“ನಾಲ್ಕು ಜನ ಪೇಯ್ಡ್ ಪಾರ್ಟಿಸಿಪೆಂಟ್ಸ್ ಇಟ್ಟುಕೊಂಡು ಕಾರ್ಯಕ್ರಮ ಮಾಡಿದರೆ ನಮ್ಮಂಥವರಿಗೆ ಆಗಿಬರುವುದಿಲ್ಲ, ಮಾದಿಗರು ಕೇವಲ ಬಿಜೆಪಿಯಲ್ಲಷ್ಟೇ ಇಲ್ಲ, ಎಲ್ಲ ಪಕ್ಷದಲ್ಲೂ ಇದ್ದಾರೆ..”
“ಮಾದಿಗ ಮುನ್ನಡೆ ಕಾರ್ಯಕ್ರಮದ ಮುಖ್ಯವಾದ ಚಿಂತನೆಯೇ ಸರಿ ಇಲ್ಲ. ಮಾದಿಗರ ಮುನ್ನಡೆ ಎಂದ ತಕ್ಷಣ ನಾವು ಬಿಜೆಪಿಯವರಷ್ಟೇ ಮುನ್ನಡೆ ತರಲು ಸಾಧ್ಯವಿಲ್ಲ. ಸಮುದಾಯಕ್ಕಾಗಿ ದುಡಿದ ಅನೇಕರು ವಿವಿಧ ಪಕ್ಷ ಹಾಗೂ ಕ್ಷೇತ್ರಗಳಲ್ಲಿ ಇದ್ದಾರೆ. ಆದರೆ ಈಗ ನಡೆಯುತ್ತಿರುವುದು ಬಿಜೆಪಿಯ ಕಾರ್ಯಕ್ರಮ. ಅದಕ್ಕಾಗಿ ನಾನು ಹೋಗಲಿಲ್ಲ” ಎಂದು ತುಮಕೂರು ಜಿಲ್ಲೆಯ ಮಾದಿಗ ಸಮುದಾಯದ ಬಿಜೆಪಿ ಮುಖಂಡ ವೈ.ಎಚ್.ಹುಚ್ಚಯ್ಯ ತಿಳಿಸಿದ್ದಾರೆ.
ಆರ್.ಎಸ್.ಎಸ್., ಬಿಜೆಪಿ ಪ್ರಾಯೋಜಿತ ‘ಮಾದಿಗ ಮುನ್ನಡೆ’ ಕಾರ್ಯಕ್ರಮ ರಾಜ್ಯದೆಲ್ಲೆಡೆ ಆಯೋಜನೆಯಾಗಿದೆ. ಈಗಾಗಲೇ ವಿವಿಧೆಡೆ ಕಾರ್ಯಕ್ರಮಗಳು ನಡೆಯುತ್ತಿವೆ. ಅಂತೆಯೇ ಭಾನುವಾರ ತುಮಕೂರಿನ ಎಂಪ್ರೆಸ್ ಕಾಲೇಜು ಆವರಣದಲ್ಲಿ ಕಾರ್ಯಕ್ರಮ ನಡೆದಿದೆ. ಮುಖ್ಯ ಅತಿಥಿಯಾಗಿ ಆರ್‌ಎಸ್‌ಎಸ್ ಮುಖಂಡ ವಾದಿರಾಜ ಸಾಮರಸ್ಯ ಜೊತೆಗೆ ಮಾದಿಗ ಮುಖಂಡ ವೈ.ಎಚ್.ಹುಚ್ಚಯ್ಯ ಅವರ ಹೆಸರೂ ಇತ್ತು. ಆದರೆ ಸಭೆಗೆ ಗೈರು ಹಾಜರಾಗಿರುವ ಹುಚ್ಚಯ್ಯ, ಮುನ್ನಡೆಯ ಸ್ವರೂಪದ ಬಗ್ಗೆ ತಕರಾರು ತೆಗೆದಿದ್ದಾರೆ.
“ಒಂದು ಪಕ್ಷವನ್ನಷ್ಟೇ ಮುಂದೆ ತಂದು ಸಮುದಾಯದ ಕಾರ್ಯಕ್ರಮ ಮಾಡುವುದಕ್ಕೆ ನನ್ನ ವಿರೋಧವಿತ್ತು. ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಬೇಡಿ ಎಂದು ಹೇಳಿದ್ದೆ. ಆದರೂ ಅವರು ನನ್ನ ಅಭಿಪ್ರಾಯ ಕೇಳದೆ ಹೆಸರು ಹಾಕಿಕೊಂಡಿದ್ದಾರೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ತುಮಕೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ, ಸದಸ್ಯರಾಗಿ, ಕೊರಟಗೆರೆ ವಿಧಾನಸಭೆ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾಗಿ ಕೆಲಸ ಮಾಡಿರುವವರು ವೈ.ಎಚ್.ಹುಚ್ಚಯ್ಯ. ಈ ಹಿಂದೆ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ.ಪರಮೇಶ್ವರ ಅವರ ವಿರುದ್ಧ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಜಿಲ್ಲೆಯ ಯಾವುದಾದರೂ ಭಾಗದಲ್ಲಿ ದಲಿತರ ಮೇಲೆ ದೌರ್ಜನ್ಯಗಳಾದಾಗ ಸ್ಥಳಕ್ಕೆ ಧಾವಿಸುವ ಅವರು, ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ರಾಜಕಾರಣಕ್ಕೆ ಬಂದವರು. ಹೋರಾಟಗಳಲ್ಲಿ ಸಕ್ರಿಯರಾಗಿರುವ ಹುಚ್ಚಯ್ಯನವರು, ಮಾದಿಗ ಮುನ್ನಡೆಯ ಹಿಂದಿರುವ ಕೆಟ್ಟ ರಾಜಕಾರಣವನ್ನು ಟೀಕಿಸಿದ್ದಾರೆ. ’ಈದಿನ.ಕಾಂ’ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಅವರು ಮಾತನಾಡಿದ್ದು ಹೀಗೆ:
ಮಾದಿಗರ ಮುನ್ನಡೆ ಎಂದಾಗ ನಾವು ಬಿಜೆಪಿಯವರಷ್ಟೇ ಮುನ್ನಡೆ ತರಲು ಸಾಧ್ಯವಿಲ್ಲ. ಮಾದಿಗರಲ್ಲಿ ಬಹಳಷ್ಟು ಹೋರಾಟಗಾರರು, ಚಿಂತನೆ ಮಾಡುವವರು, ಜನಾಂಗದ ಬಗ್ಗೆ ಕೆಲಸ ಮಾಡುವವರು ಇದ್ದಾರೆ. ಮಾದಿಗ ದಂಡೋರ ಕಟ್ಟಿಕೊಂಡು ಮೀಸಲಾತಿ ವರ್ಗೀಕರಣಕ್ಕಾಗಿ ದಶಕಗಳ ಕಾಲ ದುಡಿದಿದ್ದಾರೆ. ಅವರನ್ನೆಲ್ಲ ಬಿಟ್ಟು ಕೇವಲ ಯಾರೋ ಒಂದಿಬ್ಬರು ಬಂದು ’ಮಾದಿಗ ಮುನ್ನಡೆ’ ಎಂದರೆ ಒಪ್ಪಲು ಸಾಧ್ಯವೆ?
ಯಾವುದಾದರೂ ಒಂದು ಕಾರ್ಯಕ್ರಮ ಮಾಡಿದರೆ ಉತ್ತಮವಾದ ಫಲಿತಾಂಶವನ್ನು ನಾವು ನಿರೀಕ್ಷೆ ಮಾಡಬೇಕು. ನಿಜವಾದ ಹೋರಾಟ ಮತ್ತು ಚಿಂತನೆ ಮಾಡುವವರು ಜೀವಮಾನವಿಡೀ ಸಮುದಾಯದ ಮುನ್ನಡೆಗಾಗಿ ಜೀವವನ್ನೇ ಸವೆಸಿದ್ದಾರೆ. ಅಂಥವರು ಇಂದಿನ ಕಾರ್ಯಕ್ರಮದಲ್ಲಿ ಇರಲಿಲ್ಲ. ಯಾರೋ ಒಬ್ಬ ನಿವೃತ್ತ ಐಎಎಸ್ ಅಧಿಕಾರಿ, ವೈಯಕ್ತಿಕ ತೆವಲುಗಳಿಗಾಗಿ ರಾಜಕಾರಣಕ್ಕೆ ಬಂದವರು, ಇಷ್ಟು ದಿನ ಸಮುದಾಯಕ್ಕಾಗಿ ದುಡಿದಿರುವವರನ್ನು ಮೂಲೆಗೆ ತಳ್ಳುವುದು ಸರಿಯೇ? ಯಾರೋ ನಾಲ್ಕು ಜನ ಪೇಯ್ಡ್ ಪಾರ್ಟಿಸಿಪೆಂಟ್ಸ್ (ಅಂದರೆ ದುಡ್ಡು ಪಡೆದು ಭಾಗಿಯಾದವರ) ಇಟ್ಟುಕೊಂಡು ಕಾರ್ಯಕ್ರಮ ಮಾಡಿದರೆ ನಮ್ಮಂಥವರಿಗೆ ಆಗಿಬರುವುದಿಲ್ಲ.
ನಾನು ಕೆಇಬಿಯಲ್ಲಿ ಹನ್ನೊಂದು ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದವನು. ಸಮಾಜಕ್ಕಾಗಿ ಹಂಬಲಿಸಿ ನೌಕರಿಗೆ ತಿಲಾಂಜಲಿ ಇಟ್ಟು ಹೊರಗೆ ಬಂದು ಇವತ್ತಿನವರೆಗೂ ಕೆಲಸ ಮಾಡುತ್ತಿದ್ದೇನೆ. 1984ನೇ ಇಸವಿಯಲ್ಲಿ ನಾನು ರಾಜೀನಾಮೆ ನೀಡಿದೆ. ಇಲ್ಲಿಯವರೆಗೆ ಸುಮಾರು ನಲವತ್ತು ವರ್ಷಗಳಿಂದ ಜನರ ಏಳಿಗೆಗಾಗಿ ದುಡಿಯುತ್ತಿದ್ದೇನೆ.
ಬಡವರೇ ನನಗೆ ಉಸಿರು. ಸಾಮಾಜಿಕ ಅನ್ಯಾಯ ಈ ಸಮಾಜಕ್ಕೆ ಆಗಬಾರದು ಎಂದು ಶ್ರಮಿಸುತ್ತಿದ್ದೇನೆ. ನನ್ನಂತಹ ಅನೇಕ ಮಂದಿ ತುಮಕೂರು ಜಿಲ್ಲೆಯಲ್ಲಿದ್ದಾರೆ. ಆದರೆ ಅವರನ್ನೆಲ್ಲ ಬಿಟ್ಟು ’ಮಾದಿಗ ಮುನ್ನಡೆ’ ಎಂದರೆ- ಬರೀ ನಾಲ್ಕು ಜನರದ್ದಾ?
ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆ ಇರುವ ವ್ಯಕ್ತಿ ಇಲ್ಲಿಗೆ ಬಂದಿದ್ದಾನೆ. ದುಡ್ಡಿನಿಂದಲೇ ಎಲ್ಲವೂ ನಡೆಯುತ್ತದೆ ಎಂದು ಭಾವಿಸಿದ್ದರೆ ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ನಲ್ಲೂ ಮಾದಿಗರಿದ್ದಾರೆ, ಜೆಡಿಎಸ್‌ನಲ್ಲೂ ಮಾದಿಗರಿದ್ದಾರೆ, ಹೋರಾಟದಲ್ಲಿ ಇರುವ ಮಾದಿಗರಿದ್ದಾರೆ, ಸಾಮಾಜಿಕವಾಗಿ ಸಮುದಾಯದ ಚಿಂತನೆಗಾಗಿ ಹಂಬಲಿಸುವ ನಿವೃತ್ತ ನೌಕರರು, ಹಾಲಿ ನೌಕರರು ಇದ್ದಾರೆ. ಇವರನ್ನೆಲ್ಲ ವಿಶ್ವಾಸಕ್ಕೆ ತೆಗೆದುಕೊಂಡು ಚಿಂತನೆ ಮಾಡುವುದು ನನ್ನ ಆಸೆಯೇ ಹೊರತು ಈ ರೀತಿಯ ಕಾರ್ಯಕ್ರಮ ಸರಿಯಲ್ಲ. ಸಮಾಜಕ್ಕಾಗಿ ದುಡಿದವರನ್ನು ಮೂಲೆಗೆ ತಳ್ಳಿ ಭ್ರಷ್ಟರಿಂದ ಮಾದಿಗ ಮುನ್ನಡೆ ಮಾಡಲು ಸಾಧ್ಯವೇ?
ಮಾದಿಗರ ಮುನ್ನಡೆ ಒಬ್ಬರಿಂದ ಆಗುತ್ತದಾ? ಮಾದಿಗರ ಮುನ್ನಡೆಯಲ್ಲಿ ಎಲ್ಲರನ್ನೂ ಸೇರಿಸಿಕೊಳ್ಳಬೇಕು. ಎಲ್ಲರನ್ನೂ ಕರೆಯಬೇಕು. ಬರುವುದು ಬಿಡುವುದು ಅವರ ವೈಯಕ್ತಿಕ ನಿಲುವು. ಆದರೆ ಇವರು ಯಾರನ್ನು ಕೂರಿಸಿಕೊಂಡು ಮಾತನಾಡಿಲ್ಲ. ಅಭಿಪ್ರಾಯಗಳನ್ನು ಕೇಳಿಲ್ಲ. ಹೀಗಾಗಿ ನಾನು ಈ ಕಾರ್ಯಕ್ರಮಕ್ಕೆ ಹೋಗಲಿಲ್ಲ.
“ಫೋಟೋವಾಗಲೀ ನನ್ನ ಹೆಸರಾಗಲೀ ಇನ್ವಿಟೇಷನ್‌ನಲ್ಲಿ ಹಾಕಿಕೊಳ್ಳಬಾರದು ಎಂದು ಸೂಚಿಸಿದ್ದೆ. ಆದರೂ ನನ್ನ ಫೋಟೋ ಹೆಸರು ಹಾಕಿದ್ದಾರೆ. ನನ್ನ ಸ್ವಾಭಿಮಾನಕ್ಕೆ, ಸಮುದಾಯದ ಹಿತಕ್ಕೆ ಧಕ್ಕೆ ಬಂದಾಗ ಪಕ್ಷ ಮುಖ್ಯವಾಗುವುದಿಲ್ಲ, ರಾಜಕಾರಣ ಮುಖ್ಯವಾಗುವುದಿಲ್ಲ. ಅಸ್ಪೃಶ್ಯತೆ ನಿವಾರಣೆ, ಜಾತಿ ನಿರ್ಮೂಲನೆ ಮತ್ತು ಬಡತನ ನಿರ್ಮೂಲನೆಯಷ್ಟೇ ನಮ್ಮ ಮನಸ್ಸಿನಲ್ಲಿ ಇದೆ”.
– ಇದಿಷ್ಟು ವೈ.ಎಚ್.ಹುಚ್ಚಯ್ಯನವರ ನೋವಿನ ನುಡಿಗಳು
ಇದನ್ನೂ ಓದಿರಿ: ‘ಮಾದಿಗ ಮುನ್ನಡೆ’ ಹೆಸರಲ್ಲಿ ’ಮನುವಾದ ಮುನ್ನಡೆ’; ಆರ್‌ಎಸ್‌ಎಸ್ ಹುನ್ನಾರ ಅರಿಯುವರೇ ದಲಿತರು?

ಯತಿರಾಜ್ ಬ್ಯಾಲಹಳ್ಳಿ
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನವರಾದ ಯತಿರಾಜ್, ಮೈಸೂರು ವಿವಿಯಲ್ಲಿ ಸ್ನಾತಕ ಪದವಿ, ಮಂಗಳೂರು ವಿವಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ 'ಈದಿನ.ಕಾಂ'ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ. 'ಪ್ರಜಾವಾಣಿ', 'ಆಂದೋಲನ' ಪತ್ರಿಕೆಯಲ್ಲಿ ಕೆಲಕಾಲ ಕೆಲಸ ಮಾಡಿದ್ದರು. ರಾಜಕಾರಣ, ಸಿನಿಮಾ, ದಲಿತ, ಅಲ್ಪಸಂಖ್ಯಾತ ವಿಷಯಗಳಲ್ಲಿ ಆಸಕ್ತರು.