ಸಂಚಾರ ದಟ್ಟಣೆಗೆ ಪರಿಹಾರವಾಗಿದ್ದ ಕಾರ್ ಪೂಲಿಂಗ್ ಅನ್ನು ಸಾರಿಗೆ ಇಲಾಖೆ ನಿಷೇಧಿಸಲು ಮುಂದಾಗಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಈ ಬಗ್ಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಎಕ್ಸ್(ಟ್ವಿಟರ್) ಮೂಲಕ ಸ್ಪಷ್ಟನೆ ನೀಡಿದ್ದು, “ಕಾರ್ ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ” ಎಂದು ಹೇಳಿದ್ದಾರೆ.
“ಕಾರ್ ಪೂಲಿಂಗ್ ನಿಷೇಧ ಕುರಿತು ಸರ್ಕಾರದಿಂದ ಯಾವುದೇ ಅಧಿಕೃತ ನೋಟಿಸ್ ಅಥವಾ ಯಾವುದೇ ಆದೇಶ ನೀಡಿಲ್ಲ. ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ? ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು. ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು ಕಾರ್‌ಪೂಲಿಂಗ್ ಉದ್ದೇಶಗಳಿಗಾಗಿ ಬಳಸುವುದು ಕಾನೂನುಬಾಹಿರವಾಗಿದೆ. ಹಳದಿ ಬಣ್ಣದ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯ ವಾಹನಗಳನ್ನು ಸೂಕ್ತ ಮಾರ್ಗಸೂಚಿಗಳನ್ನು ಅನುಸರಿಸುವ ಮೂಲಕ ಕಾರ್‌ಪೂಲಿಂಗ್‌ಗೆ ಬಳಸಬಹುದು” ಎಂದು ತಿಳಿಸಿದ್ದಾರೆ.
“ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ ಪೂಲಿಂಗ್ ಆ್ಯಪ್‌ಗಳು ಇದುವರೆಗೂ ಸರ್ಕಾರದಿಂದ ಯಾವುದೇ ಅಧಿಕೃತ ಪರವಾನಗಿ ಪಡೆದುಕೊಂಡಿಲ್ಲ. ಅನುಮತಿ ಇಲ್ಲದ ಕಾರ್ ಪೂಲಿಂಗ್ ಸಂಸ್ಥೆಗಳನ್ನು ಕಾನೂನುಬದ್ಧ ಎಂದು ಪರಿಗಣಿಸಲು ಸಾಧ್ಯವಿಲ್ಲ. ಕಾರ್ ಪೂಲಿಂಗ್‌ಗೆ ಕೆಲ ಷರತ್ತುಗಳು ಅನ್ವಯವಾಗಲಿದೆ” ಎಂದಿದ್ದಾರೆ.
ಕಾರ್‌ಪೂಲಿಂಗ್ ನಿಷೇಧಿಸಿಲ್ಲ, ಇದು ಸುಳ್ಳು ಸುದ್ದಿ.
— Ramalinga Reddy (@RLR_BTM) October 2, 2023
ಮೊದಲು ಅವರು ಸರ್ಕಾರದಿಂದ ಅನುಮತಿಯನ್ನು ಪಡೆದುಕೊಳ್ಳಲಿ. ಅವರು ಅನುಮತಿಯನ್ನು ತೆಗೆದುಕೊಳ್ಳದಿರುವಾಗ ನಿಷೇಧದ ಪ್ರಶ್ನೆ ಎಲ್ಲಿದೆ?
ಪ್ರತಿಯೊಬ್ಬರೂ ಸರ್ಕಾರದ ನಿಯಮಗಳು ಮತ್ತು ನಿಬಂಧನೆಗಳನ್ನು ಅನುಸರಿಸಬೇಕು.
ಬಿಳಿ ನಂಬರ್ ಪ್ಲೇಟ್‌ಗಳನ್ನು ಹೊಂದಿರುವ ವಾಣಿಜ್ಯೇತರ ಖಾಸಗಿ ವಾಹನಗಳನ್ನು…
ಈ ಬಗ್ಗೆ ಚರ್ಚೆ ನಡೆಸಲು ಮಂಗಳವಾರ ಕಾರ್ ಪೂಲಿಂಗ್ ಅಗ್ರಿಗೇಟರ್‌ಗಳೊಂದಿಗೆ ರಾಜ್ಯ ಸರ್ಕಾರ ಸಭೆ ನಡೆಸಲಿದೆ ಎಂದು ತಿಳಿದುಬಂದಿದೆ.
ಕಾರ್ ಪೂಲಿಂಗ್‌ಗೆ ನಿಷೇಧಿಸಿ; ಆಟೋ ಚಾಲಕರು
ಕಾರ್ ಪೂಲಿಂಗ್ ನಡೆಸುವುದರಿಂದ ನಮಗೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗುತ್ತದೆ. ಹಾಗಾಗಿ, ನಗರದಲ್ಲಿ ಕಾರ್ ಪೂಲಿಂಗ್ ನಿಷೇಧಿಸಬೇಕು ಎಂದು ಆಟೋ ಚಾಲಕರು, ಟ್ಯಾಕ್ಸಿ ಚಾಲಕರು ಬಂದ್ ನಡೆಸಿ ಸರ್ಕಾರಕ್ಕೆ ಒತ್ತಾಯಿಸಿದ್ದರು.
ವಾಣಿಜ್ಯ ಉದ್ದೇಶಕ್ಕಾಗಿ ವೈಟ್ ಬೋರ್ಡ್ ವಾಹನಗಳನ್ನು ಬಳಸುವುದು ಅಕ್ರಮ ಎಂದು ಸಾರಿಗೆ ಇಲಾಖೆ ಹೇಳಿದೆ.
ವಾಣಿಜ್ಯ ಉದ್ದೇಶಕ್ಕೆ ವೈಟ್ ಬೋರ್ಡ್ ವಾಹನ ಬಳಸಿದರೆ ₹5,000 ದಿಂದ ₹10,000 ವರೆಗೆ ದಂಡ ವಿಧಿಸಬಹುದು ಜತೆಗೆ ವಾಹನದ ನೋಂದಣಿ ಪತ್ರವನ್ನು 6 ತಿಂಗಳ ಕಾಲ ಅಮಾನತು ಮಾಡಲು ಕಾನೂನಿನಲ್ಲಿ ಅವಕಾಶ ಇದೆ.
ಏನಿದು ಕಾರ್ ಪೂಲಿಂಗ್?
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇತ್ತೀಚೆಗೆ ಕಾರ್ ಸೇರಿದಂತೆ ಇನ್ನಿತರ ವಾಹನಗಳ ಸಂಖ್ಯೆ ಹೆಚ್ಚಳವಾಗಿದೆ. ಇದರಿಂದ ನಗರದಲ್ಲಿ ವಾಹನ ಸಂಚಾರ ದಟ್ಟಣೆ ವಿಪರೀತ ಹೆಚ್ಚಳವಾಗಿದೆ.
ದಿನನಿತ್ಯ ಕೆಲಸಕ್ಕೆ ತೆರಳಲು ನಾಲ್ಕು ಜನರು ತಮ್ಮ ಕಾರ್‌ಗಳ ಜತೆಗೆ ರಸ್ತೆಗೆ ಇಳಿಯುವದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗುತ್ತದೆ. ಇದಕ್ಕೆ ಪರ್ಯಾಯವಾಗಿ ತಮ್ಮದೇ ಮಾರ್ಗದಲ್ಲಿ ಹೋಗುತ್ತಿರುವ ಮತ್ತೋರ್ವ ವ್ಯಕ್ತಿಯ ಕಾರ್‌ನಲ್ಲಿ ಪ್ರಯಾಣಿಸುವುದರಿಂದ ಪೆಟ್ರೋಲ್, ಹಣ, ಸಮಯ, ಅತಿಯಾದ ಪರಿಸರ ಮಾಲಿನ್ಯವಾಗುವುದು ಎಲ್ಲವನ್ನೂ ತಡೆಯಬಹುದು.
ನಾಲ್ವರು ನಾಲ್ಕು ಕಾರ್ ತೆಗೆದುಕೊಂಡು ರಸ್ತೆಗೆ ಬಂದರೆ, ಸಹಜವಾಗಿಯೇ ದಟ್ಟಣೆ ಹೆಚ್ಚಳವಾಗಬಹುದು. ಹಾಗಾಗಿ, ಕಾರ್ ಪೂಲಿಂಗ್ ಮೂಲಕ ಒಂದೇ ಕಾರ್‌ನಲ್ಲಿ ಶೇರ್ ಮಾಡಿಕೊಂಡು ಪ್ರಯಾಣ ಮಾಡುವುದರಿಂದ ಹೆಚ್ಚು ಲಾಭಗಳಿವೆ. ಬಹುತೇಕರು ಕಾರ್ ಪೂಲಿಂಗ್ ಬಳಸಲು ಮುಂದಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಚಿಲುಮೆ ಪ್ರಕರಣ | ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ವಿರುದ್ಧ ತನಿಖೆಗೆ ಮುಂದಾದ ಸರ್ಕಾರ
ಕ್ವಿಕ್ ರೈಡ್, ಬ್ಲಾ ಬ್ಲಾ ಕಾರ್, ಕಮ್ಯೂಟ್ ಈಸಿ, ರೈಡ್ ಶೇರ್, ಕಾರ್ ಪೂಲ್ ಅಡ್ಡಾ ಸೇರಿದಂತೆ ಹಲವು ಆ್ಯಪ್‌ಗಳು ಮೂಲಕ ಕಾರ್ ಪೂಲಿಂಗ್ ಅಥವಾ ಕಾರ್ ಶೇರಿಂಗ್ ಮಾಹಿತಿ ಪಡೆದುಕೊಳ್ಳಬಹುದು. ಪ್ಲೇಸ್ಟೋರ್‌ನಲ್ಲಿ ಈ ಆ್ಯಪ್‌ಗಳು ಲಭ್ಯವಿದೆ.
ಈ ಆ್ಯಪ್‌ಗಳನ್ನು ಡೌನ್ಲೋಡ್ ಮಾಡಿಕೊಂಡು ನಿಮ್ಮ ಲೋಕೇಶನ್ ಬಳಿ ಯಾವುದಾದರೂ ಕಾರ್ ಇದೆಯಾ ಎಂದು ಚೆಕ್ ಮಾಡಿ ಬುಕ್ ಮಾಡಿಬಹುದು. ನಿಗದಿತ ಮೊತ್ತವನ್ನು ಕಾರು ಚಾಲಕನಿಗೆ ನೀಡಬೇಕು. ಒಂದು ರೀತಿ ಓಲಾ, ಊಬರ್ ರೀತಿಯಲ್ಲಿ ಕಾರ್ ಪೂಲಿಂಗ್ ನಡೆಯುತ್ತದೆ.