- ಸಂತ್ರಸ್ತೆಯ ಸಂಬಂಧಿಗೆ ಸಲಹೆ ನೀಡಿದ್ದಾರೆ ಎನ್ನಲಾದ ಆಡಿಯೋ
- ಸಂತ್ರಸ್ತೆಯ ಮಾವ ಯಮನೂರಪ್ಪ ನ್ಯಾಯಕ್ಕಾಗಿ ದೂರು ನೀಡಿದ್ದರು
ಜಗತ್ತಿನಲ್ಲಿ ಒಬ್ಬರಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ, ಎರಡೂ ಕೈ ತಟ್ಟಿದ್ರೆನೆ ಚಪ್ಪಾಳೆ ಆಗೋದು ಎಂದು ಕುಷ್ಟಗಿಯ ಕಾಂಗ್ರೆಸ್ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರು ಅತ್ಯಾಚಾರ ನಡೆದಿದೆ ನ್ಯಾಯ ಕೊಡಿಸಿ ಎಂದು ಹೇಳಿದ ಸಂತ್ರಸ್ತೆಯ ಸಂಬಂಧಿಗೆ ಸಲಹೆ ನೀಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗುತ್ತಿದೆ.
ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡನ ಮೇಲೆ ಅತ್ಯಾಚಾರ ಆರೋಪ ಕೇಳಿ ಬಂದಿದ್ದು ದೂರು ದಾಖಲಾದರೂ ಕ್ರಮಕ್ಕೆ ಸಂಬಂಧಪಟ್ಟವರು ಮುಂದಾಗಿರುವುದಿಲ್ಲ. ಹೀಗಾಗಿ ಸಂತ್ರಸ್ತ ಮಹಿಳೆಯ ಮಾವ ನ್ಯಾಯಕ್ಕಾಗಿ ಎಸ್ಪಿ, ಮಾಜಿ ಶಾಸಕರಿಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾಜಿ ಶಾಸಕ ಈ ರೀತಿ ಹೇಳಿರುವ ಆಡಿಯೋ ವೈರಲ್ ಆಗಿದೆ.
ಅಕ್ಟೋಬರ್ 10 ರಂದು ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದ ಕಾಂಗ್ರೆಸ್ ಮುಖಂಡ ಸಂಗನಗೌಡ ನನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡರೂ ಆರೋಪಿ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮೀನಾಮೇಷ ಎಣಿಸುತ್ತಿದ್ದರು.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಪ್ರಬಲ ಜಾತಿಗಳ ಜೋಡೆತ್ತುಗಳು, ಬಿಜೆಪಿಗರಿಗೇ ಬೇಡವಾಗಿದ್ದೇಕೆ?
ಹೀಗಾಗಿ ಸಂತ್ರಸ್ತೆಯ ಮಾವ ಯಮನೂರಪ್ಪ ನ್ಯಾಯಕ್ಕಾಗಿ ಎಸ್ಪಿಗೆ ದೂರು ನೀಡಿದ್ದರು. ಹಾಗೆ ನ್ಯಾಯಕೊಡಿಸುವಂತೆ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಬಳಿಯೂ ಯಮನೂರಪ್ಪ ಮನವಿ ಮಾಡಿದರು.
ಆದರೆ ಅಮರೇಗೌಡ ಬಯ್ಯಾಪುರ ಅವರು ಆರೋಪಿ ಪರವಾಗಿಯೇ ನಿಲುವು ತಾಳಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಬಾರದಿತ್ತು ಎಂದು ಯಮನೂರಪ್ಪ ಅವರಿಗೆ ಹೇಳಿದ್ದಾರೆ. ಅಲ್ಲದೆ “ನಿಮ್ಮ ಮರ್ಯಾದೆಯನ್ನು ನೀವೆ ಕಳೆದುಕೊಳ್ಳುತ್ತಿದ್ದೀರಾ, ಒಬ್ಬರಿಂದ ಹೇಗೆ ಅತ್ಯಾಚಾರ ಮಾಡಲು ಸಾಧ್ಯ? ನೀನು ಒಬ್ಬನನ್ನು ಕರೆದುಕೊಂಡು ಬಾ, ನಾನು ಓರ್ವ ಮಹಿಳೆಯನ್ನು ಕಳುಹಿಸುತ್ತೇನೆ. ಆ ವ್ಯಕ್ತಿ ಆಕೆಯನ್ನು ಅತ್ಯಾಚಾರ ಮಾಡಲಿ ನೋಡೋಣ. ಒಬ್ಬನಿಂದ ಅತ್ಯಾಚಾರ ಮಾಡಲು ಸಾಧ್ಯವಿಲ್ಲ. ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ ಯೋಚಿಸು” ಎಂದು ಅಮರೇಗೌಡ ಬಯ್ಯಾಪುರ ಸಂತ್ರಸ್ತೆ ಮಾವನಿಗೆ ಹೇಳಿದ್ದಾರೆ.