ಸಮಾಜಘಾತಕ ಕೆಲಸ ಬೇಡ, ನಾಳೆ ಜಾತಿ ಗಣತಿ ವರದಿ ಬಹಿರಂಗವಾಗಲಿ: ಕಾಂಗ್ರೆಸ್‌ ಅಹಿಂದ ನಾಯಕರ ಆಗ್ರಹ

Date:

Advertisements

ಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನಡೆಸಿರುವ ಜಾತಿವಾರು ಆಧಾರಿತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ-2015 ವರದಿಯನ್ನು (ಜಾತಿ ಗಣತಿ ವರದಿ) ರಾಜ್ಯದ ಜನರ ಎದುರು ಇಟ್ಟು ಚರ್ಚೆಗೆ ಸರ್ಕಾರ ಅವಕಾಶ ಮಾಡಿಕೊಡಲಿ ಎಂದು ಕಾಂಗ್ರೆಸ್‌ನ ಅಹಿಂದ ನಾಯಕರು ಒಕ್ಕೊರಲಿನಿಂದ ಆಗ್ರಹಿಸಿದರು.

ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಬುಧವಾರ ರಾಜ್ಯ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಹೆಚ್‌ ಎಂ ರೇವಣ್ಣ ಅವರ ನೇತೃತ್ವದಲ್ಲಿ ಕಾಂಗ್ರೆಸ್‌ನ ಅಹಿಂದ ನಾಯಕರು ಜಂಟಿಸುದ್ದಿಗೋಷ್ಠಿ ನಡೆಸಿ ಸರ್ಕಾರಕ್ಕೆ ತಮ್ಮ ಅಭಿಪ್ರಾಯವನ್ನು ತಿಳಿಸಿದರು.

ಹೆಚ್‌ ಎಂ ರೇವಣ್ಣ ಮಾತನಾಡಿ, “ಹಿಂದುಳಿದ ವರ್ಗಗಳ ಶಾಶ್ವತ ಆಯೋಗದಿಂದ ನಡೆದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ದೇಶದಲ್ಲೇ ದೊಡ್ಡ ಸಮೀಕ್ಷೆಯಾಗಿದೆ. ವರದಿ ಜಾರಿಯಿಂದ ರಾಜ್ಯದ ಜನತೆಗೆ ಒಳಿತಾಗಲಿದೆ. ಪ್ರಗತಿಗೂ ಸಹಾಯಕವಾಗಲಿದೆ. ಒಂದು ವರದಿ ಏನು ಪರಿಣಾಮ ಬೀರಬಹುದು ಎಂಬುದನ್ನು ಹಾವನೂರ್‌ ವರದಿ ತೋರಿಸಿಕೊಟ್ಟಿದೆ. ಸರ್ಕಾರ ಯಾವುದೇ ಕಾರಣಕ್ಕೂ ಹಿಂದೆ ಸರಿಯದೆ ವರದಿಯನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸಬೇಕು” ಎಂದು ಆಗ್ರಹಿಸಿದರು.

Advertisements

”ಯಾರು ಏನೇ ಹೇಳಿದರೂ ನಾವು ಒಪ್ಪುವುದಿಲ್ಲ. ಸೈದ್ಧಾಂತಿಕವಾಗಿ, ವೈಜ್ಞಾನಿಕವಾಗಿ ಸಮೀಕ್ಷೆ ನಡೆದಿದೆ. ಇದೇನು ಅಂತಿಮ ಆದೇಶವಲ್ಲ. ಸಣ್ಣ ಪುಟ್ಟ ಲೋಪದೋಷಗಳು ಕಂಡು ಬಂದರೆ ಖಂಡಿತ ತಿದ್ದಿಕೊಳ್ಳಲು ಅವಕಾಶ ಇರುತ್ತದೆ. ಇಡೀ ದೇಶದಲ್ಲಿ 1930ರ ನಂತರ ನಡೆದ ಅತೀ ದೊಡ್ಡ ಸಮೀಕ್ಷೆ ಇದಾಗಿದೆ. 10 ವರ್ಷದಲ್ಲಿ 10-15 ಲಕ್ಷ ಅಂಕಿ ಅಂಶ ವ್ಯತ್ಯಾಸ ಇರಬಹುದು. ಇದೊಂದೇ ಕಾರಣಕ್ಕೆ ಇಡೀ ವರದಿಯೇ ಅವೈಜ್ಞಾನಿಕ ಎಂದು ಹೇಳುವುದು ಸರಿಯಲ್ಲ” ಎಂದರು.

“ರಾಜಕೀಯ ಕಾರಣಕ್ಕೆ ವಿರೋಧ ಮಾಡುವುದು ಸರಿಯಲ್ಲ. ವರದಿ ಜಾರಿಯಿಂದ ಸಾಮಾಜಿಕ ನ್ಯಾಯ ಸಿಗುತ್ತದೆ. ನಮ್ಮ ಪಕ್ಷದವರು ಆದಿಯಾಗಿ ಬಿಜೆಪಿ ಮತ್ತಿ ಜೆಡಿಎಸ್‌ನ ಒಕ್ಕಲಿಗ ಮತ್ತು ಲಿಂಗಾಯತ ನಾಯಕರು ವರದಿಯನ್ನು ವಿರೋಧಿಸಬೇಡಿ ಎಂದು ಈ ಮೂಲಕ ಕೋರಿಕೊಳ್ಳುತ್ತೇವೆ. 55 ಪ್ರಶ್ನೆಗಳಿಗೆ ರಾಜ್ಯದ ಜನತೆ ಉತ್ತರಿಸಿದೆ. ನಮ್ಮ ಮನೆಗೆ ಯಾರೂ ಬಂದಿಲ್ಲ ಎಂದು ಹೇಳುವುದು ಸರಿಯಲ್ಲ. ನಗರ ಪ್ರದೇಶಗಳಲ್ಲಿ ಸ್ವಲ್ಪ ಹೀಗಾಗಿರಬಹುದು. ಆದರೆ ಗ್ರಾಮೀಣ ಭಾಗದಲ್ಲಿ ಶೇ.99ರಷ್ಟು ಜನರು ಸಮೀಕ್ಷೆಗೆ ಮಾಹಿತಿ ನೀಡಿದ್ದಾರೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ರಾಯಭಾರ | ಜಾತಿ ಗಣತಿ; ಹೆಜ್ಜೆ ಮುಂದಿಟ್ಟರಷ್ಟೇ ದಾರಿ ನಿಚ್ಚಳ

ಮಾಜಿ ಸಭಾಪತಿ ವಿ ಆರ್‌ ಸುದರ್ಶನ್‌ ಅವರು ಪ್ರಾಸ್ತಾವಿಕ ಮಾತನಾಡಿ, “ರಾಜ್ಯದ ಪ್ರತಿಯೊಂದು ಕುಟುಂಬದ ಸಾಮಾಜಿಕ, ಶೈಕ್ಷಣಿಕ ಹಾಗೂ ಉದ್ಯೋಗದ ಸ್ಥಿತಿಗತಿಗಳ ಬಗ್ಗೆ 55 ಮಾನದಂಡಗಳ ಅಡಿಯಲ್ಲಿ ಮಾಹಿತಿ ಸಂಗ್ರಹಿಸಲಾಗಿದೆ. 1,35,35,772 ಕುಟುಂಬಗಳು ಸಮೀಕ್ಷೆಗೆ ಒಳಗಾಗಿವೆ. 5,9814,942 ಕೋಟಿ ಜನರಿಂದ ಮಾಹಿತಿ ಸಂಗ್ರಹಿಸಲಾಗಿದೆ. ಈ ಸಮೀಕ್ಷೆ ನಡೆಸಲು 1.66 ಲಕ್ಷ ಸರ್ಕಾರಿ ನೌಕರರ ಸಹಕಾರ ಸಿಕ್ಕಿದೆ. ಇದರಲ್ಲಿ 22 ಸಾವಿರ ಶಿಕ್ಷಕರು ಭಾಗಿಯಾಗಿದ್ದಾರೆ. ಸಮೀಕ್ಷೆಗೆ 165.51 ಕೋಟಿ ರೂ ಖರ್ಚಾಗಿದೆ. ಇಷ್ಟೆಲ್ಲ ಮಾಹಿತಿ ಇರುವಾಗ ವರದಿ ಅವೈಜ್ಞಾನಿಕ ಹೇಗೆ ಸಾಧ್ಯ” ಎಂದು ಪ್ರಶ್ನಿಸಿದರು.

”ಪ್ರಮುಖ ಸಮುದಾಯ ನಾಯಕರು, ಮಠಾಧೀಶರು ತಮ್ಮ ಜಾತಿಯ ಬಗ್ಗೆ ಅಂಕಿ-ಅಂಶ ಹೇಳುವುದು ನೋಡಿದರೆ ರಾಜ್ಯದ ಜನಸಂಖ್ಯೆ ಅವರ ಪ್ರಕಾರ 50 ಕೋಟಿ ಆಗುತ್ತದೆ. ನಮ್ಮ ಜನಸಂಖ್ಯೆ ಅಷ್ಟು ಇದೆಯಾ? ಸರ್ಕಾರಕ್ಕೆ ನಮ್ಮ ಮನವಿ ಇಷ್ಟೇ: ಏ.17ರಂದು ನಡೆಯುವ ಸಚಿವ ಸಂಪುಟ ಸಭೆಯಲ್ಲಿ ವರದಿಯನ್ನು ಬಹಿರಂಗಗೊಳಿಸಿ. ರಾಜ್ಯದ ಜನತೆ ಈ ಬಗ್ಗೆ ಮುಕ್ತವಾಗಿ ಚರ್ಚಿಸಲಿ. ನಂತರ ತಮ್ಮ ಅಭಿಪ್ರಾಯಗಳನ್ನು ಸರ್ಕಾರಕ್ಕೆ ತಿಳಿಸಲಿ. ಸರಿ ಮಾಡಲು ಅವಕಾಶ ಇದೆ. ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಯಾಗಲಿ” ಎಂದು ಹೇಳಿದರು.

“ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷದವರು ಪರಿಣಿತರನ್ನು ಕರೆದು ಚರ್ಚಿಸಲಿ. ನಾವು ಯಾವುದೇ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ. ನೀವು ಸಹ ಆವೇಶದ ಮಾತುಗಳನ್ನು ಆಡಬೇಡಿ” ಎಂದು ಎಚ್ಚರಿಕೆಯ ಧ್ವನಿಯಲ್ಲಿ ಮಾತನಾಡಿದರು.

“ವರದಿ ಕುರಿತ ಅನುಕೂಲ ಮತ್ತು ಅನಾನುಕೂಲ ಸಂಗತಿಗಳ ಬಗ್ಗೆ ಚರ್ಚೆಗೆ ಅವಕಾಶವಿದೆ. ಸಚಿವ ಸಂಪುಟ ಉಪ ಸಮಿತಿ ಕೂಡ ರಚನೆಯಾಗಲಿ. 3-5 ಜನ ಸದಸ್ಯರಿರಲಿ. ಒಂದು ತಿಂಗಳಲ್ಲಿ ಸಮಿತಿ ವರದಿ ನೀಡಲಿ. ಮಾಧ್ಯಮದವರು ಸಹ ಸೂಕ್ಷ್ಮತೆ ಇಟ್ಟುಕೊಂಡು ವರದಿ ಮಾಡಲಿ. ಇದು ರಾಜಕೀಯ ಪ್ರಶ್ನೆಯಲ್ಲ. ಅನ್ಯಾಯಕ್ಕೆ ಒಳಗಾದ ಜನತೆಗೆ ನ್ಯಾಯ ಒದಗಿಸುವ ಪ್ರಶ್ನೆಯಾಗಿದೆ” ಎಂದು ಹೇಳಿದರು.

ಮಾಜಿ ಸಚಿವ ಮತ್ತು ವಿಧಾನ ಪರಿಷತ್‌ ಸದಸ್ಯ ಎಂ ಆರ್‌ ಸೀತಾರಾಂ ಮಾತನಾಡಿ, “ನಾಳೆ ಅಧಿಕೃತವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯಾಗಲಿದೆ. ಪೂರ್ವಭಾವಿಯಾಗಿ ಎಲ್ಲವನ್ನು ಹೇಳುವುದು ಸರಿಯಲ್ಲ. ನಮ್ಮ ಉದ್ದೇಶ ಇಷ್ಟೇ: ಯಾರೂ ಸಹ ಸಮಾಜಘಾತುಕ ಕೆಲಸ ಮಾಡುವುದು ಬೇಡ. ಎಲ್ಲ ವರ್ಗದವರಿಗೂ ನ್ಯಾಯ ಸಿಗಲಿ” ಎಂದು ಅಭಿಪ್ರಾಯಪಟ್ಟರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವೆ ಉಮಾಶ್ರಿ, ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಸೇನ ಬಿ ಚಿಮ್ಮನಕಟ್ಟಿ ಸೇರಿದಂತೆ ಅಹಿಂದ ಸಮುದಾಯ ವಿವಿಧ ಸಂಘಟನೆಗಳ ನಾಯಕರು ಇದ್ದರು.

WhatsApp Image 2023 04 01 at 3.53.40 PM e1680350106945
+ posts

ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಶರಣು ಚಕ್ರಸಾಲಿ
ಶರಣು ಚಕ್ರಸಾಲಿ
ಶರಣು ಚಕ್ರಸಾಲಿ ಅವರು ಬಾದಾಮಿ ತಾಲ್ಲೂಕಿನ ತಳಕವಾಡ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಕಳೆದ 10 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಸದ್ಯ 'ಈ ದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಹಿರಿಯ ವರದಿಗಾರರಾಗಿ 2022 ಮಾರ್ಚ್‌1ರಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ಸಚಿವಾಲಯದ ವರದಿಗಾರಿಕೆ ಹಾಗೂ ಕೃಷಿ ಸಂಬಂಧಿತ ಸ್ಟೋರಿಗಳನ್ನು ಬರೆಯುವುದು ಇವರ ಆಸಕ್ತಿ. ಟಿವಿ ನಿರೂಪಣೆ, ವಿಡಿಯೋ ಸಂದರ್ಶನ, ವಿಡಿಯೋ ಸ್ಟೋರಿ, ತನಿಖಾ ವರದಿಗಾರಿಕೆ ಹಾಗೂ ನುಡಿ ಬರಹ ಬರೆಯುವುದು ಇವರ ಅಚ್ಚುಮೆಚ್ಚಿನ ಕ್ಷೇತ್ರ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X