ ಎಂಬ ಪದ ಇಂಡಿಯಾ ಪದದ ನಂತರ ಬರಬೇಕೇ ಎಂಬ ಚರ್ಚೆಯಷ್ಟೇ ಜರುಗುತ್ತಿದೆ ಎಂದು ಡಾ.ಅಂಬೇಡ್ಕರ್ ಮಧ್ಯಪ್ರವೇಶಿಸಿ ಸ್ಪಷ್ಟಪಡಿಸಬಯಸಿದ್ದರು. ಭಾರತ ಎಂಬ ಪದ ದೇಶದ ಗತವೈಭವವನ್ನು ನೆನಪಿಸುತ್ತದೆ ಎಂಬುದಾಗಿ ಕಿಶೋರಿ ಮೋಹನ್ ಮಂಡಿಸಿದ ಸುದೀರ್ಘ ಪ್ರತಿಪಾದನೆಯನ್ನೂ ಅಂಬೇಡ್ಕರ್ ಪ್ರಶ್ನಿಸಿದರು. ಪ್ರಸ್ತಾವನೆಯ ಅಂಗೀಕಾರಕ್ಕೆ ಮುನ್ನ ಅವರು ಆಡಿದ ಮಾತು- ‘ಮಾಡಬೇಕಾದ ಕೆಲಸ ಬೆಟ್ಟದಷ್ಟಿದೆ’.

ಇನ್ನು ಹಿಂದುಸ್ತಾನ ಎಂಬ ಮಾತಿನ ಕತೆಯೇನು?

ಸಂಸ್ಕೃತದ ಸಿಂಧೂ (ಇಂಡಸ್) ಎಂಬುದು ಪರ್ಷಿಯನ್ ಭಾಷೆಯಲ್ಲಿ ‘ಹಿಂದೂ’ ಆಯಿತು. ಪರ್ಷಿಯನ್ನರು ಕ್ರಿಸ್ತಪೂರ್ವ ಆರನೆಯ ಶತಮಾನದಲ್ಲಿ ಇಂಡಸ್ ವ್ಯಾಲಿಯನ್ನು ಗೆದ್ದುಕೊಂಡಾಗ ಚಾಲ್ತಿಗೆ ಬಂದ ಪದ. ಕ್ರಿಸ್ತಶಕೆಯ ಆರಂಭದಲ್ಲಿ ‘ಸ್ತಾನ’ ಎಂಬ ಪದ ಜೋಡಣೆಯಾಗಿ ಹಿಂದುಸ್ತಾನ ಆಯಿತು. ಪರ್ಷಿಯನ್ನರಿಂದ ಹಿಂದ್ ಪದವನ್ನು ಪಡೆದು ಅದನ್ನು ಇಂಡಸ್ ಆಗಿಸಿದವರು ಗ್ರೀಕರು, ಅಲೆಕ್ಸಾಂಡರನ ಆಕ್ರಮಣದ ಕಾಲಕ್ಕೆ ಇಂಡಿಯಾ ಪದ ಬಳಕೆಗೆ ಬಂದಿತ್ತು. 16ನೆಯ ಶತಮಾನದ ಮುಘಲರ ಕಾಲಕ್ಕೆ ಇಂಡೋ-ಗಂಗಾ ಬಯಲನ್ನು ಹಿಂದುಸ್ತಾನ ಎಂದು ಕರೆಯಲಾಯಿತು. ಮುಘಲ್ ಚಕ್ರವರ್ತಿಯ ವಶದಲ್ಲಿದ್ದ ಬಹುತೇಕ ದಕ್ಷಿಣ ಏಷ್ಯಾದ ಭೂ ಭಾಗಗಳನ್ನು ಹಿಂದುಸ್ತಾನ ಎಂದು ಗುರುತಿಸಲಾಗುತ್ತಿತ್ತು.

18ನೆಯ ಶತಮಾನದ ಹೊತ್ತಿಗೆ ಬ್ರಿಟಿಷ್ ನಕ್ಷೆಗಳು ಇಂಡಿಯಾ ಮತ್ತು ಹಿಂದುಸ್ತಾನ ಎಂಬ ಹೆಸರುಗಳನ್ನೇ ಹೆಚ್ಚಾಗಿ ಬಳಸತೊಡಗಿದ್ದವು. ಇಂಡಿಯಾ ಎಂಬುದು ಬ್ರಿಟಿಷ್ ರಾಜಕೀಯ ಭೂಭಾಗವಾಗಿ ಗುರುತಿಸಲ್ಪಟ್ಟಿತ್ತು.  ಸಂವಿಧಾನ ರಚನೆಯ ಹೊತ್ತು ಬಂದಾಗ ಹಿಂದುಸ್ತಾನವನ್ನು ಕೈಬಿಟ್ಟು ಇಂಡಿಯಾ ಮತ್ತು ಭಾರತ ಹೆಸರುಗಳನ್ನು ಉಳಿಸಿಕೊಳ್ಳಲಾಯಿತು.

ಆರೆಸ್ಸೆಸ್ ಹೀರೋ ಸಾವರ್ಕರ್ ಏನು ಹೇಳಿದ್ದರು?

ಉತ್ತರದ ಸಿಂಧೂ (ಇಂಡಸ್ ಎಂದು ಕರೆಯಲಾದ ನದಿ) ಮತ್ತು ದಕ್ಷಿಣದ ಸಿಂಧುವಿನ (ಹಿಂದೂ ಮಹಾಸಾಗರ) ನಡುವೆ ವಾಸಿಸುವ ಜನತೆ ಮತ್ತು ಪ್ರದೇಶವೇ ಹಿಂದು ಮತ್ತು ಹಿಂದುಸ್ತಾನ ಎಂದು ಸಾವರ್ಕರ್ ಕರೆದರು. ಸಿಂಧೂ (Sindhu) ಎಂಬ ಹೆಸರನ್ನು ಕೊಟ್ಟವರು ಆರ್ಯರು. ಇಂಗ್ಲಿಷ್ ಹೆಸರಿನ ಮೊದಲ ಅಕ್ಷರ S ಪರ್ಷಿಯನ್ ಮತ್ತು ಪ್ರಾಕೃತದಲ್ಲಿ H ಆಯಿತು. ಹೀಗಾಗಿ ಹಿಂದು ಹಿಂದುಸ್ತಾನ ಕೂಡ ದೇಸೀ ಬಳಕೆಯೇ ಎಂದು ಸಮ್ಮತಿಯ ಮೊಹರು ಒತ್ತಿದರು. ಆರ್ಯರ ಮೊಟ್ಟ ಮೊದಲ ತಂಡ ಸಿಂಧೂ ನದಿಯ ದಡಗಳನ್ನು ತಮ್ಮ ಆವಾಸಗಳನ್ನಾಗಿ ಮಾಡಿಕೊಂಡಿದ್ದು ಯಾವಾಗ ಎಂದು ಖಚಿತವಾಗಿ ಹೇಳಲು ಬರುವುದಿಲ್ಲ. ಆದರೆ ಪ್ರಾಚೀನ ಈಜಿಪ್ಷಿಯನ್ನರು, ಬ್ಯಾಬಿಲೋನಿಯನ್ ನಾಗರಿಕತೆಗಳಿಗೆ ಮುನ್ನವೇ ಸಿಂಧೂ ನದಿಯ ಜಲವು ನಿತ್ಯ ಯಜ್ಞಬಲಿಯ ಪರಿಮಳದ ಧೂಮ ಸುರುಳಿಗಳು ಮತ್ತು ವೈದಿಕ ಮಂತ್ರಗಳ ಪಠಣಕ್ಕೆ ಸಾಕ್ಷಿಯಾಗಿತ್ತು. ಸಿಂಧೂ ಎಂಬ ಪದ ಆರ್ಯರಿಗಿಂತ ಹಿಂದಿನದು. ಆರ್ಯರ ಆಗಮನಕ್ಕಿಂತ ಹಿಂದೆ ಇಲ್ಲಿ ವಾಸವಿದ್ದ ಸ್ನೇಹಪರ ಬುಡಕಟ್ಟುಗಳಿಂದ ಈ ಪದವನ್ನು ಆರ್ಯರು ಎರವಲು ಪಡೆದು ಬಳಸಿರಬಹುದು. ಆರ್ಯರು ತಮ್ಮನ್ನು ಸಿಂಧೂ ನದಿಯ ನೇತೃತ್ವದ ಏಳು ನದಿಗಳ ಸಪ್ತ ಸಿಂಧುಗಳೆಂದು ಕರೆದುಕೊಂಡರು. ಹಪ್ತ ಹಿಂದು ಎಂಬ ಪದದ ಮೂಲವನ್ನು ‘ಅವೆಸ್ತಾ’ ಎಂಬ ಝೋರಾಷ್ಟ್ರಿಯನ್ ಧಾರ್ಮಿಕ ಪಠ್ಯಗಳಲ್ಲಿ ಗುರುತಿಸಿದ್ದಾರೆ ಸಾವರ್ಕರ್. ಹಪ್ತ ಹಿಂದು ಕಾಲಕ್ರಮೇಣ ಪರ್ಷಿಯಾದ ಆಚೆಗೆ ಹಬ್ಬಿತು. S ಎಂಬುದು Hನ ಸಂಸ್ಕೃತಮಯ ಬಳಕೆ ಎಂದಿದ್ದಾರೆ.

‘ಗುರುತ್ವಾಕರ್ಷಣ ಕೇಂದ್ರ’ವು ಸಪ್ತಸಿಂಧುವಿನಿಂದ ಗಂಗಾ ಬಯಲಿಗೆ ಸ್ಥಳಾಂತರಗೊಂಡಿತು. ಆಗ ಚಾಲ್ತಿಗೆ ಬಂದ ಪದ ಭಾರತ. ಆರ್ಯಾವರ್ತ ಎಂಬುದು ಹಿಮಾಲಯ ಮತ್ತು ವಿಂಧ್ಯ ಪರ್ವತಗಳ ನಡುವಣ ಭೂಭಾಗವಾಗಿತ್ತು. ಆರ್ಯರು ಮತ್ತು ಆರ್ಯೇತರರನ್ನು ಬೆರೆಸಿ ರೂಪುಗೊಂಡ ಒಂದು ಸಮಾನ ಜನಾಂಗಕ್ಕೆ ಆರ್ಯಾವರ್ತ ಎಂದು ಕರೆವುದು ಸೂಕ್ತವಲ್ಲ. ಆದರೆ ಭಾರತವರ್ಷ ಎಂಬ ಹೆಸರಿನಡಿ ನಮ್ಮ ನಾಗರಿಕತೆಯ ತೊಟ್ಟಿಲ ನಾಮಧೇಯವಾಗಿದ್ದ ಸಿಂಧೂಸ್ ಅಥವಾ ಹಿಂದೂಸ್ ಎಂಬ ಪದವನ್ನು ಮತ್ತು ಆ ಪದದ ಕುರಿತು ನಮಗಿದ್ದ ಪ್ರೀತಿ ಪ್ರೇಮವನ್ನು ಹತ್ತಿಕ್ಕಲಾಗದು. ನಮ್ಮ ದೇಶದ ಅತಿ ಪುರಾತನ ಹೆಸರುಗಳ ದಾಖಲೆಯು ಸಪ್ತಸಿಂಧು ಅಥವಾ ಸಿಂಧು. ಭಾರತವರ್ಷ ಎಂಬುದು ಆನಂತರ ಬಂದದ್ದು, ಅಷ್ಟೇ ಅಲ್ಲದೆ ಅದೊಂದು ವ್ಯಕ್ತಿಗತ ನಾಮಧೇಯ. ನದಿಯ ಜೊತೆಗೆ ಬೆಸೆದ ಹೆಸರೇ ಶಾಶ್ವತ ಅನಂತ ಎಂಬುದು ಸಾವರ್ಕರ್ ಪ್ರತಿಪಾದನೆ.

ಅರ್ಥಾತ್ ಸಾವರ್ಕರ್ ಪ್ರತಿಪಾದನೆಯ ಪ್ರಕಾರವೇ ಮೋದಿ ಅಂಡ್ ಕಂಪನಿಯು ದೇಶದ ಹೆಸರನ್ನು ಕೇವಲ ಭಾರತವೆಂದು ಬದಲಾಯಿಸುವುದು ಸೂಕ್ತವಲ್ಲ.

ಅಷ್ಟೇ ಅಲ್ಲ, ತಾನು ಈಗ ಹೂಡಿರುವ ಭಾರತ- ಇಂಡಿಯಾ ನಾಟಕವನ್ನು ಮೋದಿ ಸರ್ಕಾರ 2015ರಲ್ಲಿ ಸುಪ್ರೀಮ್ ಕೋರ್ಟ್ ಮುಂದೆ ವಿರೋಧಿಸಿತ್ತು!

ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದ ಎಲ್ಲ ಅಧಿಕೃತ ಮತ್ತು ಅನಧಿಕೃತ ಉದ್ದೇಶಗಳಿಗೂ ಈ ದೇಶವನ್ನು ಭಾರತವೆಂದು ಕರೆಯಬೇಕು. ಇಂಡಿಯಾ ಎಂಬ ಬಳಕೆಯನ್ನು ರದ್ದು ಮಾಡಬೇಕು ಎಂಬುದಾಗಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಮ್ ಕೋರ್ಟ್ 2015ರಲ್ಲಿ ವಜಾ ಮಾಡಿತ್ತು.

ಭಾರತ ಮತ್ತು ಇಂಡಿಯಾ ಪೈಕಿ ತಮಗೆ ಇಷ್ಟವಾದ ಯಾವ ಹೆಸರಿನಿಂದಾದರೂ ಕರೆಯಲು ದೇಶದ ನಾಗರಿಕರು ಸ್ವತಂತ್ರರು ಎಂದು ಅಂದಿನ ಮುಖ್ಯನ್ಯಾಯಮೂರ್ತಿ ಟಿ.ಎಸ್.ಠಾಕೂರ್ ಮತ್ತು ನ್ಯಾಯಮೂರ್ತಿ ಯು.ಯು.ಲಲಿತ್ ನ್ಯಾಯಪೀಠ ಸಾರಿತ್ತು.

ಇಂಡಿಯಾಗೆ ಬದಲಾಗಿ ದೇಶವನ್ನು ಭಾರತವೆಂದು ಕರೆಯುವ ಅಗತ್ಯವಿಲ್ಲ. ಸಂವಿಧಾನದ ಪ್ರಥಮ ಅನುಚ್ಛೇದವನ್ನು ಬದಲಾಯಿಸಬೇಕಾದ ಯಾವುದೇ ಪರಿಸ್ಥಿತಿಗಳು ಉದ್ಭವಿಸಿಲ್ಲ ಎಂದು ಮೋದಿ ಸರ್ಕಾರದ ಗೃಹ ಮಂತ್ರಾಲಯ ಸುಪ್ರೀಮ್ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸಿತ್ತು. 

ದೇಶಕ್ಕೆ ಹೆಸರಿಡುವ ವಿಷಯ ಕುರಿತು ಸಂವಿಧಾನ ರಚನಾ ಸಭೆಯು ವಿಸ್ತೃತ ಚರ್ಚೆ ನಡೆಸಿ ಈ ಸಂಬಂಧದ ಪ್ರಥಮ ಅನುಚ್ಛೇದವನ್ನು ಸರ್ವಾನುಮತದಿಂದ ಅಂಗೀಕರಿಸಿತ್ತು ಎಂದು ಮೋದಿ ಸರ್ಕಾರದ ಗೃಹಮಂತ್ರಾಲಯ ತನ್ನ ಪ್ರಮಾಣಪತ್ರದಲ್ಲಿ ನ್ಯಾಯಾಲಯಕ್ಕೆ ನಿವೇದಿಸಿಕೊಂಡಿತ್ತು.

ಭಾರತ ಎಂದೇ ಮರುನಾಮಕರಣ ಮಾಡಬೇಕೆಂದಿದ್ದರೆ ಖೇಲೋ ಇಂಡಿಯಾ, ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಮುಂತಾದ  ಇಂಡಿಯಾ ಪದವಿರುವ ಹೆಸರುಗಳನ್ನು ಇಟ್ಟಿದ್ದಾದರೂ ಯಾಕೆ? ಆಗ ಬದಲಾಗದ ಪರಿಸ್ಥಿತಿ ಈಗ ಯಾಕೆ ಬದಲಾಗುತ್ತಿದೆ?

ಜನತೆಯ ಗಮನವನ್ನು ಅಸಲು ಸಮಸ್ಯೆಗಳಿಂದ ಬೇರೆಡೆಗೆ ಹೊರಳಿಸುವ ಸರ್ಕಸ್ ತಂತ್ರಗಳ ಮೋದಿ ಜೋಳಿಗೆ ಬರಿದಾಗುವಂತೆ ಕಾಣುತ್ತಲೇ ಇಲ್ಲ.

“You can fool some of the people all of the time, and all of the people some of the time, but you can not fool all of the people all of the time.” ಎಂಬ ಅಬ್ರಹಾಂ ಲಿಂಕನ್ ಅವರ ಸುಪ್ರಸಿದ್ಧ ಜಾಣ್ನುಡಿಯಿದೆ.

ಜನತೆ ತಮ್ಮಲ್ಲಿ ಇರಿಸಿರುವ ಅಪರಿಮಿತ ವಿಶ್ವಾಸದ ಭಂಡಾರ ಒಂದಲ್ಲ ಒಂದು ದಿನ ಬರಿದಾಗಲಿದೆ ಎಂಬುದನ್ನು ಮೋದಿಯವರು ಅರಿಯಬೇಕಿದೆ.

ಡಿ ಉಮಾಪತಿ
+ posts

ಹಿರಿಯ ಪತ್ರಕರ್ತರು

ಪೋಸ್ಟ್ ಹಂಚಿಕೊಳ್ಳಿ:

ಡಿ ಉಮಾಪತಿ
ಡಿ ಉಮಾಪತಿ
ಹಿರಿಯ ಪತ್ರಕರ್ತರು

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನೀಗೊನಿ | ಕೋಡಿ ನೋಡ್ದ… ಕೆಂಪು ಕೆಂಡವೊಂದು ಇವ್ರ ಕಡೀಕೇ ಬರ್‍ತಿತ್ತು!

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಪ್ತಪರ್ಣಿ | ಮಕ್ಕಳನ್ನು ಬೆದರಿಸಲು ನೀವು ಹೇಳುತ್ತಿರುವ ಕಟ್ಟುಕತೆಗಳಿಂದ ಮುಂದೇನಾಗಬಹುದು?

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಮೈಕ್ರೋಸ್ಕೋಪು | ಹೆಸರು ಬದಲಿಸುವ ಬಿಸಿ-ಬಿಸಿ ಚರ್ಚೆ; ಇಲ್ಲೊಂದು ಇಂಡಿಯಾ, ಅಲ್ಲೆರಡು ದುಂಬಿ

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...

ಸಾಲ್ಟ್ & ಪೆಪ್ಪರ್ | ಬನ್ನಿ, ಒಟ್ಟಿಗೆ ಊಟ ಮಾಡೋಣ…

(ಈ ಆಡಿಯೊ ಟ್ಯಾಬ್‌ನ ಬಲ ಮೇಲ್ತುದಿಯಲ್ಲಿ ಮೂರು ಗೆರೆಗಳಿರುವಲ್ಲಿ ಕ್ಲಿಕ್ ಮಾಡಿ,...