ಪೊಲೀಸ್ ಕಾನ್ಸ್‌ಟೇಬಲ್ ಮೇಲೆ ರಾಯಚೂರು ಜಿಲ್ಲೆಯ ದೇವದುರ್ಗ ಶಾಸಕಿ ಕರೆಮ್ಮ ಅವರ ಪುತ್ರ ಮತ್ತು ಪಿಎ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಿಲ್ಲವೆಂದು ಅಸಮಾಧಾನಗೊಂಡಿರುವ ಕಾನ್ಸ್‌ಟೇಬಲ್ ಹನಮಂತರಾಯ ಮತ್ತು ಇತರ ಪೇದೆಗಳು ಸಹಿ ಸಂಗ್ರಹ ಅಭಿಯಾನ ಆರಂಭಿಸಿದ್ದಾರೆ.
ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದ ಟ್ರ್ಯಾಕ್ಟರ್‌ಅನ್ನು ವಶಕ್ಕೆ ಪಡೆದ ವಿಚಾರವಾಗಿ ತಮ್ಮ ಮೇಲೆ ಶಾಸಕಿ ಪುತ್ರ ಸಂತೋಷ್ ಮತ್ತು ಪಿಎ ಇಲಿಯಾಸ್ ಸೇರಿದಂತೆ ಎಂಟು ಮಂದಿ ಹಲ್ಲೆ ನಡೆಸಿದ್ದಾರೆ ಎಂದು ಕಾನ್ಸ್‌ಟೇಬಲ್ ಹನಮಂತರಾಯ ದೂರು ದಾಖಲಿಸಿದ್ದರು. ಈ ಬೆನ್ನಲ್ಲೇ ಕೆಲ ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡುವಂತೆ ಶಾಸಕಿ ಕರೆಮ್ಮ ಒತ್ತಾಯಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಚಾರವಾಗಿಯೂ ಪೊಲೀಸ್ ಇಲಾಖೆಯ ಬಗ್ಗೆ ದೇವದುರ್ಗ ಠಾಣೆಯ ಕಾನ್ಸ್‌ಟೇಬಲ್‌ಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ತಮ್ಮ ಕುಟುಂಬಕ್ಕೆ ರಕ್ಷಣೆ ನೀಡುವಂತೆ ರಾಯಚೂರು ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ ಅವರಿಗೆ ಪೇದೆ ಹನಮಂತರಾಯ ಮನವಿ ಮಾಡಿದ್ದಾರೆ.
ಪೊಲೀಸ್ ಪೇದೆಯ ಮೇಲೆ ಹಲ್ಲೆ ನಡೆದು ಹಲವಾರು ದಿನಗಳು ಕಳೆದಿವೆ. ಆದರೂ, ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡದ ಕಾರಣಕ್ಕೆ ಆರೋಪಿಯನ್ನು ಬಂಧಿಸಿಲ್ಲ ಎಂದು ಎಲ್ ಆ್ಯಂಡ್ ಓ ಠಾಣೆಯ 36 ಮತ್ತು ಟ್ರಾಫಿಕ್ ಠಾಣೆಯ 23 ಪೊಲೀಸ್ ಕಾನ್ಸ್‌ಟೇಬಲ್‌ಗಳು ಸೇರಿ 59 ಸಿಬ್ಬಂದಿಗಳು ಸಹಿ ಸಂಗ್ರಹ ನಡೆಸುತ್ತಿದ್ದಾರೆ. ರಾಯಚೂರು ಎಸ್‌ಪಿಗೆ ದೂರು ನೀಡಿದ್ದಾರೆ.
ಪೊಲೀಸ್ ಕಾಲೋನಿ ಬಳಿಯೇ ಶಾಸಕಿ ನಿವಾಸ ಮತ್ತು ಜೆಡಿಎಸ್ ಕಚೇರಿ ಇದೆ. ಶಾಸಕಿ ಬೆಂಬಲಿಗರು ಪೊಲೀಸ್ ಕಾಲೋನಿಯಲ್ಲೇ ಓಡಾಡುತ್ತಾರೆ. ಮೂತ್ರವಿಸರ್ಜನೆ ಮಾಡುತ್ತಾರೆ. ನಮ್ಮ ಕುಟುಂಬಗಳಿಗೆ ನಿತ್ಯ ಕಿರಿಕಿರಿಯಾಗುತ್ತಿದೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.