ರಾಜ್ಯದಲ್ಲಿ ಜಾತಿಗಣತಿ ಮರು ಸಮೀಕ್ಷೆಗೆ ಸಚಿವ ಸಂಪುಟವು ಒಪ್ಪಿಗೆ ನೀಡಿದೆ. ಶೀಘ್ರವೇ ಮರು ಸಮೀಕ್ಷೆ ಆರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿದ್ದರಾಮಯ್ಯ ಜಾತಿಗಣತಿ ಮರು ಸಮೀಕ್ಷೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. “ಜಾತಿ ಗಣತಿ ಮರು ಸಮೀಕ್ಷೆ ನಡೆಸಲು ಎಲ್ಲ ಸಚಿವರು ಒಪ್ಪಿಗೆ ನೀಡಿದ್ದಾರೆ” ಎಂದು ತಿಳಿಸಿದ್ದಾರೆ.
“2011ರಲ್ಲಿ ಜಾತಿ ಗಣತಿ ಸಮೀಕ್ಷೆ ನಡೆಸಿದ್ದೆವು. ಮನೆ ಮನೆಗೆ ಹೋಗಿ ಸಮೀಕ್ಷೆ ನಡೆಸಲಾಗಿತ್ತು. ವರದಿ ಪಡೆಯಲಾಗಿತ್ತು. ಕಾಂತರಾಜು ವರದಿಯ ದತ್ತಾಂಶ ಆಧರಿಸಿ ಜಯಪ್ರಕಾಶ್ ಹೆಗ್ಡೆ ಅವರು ಹೊಸ ವರದಿ ಸಿದ್ದಪಡಿಸಿ, 2024ರಲ್ಲಿ ಹಲವಾರು ಶಿಫಾರಸುಗಳನ್ನು ಸಲ್ಲಿಸಿದ್ದರು” ಎಂದು ಅವರು ವಿವರಿಸಿದ್ದಾರೆ.
“ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ವರದಿ ಕುರಿತು ಚರ್ಚಿಸಿರಲಿಲ್ಲ. ಇತ್ತೀಚೆಗೆ, ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ್ದೆವು. ಸಚಿವರು ಅವರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪ್ರಸ್ತುತ ಸಂದರ್ಭಕ್ಕೆ ಅನುಗುಣವಾಗಿ ದತ್ತಾಂಶವನ್ನು ಕಲೆಹಾಕುವ ಉದ್ದೇಶದಿಂದ ಜಾತಿಗಣತಿ ಮರು ಸಮೀಕ್ಷೆಗೆ ನಿರ್ಧರಿಸಲಾಗಿದೆ” ಎಂದು ತಿಳಿಸಿದ್ದಾರೆ.