- ಮಳೆ ಕೊರತೆಯಿಂದ ರಾಜ್ಯದ ಅಣೆಕಟ್ಟುಗಳಲ್ಲಿ ನೀರಿಲ್ಲ ಎಂದ ಮುಖ್ಯಮಂತ್ರಿ
- ಕೇಂದ್ರ ಸಚಿವರು ರಾತ್ರಿ 1 ಗಂಟೆಗೆ ಕರೆದರೂ ನಾವು ಭೇಟಿಯಾಗಲು ಸಿದ್ಧ: ಡಿಕೆ
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ‘ನದಿಯಲ್ಲಿ ನೀರು ಇಲ್ಲ’ ಎಂದು ಸೆ.21ರಂದು ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಕೆ ಮಾಡಲಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ದೆಹಲಿಯಲ್ಲಿ ಇಂದು ಆಯೋಜಿಸಲಾಗಿದ್ದ ಸಭೆಯ ಬಳಿಕ ಮಾತನಾಡಿದ ಅವರು, “ಇಂದಿನ ಸಭೆಯಲ್ಲಿ ಎಲ್ಲ ಪಕ್ಷದ ಸಂಸದರು, ಕೇಂದ್ರ ಸಚಿವರು ಭಾಗಿಯಾಗಿದ್ದರು. ಬೇರೆ ಕೆಲಸವಿದ್ದ ಹಿನ್ನೆಲೆಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಭೆಗೆ ಬಂದಿರಲಿಲ್ಲ” ಎಂದು ತಿಳಿಸಿದರು.
“ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಅಣೆಕಟ್ಟುಗಳಲ್ಲಿ ನೀರು ಇಲ್ಲ. 195 ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಿದ್ದೇವೆ. 123 ವರ್ಷಗಳಲ್ಲಿ ಎಂದೂ ಇಷ್ಟು ಮಳೆ ಕೊರತೆ ಆಗಿರಲಿಲ್ಲ. ಕಾವೇರಿ ನೀರಿನ ಬಗ್ಗೆ ಹಿಂದೆ ಸುಪ್ರೀಂಕೋರ್ಟ್ ಆದೇಶ ಇದೆ. ರಾಜ್ಯದ ಕಾವೇರಿ ನದಿ ನೀರು ವಿಚಾರದಲ್ಲಿ ಸಂಕಷ್ಟ ಸೂತ್ರ ಅಗತ್ಯ. ಸಂಕಷ್ಟದ ಪರಿಸ್ಥಿತಿಯಲ್ಲಿ ಎಷ್ಟು ನೀರು ಬಿಡಬೇಕೆಂದು ತಿಳಿಸಿಲ್ಲ. ಸಂಕಷ್ಟದ ಸೂತ್ರ ಏನು ಅನ್ನುವುದು ತಯಾರಿಯಾಗಿಲ್ಲ” ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಎದುರಾಗಿರುವ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿರ್ವಹಿಸುವ ಸಂಬಂಧ ದೆಹಲಿಯಲ್ಲಿ ನಡೆಯುತ್ತಿರುವ ಕೇಂದ್ರ ಸಚಿವರು, ಸರ್ವ ಪಕ್ಷದ ಸಂಸತ್ ಸದಸ್ಯರ ಸಭೆಯಲ್ಲಿ ಮುಖ್ಯಮಂತ್ರಿ @siddaramaiah ಅವರ ಮಾತುಗಳು. 1/3#CauveryWater pic.twitter.com/EXlck1bXIw
— CM of Karnataka (@CMofKarnataka) September 20, 2023
“ಮಳೆ ಸಾಮಾನ್ಯವಾಗಿದ್ದರೆ 108 ಟಿಎಂಸಿ ನಾವು ಕೊಡಬೇಕಿತ್ತು. ಮುಂದೆ ಮಳೆ ಬರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಮಳೆ ಕೊರತೆಯಿಂದ ನಾವು ಕಷ್ಟದಲ್ಲಿ ಇದ್ದೇವೆ. ಎರಡೂ ರಾಜ್ಯಗಳ ನಾಯಕರನ್ನು ಪ್ರಧಾನಿ ಕರೆದು ಮಾತನಾಡಬೇಕು. ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿಗೆ ಸಮಯ ಕೇಳಲಾಗಿದೆ. ನಾಳೆ ಸುಪ್ರೀಂಕೋರ್ಟ್ಗೆ ನೀರು ಇಲ್ಲವೆಂದು ಅರ್ಜಿ ಹಾಕುತ್ತೇವೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇದೇ ವಿಚಾರವಾಗಿ ಮಾತನಾಡಿರುವ ದೆಹಲಿಯಲ್ಲಿ ಮಾತನಾಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಕಾವೇರಿ ನೀರು ವಿಚಾರವಾಗಿ ಒಗ್ಗಟ್ಟು ಪ್ರದರ್ಶನಕ್ಕೆ ನಿರ್ಧರಿಸಲಾಗಿದೆ. ಸಭೆಯಲ್ಲಿ ಎಲ್ಲ ಪಕ್ಷದ ಸಂಸದರು, ಜನಪ್ರತಿನಿಧಿಗಳು ಭಾಗಿಯಾಗಿದ್ದರು. ಎಲ್ಲರೂ ಒಗ್ಗಟ್ಟು ಪ್ರದರ್ಶಿಸಲು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಚಿವ ಗಜೇಂದ್ರ ಸಿಂಗ್ ಭೇಟಿಗೆ ಸಮಯ ಕೇಳಿದ್ದೇವೆ. ರಾತ್ರಿ 1 ಗಂಟೆಗೆ ಸಮಯ ನೀಡಿದರೂ ನಾವು ಭೇಟಿಯಾಗಲು ಸಿದ್ಧ” ಎಂದು ಹೇಳಿದರು.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ವೇಣೂರು ಸಮೀಪದವರು. ಕಳೆದ 13 ವರ್ಷಗಳಿಂದ ಪತ್ರಿಕೋದ್ಯಮದಲ್ಲಿದ್ದು, ವಾರ್ತಾಭಾರತಿ ದಿನಪತ್ರಿಕೆ, ಸಂಜೆ ವಾಣಿ, ಕೋಸ್ಟಲ್ ಡೈಜೆಸ್ಟ್ ಹಾಗೂ ಸನ್ಮಾರ್ಗ ವಾರಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಈದಿನ ಡಾಟ್ ಕಾಮ್‌ನಲ್ಲಿ ಹಿರಿಯ ಉಪಸಂಪಾದಕರಾಗಿದ್ದಾರೆ.