ವಿಜಯೇಂದ್ರ ರಾಜ್ಯಾಧ್ಯಕ್ಷ ಕುರ್ಚಿ ಮೇಲೆ ‘ಬ್ಯಾಂಡೇಜ್’ ಹಾಕಿದ ಸಿ.ಟಿ. ರವಿ!

Date:

Advertisements
ಕರ್ನಾಟಕದಲ್ಲಿ ಬಿಜೆಪಿಯು ಲಿಂಗಾಯತ - ಒಕ್ಕಲಿಗ ಬಲದಿಂದ ಬ್ರಾಹ್ಮಣ ಅಧಿಪತ್ಯಕ್ಕಾಗಿ ಹಾತೊರೆಯುತ್ತಿರುವುದು ಕಳೆದ ಮೂರು ದಶಕಗಳ ವಿದ್ಯಮಾನ...

ತಲೆಗೆ ಪೆಟ್ಟಾಗಿದೆ ಎಂದು ಪಟ್ಟಿ ಕಟ್ಟಿಕೊಂಡು ಸುತ್ತಾಡಿದ ಸಿ.ಟಿ. ರವಿ, ರೆಸ್ಟ್ ಮಾಡುವಂತೆ ಕಾಣುತ್ತಿಲ್ಲ. ಮಾಧ್ಯಮಗಳು ವಾಪಸ್ ಹೋಗುವವರೆಗೂ ಸಿ.ಟಿ. ರವಿ ಸುಮ್ಮನಾಗುವುದಿಲ್ಲ. ಸದ್ಯಕ್ಕೆ ಇದು ವಿಜಯೇಂದ್ರ ಬಣದವರ ಪೀಕಲಾಟ. ‘ಪ್ರಾಸ್ಟಿಟ್ಯೂಟ್’ ಎಂಬ ಪದವನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಬಳಸಿಯೂ ಹೀರೋ ಎಂಬಂತೆ ರವಿ ಚಿತ್ರಿತವಾಗುತ್ತಿರುವ ಹಿಂದೆ ಬಿಜೆಪಿ ಬಣ ರಾಜಕಾರಣವಿದೆ. ಅದು ಸದ್ದಿಲ್ಲದೆ ಮುನ್ನಲೆಗೆ ಬರತೊಡಗಿದೆ. ಪ್ರಧಾನಿ ಮೋದಿಯವರಿಗೆ ‘ನೀಚ’ ಎಂದಿದ್ದ ಹಿರಿಯ ಕಾಂಗ್ರೆಸ್ ನಾಯಕ ಮಣಿಶಂಕರ್ ಅಯ್ಯರ್ ಅವರು ಪಕ್ಷದಲ್ಲಿ ಮೂಲೆಗುಂಪಾದರು. ಆದರೆ ಸದನದೊಳಗೆ ‘ಪ್ರಾಸ್ಟಿಟ್ಯೂಟ್’ ಎಂದು ನಿಂದಿಸಿಯೂ ಬಿಜೆಪಿ ಮುಖಂಡ ಸಿ.ಟಿ. ರವಿ ರಾರಾಜಿಸುತ್ತಿರುವುದು ಹೇಗೆ? ಇದು ಪಕ್ಷವೊಂದರ ಸಂಸ್ಕೃತಿಯ ಪ್ರಶ್ನೆಗಿಂತಲೂ, ಪಕ್ಷದೊಳಗಿನ ಆಂತರಿಕ ಬೇಗುದಿಯ ಸೂಚನೆಯಂತೆ ಕಾಣುತ್ತಿಲ್ಲವೇ?

ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಸಿ.ಟಿ. ರವಿಯವರು ಬಿಜೆಪಿ ಹೈಕಮಾಂಡ್‌ನ ನೆಚ್ಚಿನ ವ್ಯಕ್ತಿ. ಸಂಸತ್‌ಗೆ ಕೋಟಾ ಶ್ರೀನಿವಾಸ ಪೂಜಾರಿಯವರು ಆಯ್ಕೆಯಾದ ಬಳಿಕ ತೆರವಾದ ಎಂಎಲ್‌ಸಿ ಸ್ಥಾನವನ್ನು ಗಿಟ್ಟಿಸಿಕೊಂಡ ವ್ಯಕ್ತಿ. ಸಿ.ಟಿ. ರವಿಯವರ ರಾಜಕೀಯ ವೃತ್ತಾಂತ, ಅಪೇಕ್ಷೆಗೆ ಕುಮ್ಮಕ್ಕು ಕೊಡುವಂತೆ ಪಕ್ಷದೊಳಗಿನ ಬಣ ರಾಜಕಾರಣ, ಅದಕ್ಕೆ ತಕ್ಕಂತೆ ಕುಣಿಯುವ ಗೋದಿ ಮೀಡಿಯಾಗಳು- ಇವೆಲ್ಲವೂ ಒಂದಕ್ಕೊಂದು ಪೂರಕವಾದ ಸಂಗತಿಗಳೇ ಹೌದು.

ಕರ್ನಾಟಕದಲ್ಲಿ ಬಿಜೆಪಿಯು ಲಿಂಗಾಯತ – ಒಕ್ಕಲಿಗ ಬಲದಿಂದ ಬ್ರಾಹ್ಮಣ ಅಧಿಪತ್ಯಕ್ಕಾಗಿ ಹಾತೊರೆಯುತ್ತಿರುವುದು ಕಳೆದ ಮೂರು ದಶಕಗಳ ವಿದ್ಯಮಾನ. ಅದಕ್ಕೆ ಸಿ.ಟಿ. ರವಿ ಪ್ರಕರಣ, ವಿಜಯೇಂದ್ರ ವಿರುದ್ಧ ಬಂಡಾಯ, ಬಣ ರಾಜಕಾರಣ- ಇದು ಅರ್ಥವಾಗಬೇಕಾದರೆ ನಾವು ಈ ಮೂರು ದಶಕಗಳ ಕರ್ನಾಟಕದ ರಾಜಕೀಯ ಇತಿಹಾಸವನ್ನು ನೋಡಬೇಕು.

Advertisements
ct ravi13

ಕರ್ನಾಟಕದಲ್ಲಿ ಬಿಜೆಪಿ ಪ್ರವರ್ಧಮಾನಕ್ಕೆ ಬಂದಿದ್ದು 1994ರ ಅವಧಿಯಲ್ಲಿ. 1989ರಲ್ಲಿ ನಾಲ್ಕು ಸ್ಥಾನ ಗೆದ್ದಿದ್ದ ಬಿಜೆಪಿ 1994ರ ವೇಳೆಗೆ 40 ಸ್ಥಾನಗಳನ್ನು ಗೆದ್ದು ವಿರೋಧ ಪಕ್ಷವಾಗಿ ಹೊರಹೊಮ್ಮಿತ್ತು. 1999ರ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿಯೇ ವಿರೋಧ ಪಕ್ಷವಾಗಿತ್ತು. ಅಂದಿನಿಂದಲೂ ಬಿಜೆಪಿಯೊಳಗೆ ಲಿಂಗಾಯತ ವರ್ಸಸ್ ಬ್ರಾಹ್ಮಣ ತಿಕ್ಕಾಟ ನಡೆಯುತ್ತಲೇ ಬಂದಿದೆ. ಆರಂಭದಲ್ಲಿ ಯಡಿಯೂರಪ್ಪ ವರ್ಸಸ್ ಅನಂತ ಕುಮಾರ್, ಈಗ ಯಡಿಯೂರಪ್ಪ ವರ್ಸಸ್ ಬಿ.ಎಲ್. ಸಂತೋಷ್. ಬಿಜೆಪಿಯ ಹಿರಿಯ ನಾಯಕ ಯಡಿಯೂರಪ್ಪನವರನ್ನು ಮೂಲೆಗುಂಪು ಮಾಡುವುದು ಹೇಗೆ ಎಂಬ ಲೆಕ್ಕಾಚಾರದಲ್ಲಿ ಆರ್‌ಎಸ್‌ಎಸ್ ಮುಳುಗಿದೆ. ಲಿಂಗಾಯತ ಸಮುದಾಯವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಆರ್‌ಎಸ್‌ಎಸ್ ಯಶಸ್ವಿಯಾದರೆ, ಯಡಿಯೂರಪ್ಪನವರನ್ನು ಸಲೀಸಾಗಿ ಬದಿಗೆ ಸರಿಸಬಹುದು. ಇದಕ್ಕೆ ಪೂರಕವಾಗಿ ವಚನ-ಬಸವಣ್ಣರನ್ನು ಆರ್‌ಎಸ್‌ಎಸ್ ಮುನ್ನೆಲೆಗೆ ತಂದಿದೆ.

ಯಡಿಯೂರಪ್ಪನವರ ಕೈಗೆ ಲಿಂಗಾಯತ ನಾಯಕತ್ವ ಶಿಫ್ಟ್ ಆಗಿದ್ದರ ಹಿಂದಿನ- ಮುಂದಿನ ಬೆಳವಣಿಗೆಗಳನ್ನು ಅವಲೋಕಿಸಬೇಕು. ಬ್ರಾಹ್ಮಣರು, ಶೆಟ್ಟರು ಮತ್ತು ಮಾರ್ಮಾಡಿಗಳ ಪಕ್ಷವಾಗಿದ್ದ ಬಿಜೆಪಿ, ಕರಾವಳಿ ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ಆರಂಭದಲ್ಲಿ ಕಂಡುಕೊಂಡಿತು. ಜನಸಂಘದ ಕಾಲದಲ್ಲೇ ಉಡುಪಿ ನಗರಸಭೆಯಲ್ಲಿ ಸಂಘಪರಿವಾರ ವಿಜಯ ಸಾಧಿಸಿತ್ತು. 1991ರ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ನಾಲ್ಕು ಸೀಟ್‌ಗಳನ್ನು ಬಿಜೆಪಿ ಗೆದ್ದಿತ್ತು. 1998 ಮತ್ತು 1999ರಲ್ಲಿ ಲೋಕಸಭಾ ಚುನಾವಣೆಗಳು ನಡೆದಾಗ ಆದ ಬದಲಾವಣೆಗಳನ್ನು ನೋಡಬೇಕಾಗುತ್ತದೆ. ಜನತಾದಳದಿಂದ ಉಚ್ಚಾಟಿತರಾಗಿದ್ದ ರಾಮಕೃಷ್ಣ ಹೆಗಡೆಯವರು 1998ರ ಲೋಕಸಭೆ ಚುನಾವಣೆ ವೇಳೆಗೆ ಲೋಕಶಕ್ತಿ ಪಕ್ಷವನ್ನು ಕಟ್ಟಿದ್ದರು. ಹೆಗಡೆಯವರು ಬ್ರಾಹ್ಮಣರಾದರೂ ಲಿಂಗಾಯತ ನಾಯಕರಾಗಿ ಗುರುತಿಸಿಕೊಂಡಿದ್ದರು. ಉತ್ತರ ಕರ್ನಾಟಕದಲ್ಲಿ ಅವರ ಹಿಡಿತವಿತ್ತು. ಆ ಭಾಗದ ಗೋವಿಂದ ಕಾರಜೋಳ, ಎಸ್.ಕೆ. ಕಾಂತಾ, ರಮೇಶ್ ಜಿಗಜಿಣಗಿ, ಉಮೇಶ್ ಕತ್ತಿ, ಲಕ್ಷ್ಮಣ್ ಸವದಿ- ಇವರೆಲ್ಲರೂ ಹೆಗಡೆಯವರ ಜೊತೆಗಿದ್ದವರೇ. ಎರಡು ಲೋಕಸಭಾ ಚುನಾವಣೆಗಳಲ್ಲಿ ರಾಮಕೃಷ್ಣ ಹೆಗಡೆಯವರ ಲೋಕಶಕ್ತಿ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ಈ ನಡುವೆ 1999ರಲ್ಲಿ ಜನತಾದಳ ಹೋಳಾಯಿತು. ಜನತಾದಳದ ಜೆ.ಎಚ್.ಪಟೇಲ್‌, ಲೋಕಶಕ್ತಿಯ ರಾಮಕೃಷ್ಣ ಹೆಗಡೆ, ಜಾರ್ಜ್ ಫರ್ನಾಂಡಿಸ್, ನಿತೀಶ್ ಕುಮಾರ್‌, ಶರತ್ ಯಾದವ್ ಇವರೆಲ್ಲರೂ ಸೇರಿ ಜೆಡಿಯು (ಜನತಾದಳ ಯುನೈಟೆಡ್‌) ಕಟ್ಟಿದರು. ಅಖಿಲ ಭಾರತ ಮಟ್ಟದಲ್ಲಿ ಹುಟ್ಟಿದ ಈ ಪಕ್ಷವು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು.

hegade 1

ರಾಮಕೃಷ್ಣ ಹೆಗಡೆಯವರ ನಿಧನದ ನಂತರ ಉತ್ತರ ಕರ್ನಾಟಕದಲ್ಲಿನ ಜೆಡಿಯು ನಾಯಕರು ಬಿಜೆಪಿಗೆ ಸೇರಿಕೊಂಡರು. ಗೋವಿಂದ ಕಾರಜೋಳ, ರಮೇಶ್ ಜಿಗಜಿಣಗಿ, ಉಮೇಶ್ ಕತ್ತಿಯಂಥವರು ಬಿಜೆಪಿಯಲ್ಲಿ ಗುರುತಿಸಿಕೊಂಡರು. ಹೆಗಡೆಯವರ ಬಳಿಕ ತೆರವಾದ ಲಿಂಗಾಯತರ ಲೀಡರ್ ಶಿಪ್ ಜಾಗಕ್ಕೆ ಬಂದಿದ್ದು ಯಡಿಯೂರಪ್ಪ. ಈ ಸಂದರ್ಭದಲ್ಲಿ 2004ರ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದಿತು. ಕಾಂಗ್ರೆಸ್- ಜೆಡಿಎಸ್ ಮಾಡಿಕೊಂಡಿದ್ದ ಮೈತ್ರಿ ಸರ್ಕಾರವನ್ನು ಮುರಿದು, ಜೆಡಿಎಸ್‌ನ ಶಾಸಕರನ್ನು ಕರೆದುಕೊಂಡು ಬಿಜೆಪಿಯೊಂದಿಗೆ ಹೋದ ಕುಮಾರಸ್ವಾಮಿ 20:20 ಸರ್ಕಾರ ರಚಿಸಿಕೊಂಡರು. ಅಧಿಕಾರ ಹಂಚಿಕೆ ಸೂತ್ರದನ್ವಯ, ಕುಮಾರಸ್ವಾಮಿಯವರು ಯಡಿಯೂರಪ್ಪನವರಿಗೆ ಅಧಿಕಾರ ಹಸ್ತಾಂತರಿಸಲಿಲ್ಲ. ಒಕ್ಕಲಿಗ ನಾಯಕತ್ವವು ಲಿಂಗಾಯತರಿಗೆ ಅನ್ಯಾಯ ಮಾಡಿತೆಂಬ ಆಕ್ರೋಶ ವ್ಯಕ್ತವಾಗಿ ಲಿಂಗಾಯತರು ಬಿಜೆಪಿಯೊಂದಿಗೆ ಧ್ರುವೀಕರಣಗೊಂಡರು. ಯಡಿಯೂರಪ್ಪನವರ ಪರ ಅನುಕಂಪ ಹುಟ್ಟಿದ್ದನ್ನು, ಲಿಂಗಾಯತರು ಯಡಿಯೂರಪ್ಪನವರ ನಾಯಕತ್ವವನ್ನು ಒಪ್ಪಿದ್ದನ್ನು ಗಮನಿಸಿದ ಅನಂತಕುಮಾರ್ ಕೂಡ, ‘ಮುಂದಿನ ಸಿಎಂ ಯಡಿಯೂರಪ್ಪನವರೇ’ ಎಂದು ಘೋಷಿಸಿದ್ದರು.

ಬಿಜೆಪಿ ಅಧಿಕಾರಕ್ಕೆ ಬರಲು ತಿಣುಕಾಡಿದ ರೀತಿಯಲ್ಲಿ ನಮಗೆ ಕಾಣುವ ಸತ್ಯಗಳನ್ನು ಗಮನಿಸಬೇಕು. ಎರಡು ಬಾರಿ ಅಧಿಕಾರಕ್ಕೆ ಬಂದಾಗಲೂ ಕರ್ನಾಟಕಲ್ಲಿ ಬಿಜೆಪಿಗೆ ಬಹುಮತ ಸಿಗಲೇ ಇಲ್ಲ. ಇದಕ್ಕೆ ಕಾರಣ ಒಕ್ಕಲಿಗ ಪ್ರಾಬಲ್ಯವಿರುವ ಹಳೆಯ ಮೈಸೂರು ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲದಿರುವುದು ಸ್ಪಷ್ಟವಾಗುತ್ತದೆ. ಈ ಭಾಗದಲ್ಲಿ ಜೆಡಿಎಸ್, ಕಾಂಗ್ರೆಸ್ ಗೆಲ್ಲುತ್ತಾ ಬಂದಿವೆ. ದಕ್ಷಿಣ ಕರ್ನಾಟಕದಲ್ಲಿ ಪಕ್ಷ ವಿಸ್ತರಣೆಯಾಗದಿದ್ದರೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬರುವುದು ಕನಸಿನ ಮಾತು. 2008ರಲ್ಲಿ ಅಧಿಕಾರಕ್ಕೆ ಬಂದಾಗಲೂ ಅವರಿಗೆ ಬಹುಮತಕ್ಕೆ 3 ಸ್ಥಾನಗಳ ಕೊರತೆ ಇತ್ತು. ಆರು ಇತರೆ ಶಾಸಕರ ಆಪರೇಷನ್ ನಡೆಸಿ, ಅಧಿಕಾರ ಹಿಡಿದರು. 2018ರಲ್ಲಿ 104 ಸ್ಥಾನಗಳಿಗೆ ಬಿಜೆಪಿ ಸೀಮಿತವಾಯಿತು. ದೊಡ್ಡ ಪಕ್ಷವಾಗಿ ಹೊರಹೊಮ್ಮಿ, ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ, ಆಪರೇಷನ್ ನಡೆಸಲು ವಿಫಲವಾಗಿ, ಬಹುಮತ ಸಾಬೀತು ಮಾಡಲಾಗದೆ ಮನೆಗೆ ಹೋದರು. 2019ರಲ್ಲಿ ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು.

ಇದನ್ನೂ ಓದಿರಿ: ಸಿ.ಟಿ. ರವಿ ಮಹಿಳಾ ನಿಂದಕ ಪ್ರಕರಣ ಮುಂದೇನಾಗಲಿದೆ?

ಮತ್ತೊಂದೆಡೆ ಯಡಿಯೂರಪ್ಪನವರ ಕುಟುಂಬದ ಪ್ರಾಬಲ್ಯ ಬಿಜೆಪಿಯೊಳಗೆ ಹೆಚ್ಚಾದಂತೆ, ವಿರೋಧಿ ಬಣವೂ ಸಕ್ರಿಯವಾಗತೊಡಗಿತ್ತು. ಆರ್‌ಎಸ್‌ಎಸ್, ಬಿ.ಎಲ್. ಸಂತೋಷ್, ಅನಂತಕುಮಾರ್, ಸಿ.ಟಿ. ರವಿ- ಇವರು ಆರಂಭದಿಂದಲೂ ಬಿಎಸ್‌ವೈ ವಿರುದ್ಧ ಇದ್ದವರೇ. ಲಿಂಗಾಯತರಿಂದ ಬ್ರಾಹ್ಮಣರ ಕೈಗೆ ಅಧಿಕಾರ ಸಿಗಬೇಕಾದರೆ, ಪಕ್ಷಕ್ಕೆ ಯಡಿಯೂರಪ್ಪ ಅನಿವಾರ್ಯವಲ್ಲ. ಯಡಿಯೂರಪ್ಪ ಇರದಿದ್ದರೂ ಲಿಂಗಾಯತರು ಬಿಜೆಪಿಯೊಂದಿಗೆ ಇದ್ದಾರೆ ಎಂಬುದನ್ನು ಖಚಿತ ಪಡಿಸಿಕೊಂಡು, ಒಂದಿಷ್ಟು ಒಕ್ಕಲಿಗ ಮತಗಳನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರಷ್ಟೇ ಆರ್‌ಎಸ್‌ಎಸ್ ಧುರೀಣರು ಇಲ್ಲಿ ಅಧಿಕಾರ ಹಿಡಿಯಲು ಸಾಧ್ಯ. ಒಕ್ಕಲಿಗರನ್ನೂ ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕೆಂದು ಅರಿತಿದ್ದ ಆರ್‌ಎಸ್‌ಎಸ್, ಆರ್.ಅಶೋಕ್ ಅವರನ್ನು ಮುನ್ನಲೆಗೆ ತಂದಿತು. ಯಡಿಯೂರಪ್ಪನವರ ಕ್ಯಾಬಿನೆಟ್‌ನಲ್ಲಿ ಸಚಿವರಾಗಿದ್ದ ಅಶೋಕ್ ಅವರನ್ನು ಡಿಸಿಎಂ ಮಾಡಲಾಯಿತು. ಅಶೋಕ್ ಅವರ ವೀಕ್ನೆಸ್ ಎಂದರೆ- ಹೊಂದಾಣಿಕೆಯ ರಾಜಕಾರಣ ಎಂದು ಬಿಜೆಪಿಯ ಯತ್ನಾಳ್ ಅಂಥವರು ಮೂದಲಿಸುತ್ತಾರೆ. ಅಶೋಕ್ ಅವರು ಎಂದಿಗೂ ದೇವೇಗೌಡರನ್ನು, ಕುಮಾರಸ್ವಾಮಿಯವರನ್ನು, ಡಿ.ಕೆ.ಶಿವಕುಮಾರ್ ಅವರನ್ನು ಎದುರು ಹಾಕಿಕೊಳ್ಳುವುದಿಲ್ಲ ಎಂಬ ಆರೋಪ ಇದೆ. ಆದರೆ ಕರ್ನಾಟಕದಲ್ಲಿ ಒಕ್ಕಲಿಗರೆಂದರೆ ಪ್ರಧಾನವಾಗಿ ಹಳೇ ಮೈಸೂರು ಭಾಗವೇ ಗಣನೆಗೆ ಬರುತ್ತದೆ. ಈ ಭಾಗದಲ್ಲಿ ಗಂಗಟಕಾರರು, ಮರಸೊಕ್ಕಲಿಗರೇ ಮೇಲುಗೈ. ಸಹಜವಾಗಿ ಆರ್. ಅಶೋಕ್ ನಾಯಕತ್ವ ಬೆಳೆಸುವುದು ಬಿಜೆಪಿಗೆ ಅನಿವಾರ್ಯವಾಗಿತ್ತು.

2008ರಲ್ಲಿ ಅಧಿಕಾರಕ್ಕೆ ಬಂದಿದ್ದ ಯಡಿಯೂರಪ್ಪನವರನ್ನು ಕೆಳಗಿಳಿಸುವ ಸಂದರ್ಭದಲ್ಲಿ ಸದಾನಂದಗೌಡರನ್ನು ಆಯ್ಕೆ ಮಾಡಲು ಸೂಚಿಸಿದರು. ತಮ್ಮ ಜಾಗದಲ್ಲಿ ಬೇರೆಯ ಲಿಂಗಾಯತ ಲೀಡರ್ ಶಿಪ್ ಬೆಳೆಯಬಾರದೆಂಬುದು ಅವರ ಉದ್ದೇಶವಾಗಿತ್ತು. ಅರೆಭಾಷೆ ಒಕ್ಕಲಿಗರಾದ ಸದಾನಂದಗೌಡರನ್ನು ಮೈಸೂರು, ಬೆಂಗಳೂರು, ಕೋಲಾರ, ಹಾಸನ, ತುಮಕೂರು ಭಾಗದ ಒಕ್ಕಲಿಗರು ತಮ್ಮ ಲೀಡರ್ ಎಂದು ಭಾವಿಸಲು ಸಾಧ್ಯವಿರಲಿಲ್ಲ. ಸದಾನಂದಗೌಡರು ಬಿಎಸ್‌ವೈಗೆ ಸೆಡ್ಡು ಹೊಡೆದು, ತಾನು ಆರ್‌ಎಸ್‌ಎಸ್‌ ಹೇಳಿದಂತೆ ಕೇಳುತ್ತೇನೆ ಎಂದಾಗ ಯಡಿಯೂರಪ್ಪ ಸಿಟ್ಟಾದರು. ತಮ್ಮ ಜಾತಿಯವರನ್ನು ಬಿಟ್ಟು ಬೇರೆಯವರಿಗೆ ಯಡಿಯೂರಪ್ಪ ಮಣೆ ಹಾಕಿದ್ದಾರೆಂದು ಲಿಂಗಾಯತರಿಗೂ ಅನಿಸತೊಡಗಿತ್ತು. ಆಗ ಶೆಟ್ಟರ್ ಅವರನ್ನು ಕುರ್ಚಿಯಲ್ಲಿ ಕೂರಿಸಿ, ಲಿಂಗಾಯತರ ನಂಬಿಕೆ ಉಳಿಸಿಕೊಳ್ಳುವ ಕಸರತ್ತನ್ನು ಯಡಿಯೂರಪ್ಪ ಮಾಡಿದರು.

ಮತ್ತೆ ಒಕ್ಕಲಿಗ ವಿಚಾರಕ್ಕೆ ಬರುವುದಾದರೆ, ಬಿಜೆಪಿಗೆ ಒಕ್ಕಲಿಗ ಮತಗಳು ಬೇಕೆಂಬ ಅನಿವಾರ್ಯತೆ ಇದ್ದೇ ಇದೆ. ಅಶೋಕ್‌ ಅವರು ವಿಫಲರಾದಾಗ, ನಾಯಕತ್ವದ ಕುರ್ಚಿಗೆ ಕೈಹಾಕಿದವರಲ್ಲಿ ಸಿ.ಟಿ. ರವಿಯೂ ಒಬ್ಬರು. ಉಗ್ರ ಹಿಂದುತ್ವ ಪ್ರತಿಪಾದಕರಾದ ರವಿ, ಮಲೆನಾಡು ಭಾಗದ ನಾಮಧಾರಿ ಒಕ್ಕಲಿಗರು ಎಂಬುದನ್ನು ಗಮನಿಸಬೇಕು. ಮೈಸೂರು ಭಾಗದಲ್ಲಿ ನಾಮಧಾರಿ ಒಕ್ಕಲಿಗರ ಪ್ರಾಬಲ್ಯವಿಲ್ಲ. ಆದರೂ ಸಿ.ಟಿ. ರವಿಯವರಿಗೆ ಈ ನಾಯಕತ್ವ ನೀಡುವ ಕಸರತ್ತನ್ನು ಅನಿವಾರ್ಯವಾಗಿ ಬಿಜೆಪಿ ಮಾಡಲೇಬೇಕಿತ್ತು. ಸದಾನಂದ ಗೌಡರಂತೆಯೇ, ಸಿ.ಟಿ. ರವಿಯವರಿಗೂ ದಕ್ಷಿಣ ಕರ್ನಾಟಕದ ಒಕ್ಕಲಿಗ ಪ್ರಾಬಲ್ಯದಲ್ಲಿ, ಅಂದರೆ ಗಂಗಟಕಾರ ಮತ್ತು ಮರಸೊಕ್ಕಲಿಗರ ನಡುವೆ ಒಕ್ಕಲಿಗ ನಾಯಕನಾಗಿ ಬೆಳೆಯುವುದು ಸವಾಲಿನ ಸಂಗತಿ.

2019ರಲ್ಲಿ ಆಪರೇಷನ್ ಕಮಲ ನಡೆಸಿದ ಮುಂದಾಳತ್ವವನ್ನು ಯಡಿಯೂರಪ್ಪನವರೇ ವಹಿಸಿದರು. ಆದರೆ ಮಂತ್ರಿಮಂಡಲ ರಚಿಸಲು ಒಂದೂವರೆ ತಿಂಗಳು ಬಿಜೆಪಿ ಹೈಕಮಾಂಡ್ ಆಟ ಆಡಿಸಿತು. ಅಷ್ಟರ ಮಟ್ಟಿಗೆ ಬಿ.ಎಲ್. ಸಂತೋಷ್ ಪ್ರಬಲರಾಗಿದ್ದರು. ಮೂರು ಜನ ಉಪಮುಖ್ಯಮಂತ್ರಿಗಳನ್ನು ಮಾಡಲಾಯಿತು. ಪರಿಶಿಷ್ಟ ಜಾತಿ ಎಡಗೈ ಸಮುದಾಯದ ಗೋವಿಂದ ಕಾರಜೋಳ, ಬೆಂಗಳೂರು ಭಾಗದ ಒಕ್ಕಲಿಗರಾದ ಅಶ್ವತ್ಥ ನಾರಾಯಣ, ಲಿಂಗಾಯತ ಸಮುದಾಯದ ಲಕ್ಷ್ಮಣ್ ಸವದಿ ಡಿಸಿಎಂ ಆದರು. ಸಿ.ಟಿ. ರವಿ, ಅಶೋಕ್ ಅವರಿದ್ದರೂ ಅಶ್ವತ್ಥ ನಾರಾಯಣ ಅವರ ಮೂಲಕ ಒಕ್ಕಲಿಗ ಪ್ರಯೋಗವನ್ನು ಆರ್‌ಎಸ್‌ಎಸ್ ಮುಂದುವರಿಸಿತು. ಆದರೆ ಯಾವುದೇ ಪ್ರಯೋಜನವಾಗಲಿಲ್ಲ ಎಂಬುದು ಮುಂದಿನ ಬೆಳವಣಿಗೆಯಿಂದ ಸ್ಪಷ್ಟವಾಗುತ್ತದೆ. ಯಡಿಯೂರಪ್ಪ ಅವರನ್ನು ಇಳಿಸಿ, ಬೊಮ್ಮಾಯಿಯವರನ್ನು ಸಿಎಂ ಕುರ್ಚಿಗೆ ಕೂರಿಸಿದ ಸಂದರ್ಭದಲ್ಲಿ ಅಶ್ವತ್ಥ ನಾರಾಯಣ ಅವರನ್ನು ಡಿಸಿಎಂ ಆಗಿ ಮುಂದುವರಿಸಲಾಗಲಿಲ್ಲ!

ಇದನ್ನೂ ಓದಿರಿ: ಮಾಧ್ಯಮಗಳ ಪಕ್ಷಪಾತಿ ಧೋರಣೆ ಮತ್ತೆ ಅನಾವರಣ; ಸಿ.ಟಿ.ರವಿಗೆ ಇಷ್ಟೊಂದು ಪ್ರಚಾರ ನೀಡಬೇಕಿತ್ತೆ?

ಒಂದು ವೇಳೆ ಸಿ.ಟಿ. ರವಿಯವರು ಎಂಎಲ್‌ಎ ಚುನಾವಣೆಯಲ್ಲಿ ಗೆದ್ದಿದ್ದರೆ, ಅವರೇ ವಿರೋಧ ಪಕ್ಷದ ನಾಯಕನಾಗುವ ಸಾಧ್ಯತೆಯೂ ಇತ್ತು. ಇದಕ್ಕೆ ಅಡ್ಡಿಯಾಗಿದ್ದೇ ಯಡಿಯೂರಪ್ಪ ಬಣ ಎನ್ನುತ್ತಾರೆ ರಾಜಕೀಯ ಪರಿಣಿತರು. ಚುನಾವಣೆಯಲ್ಲಿ ರವಿ ಸೋಲಲು ಶಿಕಾರಿಪುರದ ಧುರೀಣರು ಕೆಲಸ ಮಾಡಿದ್ದಾರೆ ಎಂಬ ಆರೋಪಗಳು ಇಂದಿಗೂ ಇವೆ. ಪಕ್ಷಕ್ಕಾಗಿ ದುಡಿದಿದ್ದೇನೆ, ಚುನಾವಣಾ ಉಸ್ತುವಾರಿಗಳನ್ನು ನಿರ್ವಹಿಸಿದ್ದೇನೆ, ತನಗೊಂದು ಮಹತ್ವದ ಹುದ್ದೆ ಸಿಗುತ್ತದೆ ಎಂಬ ಹಂಬಲ ಸಹಜವಾಗಿ ಸಿ.ಟಿ. ರವಿಯವರಿಗೆ ಇತ್ತು. ಆದರೆ ಅವರು ಗೆಲ್ಲಲಿಲ್ಲ. ಈಗ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿರುವುದರಿಂದ ವಿಧಾನಸಭೆ ವಿಪಕ್ಷ ನಾಯಕ ಸ್ಥಾನವನ್ನು ಒಕ್ಕಲಿಗ ಸಮುದಾಯದವರಿಗೆ ನೀಡಬೇಕಾದ ಅನಿವಾರ್ಯತೆ ಇತ್ತು. ಹೀಗಾಗಿ ಮತ್ತೆ ಅಶೋಕ್ ಅವರನ್ನೇ ಬಿಜೆಪಿ ಮುಂದೆ ತಂದಿತು.

Ahok Ashwath

ಲೋಕಸಭಾ ಚುನಾವಣೆಯಲ್ಲಿ ಗೆದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರಿಂದಾಗಿ ವಿಧಾನ ಪರಿಷತ್‌ನಲ್ಲಿ ತೆರವಾದ ಎಂಎಲ್‌ಸಿ ಸ್ಥಾನಕ್ಕೆ ಮತ್ತೆ ಸಿ.ಟಿ. ರವಿಯವರನ್ನು ಬಿಜೆಪಿಯ ಹೈಕಮಾಂಡ್ ತಂದು ಕೂರಿಸಿತು. ಎಂಎಲ್‌ಸಿ ಆಗಿ ಆಯ್ಕೆಯಾದ ಬಳಿಕ ವಿಧಾನಪರಿಷತ್ ನಾಯಕತ್ವಕ್ಕೆ ರವಿ ಪ್ರಯತ್ನಿಸಿದ್ದರು. ಆದರೆ ವಿಧಾನಸಭೆಯಲ್ಲೂ ಒಕ್ಕಲಿಗ, ವಿಧಾನ ಪರಿಷತ್‌ನಲ್ಲೂ ಒಕ್ಕಲಿಗ ಎಂಬ ಸಂದೇಶ ಹೋದರೆ ಪಕ್ಷಕ್ಕೆ ಒಳಿತಾಗದು ಎಂಬುದು ಆರ್‌ಎಸ್‌ಎಸ್‌ ಲೆಕ್ಕಾಚಾರವಾಗಿತ್ತು.

ಮುಂದಿನ ದಿನಗಳಲ್ಲಿ ಬಿ.ಎಲ್. ಸಂತೋಷ್, ತೇಜಸ್ವಿ ಸೂರ್ಯ ಯಾರಾದರೂ ಬ್ರಾಹ್ಮಣ ಮುಖಗಳು ಮುಖ್ಯಮಂತ್ರಿ ಆಗಬೇಕೆಂಬುದು ಆರ್.ಎಸ್.ಎಸ್‌.ನ ಹಂಬಲ. ಆದರೆ ಲಿಂಗಾಯತರಿಂದ ಬ್ರಾಹ್ಮಣರಿಗೆ ಅಧಿಕಾರ ಹಸ್ತಾಂತರವಾಗಲು ಮಧ್ಯದಲ್ಲಿ ಒಂದು ಒಕ್ಕಲಿಗ ಮುಖ ಅನಿವಾರ್ಯ. ಆ ಮುಖವಾಗಿ ಸಿ.ಟಿ. ರವಿಯವರನ್ನು ಆಯ್ದುಕೊಂಡಿರುವ ಸಾಧ್ಯತೆ ಇದೆ. ಇಲ್ಲವಾಗಿದ್ದರೆ, ‘ಪ್ರಾಸ್ಟಿಟ್ಯೂಟ್’ ಎಂದು ಕರೆದ ಸಿ.ಟಿ. ರವಿಯವರನ್ನು ಹುತಾತ್ಮನೆಂಬಂತೆ ಬಿಂಬಿಸುವ ಅವಶ್ಯಕತೆ ಇರಲಿಲ್ಲ. ನಾವು ಆರ್‌ಎಸ್ಎಸ್‌ನ ಕಾರ್ಯತಂತ್ರ ಏನಿದೆ ಎಂಬುದನ್ನು ತಿಳಿಯಲು, ಗೋದಿ ಮಾಧ್ಯಮಗಳು ಹೇಗೆ ವರ್ತಿಸುತ್ತಿವೆ ಎಂಬುದನ್ನು ಗಮನಿಸಬೇಕಾಗುತ್ತದೆ. ಆರ್‌ಎಸ್‌ಎಸ್‌ನ ವಿಚಾರಗಳನ್ನು ಬಿಜೆಪಿಗಿಂತ ಹೆಚ್ಚಿನದಾಗಿ ಪಾಲಿಸುವ ಮುಖ್ಯವಾಹಿನಿ ಮಾಧ್ಯಮಗಳು ಸಿ.ಟಿ.ರವಿ ಹಿಂದೆ ಬಿದ್ದ ಪ್ರಸಂಗಕ್ಕೆ ಈ ಎಲ್ಲ ಆಯಾಮಗಳಿವೆ. ಕನ್ನಡ ಸಾಹಿತ್ಯ ಸಮ್ಮೇಳನ, ಬಾಡೂಟದ ಪ್ರಶ್ನೆ ಇವೆಲ್ಲವೂ ಇದ್ದಾಗಲೂ ಸಿ.ಟಿ. ರವಿಯೇ ಮಾಧ್ಯಮಗಳಿಗೆ ಮುಖ್ಯವಾಗಿದ್ದನ್ನು ನೆನಪು ಮಾಡಿಕೊಳ್ಳಬೇಕಾಗಿದೆ.

ಈ ವಿವಾದದಲ್ಲಿ ಸಿ.ಟಿ. ರವಿ ಹೀರೋ ಆಗುವುದು ವಿಜಯೇಂದ್ರ ಅವರಿಗೂ ಇಷ್ಟವಿಲ್ಲ ಎಂಬುದು ರಾಜಕೀಯ ವಲಯದ ಮಾತು. ಈಗ ಯಡಿಯೂರಪ್ಪನವರ ಜಾಗದಲ್ಲಿ ವಿಜಯೇಂದ್ರ, ಬಿ.ಎಲ್. ಸಂತೋಷ್ ಜಾಗದಲ್ಲಿ ಸಿ.ಟಿ. ರವಿ ಇದ್ದು ಕಾದಾಡುತ್ತಿರುವಂತೆ ಭಾಸವಾಗುತ್ತಿದೆ. ಕತ್ತಿ ಗುರಾಣಿ ಮಾತ್ರ ಕಾಣುತ್ತಿವೆ, ಹಿಡಿದಿರುವ ವ್ಯಕ್ತಿಗಳು ಅಗೋಚರವಾಗಿದ್ದಾರೆ!

ವಿಜಯೇಂದ್ರರನ್ನು ಅಧಿಕಾರದಿಂದ ಕೆಳಗಿಳಿಸಿ ಎಂಬ ಕೂಗು ಬಿಜೆಪಿ ವಲಯದಲ್ಲಿ, ಮುಖ್ಯವಾಗಿ ಸಂತೋಷ್ ಬಣದಲ್ಲಿ ಸಹಜವಾಗಿಯೇ ಇದೆ. ಮುಂದಿನ ದಿನಗಳಲ್ಲಿ ರಾಜ್ಯಾಧ್ಯಕ್ಷನಾಗಿಯೋ, ರಾಜ್ಯದ ಮುಖ್ಯಮಂತ್ರಿಯಾಗಿಯೋ ಅಧಿಕಾರ ಹಿಡಿಯುವ ಹಂಬಲ ಸಿ.ಟಿ. ರವಿ ಅವರಿಗೆ ಇದ್ದರೆ ಖಂಡಿತ ಆಶ್ಚರ್ಯಪಡಬೇಕಿಲ್ಲ. ಯಡಿಯೂರಪ್ಪ ಬಣದಿಂದ ಸಂತ್ರಸ್ತರಾದವರೆಲ್ಲರೂ ಸಿ.ಟಿ. ರವಿಯವರ ಪರ ಬ್ಯಾಟ್ ಬೀಸುತ್ತಿರುವುದನ್ನು ನೋಡಿದರೆ, ಬಿಜೆಪಿಯೊಳಗೆ ಈ ವಿಚಾರದಲ್ಲೂ ಎರಡು ವಿಭಾಗಗಳಿರುವುದು ಸ್ಪಷ್ಟವಾಗುತ್ತಿದೆ. ಇದು ಪಕ್ಕಾ ಒಕ್ಕಲಿಗ ನಾಯಕತ್ವ ಬೆಳೆಸಲು ಬಿಜೆಪಿ ಮಾಡುತ್ತಿರುವ ಪ್ಲಾನ್. ಬಿಜೆಪಿ ಜೊತೆ ಹೋಗಿರುವ ಕುಮಾರಸ್ವಾಮಿಯವರು ಎಚ್ಚೆತ್ತುಕೊಂಡಿದ್ದಾರೋ ಇಲ್ಲವೋ ಗೊತ್ತಿಲ್ಲ. ಒಕ್ಕಲಿಗ ನಾಯಕತ್ವ ಬಿಜೆಪಿಯಲ್ಲಿ ಬೆಳೆದರೆ ಮೊದಲು ಆಹುತಿ ಪಡೆಯುವುದು ಜೆಡಿಎಸ್‌ ಪಕ್ಷವನ್ನೇ ಎಂದು ರಾಜಕೀಯ ವಿಶ್ಲೇಷಕರು ಊಹಿಸುತ್ತಾರೆ.

yathiraj 2
ಯತಿರಾಜ್‌ ಬ್ಯಾಲಹಳ್ಳಿ
+ posts

ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಯತಿರಾಜ್‌ ಬ್ಯಾಲಹಳ್ಳಿ
ಯತಿರಾಜ್‌ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

2029ರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಇಂಡಿಯಾ ಒಕ್ಕೂಟದ ಪ್ರಧಾನಿ ಅಭ್ಯರ್ಥಿ: ತೇಜಸ್ವಿ ಯಾದವ್

2029ರ ಲೋಕಸಭೆ ಚುನಾವಣೆಯಲ್ಲಿ ಸದ್ಯ ಲೋಕಸಭೆ ವಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ...

Download Eedina App Android / iOS

X