ಪ್ರಧಾನಿ ನರೇಂದ್ರ ಮೋದಿ ಅವರು ಭಯೋತ್ಪಾದಕ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಮತ್ತು ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು ಉಲ್ಲೇಖಿಸಿ ವಿರೋಧ ಪಕ್ಷದ ಒಕ್ಕೂಟ ‘ಇಂಡಿಯಾ’ದ ಮೇಲೆ ಕಟುವಾದ ದಾಳಿಯನ್ನು ಆರಂಭಿಸಿದ ಕೆಲವೇ ಗಂಟೆಗಳ ನಂತರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀಕ್ಷ್ಣವಾಗಿ ಪ್ರತ್ಯುತ್ತರವನ್ನು ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿ, “ವಿರೋಧ ಪಕ್ಷದ ಒಕ್ಕೂಟ ಮಣಿಪುರದ ಸಮಸ್ಯೆಯನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಮತ್ತು ಈಶಾನ್ಯ ರಾಜ್ಯದ ಪ್ರತಿ ಮಹಿಳೆಯ ಹಾಗೂ ಮಗುವಿನ ಕಣ್ಣೀರನ್ನು ಒರೆಸುತ್ತದೆ. ಮಣಿಪುರ ತಾಯಿಯ ಎಲ್ಲ ಮಕ್ಕಳಿಗೆ ಶಾಂತಿ ಹಾಗೂ ಪ್ರೀತಿಯನ್ನು ಮರಳಿ ತರುತ್ತದೆ. ನಾವು ಮಣಿಪುರದಲ್ಲಿ ಭಾರತದ ಕಲ್ಪನೆಯನ್ನು ಮರುನಿರ್ಮಾಣ ಮಾಡುತ್ತೇವೆ. ಮಿಸ್ಟರ್ ಮೋದಿ ನಮ್ಮನ್ನು ಏನು ಬೇಕಾದರೂ ಕರೆಯಿರಿ, ನಾವು ‘ಇಂಡಿಯಾ’ ಎಂದು ಭಯೋತ್ಪಾದಕರು ಎಂಬ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಮೊನ್ನೆಯಷ್ಟೇ ಬಿಜೆಪಿ ಸಂಸದೀಯ ಪಕ್ಷದ ಸಭೆಯಲ್ಲಿ ಪ್ರಧಾನಿ ಮೋದಿ ಅವರು, ಇಂತಹ ದಿಕ್ಕುದೆಸೆಯಿಲ್ಲದ ಪ್ರತಿಪಕ್ಷವನ್ನು ನೋಡಿಲ್ಲ ಎಂದು ಹೇಳಿದ್ದರು. “ಇಂಡಿಯಾ. ಇಂಡಿಯನ್ ನ್ಯಾಷನಲ್ ಕಾಂಗ್ರೆಸ್. ಈಸ್ಟ್ ಇಂಡಿಯಾ ಕಂಪನಿ. ಇಂಡಿಯನ್ ಮುಜಾಹಿದ್ದೀನ್. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ – ಇವು ಕೂಡ ಇಂಡಿಯಾ. ಇಂಡಿಯಾ ಎಂಬ ಹೆಸರನ್ನು ಬಳಸುವುದರಿಂದ ಏನೂ ಉಪಯೋಗವಾಗುವುದಿಲ್ಲ” ಎಂದು ಟೀಕಿಸಿದ್ದರು.
ಈ ಸುದ್ದಿ ಓದಿದ್ದೀರಾ? ಸಂಸತ್‌ನಲ್ಲಿ ಮುಂದುವರೆದ ಪ್ರತಿಭಟನೆ; ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ‘ಇಂಡಿಯಾ’ ನಿರ್ಧಾರ
ಮಣಿಪುರದ ಹಿಂಸಾಚಾರದ ಬಗ್ಗೆ ಸಂಸತ್ತಿನಲ್ಲಿ ವಾಗ್ವಾದ ನಡೆಯುತ್ತಿರುವ ನಡುವೆ ಪ್ರಧಾನಿಯವರ ಪ್ರತಿಪಕ್ಷಗಳ ಒಕ್ಕೂಟದ ಟೀಕೆಗೆ ಮತ್ತು ರಾಹುಲ್ ಗಾಂಧಿಯವರು ಪ್ರತ್ಯುತ್ತರ ನೀಡಿದ್ದಾರೆ.
ಸಂಸತ್ತಿನ ಮುಂಗಾರು ಅಧಿವೇಶನ ಗುರುವಾರ ಆರಂಭಗೊಂಡಿದ್ದು, ಪ್ರತಿಪಕ್ಷಗಳು ಮಣಿಪುರದ ಬಗ್ಗೆ ವಿವರವಾದ ಚರ್ಚೆಗೆ ಒತ್ತಾಯಿಸಲು ಪ್ರಾರಂಭಿಸಿದವು. ಕೇಂದ್ರವು ಚರ್ಚೆಗೆ ಸಿದ್ಧವಾಗಿದೆ ಎಂದು ಹೇಳಿದೆ. ಆದರೆ ಮಣಿಪುರ ಚರ್ಚೆಗಾಗಿ ಇತರ ಎಲ್ಲ ವಿಷಯಗಳನ್ನು ಸ್ಥಗಿತಗೊಳಿಸಬೇಕು ಎಂದು ಪ್ರತಿಪಕ್ಷಗಳು ರಾಜ್ಯಸಭೆಯಲ್ಲಿ ಒತ್ತಾಯಿಸಿದ್ದರಿಂದ ಗದ್ದಲ ಮುಂದುವರೆದಿದೆ. ಈ ವಿಷಯದ ಬಗ್ಗೆ ಪ್ರಧಾನಿ ಸಂಸತ್ತಿನಲ್ಲಿ ಮಾತನಾಡಬೇಕು ಎಂದು ಪ್ರತಿಪಕ್ಷಗಳು ಒತ್ತಾಯಿಸಿವೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸರ್ಕಾರದ ನಿಲುವನ್ನು ಮುಂದಿಡಲು ಸಿದ್ಧ ಎಂದು ಹೇಳಿದರು, ಆದರೆ ಪ್ರಧಾನಿ ಹೇಳಿಕೆ ನೀಡಬೇಕೆಂದು ಪ್ರತಿಪಕ್ಷಗಳು ಪಟ್ಟುಹಿಡಿದಿವೆ.
ಸಂಸತ್ತಿನ ಉಭಯ ಸದನಗಳ ಮುಂಗಾರು ಅಧಿವೇಶನ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮಣಿಪುರ ಹಿಂಸಾಚಾರದ ಬಗ್ಗೆ ಸರ್ಕಾರ ಚರ್ಚೆ ನಡೆಸುವಂತೆ ಸರ್ಕಾರವನ್ನು ಪ್ರತಿಪಕ್ಷಗಳ ಒಕ್ಕೂಟ ‘ಇಂಡಿಯಾ’ ಆಗ್ರಹಿಸಿ ಪ್ರತಿಭಟನೆ ನಡೆಸಿತು. ಗದ್ದಲ ಮುಂದುವರೆದ ಕಾರಣ ಎರಡೂ ಸದನಗಳ ಕಲಾಪ ಮುಂದೂಡಲ್ಪಟ್ಟಿದೆ.
ಈ ನಡುವೆ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ವಿಪಕ್ಷಗಳ ನಾಯಕರು ಸಭೆ ನಡೆಸಿದರು. ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ವಿರೋಧ ಪಕ್ಷಗಳ ನಾಯಕರ ಸಭೆ ನಡೆಸಿದರು. ಸಭೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ತೀರ್ಮಾನಿಸಲಾಯಿತು.
ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 26 ವಿರೋಧ ಪಕ್ಷಗಳ ‘ಇಂಡಿಯಾ’ ಒಕ್ಕೂಟ ಪ್ರಧಾನಿ ನರೇಂದ್ರ ಮೋದಿಯವರು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿವೆ. ಜುಲೈ 20 ರಂದು ಪ್ರಾರಂಭವಾದ ಮುಂಗಾರು ಅಧಿವೇಶನವು ಆಗಸ್ಟ್ 11 ರವರೆಗೆ ನಡೆಯಲಿದೆ. ವಿಪಕ್ಷಗಳ ಪ್ರತಿಭಟನೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಧರಣಿ ವಾಪಸ್ ಪಡೆಯಲು ಪ್ರತಿಪಕ್ಷಗಳ ನಾಯಕರು ನಿರಾಕರಿಸಿದ್ದಾರೆ.