ಸದ್ಯ ರಾಜ್ಯಾದ್ಯಂತ ಸುದ್ದಿಯಾಗಿರುವ ಕಾವೇರಿ ನೀರು ವಿವಾದ ತಣ್ಣಗಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಎಲ್ಲ ಬೆಳವಣಿಗೆಗಳ ನಡುವೆಯೇ ತಮಿಳುನಾಡಿಗೆ ನಿತ್ಯ ಐದು ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸೂಚಿಸಿರುವುದಾಗಿ ವರದಿಯಾಗಿದೆ.
ತಮಿಳುನಾಡಿಗೆ ನೀರು ಹರಿಸುವ ಬಗ್ಗೆ ಕಾವೇರಿ ನೀರು ನಿಯಂತ್ರಣಾ ಸಮಿತಿ ಸಭೆ ಇಂದು ನಡೆದಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಸಭೆಯಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಜಲಸಂಪನ್ಮೂಲ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದ್ದರು. ಈ ಸಭೆಯಲ್ಲಿ ಮತ್ತೆ ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಲಾಗಿದೆ.
ಕಾವೇರಿ ನೀರು ನಿಯಂತ್ರಣಾ ಸಮಿತಿಯ ಶಿಫಾರಸಿಗೆ ವಿರೋಧ ವ್ಯಕ್ತಪಡಿಸಿರುವ ಕರ್ನಾಟಕದ ಅಧಿಕಾರಿಗಳು, ‘ಯಾವುದೇ ಕಾರಣಕ್ಕೂ ನೀರು ಬಿಡಲು ಸಾಧ್ಯವಿಲ್ಲ’ ಎಂದಿದ್ದಾರೆ ಎಂದು ವರದಿಯಾಗಿದೆ.
ಬುಧವಾರ ಅಥವಾ ಗುರುವಾರ ಮತ್ತೆ ಕಾವೇರಿ ನೀರು ನಿಯಂತ್ರಣಾ ಸಮಿತಿಯ ಸಭೆ ನಡೆಯಲಿದ್ದು, ಈ ಸಂಬಂಧ ಪ್ರಾಧಿಕಾರವು ಆದೇಶ ಹೊರಡಿಸಲಿದೆ ಎಂದು ತಿಳಿದುಬಂದಿದೆ.
ತಮಿಳುನಾಡಿಗೆ ನೀರು ಹರಿಸಲು ಸೂಚನೆ ನೀಡಿರುವುದು ಕರ್ನಾಟಕದಲ್ಲಿ ಅದರಲ್ಲೂ ಮಂಡ್ಯದಲ್ಲಿ ರೈತರ ಆಕ್ರೋಶಕ್ಕೆ ಕಾರಣವಾಗಿದೆ.