“ಸಿ.ಟಿ.ರವಿ ಮೇಲೆ ಹಲ್ಲೆ ಯತ್ನ ಮಾಡಿದ ವಿಚಾರಕ್ಕೆ 24 ಜನರನ್ನು ಆ ಕ್ಷಣದಲ್ಲೇ ಬಂಧಿಸಲಾಗಿದೆ. ತದನಂತರ ಅವರನ್ನ ಬಿಟ್ಟಿದ್ದಾರೆ. ಬಂಧನ ಮಾಡದೇ ಹೋಗಿದ್ದರೆ ಇನ್ನೂ ಹೆಚ್ಚು ಘಟನೆಗಳು ಆಗುತ್ತಿತ್ತು. ಕೋರ್ಟ್ ನೀಡಿರುವ ತಡೆಯಾಜ್ಞೆ ಆದೇಶವನ್ನು ತೆರವುಗೊಳಿಸಲು ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಸದನದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಅವಾಚ್ಯವಾಗಿ ನಿಂದಿಸಿ ಬಂಧನಕ್ಕೊಳಗಾದ ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಪ್ರತಿಕ್ರಿಯೆ ನೀಡುವುದಿಲ್ಲ” ಎಂದರು.
“ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಡೆದುಕೊಂಡಿದ್ದೇವೆ ಎಂಬ ವಾದ ಇರುತ್ತದೆ. ಪ್ರಕರಣ ಕೋರ್ಟ್‌ನಲ್ಲಿರುವುದರಿಂದ ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ಅವರು ತೀರ್ಮಾನ ಮಾಡುತ್ತಾರೆ. ಬೇರೆ ಬೇರೆ ರೀತಿಯಲ್ಲಿ ಮಾಹಿತಿಯನ್ನು ಕೇಳುವ ಸಂದರ್ಭದಲ್ಲಿ, ಇವರನ್ನು ಕೇಳದೆ ಜಡ್ಜ್‌ಮೆಂಟ್ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದರ ಬಗ್ಗೆ ಟೀಕೆ ಮಾಡಲು ಆಗಲ್ಲ. ಸಭಾಪತಿಗಳು ದಾಖಲೆಗಳಿಲ್ಲ ಎಂದು ಹೇಳಿರುವುದು ನನಗೆ ಗೊತ್ತಿಲ್ಲ. ಕೆಲವರು ಸದನ ಮುಗಿದ ಬಳಿಕ ಘಟನೆ ನಡೆಯಿತು ಅಂತ ಹೇಳುತ್ತಿದ್ದಾರೆ. ಆದ್ದರಿಂದ ಸಭಾಪತಿಗಳಿಗೆ ಇದರಲ್ಲಿ ಏನು ಹೇಳೋಕೆ ಆಗಲ್ಲ ಅಂತ ಕೆಲವರು ವಿಶ್ಲೇಷಣೆ ಮಾಡುತ್ತಾರೆ. ಇನ್ನು ಕೆಲವರು ಸದನ ನಡೀತಾ ಇತ್ತು ಅಂತ ವಿಶ್ಲೇಷಣೆ ಮಾಡಿದ್ದಾರೆ. ಅದನ್ನೆಲ್ಲ ಈಗ ನಾನು ಮಾತನಾಡಲು ಹೋಗಲ್ಲ” ಎಂದು ಹೇಳಿದರು.
ಗೃಹ ಇಲಾಖೆ ಓವರ್ ಟೇಕ್ ಮಾಡಿ ಈ ಬೆಳವಣಿಗೆ ಆಯ್ತಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಆ ರೀತಿ ಮಾಡಲು ಆಗುತ್ತಾ? ನಮ್ಮ ಮೇಲೆ ಮುಖ್ಯಮಂತ್ರಿಗಳು ಇದ್ದಾರೆ. ಮುಖ್ಯಮಂತ್ರಿ ಬಿಟ್ಟರೆ ಬೇರೆ ಯಾರು ಇಲ್ಲ. ಗೃಹ ಸಚಿವರ ಮೇಲೆ ಮಂತ್ರಿಗಳ ಮೇಲೆ ಮುಖ್ಯಂಮಂತ್ರಿ ಇದ್ದಾರೆ. ಅಷ್ಟು ಬಿಟ್ರೆ ಬೇರೇನೂ ಕಾಣಿಸ್ತಾಯಿಲ್ಲ. ನನಗೆ ಬೇಕಾದಷ್ಟು ಸ್ವಾತಂತ್ರ್ಯ ಇದೆ” ಎಂದರು.
ಕಲಾಪ ಸೂಕ್ತ ರೀತಿಯಲ್ಲಿ ನಡೆದಿದೆಯಾ ಅನ್ನೋ ವಿಚಾರದ ಕುರಿತು ಪ್ರತಿಕ್ರಿಯಿಸಿ, “ವಿಧಾನಮಂಡಲ ಅಧಿವೇಶನದ ಸಂದರ್ಭದಲ್ಲಿ ಅನೇಕ ಪ್ರತಿಭಟನೆಗಳು ನಡೆದವು. ಎಸ್‌ಸಿ, ಎಸ್‌ಟಿ, ವಕೀಲರು, ರೈತರು, ಪಂಚಮಸಾಲಿ ಸಮುದಾಯದ ಪ್ರತಿಭಟನೆಗಳಾದವು. ಎರಡು ಸದನಗಳಲ್ಲಿಯೂ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಸಂಪೂರ್ಣ ಚರ್ಚೆಯಾಗಿದೆ. ವಕ್ಫ್ ವಿಚಾರವಾಗಿ ಚರ್ಚೆಯಾಗಿದ್ದು, ಅದಕ್ಕೆ ಸಚಿವರು ಸಮಂಜಸವಾಗಿ ಉತ್ತರ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರಿಗೆ ಉತ್ತರ ನೀಡಲು ಬಿಡಲಿಲ್ಲ. ಎಲ್ಲಾ ಸಮಯ ವ್ಯರ್ಥ ಆಯ್ತು ಅಂತ ಹೇಳಲು ಆಗುವುದಿಲ್ಲ” ಎಂದು ಹೇಳಿದರು.